ಮನಿಷಾಳ ಮೃತದೇಹವನ್ನು ರಾತ್ರೋರಾತ್ರಿ ಸುಟ್ಟಿದ್ದನ್ನೂ ಸಮರ್ಥಿಸಿಕೊಂಡ ಸರ್ಕಾರ: ಹೇಳಿದ್ದೇನು ಗೊತ್ತೇ?

ಹತ್ರಾಸ್‌ ಅತ್ಯಾಚಾರ ಮತ್ತು ಕ್ರೂರ ಹಲ್ಲೆಗೆ ಬಲಿಯಾದ ಸಂತ್ರಸ್ತ ಯುವತಿಯ ಮೃತದೇಹವನ್ನು ಆಕೆಯ ಕುಟುಂಬದವರಿಗೂ ನೀಡದೆ ರಾತ್ರೋರಾತ್ರಿ ಪೊಲೀಸರೇ ಸುಟ್ಟುಹಾಕಿದ್ದರು. ಪೊಲೀಸರ ಕ್ರಮವನ್ನು ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಥಿಸಿಕೊಂಡಿರುವ ಉತ್ತರ ಪ್ರದೇಶ ಸರ್ಕಾರ ರಾಜ್ಯದಲ್ಲಿ ಹಿಂಸಾಚಾರವನ್ನು ತಡೆಗಟ್ಟುವ ಉದ್ದೇಶದಿಂದ ಆತುರವಾಗಿ ಮನಿಷಾಳ ಸಂಸ್ಕಾರ ಮಾಡಲಾಗಿದೆ ಎಂದು ಹೇಳಿದೆ.

ಪೊಲೀಸರ ಕ್ರಮವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ದಾವೆ ಹೂಡಲಾಗಿದ್ದು, ಇದಕ್ಕೆ ಉತ್ತರಿಸಿ ಉತ್ತರ ಪ್ರದೇಶ ಸರ್ಕಾರ ಅಫಿಡೇವಿಟ್‌ ಸಿಲ್ಲಿಸಿದೆ. ಅಫಿಡೇವಿಕ್‌ನಲ್ಲಿ ಬಾಬರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ಬಂದ ಹಿನ್ನೆಲೆಯಲ್ಲಿ, ಹಿಂಸಾಚಾರಗಳು ನಡೆಯಬಹುದು ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಹಾಗಾಗಿ ಜಿಲ್ಲೆಯಲ್ಲಿ ಹೈಅಲರ್ಟ್​ ಘೋಷಿಸಲಾಗಿತ್ತು.

ಸೆ. 29ರಂದು ಸಂತ್ರಸ್ತ ಯುವತಿ ಮೃತಪಟ್ಟ ಬೆನ್ನಲ್ಲೇ ಆಸ್ಪತ್ರೆ ಆವರಣದಲ್ಲೇ ಬೃಹತ್​ ಪ್ರತಿಭಟನೆ ನಡೆಯಿತು. ಹಾಗಾಗಿ, ಈ ಪ್ರಕರಣಕ್ಕೆ ಜಾತಿ ಮತ್ತು ಕೋಮು ಬಣ್ಣ ಬಳಿದು ಹಿಂಸಾಚಾರ ಸೃಷ್ಟಿಸುವ ಸಂಚು ನಡೆದಿದೆ ಎಂದು ಹತ್ರಾಸ್‌ ಜಿಲ್ಲಾಡಳಿತಕ್ಕೆ ಅನೇಕ ಗುಪ್ತಚರ ಮಾಹಿತಿಗಳು ಬಂದಿದ್ದವು.

ಗುಪ್ತಚರ ಮಾಹಿತಿಯ ಆಧಾರದ ಮೇಲೆ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಹಿನ್ನೆಲೆಯಲ್ಲಿ ನಡುರಾತ್ರಿಯೇ ಸಂತ್ರಸ್ತೆಯ ಅಂತ್ಯಕ್ರಿಯೆ ಮಾಡಬೇಕಾಯಿತು ಎಂದು ಸಿಎಂ ಯೋಗಿ ಆಧಿತ್ಯಾನಾಥ್‌ ನೇತೃತ್ವದ ಸರ್ಕಾರ ಹೇಳಿದೆ.

ಇದನ್ನೂ ಓದಿ: ಮನಿಷಾಳನ್ನು ಸುಟ್ಟ ಜಾಗದಿಂದ ಒಂದಿಡಿ ಮಣ್ಣು ತಂದು ಸ್ಮಾರಕ ನಿರ್ಮಿಸೋಣ: ದೇವನೂರು ಮಹಾದೇವ

ಸಂತ್ರಸ್ಥೆಯ ಮೃತದೇಹವನ್ನೂ ಸುಟ್ಟು, ಈಗ ಅತ್ಯಾಚಾರ ನಡೆದಿರುವುದೇ ಖಾತ್ರಿಯಾಗಿಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ. ಅತ್ಯಾಚಾರ ನಡೆದು 2 ವಾರಗಳು ಕಳೆದ ನಂತರ ಅತ್ಯಾಚಾರ ನಡೆದಿರುವುದೇ ಖಾತ್ರಿಯಾಗಿಲ್ಲ ಎನ್ನುತ್ತಿರುವ ಸರ್ಕಾರ ಅತ್ಯಾಚಾರಿಗಳ ರಕ್ಷಣೆಗೆ ಇಳಿದಿದೆ.  ಅತ್ಯಾಚಾರಗಳನ್ನು ತಡೆಗಟ್ಟಲಾಗದ ಸರ್ಕಾರ ಜಿಲ್ಲೆಯಲ್ಲಿ 144 ಸೆಕ್ಷನ್‌ ಜಾರಿ ಮಾಡಿ, ಪ್ರತಿಭಟನೆಗಳನ್ನು ನಡೆಸದಂತೆ ತಡೆಯುತ್ತಿದೆ.

ಮನೀಷಾಳು ಅತ್ಯಾಚಾರಕ್ಕೆ ಒಳಗಾಗಿ ಏಳೆಂಟು ಗಂಟೆ ಕಾಲ ಹೊರಗೆ ಕೂರಿಸುತ್ತಾರೆ. ಕಾನೂನಿನಂತೆ ಅವಳನ್ನು ರೇಫ್ ಕ್ರೈಸಿಸ್ ಸೆಂಟರ್‌ಗೆ ಕರೆದುಕೊಂಡು ಹೋಗುವುದಿಲ್ಲ. ಹಾಗೇ ಕಾನೂನಿನಂತೆ 24 ಗಂಟೆ ಒಳಗೆ ವೀರ್‍ಯಾಣು (Sperm) ಪತ್ತೆ ಪರೀಕ್ಷೆಯನ್ನೂ ಮಾಡಿಸುವುದಿಲ್ಲ. ಬದಲಾಗಿ ವಿಳಂಬಿಸಿ, ಇದ್ದಿರಬಹುದಾದ ವೀರ್‍ಯಾಣು ಸಾಕ್ಷ್ಯವು ನಾಶವಾದ ಮೇಲೆ ವೀರ್‍ಯಾಣು ಪತ್ತೆ ಪರೀಕ್ಷೆ ಮಾಡಿಸುತ್ತಾರೆ.

ಮನೀಷಾ ಸಾಯುವ ಮೊದಲು (victim’s dying declaration) ತನ್ನ ಮೇಲೆ ಅತ್ಯಾಚಾರವಾಯ್ತು ಎಂದು ಹೇಳಿದ್ದರೂ ಕಾನೂನು ರೀತ್ಯ ಇದೇ ಪ್ರಬಲ ಸಾಕ್ಷಿಯಾಗಿದ್ದರೂ ಇದನ್ನು ಪರಿಗಣಿಸದ ಪೊಲೀಸ್ ವರಿಷ್ಠಾಧಿಕಾರಿ ’ಅತ್ಯಾಚಾರವಾಗಿಲ್ಲ, ಯಾಕೆಂದರೆ ಪರೀಕ್ಷೆಯಲ್ಲಿ ವೀರ್‍ಯಾಣು ಪತ್ತೆ ಆಗಿಲ್ಲ’ ಅನ್ನುತ್ತಾರೆ. ಮಹಿಳೆಯರಿಗೆ, ದಲಿತರಿಗೆ ರಕ್ಷಣೆಯಿಲ್ಲದ ರಾಜ್ಯದಲ್ಲಿ ಅತ್ಯಾಚಾರಿಗಳನ್ನು ರಕ್ಷಿಸಿಕೊಳ್ಳಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತವಾಗಿತ್ತು.


ಇದನ್ನೂ ಓದಿ: ಹತ್ರಾಸ್‌ ಸಂತ್ರಸ್ತೆಯ ಮೃತದೇಹ ಸುಟ್ಟು, ಅತ್ಯಾಚಾರ ನಡೆದಿರುವುದು ಖಚಿತವಾಗಿಲ್ಲ ಎಂದ ಯುಪಿ ಪೊಲೀಸ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights