ಸೆ. 25ಕ್ಕೆ ಕರ್ನಾಟಕವೂ ಬಂದ್ – ಹೋರಾಟ ನಿರತ ಸಂಘಟನೆಗಳಿಂದ ಕರೆ

ರೈತ, ದಲಿತ, ಕಾರ್ಮಿಕ, ಜನ ವಿರೋಧಿ ಸುಗ್ರೀವಾಜ್ಞೆಗಳು ಮತ್ತು ಮಸೂದೆಗಳನ್ನು ವಿರೊಧಿಸಿ ರಾಷ್ಟ್ರವ್ಯಾಪಿ ಹೋರಾಟ ನಡೆಸುತ್ತಿರುವ ಸಂಘಟನೆಗಳು ಸೆ.25ರಂದು ಅಖಿಲ ಭಾರತ ಬಂದ್‌ಗೆ ಕರೆ ಕೊಟ್ಟಿವೆ.

ರಾಜ್ಯದಲ್ಲಿಯೂ ವಿಧಾನಸಭೆ ಅಧಿವೇಶನದ ಸಂದರ್ಭದಲ್ಲಿ ಹೋರಾಟ ನಡೆಸುತ್ತಿರುವ ಸಂಘಟನೆಗಳು, ಭಾರತ ಬಂದ್ ಭಾಗವಾಗಿ ರಾಜ್ಯದಲ್ಲೂ ಸೆಪ್ಟೆಂಬರ್ 25ರಂದು ‘ಕರ್ನಾಟಕ ಬಂದ್’ ಕರೆ ನೀಡಲು ನಿರ್ಧರಿಸಿವೆ.

ಕೇಂದ್ರ ಸರ್ಕಾರ ಮತ್ತು ಬಿಜೆಪಿ ಆಡಳಿತದ ರಾಜ್ಯ ಸರ್ಕಾರಗಳು ತರುತ್ತಿರುವ ರೈತ ವಿರೋಧಿ ಮಸೂದೆಗಳನ್ನು ವಿರೋಧಿಸಿ ಈಗಾಗಲೇ ಪಂಜಾಬ್ ಹಾಗೂ ಹರಿಯಾಣಗಳಲ್ಲಿ ರೈತ ಹೋರಾಟ ಭುಗಿಲೆದ್ದಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿಯವರು ಮಸೂದೆಗಳ ಸಮರ್ಥನೆಗೆ ಇಳಿದಿದ್ದಾರಾದರೂ, ಅವರ ಸರ್ಕಾರದ ಮಂತ್ರಿಯೇ ಮಸೂದೆಗಳನ್ನು ವಿರೋಧಿಸಿ ರಾಜೀನಾಮೆ ನೀಡಿದ್ದರಿಂದ, ಪ್ರಧಾನಿಯವರ ಸಮರ್ಥನೆ ಪ್ರಯೋಜನಕ್ಕೆ ಬಂದಂತಿಲ್ಲ ಸಂಘಟನೆಗಳು ಹೇಳಿವೆ.

ಇದನ್ನು ಓದಿ: ಬಂಡವಾಳಿಗರ ಮನೆ ನಾಯಿಯ ಹೆಸರಿನಲ್ಲೂ ಆಸ್ತಿ ಮಾಡಲು ನೆರವಾಗಿದೆ ಸರ್ಕಾರ: ನೂರ್ ಶ್ರೀಧರ್

ಕರ್ನಾಟಕದಲ್ಲಿ ರೈತ ಹಾಗೂ ದಲಿತ ವಿರೋಧಿಯಾದ ಮಸೂದೆಗಳನ್ನು ಮಂಡಿಸಬಾರದು ಎಂದು ಅಧಿವೇಶನದ ಮೊದಲ ದಿನವೇ ಬೃಹತ್ ಪ್ರತಿಭಟನೆಯನ್ನು 29ಕ್ಕೂ ಹೆಚ್ಚು ಸಂಘಟನೆಗಳು ಒಟ್ಟು ಸೇರಿ ಐಕ್ಯ ಹೋರಾಟ ನಡೆಸಿದ್ದವು. ಆದರೆ ಸರ್ಕಾರವು ಮೊದಲ ದಿನ ಸಂಜೆಯೇ ತಾನು ಅಧಿವೇಶನದಲ್ಲಿ ಮಂಡಿಸಲಿರುವ ಮಸೂದೆಗಳ ಪಟ್ಟಿ ಬಿಡುಗಡೆ ಮಾಡಿದ್ದು, ಅದರಲ್ಲಿ ಎಪಿಎಂಸಿ, ಕಾರ್ಮಿಕ ಕಾಯ್ದೆ ಮತ್ತು ಭೂಸುಧಾರಣಾ ಕಾಯ್ದೆಗಳ ತಿದ್ದುಪಡಿಯೂ ಸೇರಿದ್ದು, ಇದು ಹೋರಾಟಗಾರರನ್ನು ಕೆರಳಿಸಿದೆ.

ಕನಿಷ್ಠ ಪ್ರತಿಭಟನೆಯ ಜಾಗಕ್ಕೆ ಬಂದು, ಹೋರಾಟಗಾರರ ಮಾತನ್ನೂ ಕೇಳದ ಸರ್ಕಾರದ ಪ್ರತಿನಿಧಿಗಳು ‘ಕೃಷಿಕರ ಪಾಲಿನ ಮರಣಶಾಸನ’ಗಳನ್ನು ತರಲು ಹೊರಟಿದ್ದಾರೆ ಎಂದು  ಆಕ್ರೋಶಗೊಂಡಿರುವ ರೈತರು ಮತ್ತು ಹೋರಾಟಗಾರರು ಸೆ. 25 ರಂದು ಬಂದ್‌ಗೆ ಕರೆ ನೀಡಿವೆ.

ಇದನ್ನು ಓದಿ: ವಿಧಾನ ಪರಿಷತ್‌ನಲ್ಲಿ ಬಿಜೆಪಿಗೆ ಮೆಜಾರಿಟಿ ಇಲ್ಲ, ಭೂಸುಧಾರಣೆ ಮಸೂದೆ ಮಂಡನೆಗೆ ಅವಕಾಶ ನೀಡುವುದಿಲ್ಲ: ಸಿದ್ದರಾಮಯ್ಯ

ಅಖಿಲ ಭಾರತ ರೈತ ಹೋರಾಟ ಸಮನ್ವಯ ಸಮಿತಿಯು ಈಗಾಗಲೇ ಭಾರತ ಬಂದ್‌ಗೆ ಕರೆ ನೀಡಿದ್ದು, ಕರ್ನಾಟಕದ ಎಲ್ಲಾ ಪ್ರಮುಖ ರೈತ ಸಂಘಟನೆಗಳು ಸಮಿತಿಯ ಭಾಗವಾಗಿವೆ. ಈಗ ದಲಿತ ಸಂಘಟನೆಗಳು ಹಾಗೂ ಗ್ರಾಮೀಣ ಕೂಲಿಕಾರರ ಸಂಘಟನೆಗಳು ಕೂಡ ಹೋರಾಟಕ್ಕೆ ಕೈಜೋಡಿಸಿದ್ದು, ಚಳುವಳಿಗೆ ಬಲ ತಂದುಕೊಟ್ಟಿದೆ.

ಕನ್ನಡ ಹೋರಾಟಗಾರರು ಬಂದ್‌ಗೆ ಬೆಂಬಲ ಕೊಡಲು ನಿರ್ಧರಿಸಿದ್ದು, ಉಳಿದ ಕನ್ನಡ ಸಂಘಟನೆಗಳ ಜೊತೆಗೆ ಚರ್ಚೆ ಮಾಡಿ ಇಂದು ನಿರ್ಧಾರ ಪ್ರಕಟಿಸುತ್ತೇವೆಂದು ಕರ್ನಾಟಕ ರಣಧೀರರ ಪಡೆಯ ರಾಜ್ಯಾಧ್ಯಕ್ಷ ಬಿ.ಹರೀಶ್ ಕುಮಾರ್ ತಿಳಿಸಿದ್ದಾರೆ.

ಮಸೂದೆಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಿಲುವು ಬಂದ್ ಕರೆಯ ಕುರಿತು ಏನಿದೆ ಎಂಬುದನ್ನು ಕಾದುನೋಡಬೇಕಿದೆ.


ಇದನ್ನು ಓದಿ: ರೈತ ವಿರೋಧಿ ಮಸೂದೆಗಳನ್ನು ಹಿಂಪಡೆಯದಿದ್ದರೆ, ಯಡಿಯೂರಪ್ಪ ಕುರ್ಚಿ ಉಳಿಯುವುದಿಲ್ಲ: ಬಡಗಲಪುರ ನಾಗೇಂದ್ರ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights