ಲಾಕ್‌ಡೌನ್‌ ಎಫೆಕ್ಟ್‌: ಮಕ್ಕಳ ಶಿಕ್ಷಣಕ್ಕಾಗಿ ಹೆಚ್ಚಿನ ಬಡ್ಡಿದರದಲ್ಲಿ ಸಾಲ ಮಾಡುತ್ತಿದ್ದಾರೆ ರೈತರು!

ಕೊರೊನಾ ಸೋಂಕು ಮತ್ತು ಲಾಕ್‌ಡೌನ್‌ನಿಂದಾಗಿ ಸಂಕಷ್ಟಗೊಳಗಾಗಿರುವ ರೈತರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಬಡ್ಡಿದರದಲ್ಲಿ ಸಾಲ ಪಡೆದುಕೊಳ್ಳುತ್ತಿದ್ದಾರೆ.

ಬಾಗಲಕೋಟೆಯಲ್ಲಿರುವ ಕೃಷಿ ವಿಜ್ಞಾನ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಹಲವು ಕುಟುಂಬಗಳು ತಮ್ಮ ಮಕ್ಕಳ ಕಾಲೇಜು ಶುಲ್ಕ ಭರಿಸಲಾದರೆ ಸಾಲದ ಮೊರೆ ಹೋಗಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ನಮ್ಮದು ರೈತ ಕುಟುಂಬ. ಶಿಕ್ಷಣ ವ್ಯವಸ್ಥೆಯಲ್ಲಿ ಕೃಷಿ ವಿಜ್ಞಾನ ಶಿಕ್ಷಣ ಸೂಕ್ತವಾದದ್ದು ಎಂದು ಈ ಕೋರ್ಸನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಆದರೆ, ಕಳೆದ ಆರು ತಿಂಗಳಿಂದ ಹೇರಲಾಗಿದ್ದ ಲಾಕ್‌ಡೌನ್‌ನಿಂದಾಗಿ ಕುಟುಂಬದ ಆರ್ಥಿಕ ಪರಿಸ್ಥಿತಿ ಕುಸಿದಿದೆ. ಹಾಗಾಗಿ ನಮ್ಮ ತಂದೆ 5% ಬಡ್ಡಿದರದಲ್ಲಿ 20,000 ಸಾಲ ಪಡೆದಿದ್ದಾರೆ. ಅಸಲು ಬಡ್ಡಿ ತೀರಿಸುವುದೂ ಸವಾಲಾಗಿದೆ ಎಂದು ಬಾಗಲಕೋಟೆ ಕೃಷಿ ವಿವಿಯ ವಿದ್ಯಾರ್ಥಿ ಕಡೂರು ಮೂಲದ ಸಂತೋ‍ಷ್ (ಹೆಸರು ಬದಲಾಯಿಸಲಾಗಿದೆ) ಹೇಳಿದ್ದಾರೆ.

ಹಿಂದಿನ ವರ್ಷದ ಪ್ರವಾಸ, ಕಾನ್ವೋಕೇಷನ್, ಕ್ರೀಡೆ ಮತ್ತು  ವೃತ್ತಿ ಅಭಿವೃದ್ಧಿಗಾಗಿ ಸಂಗ್ರಹಿಸಿದ ಹಣ ಖರ್ಚಾಗದೆ ಹಾಗೆ ಉಳಿದಿದೆ. ಹಾಗಾಗಿ, ಸೆಮಿಸ್ಟರ್ ಶುಲ್ಕ ಕಡಿಮೆಯಾಗುತ್ತದೆ ಎಂದು ಭಾವಿಸಿದ್ದೆವು. ಆದರೆ, ಶಿಕ್ಷಣ ಇಲಾಖೆ ನಿರ್ದೇಶನದ ಹೊರತಾಗಿಯೂ ಪ್ರತಿ ಸೆಮಿಸ್ಟರ್ ಗೆ 2,700 ರೂ.ಗಳಷ್ಟು ಶುಲ್ಕವನ್ನು ವಿಶ್ವವಿದ್ಯಾನಿಲಯ ಹೆಚ್ಚಿಸಿದೆ. ಇದರಿಂದಾಗಿ ತಾನು ಅಕ್ಟೋಬರ್ 5ರೊಳಗೆ 19,305 ರೂ.ಶುಲ್ಕವನ್ನು ಪಾವತಿಸಬೇಕು ಎಂದು ಸಂತೋ‍ಷ್‌ ಹೇಳಿದ್ದಾರೆ.

ಶುಲ್ಕವನ್ನು ಕಡಿಮೆ ಮಾಡಬೇಕೆಂದು ಡೀನ್ ಮತ್ತು ಕುಲಪತಿಗಳಲ್ಲಿ ಮನವಿ ಮಾಡಿದ್ದೇವೆ. ಆದರೂ, ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ. ನಮ್ಮ ತಂದೆಯೂ ಸಾಲಕ್ಕಾಗಿ ಪರದಾಡುತ್ತಿದ್ದಾರೆ ಎಂದು  ಮತ್ತೋಬ್ಬ ವಿದ್ಯಾರ್ಥಿ ಆನಂದ್ (ಹೆಸರು ಬದಲಾಯಿಸಲಾಗಿದೆ) ತಿಳಿಸಿದ್ದಾರೆ.

ಕೃಷಿ ವಿಜ್ಞಾನ ಶಿಕ್ಷಣ ನೀಡುತ್ತಿರುವ ರಾಜ್ಯದ ಆರು ವಿಶ್ವವಿದ್ಯಾನಿಲಯಗಳ ರಾಜ್ಯ ಮಟ್ಟದ ಸಮನ್ವಯ ಸಮಿತಿಯು ಶುಲ್ಕ ಹೆಚ್ಚಿಸುವ ನಿರ್ಧಾರವನ್ನು ತೆಗೆದುಕೊಂಡಿದೆ. ಪ್ರತಿ ವರ್ಷ ಶೇಕಡಾ 5 ರಂತೆ ಶುಲ್ಕವನ್ನು ಹೆಚ್ಚಿಸಲಾಗುತ್ತಿದೆ. ಈ ವರ್ಷವೂ ಹೆಚ್ಚಿಸಲಾಗಿದೆ. ಸರ್ಕಾರ ಸಂಶೋಧನೆಗೆ ಮಾತ್ರ ಹಣ ನೀಡುತ್ತದೆ. ಹಾಗಾಗಿ ವಿವಿಯನ್ನು ಹೇಗೆ ನಡೆಸುವುದು.  ಶಿಕ್ಷಣವು ವಿದ್ಯಾರ್ಥಿಗಳ ಶುಲ್ಕವನ್ನು ಅವಲಂಬಿಸಿದೆ ಎಂದು ಕುಲಪತಿ ಇಂದಿರೇಶ್ ಹೇಳಿರುವುದಾಗಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.


ಇದನ್ನೂ ಓದಿ: ಹತ್ರಾಸ್ ಅತ್ಯಾಚಾರ ಪ್ರಕರಣದಲ್ಲಿ ಜಿಲ್ಲಾಧಿಕಾರಿಯೇ ಖಳನಾಯಕ: ಆತ ಮಾಡಿದ್ದೇನು ಗೊತ್ತೇ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights