ವಿರೋಧಿಗಳ ಕಣ್ಣು ಕಿತ್ತು, ಕೈ ಕತ್ತರಿಸುತ್ತೇನೆ: ಬಿಜೆಪಿ ಸಂಸದನ ಪ್ರಚೋದನಾಕಾರಿ ವಿವಾದಾತ್ಮಕ ‌ಹೇಳಿಕೆ

ರೋಹ್ಟಕ್‌ನಲ್ಲಿ ಬಿಜೆಪಿಯ ಕೆಲವು ನಾಯಕರನ್ನು ಬಂಧಿಸಿದ ನಂತರ ಬಿಜೆಪಿ ಸಂಸದ ಅರವಿಂದ್ ಶರ್ಮಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹರಿಯಾಣದ ಮಾಜಿ ಸಚಿವ, ಬಿಜೆಪಿ ಮುಖಂಡ ಮನೀಷ್ ಗ್ರೋವರ್ ಅವರನ್ನು ಯಾರಾದರೂ ಟಾರ್ಗೆಟ್ ಮಾಡಿದರೆ ಅವರ ‘ಕಣ್ಣುಗಳನ್ನು ಕಿತ್ತು, ಕೈ ಕತ್ತರಿಸಿ’ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ.

ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಶನಿವಾರ ಅರವಿಂದ್ ಶರ್ಮಾ ಮಾತನಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಬಿಜೆಪಿ ಮುಖಂಡ ಮನೀಶ್ ಗ್ರೋವರ್ ಅವರು ಶುಕ್ರವಾರ ರೋಹ್ಟಕ್ ಜಿಲ್ಲೆಯ ಕಿಲೋಯಿ ಗ್ರಾಮದಲ್ಲಿನ ದೇವಸ್ಥಾನಕ್ಕೆ ಭೇಟಿ ನೀಡಿದ್ದ ವೇಳೆ ರೈತರು ಅವರಿಗೆ ಮುತ್ತಿಗೆ ಹಾಕಿದ್ದರು. ರೋಹ್ಟಕ್ ಕ್ಷೇತ್ರದ ಬಿಜೆಪಿ ಸಂಸದರಾಗಿರುವ ಅರವಿಂದ್ ಶರ್ಮಾ ತಮ್ಮ ಪಕ್ಷದ ಮುಖಂಡನ ವಿರೋಧಿಗಳಿಗೆ ಖಡಕ್ ಎಚ್ಚರಿಕೆ ನೀಡಿರುವುದು ಇದೀಗ ವಿವಾದ ಸೃಷ್ಟಿಸಿದೆ.

ಮನೀಶ್ ಗ್ರೋವರ್ ಅವರನ್ನು ವಿರೋಧಿಸುವವರು ಯಾರೇ ಆಗಿದ್ದರೂ ಅವರ ಕಣ್ಣುಗಳನ್ನು ಕೀಳುತ್ತೇನೆ ಮತ್ತು ಕೈಗಳನ್ನು ಕತ್ತರಿಸುತ್ತೇನೆ’ ಎಂದು ಶರ್ಮಾ ಬೆದರಿಕೆ ಹಾಕಿದ್ದಾರೆ. ಅವರ ಈ ವಿವಾದಾತ್ಮಕ ಹೇಳಿಕೆಗೆ ನೆರೆದಿದ್ದವರಿಂದ ಭಾರೀ ಕರತಾಡನ ಮತ್ತು ಘೋಷಣೆಯ ಬೆಂಬಲ ಸಿಕ್ಕಿದೆ. ’25 ವರ್ಷಗಳಿಂದಲೂ ಕಾಂಗ್ರೆಸ್ ಅಧಿಕಾರಕ್ಕಾಗಿ ಪರದಾಡುತ್ತಿದೆ. 2019ರ ಚುನಾವಣೆ ಬಳಿಕ ದುಷ್ಯಂತ್ ಚೌಟಾಲಾ ಅವರ ಜೆಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡು ಬಿಜೆಪಿ ಅಧಿಕಾರಕ್ಕೆ ಬಂದಿದೆ’ ಎಂದು ಶರ್ಮಾ ಹೇಳಿದ್ದಾರೆ.

‘ಕಾಂಗ್ರೆಸ್ ಪಕ್ಷದ ನಾಯಕರಾದ ಭೂಪಿಂದರ್ ಸಿಂಗ್ ಹೂಡಾ ಮತ್ತು ಅವರ ಪುತ್ರ ದೀಪೇಂದ್ರ ಹೂಡಾ ಲೋಕಸಭೆ ಚುನಾವಣೆಯಲ್ಲಿ ಸೋತ ಕಾರಣ ಗ್ರೋವರ್ ಅವರನ್ನು ಟಾರ್ಗೆಟ್ ಮಾಡಿದ್ದಾರೆ. ಗ್ರೋವರ್ ವಿರುದ್ಧ ಏನಾದರೂ ಕಣ್ಣು ತಿರುಗಿಸಿದರೆ, ಆ ಕಣ್ಣು ಕೀಳುತ್ತೇವೆ. ಯಾರಾದರೂ ಅವರ ಮೇಲೆ ಕೈ ಎತ್ತಿದರೆ ಆ ಕೈಯನ್ನು ಕತ್ತರಿಸುತ್ತೇವೆ’ ಎಂದು ದೀಪೇಂದರ್ ಹೂಡಾಗೆ ಪರೋಕ್ಷವಾಗಿ ಶರ್ಮಾ ಎಚ್ಚರಿಕೆ ನೀಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights