ಮುಂಬೈಯಲ್ಲಿ ನಿರಂತರ ಭಾರಿ ಮಳೆಯಿಂದಾಗಿ ರೈಲು ಸೇವೆಗಳು ಸ್ಥಗಿತ…
ಮುಂಬೈಯಲ್ಲಿ ರಾತ್ರಿಯಿಡೀ ಭಾರಿ ಮಳೆಯಿಂದಾಗಿ ನಗರದ ಅನೇಕ ಭಾಗಗಳಲ್ಲಿ ಪ್ರವಾಹದಂತೆ ನೀರು ನುಗ್ಗಿದ್ದು, ರಸ್ತೆ ಮತ್ತು ರೈಲು ಸಂಚಾರಕ್ಕೆ ಅಡ್ಡಿ ಉಂಟಾಗಿದೆ. ಮಂಗಳವಾರ ಸಂಜೆ ತಡವಾಗಿ ನಗರದಾದ್ಯಂತ ಭಾರೀ ಮಳೆ ಸುರಿದ ಪರಿಣಾಮ ಜನ ಜೀವನ ಅಸ್ಥವ್ಯಸ್ತಗೊಂಡಿದೆ.
ರಾತ್ರಿಯಿಂದ ಇಂದು ಬೆಳಿಗ್ಗೆಯವರೆಗೆ ಮುಂಬೈನಾದ್ಯಂತ ಭಾರಿ ಮಳೆಯಿಂದಾಗಿ ಸಾರ್ವಜನಿಕ ಸಾರಿಗೆ ಸೇವೆಗಳಿಗೂ ತೊಂದರೆಯಾಗಿದೆ.
ಹಲವಾರು ಬೀದಿಗಳು ಮತ್ತು ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ರಸ್ತೆ ಸಂಚಾರಕ್ಕೂ ಭಾರಿ ತೊಂದರೆಯಾಗಿದೆ. ಕೆಲವು ವಾಹನಗಳು ನೀರಿನಲ್ಲಿ ಮುಳುಗಿ ಹೋಗಿರುವ ದೃಶ್ಯಗಳು ಸಾಮಾನ್ಯವಾಗಿದ್ದು, ವರುಣನ ಮುನಿಸಿಗೆ ಸಾರ್ವಜನಿಕರು ಪೇಚಾಡುವಂತಾಗಿದೆ.
ಹಳಿಗಳ ಉದ್ದಕ್ಕೂ ಭಾರಿ ಮಳೆಯಾದ ಹಿನ್ನೆಲೆಯಲ್ಲಿ ಬುಧವಾರ ಮುಂಜಾನೆ 5 ಗಂಟೆಗೆ ಉಪನಗರ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಕೇಂದ್ರ ರೈಲ್ವೆ ವಕ್ತಾರರು ತಿಳಿಸಿದ್ದಾರೆ.

