ಗಡಿಯಲ್ಲಿ ಭಾರತ ನಿಯಮ ಉಲ್ಲಂಘಸಿಲ್ಲ; ಚೀನಾ ಗುಂಡು ಹಾರಿಸಿ ಪ್ರಚೋದಿಸುತ್ತಿದೆ: ಭಾರತ ಪ್ರತ್ಯುತ್ತರ
ಭಾರತ ಗಡಿ ಭಾಗ ಪೂರ್ವ ಲಡಾಖ್‌ನ ಪಾಂಗೋಂಗ್ ತ್ಸೋ ಸರೋವರದ ಬಳಿ ನೈಜ ನಿಯಂತ್ರಣ ರೇಖೆ ದಾಟಿ ಭಾರತೀಯ ಸೇನೆಯು ಸೋಮವಾರ ರಾತ್ರಿ ಗುಂಡು ಹಾರಿಸಿದೆ ಎಂಬ ಚೀನಾದ ಆರೋಪವನ್ನು ಭಾರತ ತಳ್ಳಿಹಾಕಿದ್ದು, ಚೀನಾವೇ ಗಾಳಿಯಲ್ಲಿ ಗುಂಡು ಹಾರಿಸಿದೆ ಎಂದು ಭಾರತ ಹೇಳಿದೆ.
ಭಾರತದ ಬಗ್ಗೆ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಕೆಟ್ಟ ಹೆಸರು ತರಲು ಚೀನಾ ಪ್ರಯತ್ನಿಸುತ್ತಿದೆ. ಉನ್ನತ ಮಟ್ಟದಲ್ಲಿ ರಾಜತಾಂತ್ರಿಕ ಮಾತುಕತೆಗಳು ಮುಂದುವರೆಯುತ್ತಿರುವ ಸಮಯದಲ್ಲಿಯೂ ಕೂಡ ಚೀನಾದ ಸೈನ್ಯವು ಒಪ್ಪಂದಗಳನ್ನು ಉಲ್ಲಂಘಿಸುತ್ತಿದೆ ಎಂದು ಭಾರತ ಆರೋಪಿಸಿದೆ.
ಸೆಪ್ಟಂಬರ್ 7 ರಾತ್ರಿ ಚೀನಾದ ಸೈನ್ಯವು ಭಾರತದ ಸ್ಥಾನಗಳನ್ನು ಮುಚ್ಚಲು ಬೆದರಿಕೆಯೊಡ್ಡಿದೆ. ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಪ್ರಚೋದನೆ ನೀಡಿದೆ. ಆದರೂ ಭಾರತೀಯ ಪಡೆಗಳು ಸಂಯಮದಿಂದ ನಡೆದುಕೊಂಡಿವೆ. ಪ್ರಬುದ್ಧ ಮತ್ತು ಜವಾಬ್ದಾರಿಯುವ ನಡವಳಿಕೆಯ ಮೂಲಕ ಗಡಿ ಸಂಘರ್ಷ ಉಲ್ಬಣಗೊಳ್ಳದಂತೆ ಭಾರತದ ಪಡೆಗಳು ಎಚ್ಚರಿಕೆ ವಹಿಸಿದೆ ಎಂದು ಸರ್ಕಾರ ಹೇಳಿದೆ.
ಇದನ್ನೂ ಓದಿ: ಗಡಿ ಸಮಸ್ಯೆ: ರಾಜತಾಂತ್ರಿಕ ಮಟ್ಟದಲ್ಲಿ ಪರಿಹಾರ ಕಂಡುಕೊಳ್ಳುವುದು ಅಗತ್ಯ: ಜೈಶಂಕರ್
ಇದಕ್ಕೂ ಮೊದಲು ಚೀನಾ ಲಿಬರೇಷನ್ ಆರ್ಮಿಯ ಪಶ್ಚಿಮ ಕಮಾಂಡರ್ ಕರ್ನಲ್ ಝಾಂಗ್ ಸುಯಿಲಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ನೈಜ ನಿಯಂತ್ರಣ ರೇಖೆ ದಾಟಿ ಭಾರತದ ಪಡೆಗಳಿಂದ ಏಕಾಏಕಿ ದಾಳಿ ನಡೆಸಲಾಯಿತು. ಇದನ್ನು ತಡೆಯಲು ಚೀನಾ ಸಹ ಪ್ರತಿ ದಾಳಿ ನಡೆಸಿದೆ. ಭಾರತದ ನಡೆಯು ಗಡಿ ಸಮಸ್ಯೆಯನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳುವ ಪರಸ್ಪರ ಒಪ್ಪಂದದ ಗಂಭೀರ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದ್ದರು.

ಇದು ತೀವ್ರ ಗಂಭೀರ ನಡೆಯಾಗಿದೆ. ಈ ಕೂಡಲೇ ಭಾರತದ ಮುಂಚೂಣಿ ಪಡೆಗಳು ಹಿಂದೆ ಸರಿಯುವಂತೆ ನಿರ್ದೇಶನ ನೀಡಬೇಕೆಂದು ಭಾರತದ ಸರ್ಕಾರಕ್ಕೆ ಮನವಿ ಮಾಡುತ್ತೇವೆ. ಫೈರಿಂಗ್‌ಗೆ ಕಾರಣರಾದವರ ಮೇಲೆ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಬೇಕು. ಇದು ಮತ್ತೆ ಪುನಾರಾವರ್ತನೆ ಆಗದಂತೆ ತಡೆಯಬೇಕು ಎಂದು ಚೀನಾದ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿತ್ತು.
ಮೇ ತಿಂಗಳಿನಲ್ಲಿ ಗಡಿ ಸಮಸ್ಯೆ ಉದ್ಬವವಾದಾಗಿನಿಂದ ಹಲವು ಮಾತುಕತೆಗಳು ನಡೆದರೂ ದೊಡ್ಡ ಮಟ್ಟದಲ್ಲಿ ಸೆಪ್ಟಂಬರ್ 5 ರಂದು ಮಾಸ್ಕೋದಲ್ಲಿ ನಡೆಸ ಶಾಂಘೈ ಸಹಕಾರ ಸಭೆಯಲ್ಲಿ ಭಾರತ ಚೀನಾ ಈ ಕುರಿತು ಮಾತುಕತೆ ನಡೆಸಿದ್ದವು. ಆದರೆ ಮೂರೇ ದಿನದಲ್ಲಿ ಮತ್ತೆ ಗಡಿ ಉದ್ವಿಗ್ನತೆ ಆರಂಭವಾಗಿದ್ದು ಆತಂಕ ಮೂಡಿಸಿದೆ.
ಇದನ್ನೂ ಓದಿ: ಯಾವ ಪಕ್ಷಕ್ಕೂ ಸೇರುವುದಿಲ್ಲ; ವೈದ್ಯನಾಗಿಯೇ ಸೇವೆ ಮಾಡುತ್ತೇನೆ: ಡಾ. ಕಫೀಲ್ ಖಾನ್

