ಭಾರತದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ವಿಧಿವಶ

ಕಳೆದ ಹಲವು ದಿನಗಳಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಭಾರತದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಇಂದು ಇಹಲೋಕ ತ್ಯಜಿಸಿದ್ದಾರೆ.

84 ವರ್ಷದ ಪ್ರಣಬ್ ಮುಖರ್ಜಿ ಅವರ ಆರೋಗ್ಯದಲ್ಲಿ ಕೆಲ ದಿನಗಳ ಹಿಂದೆ  ತೀವ್ರ ಸಮಸ್ಯೆಗಳು ಕಾಣಿಸಿಕೊಂಡ ಕಾರಣ  ಭಾರತೀಯ ಸೇನೆಯ ರೀಸರ್ಚ್ ಅಂಡ್ ರೆಫೆರೆಲ್ (ಆರ್ ಅಂಡ್ ಆರ್) ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹಲವು ದಿನಗಳಿಂದ ಚಿಕಿತ್ಸೆ ನೀಡಿದ್ದರೂ ಸಹ, ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.

ಪ್ರಣಬ್‌ ಮುಖರ್ಜಿ ಅವರ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿ (Blood clot) ಸಮಸ್ಯೆ ಉದ್ಭವವಾಗಿತ್ತು. ಹೀಗಾಗಿ ಪ್ರಣಬ್ ಅವರಿಗೆ ತುರ್ತಾಗಿ ಮಿದುಳು ಚಿಕಿತ್ಸೆಯನ್ನು ಮಾಡಲಾಗಿತ್ತು. ಅಲ್ಲದೆ, ಶಸ್ತ್ರ ಚಿಕಿತ್ಸೆಗೂ ಮುನ್ನ ಕೊರೊನಾ ಪರೀಕ್ಷೆಯಲ್ಲಿ ಅವರಿಗೆ ಪಾಸಿಟಿವ್ ಬಂದಿತ್ತು. ಆದರೂ ಮಿದುಳು ಶಸ್ತ್ರ ಚಿಕಿತ್ಸೆಯನ್ನು ಮುಗಿಸಿ ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ (ವೆಂಟಿಲೇಟರ್ ಸಪೋರ್ಟ್) ಮಾಡುವ ಮೂಲಕ ತೀವ್ರ ನಿಗಾ ವಹಿಸಲಾಗಿತ್ತು. ಅವರು ಶಾಶ್ವತ ಕೋಮಾಕ್ಕೆ ಜಾರಿದ್ದರು.

ಬಂಗಾಳದಲ್ಲಿ 1935, ಡಿಸೆಂಬರ್ 11ರಂದು ಜನಿಸಿದ ಪ್ರಣಬ್ ಮುಖರ್ಜಿ ಕಾಂಗ್ರೆಸ್ ಮೂಲಕ ರಾಜಕೀಯ ಜೀವನ ಪ್ರಾರಂಭಿಸಿದರು. 2012ರಿಂದ 2017ರವರೆಗೆ ಭಾರತದ 13ನೇ ರಾಷ್ಟ್ರಪತಿಯಾಗಿ ಅತ್ಯುನ್ನತ ಹುದ್ದೆ ಅಲಂಕರಿಸಿದ್ದಾರೆ. ರಾಷ್ಟ್ರಪತಿಗಳಾಗುವ ಮುನ್ನ ಅವರು ವಿದೇಶಾಂಗ ಸಚಿವ, ರಕ್ಷಣಾ ಸಚಿವ ಮತ್ತು ಹಣಕಾಸು ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ಅಪಾರ ರಾಜಕೀಯ ಅನುಭವ ಹೊಂದಿರುವ ಅವರು ರಾಷ್ಟ್ರಪತಿ ಅಧಿಕಾರ ಪೂರ್ಣಗೊಂಡ ಬಳಿಕ ಸಕ್ರಿಯ ರಾಜಕಾರಣದಿಂದ ದೂರವೇ ಉಳಿದಿದ್ದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights