ಸರ್ಕಾರಿ ಸೇವೆಗಳು ಕನ್ನಡದಲ್ಲಿಯೇ ಇರಬೇಕು: ಹಿಂದಿ ಹೇರಿಕೆಯ ವಿರುದ್ಧ ಕನ್ನಡಿಗರ ಅಭಿಯಾನ!

ಹಿಂದಿ ದಿವಸ್‌ ಆಚರಣೆಗೆ ವಿರೋಧ ವ್ಯಕ್ತಪಡಿಸಿ ಹಾಗೂ ಸರ್ಕಾರಿ ಸೇವೆ ನಮ್ಮ ಭಾಷೆಯಲ್ಲಿಯೇ ಇರಲಿ ಎಂದು ಆಗ್ರಹಿಸಿ #ServeInMyLanguage ಎಂಬ ಹ್ಯಾಶ್‌ ಟ್ಯಾಗ್‌ ಟ್ರೆಂಡ್ ಆಗುತ್ತಿದ್ದು, ಜಾಲತಾಣದಲ್ಲಿ ಭಾರೀ ಸದ್ದು ಮಾಡಿದೆ.

ಸೆಪ್ಟೆಂಬರ್‌ 14 ರಂದು ದೇಶದಾದ್ಯಂತ ಹಿಂದಿ ದಿನ ಆಚರಣೆ ಮಾಡಲಾಗುತ್ತಿದ್ದು, ನಿನ್ನೆ ’ಆ ದಿನಗಳು’ ಖ್ಯಾತಿಯ ನಟ ಚೇತನ್‌ “ಹಿಂದಿ ಗೊತ್ತಿಲ್ಲ ಹೋಗೋ” ಎಂಬ ಅಭಿಯಾನವನ್ನು ದ್ರಾವಿಡ ಆರ್ಮಿ ಸಂಘಟನೆಯ ನೇತೃತ್ವದಲ್ಲಿ ಪ್ರಾರಂಭಿಸಿದ್ದರು. ತಮಿಳು ನಾಡಿನಲ್ಲೂ ಚಿತ್ರ ಕಲಾವಿದರು “ಹಿಂದಿ ತೆರಿಯಾದ್ ಪೋಡಾ” ಅಭಿಯಾನವನ್ನು ಟ್ವಿಟ್ಟರ್‌ ಟ್ರೆಂಡ್ ಮಾಡಿದ್ದರು.

ಇದೀಗ “ಹಿಂದಿ ಗೊತ್ತಿಲ್ಲ ಹೋಗೋ” ಮತ್ತು “ಕೇಂದ್ರ ಸರ್ಕಾರದ ಸೇವೆಗಳು ಕನ್ನಡದಲ್ಲೇ ಸಿಗಬೇಕು” ಎಂದು ಒತ್ತಾಯಿಸುವ #ServeInMyLanguage ಎಂಬ ಹ್ಯಾಷ್ ಟ್ಯಾಗ್ ಟ್ವಿಟರ್‌ನಲ್ಲಿ ಟ್ರೆಂಡಿಂಗ್‌ಲ್ಲಿ ಮೊದಲ ಸ್ಥಾನದಲ್ಲಿದೆ.

ಕೇಂದ್ರ ಸರ್ಕಾರವೇ ಹಿಂದಿ ದಿನಕ್ಕೆ ಸಂಬಂಧಿಸಿದಂತೆ ಅನೇಕ ವಿಶೇಷ ಕಾರ್ಯಕ್ರಮಗಳನ್ನೂ ಆಯೋಜಿಸುತ್ತದೆ. ಆದರೆ, ಕರ್ನಾಟಕದಲ್ಲಿ ಇತ್ತೀಚೆಗೆ ಹಿಂದಿ ದಿನದ ವಿರುದ್ಧ ಅಪಸ್ವರಗಳು ಹಾಗೂ ಭಾರೀ ವಿರೋಧಗಳು ಕೇಳಿ ಬರುತ್ತಿವೆ. ಅಲ್ಲದೆ, ಹಲವಾರು ಹೋರಾಟಗಾರರು ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎಂಬ ಘೋಷಣೆಗಳಿಗೆ ಭಾರೀ ಜನಪ್ರಿಯತೆಯನ್ನೂ ತಂದುಕೊಡುವ ಮೂಲಕ ವಿಶೇಷವಾದ ಹೋರಾಟದ ಕಣವೊಂದನ್ನು ರೂಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಹಿಂದಿ ಭಾಷೆ ಹೇರಿಕೆಯ ವಿರುದ್ಧ ಕನ್ನಡಿಗರಲ್ಲಿ ಜನಾಭಿಪ್ರಾಯ ಮೂಡಿದ್ದು ಪರಿಣಾಮ ಇಂದು #ServeInMyLanguage ಎಂಬ ಹ್ಯಾಷ್ ಟ್ಯಾಗ್ ಅನ್ನು ಟ್ರೆಂಡಿಂಗ್ ಮಾಡುವ ಮೂಲಕ ಕನ್ನಡಿಗರು ಒಗ್ಗಟ್ಟಾಗಿ ಹಿಂದಿ ದಿವಸ್ ಅನ್ನು ವಿರೋಧಿಸಿದ್ದಾರೆ.

ಇದನ್ನೂ ಓದಿ: ಹಿಂದಿ ಥೆರಿಯತು ಪೊಡಾ: ಹಿಂದಿ ಹೇರಿಕೆಯ ವಿರುದ್ಧ ಟೀ-ಶರ್ಟ್‌ ಟ್ರೆಂಡಿಂಗ್‌!

ಈ ಕುರಿತ ಮಾಹಿತಿಯನ್ನು ಇಂದು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಅರುಣ್ ಜಾವಗಲ್ ಎಂಬವರು, “ಕನ್ನಡದಲ್ಲಿ ಕೇಂದ್ರ ಸರಕಾರದ ಸೇವೆಗಳು ಸಿಗಬೇಕೆಂದು ಒತ್ತಾಯಿಸುವ #ServeInMyLanguage ಕಳೆದ 2-3 ಗಂಟೆಯಿಂದ trend ಆಗುತ್ತಿದೆ.” ಎಂದು ತಿಳಿಸಿದ್ದಾರೆ.

“ಮತ್ತೊಂದು ಟ್ವೀಟ್ ನಲ್ಲಿ ಕನ್ನಡ-ಕರ್ನಾಟಕ-ಕನ್ನಡಿಗರ ಉದ್ಯೋಗ/ತೆರಿಗೆ ಹಂಚಿಕೆ/ಭಾಷಾ ಹೇರಿಕೆ ಸಮಸ್ಯೆಗಳು ರಾಜಕೀಯ ಸಮಸ್ಯೆಗಳಾಗಬೇಕು, ಚುನಾವಣೆಯ ವಿಚಾರವಾಗಬೇಕು, ಸಮಸ್ಯೆಗಳ ಬಗ್ಗೆ ರಾಜಕೀಯ ಪಕ್ಷಗಳು ಮಾತನಾಡುವಂತೆ ಆಗಬೇಕು” ಎಂದು ಒತ್ತಾಯಿಸಿದ್ದಾರೆ.

ಇತ್ತೀಚೆಗೆ ತಮಿಳುನಾಡಿನ 2003 ರ ಬ್ಯಾಚ್‌ನ ಐಆರ್‌ಎಸ್‌ ಅಧಿಕಾರಿ ಬಿ. ಬಾಲಮುರುಗನ್ ಕೇಂದ್ರ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿಗೆ ಆಗಸ್ಟ್ 09 ರಂದು ಬರೆದಿರುವ ಪತ್ರದಲ್ಲಿ, “ಹಿಂದಿ ಸೆಲ್‌ನಲ್ಲಿ ಕೆಲಸದ ಅಧಿಕೃತ ಸಂವಹನ ಭಾಷೆ ಹಿಂದಿ. ಅಧಿಕೃತವಾಗಿ ಎಲ್ಲಾ ಅಧಿಕಾರಿಗಳು ಹಿಂದಿ ಭಾಷೆಯನ್ನೇ ಬಳಸಬೇಕು ಮತ್ತು ಈ ಭಾಷೆಯಲ್ಲೇ ಮೇಲ್ವಿಚಾರಣೆ ಮಾಡಬೇಕು. ಆದರೆ, ನನಗೆ ಹಿಂದಿಯಲ್ಲಿ ABCD ಯೂ ಗೊತ್ತಿಲ್ಲ. ಹಾಗಾಗಿ ಹಿಂದಿ ಸೆಲ್‌ನಲ್ಲಿ ಕೆಲಸ ಮಾಡಲು ಆಸಕ್ತಿ ಇಲ್ಲ” ಎಂದು ಪತ್ರ ಬರೆದಿದ್ದು ರಾಷ್ಟ್ರ ಮಟ್ಟದಲ್ಲಿ ಚರ್ಚೆ ಹುಟ್ಟು ಹಾಕಿತ್ತು.

https://twitter.com/SuhasGowda99/status/1304276649282682880?s=20

 


ಇದನ್ನೂ ಓದಿ: ಬ್ರಾಹ್ಮಣರ ಕೈಗೆ ಕುರಾನ್‌ ಕೊಟ್ಟಂತಿದೆ ಹಿಂದಿ ಹೇರಿಕೆ: IRS ಅಧಿಕಾರಿ ಬಾಲಮುರುಗನ್

Spread the love

Leave a Reply

Your email address will not be published. Required fields are marked *