ಪರೀಕ್ಷೆ ರದ್ದುಗೊಳಿಸಲು ಸಾಧ್ಯವಿಲ್ಲ; ವಿದ್ಯಾರ್ಥಿಗಳು ಪರೀಕ್ಷೆ ಬರೆಯಲೇಬೇಕು: ಸುಪ್ರೀಂ ಕೋರ್ಟ್
ವಿಶ್ವವಿದ್ಯಾಲಯದ ಅಂತಿಮ ವರ್ಷದ ಪರೀಕ್ಷೆಯನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಅಂತಿಮ ವರ್ಷದ ಪರೀಕ್ಷೆಗಳನ್ನು ನಡೆಸದೆ ವಿದ್ಯಾರ್ಥಿಗಳಿಗೆ ಪದವಿ ನೀಡಲು ಸಾಧ್ಯವಿಲ್ಲ. ಆದರೆ ಅಂತಿಮ ದಿನಾಂಕವನ್ನು ವಿಸ್ತರಿಸುವಂತೆ ಯುಜಿಸಿಯನ್ನು ಕೇಳುವುದಕ್ಕೆ ರಾಜ್ಯ ಸರ್ಕಾರಗಳಿಗೆ ಅವಕಾಶ ನೀಡಲಾಗುವುದು ಎಂದು ಹೇಳಿದೆ.
ಸೆಪ್ಟೆಂಬರ್ 30 ರೊಳಗೆ ನಡೆಸಬೇಕಾಗಿರುವ ಅಂತಿಮ ವರ್ಷದ/ಮಧ್ಯಂತರ ಸೆಮಿಸ್ಟರ್ ನ ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್ ಸುಭಾಷ್ ರೆಡ್ಡಿ, ಮತ್ತು ಎಂ.ಆರ್.ಶಾ ಅವರ ನ್ಯಾಯಪೀಠವು, ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಬೇಕು. ಪರೀಕ್ಷೆಗಳು ನಡೆಯದಿದ್ದರೆ ವಿದ್ಯಾರ್ಥಿಗಳ ಭವಿಷ್ಯವು ಅಪಾಯಕ್ಕೆ ಸಿಲುಕುತ್ತದೆ ಎಂದು ಯುಜಿಸಿ ಈ ನಿರ್ಧಾರವನ್ನು ಸಮರ್ಥಿಸಿಕೊಂಡಿತ್ತು.
ವಿದ್ಯಾರ್ಥಿಗಳ ಹಿತಾಸಕ್ತಿ ಪರವಾಗಿ ವಾದಿಸಿದ ಅಭಿಷೇಕ್ ಮನು ಸಿಂಗ್ವಿ, ಶ್ಯಾಮ್ ದಿವಾನ್, ಮತ್ತು ಅರವಿಂದ ದತಾರ್ ಸೇರಿದಂತೆ ಹಿರಿಯ ವಕೀಲರು, ಹೆಚ್ಚುತ್ತಿರುವ ಕೊರೊನಾ ಅಂಕಿ ಅಂಶಗಳ ಕಾರಣದಿಂದಾಗಿ ಕೆಲವು ರಾಜ್ಯ ಸರ್ಕಾರಗಳು ಪರೀಕ್ಷೆಗಳನ್ನು ರದ್ದುಗೊಳಿಸಲು ನಿರ್ಧಾರ ತೆಗೆದುಕೊಂಡವು ಎಂದು ಹೇಳಿದ್ದಾರೆ. ಅಲ್ಲದೆ, ಕೊರೊನಾ ಸಾಂಕ್ರಾಮಿಕ ರೋಗವು ಇನ್ನೂ ಆರಂಭಿಕ ಹಂತದಲ್ಲಿದ್ದಾಗ ಏಪ್ರಿಲ್‌ನಲ್ಲಿ ಪರೀಕ್ಷೆಗಳನ್ನು ನಡೆಸಲು ನಿರಾಕರಿಸಿದ ಹಿಂದಿನ ಯುಜಿಸಿಯ ತಾರ್ಕಿಕತೆಯನ್ನು ಅವರು ಪ್ರಶ್ನಿಸಿದ್ದಾರೆ.
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಯುಜಿಸಿಯು ಪರೀಕ್ಷೆಗಳಿಲ್ಲದೆ ಪದವಿಗಳನ್ನು ನೀಡಲು ಸಿದ್ಧವಿಲ್ಲ. ವಿದ್ಯಾರ್ಥಿಗಳ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಪರೀಕ್ಷೆಗಳನ್ನು ನಡೆಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವಾದಿಸಿದರು.
ಕೊರೊನಾ ಸಾಂಕ್ರಾಮಿಕ ರೋಗದ ಮಧ್ಯೆ ಈ ವರ್ಷ ಅಂತಿಮ ವರ್ಷದ ಪರೀಕ್ಷೆಗಳನ್ನು ನಡೆಸದಿರಲು ಮಹಾರಾಷ್ಟ್ರ ಮತ್ತು ದೆಹಲಿ ಸರ್ಕಾರಗಳು ತೆಗೆದುಕೊಂಡ ನಿಲುವಿಗೆ ಯುಜಿಸಿ ವಿರೋಧ ವ್ಯಕ್ತಪಡಿಸಿತ್ತು.
ಸೆಪ್ಟೆಂಬರ್ 30 ರೊಳಗೆ ಅಂತಿಮ ವರ್ಷದ ಪರೀಕ್ಷೆಗಳನ್ನು ನಡೆಸಲು, ಯುಜಿಸಿ ಹೊರಡಿಸಿರುವ ಸುತ್ತೋಲೆಯನ್ನು ರದ್ದುಗೊಳಿಸಲು ಭಾರತದಾದ್ಯಂತ ವಿವಿಧ ವಿಶ್ವವಿದ್ಯಾಲಯಗಳ ಒಟ್ಟು 31 ವಿದ್ಯಾರ್ಥಿಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಕೊರೊನಾ ರೋಗವನ್ನು ಗಮನದಲ್ಲಿಟ್ಟುಕೊಂಡು ಆನ್‌ಲೈನ್/ಆಫ್‌ಲೈನ್ ಪರೀಕ್ಷೆಗಳನ್ನು ರದ್ದುಗೊಳಿಸಿ ಎಂದು ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ಒತ್ತಾಯಿಸಿದ್ದಾರೆ. ವಿದ್ಯಾರ್ಥಿಗಳ ಹಿಂದಿನ ಸಾಧನೆ ಮತ್ತು ಆಂತರಿಕ ಮೌಲ್ಯಮಾಪನದ ಆಧಾರದ ಮೇಲೆ ಫಲಿತಾಂಶಗಳನ್ನು ಘೋಷಿಸಲು ಯುಜಿಸಿಗೆ ನಿರ್ದೇಶನ ನೀಡುವಂತೆ ಕೋರಿದ್ದರು.
ದೆಹಲಿ, ಮಹಾರಾಷ್ಟ್ರ, ಒಡಿಶಾ, ಪಂಜಾಬ್, ಹರಿಯಾಣ ಮತ್ತು ಮಧ್ಯಪ್ರದೇಶ ರಾಜ್ಯಗಳು ಅಂತಿಮ ವರ್ಷದ ಪರೀಕ್ಷೆಗಳು ಸೇರಿದಂತೆ ವಿಶ್ವವಿದ್ಯಾಲಯದ ಎಲ್ಲಾ ಪರೀಕ್ಷೆಗಳನ್ನು ರದ್ದುಗೊಳಿಸಿದ್ದವು.
“ರಾಜ್ಯ ಸರ್ಕಾರಗಳು ಪರೀಕ್ಷೆಗಳನ್ನು ರದ್ದುಗೊಳಿಸಲು ಸಾಧ್ಯವಿಲ್ಲ. ಆ ಅಧಿಕಾರ ಯುಜಿಸಿಗೆ ಮಾತ್ರ ಇದೆ” ಎಂದು ಯುಜಿಸಿ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಆಗಸ್ಟ್ 8 ರಂದು ಉನ್ನತ ನ್ಯಾಯಾಲಯಕ್ಕೆ ತಿಳಿಸಿದ್ದರು.
ಇದನ್ನೂ ಓದಿ: ಬಿಜೆಪಿ ನಿಯಮ; ರಾಜಕೀಯ ನಿವೃತ್ತಿ ಹೊಂದುತ್ತಾರೆಯೇ ಮೋದಿ? ಡೀಟೇಲ್ಸ್