ಬಂಡವಾಳಿಗರ ಮನೆ ನಾಯಿಯ ಹೆಸರಿನಲ್ಲೂ ಆಸ್ತಿ ಮಾಡಲು ನೆರವಾಗಿದೆ ಸರ್ಕಾರ: ನೂರ್ ಶ್ರೀಧರ್

ರೈತ, ದಲಿತ, ಕಾರ್ಮಿಕ ಸಂಘಟನೆಗಳ ಐಕ್ಯ ಹೋರಾಟದ ಜನತಾ ಅಧಿವೇಶನ 2ನೇ ದಿನಕ್ಕೆ ಕಾಲಿಟ್ಟಿದ್ದು ರಾಜ್ಯ ಸರ್ಕಾರ ವಿರುದ್ಧ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ನೂರ್‌ ಶ್ರೀಧರ್‌ ಅವರು ಕಿಡಿ ಕಾರಿದ್ದಾರೆ.

ರಾಜ್ಯದ ಬಿಜೆಪಿ ಸರ್ಕಾರ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಬಡವರು ಮತ್ತು ರೈತರ ಅಳಿದುಳಿದಿರುವ ಅಂಗೈ ಅಗಲದ ಭೂಮಿಯನ್ನೂ ಕಸಿದುಕೊಂಡು ಕಾರ್ಪೋರೇಟ್‌ಗಳಿಗೆ ನೀಡಲು ಮುಂದಾಗಿದೆ. ಬಂಡವಾಳಶಾಹಿಗಳ ಮನೆಯಲ್ಲಿರುವ ನಾಯಿಗಳ ಹೆಸರಿನಲ್ಲಿಯೂ ಆಸ್ತಿ ಮಾಡಲು ನೆರವಾಗುತ್ತಿರುವ ಸರ್ಕಾರ, ಬಡವರ ಕುಳಿತು ಅನ್ನತಿನ್ನುವ ಒಂದಡಿ ಭೂಮಿಯನ್ನೂ ಬಿಡದೆ ಕಿತ್ತುಕೊಳ್ಳಲು ಮುಂದಾಗಿದೆ ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ನೂರ್‌ ಶ್ರೀಧರ್‌ ಹೇಳಿದ್ದಾರೆ.

ರಾಜ್ಯ ಸರ್ಕಾರ ಭೂಸ್ವಾಧೀನ ತಿದ್ದುಪಡಿ ಸುಗ್ರೀವಾಜ್ಞೆಯನ್ನು ಹಿಂಪಡೆಯವಂತೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಜನ ಚಳುವಳಿಗಳ ಪರ್ಯಾಯ ಜನತಾ ಅಧಿವೇಶನದಲ್ಲಿ ನೂರ್ ಶ್ರೀಧರ್ ಮಾತನಾಡಿದರು.

ಭೂಮಿಯ ಸುತ್ತ ದೊಡ್ಡ ಗದ್ದಲ ಅರಂಭವಾಗಿದೆ.  ಇಡೀ ದೇಶಾದ್ಯಂತ ಬಡವರ, ರೈತರ, ದಲಿತರ ಚಳುವಳಿಗಳು, ಹೋರಾಟಗಳು ನಿರ್ಣಾಯಕ ಘಟ್ಟದಲ್ಲಿವೆ. ಬದುಕಲು ಜಾಗ ಕೊಡಿ, ದುಡಿಯಲು ಭೂಮಿಕೊಡಿ ಎಂದು ರೈತರು, ಬಡವರು ಕೇಳುತ್ತಿರುವ ಸಂದರ್ಭದಲ್ಲಿ ಸರ್ಕಾರಗಳು ಬಡವರ ಭೂಮಿಯನ್ನು ಕಸಿದುಕೊಳ್ಳಲು ಹವಣಿಸುತ್ತಿವೆ ಎಂದು ಆಕ್ರೋಶ ವ್ಯಕ್ತಿಪಡಿಸಿದರು.

ಸರ್ಕಾರಗಳು ರೈತ ವಿರೋಧಿ ನಡೆ ಅನುಸರಿಸುತ್ತಿರುವ ಸಂದರ್ಭದಲ್ಲಿ ಇಲ್ಲಿನ ಜನತಾ ಅಧಿವೇಶನಕ್ಕೆ ಹೆಚ್ಚಿನ ಸ್ಥಾನವಿದೆ. ಸ್ವಾತಂತ್ರ್ಯ ಚಳುವಳಿಗಳು ಬ್ರಿಟಿಷರನ್ನು ಓಡಿಸಲು ಮಾತ್ರ ನಡೆದ್ದಲ್ಲ, ದೇಶದ ಪ್ರತಿಯೊಬ್ಬರಿಗೂ ಸಮಾನತೆ, ಹಕ್ಕುಗಳು ದೊರೆಯುವುದಕ್ಕಾಗಿ ನಡೆದ ಹೋರಾಟ. ಸ್ವಾತಂತ್ರ್ಯ ಚಳುವಳಿಯ ಧ್ಯೇಯ ಈಡೇರಿರುವುದು ಪ್ರತಿಯೊಬ್ಬ ಪ್ರಜೆಗೂ ಅತನ ಹಕ್ಕುಗಳು ದೊರೆತಾಗ ಮಾತ್ರ. ನಮ್ಮ ಹಕ್ಕು ನಮಗೆ ಬೇಕೇ ಬೇಕು ಎಂದು ಅವರು ಹೇಳಿದ್ದಾರೆ.

ಸ್ವಾತಂತ್ರ್ಯ ಪೂರ್ವದಲ್ಲಿ ಲಾಹೋರ್‌ನಲ್ಲಿ ನಡೆದ ಮಹಾಅಧಿವೇಶದಲ್ಲಿ ಉಳುವವನೇ ಭೂ ಒಡೆಯ ಎಂದು ಘೋಷಿಸಲಾಗಿತ್ತು. ಅಂದಿನಿಂದ ಇಂದಿನವರೆಗೂ ಆ ಮಾತು ಚಾಲ್ತಿಯಲ್ಲಿದೆ. ಎಲ್ಲರಿಗೂ ಘನತೆಯಿಂದ ಬದುಕುವ ಹಕ್ಕು, ಆಹಾರ ಪೂರೈಕೆ, ಭದ್ರತೆ ನೀಡಬೇಕು ಎಂದು ಲಾಹೋರ್ ಅಧಿವೇಶನದಲ್ಲಿ ಘೋಷಿಸಲಾಗಿತ್ತು. ಆ ಕಾರಣಕ್ಕಾಗಿಯೇ  ಸ್ವಾತಂತ್ರ್ಯ ನಂತರದಲ್ಲಿ ಇಡೀ ಭೂಮಿಯನ್ನ ರಾಷ್ಟ್ರೀಕರಣಗೊಳಿಸಬೇಕು ಎಂದು ಅಂಬೇಡ್ಕರ್  ವಾದಿಸಿದ್ದರು.

ಸಂವಿಧಾನದಲ್ಲಿ ಉತ್ಪಾದನಾ ಶಕ್ತಿಗಳು ಕೆಲವರ ಮುಷ್ಠಿಯಲ್ಲಿ ಹೋಗಬಾರದು, ಅವು ಎಲ್ಲರಿಗೂ ದೊರಕುವಂತೆ ಸರ್ಕಾರ ಖಾತ್ರಿಗೊಳಿಸಬೇಕು ಎಂದು ಅಂಬೇಡ್ಕರ್ ವಾದಿಸಿದ್ದರು. ಆದರೆ, ಬಡಜನರಿಗೆ ಸ್ವಾಭಿಮಾನದ ಬದುಕುನ್ನು, ಸ್ಥಾನಮಾನವನ್ನು ಕಟ್ಟಿಕೊಳ್ಳಲು ಅವಕಾಶ ಮಾಡಿಕೊಡುವಂತಹ ಅಂಬೇಡ್ಕರರ ಆಶಯವನ್ನು ಮೇಲ್ವರ್ಗದವರು ಪ್ರೋತ್ಸಾಹಿಸಲಿಲ್ಲ. ಇಂದಿಗೂ ಆ ಬಿಕ್ಕಟ್ಟು ಉಳಿದು ಹೋಗಿದೆ.

ಸ್ವಾತಂತ್ರ್ಯ ಚಳುವಳಿಯ ಆಶಯವನ್ನು ಗಾಳಿಗೆ ತೂರಿರುವ ಸರ್ಕಾರಗಳು ಬಂಡವಾಳ ಶಾಹಿಗಳಿಗೆ, ಭ್ರಷ್ಟರಿಗೆ ಭೂಮಿಯನ್ನು ಕೊಡುತ್ತಿರುವ ಸಮಯದಲ್ಲಿ ಕಳೆದ 75 ವ‍ರ್ಷಗಳಿಂದ ಹೋರಾಟಗಳು ನಡೆದಿದ್ದಾವೆ. ಬಡವರಿಗೂ ದೇಶದ ಸಂಪತ್ತಿನಲ್ಲಿ ಭಾಗಬೇಕು. ಬದುಕಲು ಸ್ಥಾನಮಾನ ದೊರೆಯಬೇಕು ಎಂದು ಹಲವಾರು ಸಂಘಟನೆಗಳು ಹೋರಾಟ ನಡೆಸಿವೆ. ಹೋರಾಟಗಾರರು ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ. ಸಾವಿರಾರು ಜನರು ಜೈಲುವಾಸ ಅನುಭವಿಸಿದ್ದಾರೆ ಎಂದು ನೂರ್ ಶ್ರೀಧರ್ ಹೇಳಿದ್ದಾರೆ.

ಸರ್ಕಾರಗಳು ಹಲವಾರು ಹಕ್ಕುಗಳನ್ನು ರೈತ, ದಲಿತ, ಕಾರ್ಮಿಕರಿಗೆ ನೀಡುತ್ತೇವೆ ಎಂದು ಹೇಳುತ್ತಿವೆ. ಭೂಮಿತಿ ಕಾಯ್ದೆ, ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ಫಾಂ, 50, 53ರಲ್ಲಿ ಬಡವರಿಗೆ, ಆದಿವಾದಿಗಳಿಗೆ ಹಕ್ಕು ಪತ್ರ ನೀಡುತ್ತೇವೆಂಬ ಹಕ್ಕುಗಳನ್ನು ನೀಡಿವೆ.. ಆದರೆ, ಇದೂವರೆಗೂ ಹಕ್ಕಗಳು ಮಾತ್ರ ದೊರೆತಿವೆ. ಹಕ್ಕುಪತ್ರಗಳು ಸಿಕ್ಕಿಲ್ಲ. ಹೀಗಿರುವಾಗ, ಸುಗ್ರೀವಾಜ್ಞೆಯ ಮೂಲಕ ಹಕ್ಕುಗಳನ್ನೂ ಕಸಿದುಕೊಳ್ಳುತ್ತಿವೆ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿದ್ದಾಗ ಮುಖ್ಯಮಂತ್ರಿಗಳೊಂದಿಗೆ ನಡೆದ ಸಭೆಯಲ್ಲಿ 04 ನಿರ್ಧಾರಗಳನ್ನು ಸರ್ಕಾರ ಕೈಗೊಂಡಿತ್ತು. 1. ಬಡವರು ಎಲ್ಲೇ ಉಳುಮೆ ,ವಾಸ ಮಾಡುತ್ತಿದ್ದರೂ ಆ ಭೂಮಿ ಸರ್ಕಾರ, ಅರಣ್ಯ, ಖಾಸಗಿ ಒಡೆತನದ ಭೂಮಿಯೇ ಅಗಿದ್ದರೂ ಅಲ್ಲಿಂದ ಬಡ ಜನರನ್ನು ಎತ್ತಂಗಡಿ ಮಾಡುವಂತಿಲ್ಲ. 2. ಒಂದುವೇಳೆ ಅಲ್ಲಿಂದ ಒಕ್ಕಲೆಬ್ಬಿಸುವ ಅನಿವಾರ್ಯತೆ ಇದ್ದಲ್ಲಿ, ಪರ್ಯಾಯ ವ್ಯವಸ್ಥೆ ಕಲ್ಪಿಸಿದ ನಂತರೇ ಅವರನ್ನು ಅಲ್ಲಿಂದ ಕಳಿಸಬೇಕು. 3. ಹಕ್ಕುಪತ್ರವಿಲ್ಲದೆ ವಾಸಿಸುತ್ತಿರುವ ಭೂಮಿಯನ್ನು ಆಟಿಂಟಿಂಗ್ ಮಾಡಿ 57 ರ ಅಡಿಯಲ್ಲಿ ಭೂ ರಹಿತರಿಗೆ ಹಂಚಬೇಕು.4. ಹೋರಾಟಗಾರರ ಮೇಲೆ ಕೇಸ್‌ ಹಿಂಪಡೆಯಬೇಕು ಎಂದು ಸರ್ಕಾರ ನಿರ್ಧರಿಸಿತ್ತು.

ಆದರೆ, ಆ ಸರ್ಕಾರದ ಅಧಿಕಾರಾವಧಿ ಮುಗಿದ ನಂತರ ಬಂದ ಎರಡೂ ಸರ್ಕಾರಗಳು ಆ ಬಗ್ಗೆ ಕ್ರಮಕ್ಕೆ ಮುಂದಾಗಲಿಲ್ಲ. ಬದಲಾಗಿ ಈಗಿರುವ ಸರ್ಕಾರ ರೈತರಿಂದ, ಬಡವರಿಂದ ಭೂಮಿಯನ್ನು ಕಸಿದುಕೊಳ್ಳುತ್ತಿದೆ. ಉಳ್ಳವರು, ಕಾರ್ಪೋರೇಟ್‌ಗಳು ತಮ್ಮ ಮನೆಯ ನಾಯಿಯ ಹೆಸರಿನಲ್ಲಿಯೂ ಅಸ್ತಿ ಮಾಡುವಂತಹ, ರೈತರಿಂದ ಭೂಮಿ ಕಸಿದುಕೊಳ್ಳುವಂತಹ ನೀತಿಗಳನ್ನು ಜಾರಿಗೊಳಿಸಲು ಮುಂದಾಗಿವೆ. ಸರ್ಕಾರ ತನ್ನ ಮಸೂದೆಯನ್ನು ಹಿಂಪಡೆಯದಿದ್ದರೆ ತೀವ್ರ ಹೋರಾಟವನ್ನು ಎದುರಿಸುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

Spread the love

Leave a Reply

Your email address will not be published. Required fields are marked *