JEE ಪರೀಕ್ಷೆಗೆ ಸುಮಾರು ಶೇ.50 ರಷ್ಟು ವಿದ್ಯಾರ್ಥಿಗಳು ಗೈರು: ಮೋದಿ ಸರ್ಕಾರದ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ 

ಕೊರೊನಾ ರೋಗದ ನಡುವೆಯೂ  ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್) ಮತ್ತು ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಪರೀಕ್ಷೆಗಳನ್ನು ನಡೆಸುತ್ತಿದ್ದು, ಪರೀಕ್ಷೆಯ ಮೊದಲ ದಿನ ದೇಶಾದ್ಯಂತ ಸುಮಾರು 50% ವಿದ್ಯಾರ್ಥಿಗಳು ಪರೀಕ್ಷೆಯಿಂದ ದೂರ ಉಳಿಸಿದ್ದಾರೆ. ಹೀಗಾಗಿ ಪರೀಕ್ಷೆ ಮುಂದೂಡಲು ಒತ್ತಾಯಿಸಿದ್ದರೂ ಕೇಳದೆ ಪರೀಕ್ಷೆ ನಡೆಸುತ್ತಿರುವ ಸರ್ಕಾರ ವಿರುದ್ಧ ದೇಶಾದ್ಯಂತ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

ಕೊರೊನಾ ವೈರಸ್‌ ಜೊತೆಗೆ ಬಿಹಾರ, ಅಸ್ಸಾಂ ಮತ್ತು ಗುಜರಾತ್ ಸೇರಿದಂತೆ ಪ್ರವಾಹ ಪೀಡಿತ ರಾಜ್ಯಗಳ ವಿದ್ಯಾರ್ಥಿಗಳು ಮತ್ತಷ್ಟು ತೊಂದರೆಯಲ್ಲಿ ಸಿಲುಕಿದ್ದಾರೆ. ಅಲ್ಲದೆ, ಎಲ್ಲೆಡೆ ಸರ್ಮಪಕ ಸಾರಿಗೆ ವ್ಯವಸ್ಥೆಯನ್ನೂ ಇನ್ನೂ ಆರಂಭಿಸದ ಕಾರಣ ದೇಶದ ಹಲವಾರು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಪ್ರಯಾಣಿಸಲು ಸಾಧ್ಯವಾಗಿಲ್ಲ ಎಂದು ಎಡ ವಿದ್ಯಾರ್ಥಿ ಸಂಘಟನೆಗಳು ಆರೋಪಿಸಿವೆ.

#ProtestAgainstExamsinCovid ಎಂಬ ಹ್ಯಾಶ್‌ಟ್ಯಾಗ್‌ ನೊಂದಿಗೆ ಆನ್‌ಲೈನ್‌ ಪ್ರತಿಭಟನೆಯನ್ನೂ ನಡೆಸಿದ್ದು, ಪರೀಕ್ಷೆಗಳನ್ನು ಮುಂದೂಡಬೇಕೆಂದು ಆಗ್ರಹಿಸಿವೆ.

“ಇತ್ತೀಚಿನ ದಿನಗಳಲ್ಲಿ ಇಡೀ ದೇಶವು ತೀವ್ರ ಆರೋಗ್ಯ ಮತ್ತು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಈ ಸಂದರ್ಭದಲ್ಲಿ  ದೇಶಾದ್ಯಂತ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ನೀಟ್‌ ಮತ್ತು ಜೆಇಇ ಪರೀಕ್ಷೆಗಳನ್ನು ನಡೆಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ನಾವು ಬಲವಾಗಿ ವಿರೋಧಿಸುತ್ತೇವೆ ಸೋಂಕಿತರ ಸಂಖ್ಯೆ ಮತ್ತು ಸತ್ತವರ ಸಂಖ್ಯೆಯು ಪ್ರತಿದಿನ ಹೆಚ್ಚಾಗುತ್ತಿದ್ದರೂ, ಪರೀಕ್ಷೆ ನಡೆಸಲು ಮುಂದಾಗಿರುವ ಕೇಂದ್ರ ಸರ್ಕಾರ, ಸೂಕ್ಷ್ಮವಲ್ಲದ ಕ್ರಮಕ್ಕೆ ಮುಂದಾಗಿದ್ದು, ವಿದ್ಯಾರ್ಥಿಗಳ ಆರೋಗ್ಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತದೆ.” ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಎಂಜಿನಿಯರಿಂಗ್ ಮತ್ತು ಫಾರ್ಮಸಿ ಕೋರ್ಸ್‌ಗಳಲ್ಲಿ ಪ್ರವೇಶಕ್ಕಾಗಿ ಮಂಗಳವಾರ ರಾಷ್ಟ್ರವ್ಯಾಪಿ ಪ್ರಾರಂಭವಾದ ಜೆಇಇ ಪರೀಕ್ಷೆಯನ್ನು ಬರೆಯಲು ಗುಜರಾತ್‌ನ ಸುಮಾರು 45% ಅಭ್ಯರ್ಥಿಗಳು ವಿಫಲವಾಗಿದ್ದಾರೆ.

“ಮೊದಲ ದಿನ, ನೋಂದಾಯಿತ 3,020 ವಿದ್ಯಾರ್ಥಿಗಳಲ್ಲಿ 1,664 (55%) ಮಾತ್ರ ಹಾಜರಿದ್ದರು, ಆದರೆ 1,356 (45%) ಮಂದಿ ಹಾಜರಾಗಲಿಲ್ಲ. ಸಾಮಾನ್ಯವಾಗಿ, ಪ್ರತಿವರ್ಷ 25-30% ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಬಿಟ್ಟುಬಿಡುತ್ತಾರೆ. ಈ ವರ್ಷ ಶೇಕಡಾವಾರು 45% ಅಭ್ಯರ್ಥಿಗಳು ಗೈರಾಗಿದ್ದಾರೆ ” ಎಂದು ಗುಜರಾತ್‌ನ ಜೆಇಇ ಸಂಯೋಜಕ ವೀರೇಂದ್ರ ರಾವತ್ ಹೇಳಿದರು.

ಗುಜರಾತ್‌ನಲ್ಲಿ ಮಾತ್ರವಲ್ಲದೆ ದೇಶಾದ್ಯಂತ ಸುಮಾರು 50% ಅಭ್ಯರ್ಥಿಗಳು ಜೆಇಇ ಪರೀಕ್ಷೆಯನ್ನು ಬರೆದಿಲ್ಲ. ಅಸ್ಸಾಂ ಮತ್ತು ಡೆಹ್ರಾಡೂನ್‌ನಲ್ಲಿ 50% ಗೈರಾಗಿದ್ದು, ಉತ್ತರ ಪ್ರದೇಶದಲ್ಲಿ 44%, ಜಾರ್ಖಂಡ್ ಮತ್ತು ರಾಯ್ಪುರದಲ್ಲಿ ಕ್ರಮವಾಗಿ 31.42% ಮತ್ತು 58% ಅಭ್ಯರ್ಥಿಗಳು ಮೊದಲ ದಿನ ಪರೀಕ್ಷೆಗಳಿಗೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ವರದಿಗಳು ತಿಳಿಸಿವೆ.

ಸೆಪ್ಟೆಂಬರ್ 1 ರಿಂದ 6 ರವರೆಗೆ ನಡೆಯುತ್ತಿರುವ ಜೆಇಇ ಪರೀಕ್ಷೆಗೆ 8.58 ಲಕ್ಷ ಎಂಜಿನಿಯರಿಂಗ್ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಸೆಪ್ಟೆಂಬರ್ 13 ರಂದು ನಡೆಸಲು ನಿರ್ಧರಿಸಲಾಗಿರುವ ನೀಟ್ ಪರೀಕ್ಷೆಗೆ 15.97 ಲಕ್ಷ ವೈದ್ಯಕೀಯ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಆದರೆ, ಇವರಲ್ಲಿ ಹಲವಾರು ಅಭ್ಯರ್ಥಿಗಳು ಸಾರಿಗೆ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಪರೀಕ್ಷೆಗಳಿಂದ ದೂರ ಉಳಿಸಿದ್ದಾರೆ. ಹಾಗಾಗಿ ಜೆಇಇ ಪರೀಕ್ಷೆ ವಿಫಲವಾಗಿದೆ. ನೀಟ್‌ ಪರೀಕ್ಷೆಯನ್ನು ಮುಂದೂಡಿ ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.


ಇದನ್ನೂ ಓದಿ: ದೆಹಲಿ ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆ ಕೈಬಿಡಲು ವಿದ್ಯಾರ್ಥಿಗಳು ನಿರ್ಧಾರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights