ಭಾರತ v/s ನಮೀಬಿಯಾ: ಕೊಹ್ಲಿ ನಾಯಕತ್ವದ ಕೊನೆಯ ಪಂದ್ಯ; ಗೆದ್ದರೂ – ಸೋತರೂ ಲೆಕ್ಕಕ್ಕಿಲ್ಲ!

ಐಸಿಸಿ ಟಿ-20 ವಿಶ್ವಕಪ್‌ -2021ರ ಟೂರ್ನಿಯಲ್ಲಿ ಭಾರತ ತಂಡ ಇಂದು ಕೊನೆಯ ಪಂದ್ಯವನ್ನಾಡಲಿದೆ. ಇದು ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ಆಡುತ್ತಿರುವ ಅಂತಿಮ ಪಂದ್ಯವೂ ಆಗಿದೆ. ನಮೀಬಿಯಾ ವಿರುದ್ದ ನಡೆಯುತ್ತಿರುವ ಈ ಪಂದ್ಯವನ್ನು ಕೊಹ್ಲಿ ಪಡೆ ಗೆದ್ದರೂ, ಸೋತರೂ ಈ ಟೂರ್ನಿಯಲ್ಲಿ ಉಪಯೋಗವಿಲ್ಲದಂತಾಗಿದೆ.

ಟೂರ್ನಿಯ ಆರಂಭದ ಎರಡು ಪಂದ್ಯಗಳಲ್ಲಿ ಸೋಲುಂಡ ಪರಿಣಾಮ ಭಾರತ ತಂಡ ಟೂರ್ನಿಯಿಂದಲೇ ಹೊರಬಿದ್ದಿದೆ. ಇದರಿಂದಾಗಿ, ಟೀಮ್ ಇಂಡಿಯಾ ಇಂದು ನಮೀಬಿಯಾ ವಿರುದ್ಧ ಔಪಚಾರಿಕ ಪಂದ್ಯವಾಡಲಿದೆ. ಇದು ಸೂಪರ್ 12 ಹಂತದ ಕೊನೆಯ ಪಂದ್ಯವಾಗಿದ್ದು, ಈ ಮೂಲಕ ವಿಶ್ವಕಪ್ ಅಭಿಯಾನವನ್ನು ಅಂತ್ಯಗೊಳಿಸಲಿದೆ.

ಹೀಗಾಗಿ ಪ್ರಮುಖರಿಗೆ ವಿಶ್ರಾಂತಿ ನೀಡಿ ಕಣಕ್ಕಿಳಿಯದ ಆಟಗಾರರಿಗೆ ಅವಕಾಶ ನೀಡುವ ಸಂಭವವಿದೆ.

ಇಶಾನ್ ಕಿಶನ್, ರಾಹುಲ್ ಚಹಾರ್, ಭುವನೇಶ್ವರ್ ಕುಮಾರ್, ಶಾರ್ದೂಲ್ ಠಾಕೂರ್ ಇಂದಿನ ಪಂದ್ಯದಲ್ಲಿ ಆಡುವ ಸಾಧ್ಯತೆ ಹೆಚ್ಚಿದೆ.

ಯಾವುದೇ ಟ್ರೋಫಿ ಇಲ್ಲದೆ ನಾಯಕತ್ವ ತ್ಯಜಿಸುತ್ತಿರುವುದು ವಿರಾಟ್ ಅಭಿಮಾನಿಗಳಿಗೆ ಬೇಸರದ ಸಂಗತಿಯಾಗಿದೆ. ಕನಿಷ್ಠ ನಮೀಬಿಯಾ ವಿರುದ್ಧ ಜಯ ಸಾಧಿಸಿ ಕೊಹ್ಲಿಗೆ ಗೆಲುವಿನ ಅರ್ಪಣೆ ಮಾಡಲು ಟೀಮ್ ಇಂಡಿಯಾ ಯೋಜನೆ ರೂಪಿಸಿಕೊಂಡಿದೆ.

ಇತ್ತ ನಮೀಬಿಯಾ ತಂಡ ಅರ್ಹತಾ ಸುತ್ತಿನಿಂದ ಸೂಪರ್‌ 12 ಹಂತಕ್ಕೆ ಮೊತ್ತ ಮೊದಲ ಬಾರಿ ಅರ್ಹತೆ ಪಡೆದು ಗಮನಾರ್ಹ ಪ್ರದರ್ಶನ ನೀಡಿದೆ. ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಲ್ಲಿ ಸೋತರೂ ಕಿವೀಸ್‌ ಬೌಲರ್‌ಗಳನ್ನು ಬೆಂಡೆತ್ತಿ ಗಮನ ಸೆಳೆದಿತ್ತು. ನಮೀಬಿಯಾ ಬೌಲರ್‌ಗಳ ಪ್ರದರ್ಶನವೂ ಉತ್ತಮವಾಗಿದ್ದು, ಭಾರತ ತಂಡ ಮೈಮರೆತರೆ ಅಪಾಯ ಕಟ್ಟಿಟ್ಟ ಬುತ್ತಿ. ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಸಂಜೆ 7:30ಕ್ಕೆ ಈ ಪಂದ್ಯ ಆರಂಭವಾಗಲಿದೆ.

ವಿರಾಟ್ ನಾಯಕತ್ವದ ಯುಗ ಮುಕ್ತಾಯ:

ಟಿ20 ವಿಶ್ವಕಪ್ ಬಳಿಕ ಚುಟುಕು ಕ್ರಿಕೆಟ್​ನ ನಾಯಕತ್ವ ತ್ಯಜಿಸುವುದಾಗಿ ವಿರಾಟ್ ಕೊಹ್ಲಿ ಈಗಾಗಲೆ ಘೋಷಿಸಿರುವುದರಿಂದ ನಮೀಬಿಯ ವಿರುದ್ಧದ ಪಂದ್ಯ ಅವರ ನಾಯಕತ್ವದಲ್ಲಿ ಟೀಮ್ ಇಂಡಿಯಾಗೆ ಇದು ಕೊನೆಯ ಟಿ20 ಪಂದ್ಯವಾಗಿರಲಿದೆ. ಕೊಹ್ಲಿ ನಾಯಕತ್ವದಲ್ಲಿ ಇದುವರೆಗೆ ಆಡಿದ 49 ಟಿ20 ಪಂದ್ಯಗಳಲ್ಲಿ ಭಾರತ 29ರಲ್ಲಿ ಗೆದ್ದಿದ್ದು, 16ರಲ್ಲಿ ಸೋತಿದೆ. 2 ಟೈ ಆಗಿದ್ದರೆ, 2 ಪಂದ್ಯ ರದ್ದುಗೊಂಡಿದೆ. ಅಲ್ಲದೆ ಕೊಹ್ಲಿ ಏಕದಿನ ನಾಯಕತ್ವಕ್ಕೂ ಗುಡ್​ ಬೈ ಹೇಳಲಿದ್ದಾರೆ ಎನ್ನಲಾಗುತ್ತಿದ್ದು ಒಂದು ವೇಳೆ ಹಾಗಾದಲ್ಲಿ ಇದು ಅವರ ನಾಯಕತ್ವದ ಕೊನೇ ಸೀಮಿತ ಓವರ್ ಪಂದ್ಯವಾಗಿರಲಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.