ಬಿವೈ ವಿಜಯೇಂದ್ರ 5,000 ಕೋಟಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಬಿಜೆಪಿ ಶಾಸಕರಿಂದಲೇ ಆರೋಪ!

ಮುಖ್ಯಮಂತ್ರಿ ಯಡಿಯೂರಪ್ಪನವರ ಮಗ, ಬಿಜೆಪಿ ಯುವನಾಯಕ ಬಿವೈ ವಿಜಯೇಂದ್ರ ವಿರುದ್ಧ ಬಿಜೆಪಿ ಶಾಸಕರೇ 5 ಸಾವಿರ ಕೋಟಿ ರೂಗಳ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಬಿಜೆಪಿ ಹೈಕಮಾಂಡ್‌ಗೆ ಶಾಸಕರು ಬರೆದಿರುವ ಪತ್ರದಲ್ಲಿ ವಿಜಯೇಂದ್ರ ಅವರು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದು, ಸೂಕ್ತ ತನಿಖೆ ನಡೆಸಬೇಕು ಎಂದು ಬರೆದಿದ್ದಾರೆ.

ಈ ಪತ್ರವನ್ನು ಎಲ್ಲೆಡೆ ಹಂಚಿಕೊಂಡಿರುವ ಕಾಂಗ್ರೆಸ್‌, ಬಿ.ವೈ. ವಿಜಯೇಂದ್ರ ಬೇನಾಮಿ ಸಂಪತ್ತನ್ನು ಮಾಡಿದ್ದಾರೆಂದು ಬಿಜೆಪಿ ಶಾಸಕರೇ ಆರೋಪಿಸಿದ್ದಾರೆ. ಬಿಜೆಪಿಯನ್ನು ಉಳಿಸಿ ಎಂದು ಬಿಜೆಪಿಯವರೇ ಕೇಳಿಕೊಳ್ಳುತ್ತಿದ್ದಾರೆ.   ಸಿಎಂ ಪುತ್ರ ಬಿ.ವೈ. ವಿಜಯೇಂದ್ರ ಕಳೆದ ಒಂದು ವರ್ಷದಲ್ಲಿ 5 ಸಾವಿರ ಕೋಟಿ ರೂ. ಸಂಗ್ರಹ ಮಾಡಿದ್ದಾರೆ ಎಂದು ಬಿಜೆಪಿ ಶಾಸಕರೇ ಬರೆದಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಕಾಂಗ್ರೆಸ್‌ ವಕ್ತಾರ ಲಕ್ಷ್ಮಣ ಆಗ್ರಹಿಸಿದ್ದಾರೆ.

ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಬಿಜೆಪಿ ಶಾಸಕರೇ ಸಹಿ ಮಾಡಿರೋ ಪತ್ರ ಬಿಡುಗಡೆ ಮಾಡಿರುವ ಲಕ್ಷ್ಮಣ, ಬಿಜೆಪಿ ಶಾಸಕರು ಬರೆದ ಪತ್ರದಲ್ಲಿ ವಿಜಯೇಂದ್ರ ಕುರಿತು ಗಂಭೀರ ಆರೋಪ ಮಾಡಲಾಗಿದೆ. ಭ್ರಷ್ಟಾಚಾರಕ್ಕೆ ಸಂಬಂಧಪಟ್ಟ ಆಡಿಯೋ ಕ್ಲಿಪಿಂಗ್, ವೀಡಿಯೋ ಕ್ಲಿಪಿಂಗ್​ಗಳನ್ನು ನಾವು ಕ್ರೋಢೀಕರಿಸಿದ್ದೇವೆ. ಸೆಪ್ಟೆಂಬರ್‌ ಎರಡು ಅಥವಾ ಮೂರನೇ ವಾರದಲ್ಲಿ ದೆಹಲಿಯಲ್ಲಿ ಆಡಿಯೋ ಬಿಡುಗಡೆ ಮಾಡುತ್ತೇವೆ ಎಂದುಅವರು ಹೇಳಿದ್ದಾರೆ.

32 ಜನರ ಕೂಟವನ್ನು ಕಟ್ಟಿಕೊಂಡಿರುವ ಬಿ.ವೈ. ವಿಜಯೇಂದ್ರ ಪರ್ಯಾಯ ಸರ್ಕಾರವನ್ನು ನಡೆಸುತ್ತಿದ್ದಾರೆ. ಅವರಿಂದ ಬಿಜೆಪಿ ಪಕ್ಷವನ್ನು ಕಾಪಾಡಿ ಎಂದು ಬಿಜೆಪಿ ಶಾಸಕರು ಹೈಕಮಾಂಡ್​ಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ. ವಿಜಯೇಂದ್ರ ಯಾರ್ಯಾರ ಹೆಸರಿನಲ್ಲಿ ಆಸ್ತಿಗಳನ್ನು ಮಾಡಿದ್ದಾರೆ, ಕರ್ನಾಟಕ ಮತ್ತು ಬೇರೆ ರಾಜ್ಯಗಳಲ್ಲಿ ಎಲ್ಲೆಲ್ಲಿ ಅವರ ಹೆಸರಿನಲ್ಲಿ ಆಸ್ತಿಗಳಿವೆ ಎಂಬುದರ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡಲಾಗುವುದು. ಸರ್ಕಾರ ಈ 5 ಕೋಟಿ ರೂ. ಭ್ರಷ್ಟಾಚಾರದ ಬಗ್ಗೆ 10 ದಿನದೊಳಗೆ ತನಿಖೆಗೆ ಆದೇಶಿಸದಿದ್ದರೆ ನಮ್ಮಲ್ಲಿ ಲಭ್ಯವಿರುವ ದಾಖಲೆಗಳ ಆಧಾರದ ಮೇಲೆ ಎಸಿಬಿ, ಲೋಕಾಯುಕ್ತ, ಸಿಬಿಐ, ಹೈಕೋರ್ಟ್​ ಮೂಲಕ ತನಿಖೆಗೆ ಕ್ರಮ ವಹಿಸಲಾಗುವುದು ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ತಿಳಿಸಿದ್ದಾರೆ.


ಇದನ್ನೂ ಓದಿ:  ಕಾಂಗ್ರೆಸ್‌ ಪಕ್ಷಕ್ಕೆ ಗಾಂಧಿ ಕುಟುಂಬ ಆಧಾರ್ ಕಾರ್ಡ್‌ ಇದ್ದಂತೆ: ಸಂಜಯ್‌ ರಾವತ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights