ಸ್ಯಾಂಡಲ್ ವುಡ್ ಡ್ರಗ್ ಮಾಫಿಯಾ : ಜಾಮೀನಿಗಾಗಿ ರಾಜ್ಯ ಹೈಕೋರ್ಟ್ ಮೆಟ್ಟಿಲೇರಿದ ಸಂಜನಾ ಗಲ್ರಾನಿ!
ಸ್ಯಾಂಡಲ್ ವುಡ್ ಡ್ರಗ್ ಮಾಫಿಯಾ ಸಂಬಂಧಿಸಿದಂತೆ ಬೆಂಗಳೂರಿನ ಸಿಸಿಬಿ ಪೊಲೀಸರು ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ಇವರಿಬ್ಬರನ್ನು ಸೆ.16ರಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೋರ್ಟ್ ಆದೇಶ ನೀಡಿತ್ತು. ಸದ್ಯ ಪರಪ್ಪನ ಅಗ್ರಹಾರದಲ್ಲಿರುವ ಬಹುಭಾಷಾ ನಟಿ ಸಂಜನಾ ಜಾಮೀನಿಗಾಗಿ ರಾಜ್ಯ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಹೌದು.. ಸೆಪ್ಟೆಂಬರ್ 16ರಿಂದ ಸಂಜನಾ ಜೈಲುವಾಸ ಅನುಭವಿಸುತ್ತಿದ್ದಾರೆ. ಇನ್ನೂ ಸೆಪ್ಟೆಂಬರ್ 28 ರಂದು ಬೆಂಗಳೂರಿನ ವಿಶೇಷ ಎನ್ ಟಿಪಿಎಸ್ ಕೋರ್ಟ್ ನಟಿ ಸಂಜನಾ ಮತ್ತು ತುಪ್ಪದ ಹುಡುಗಿ ರಾಗಿಣಿ ಅವರ ಜಾಮೀನು ಅರ್ಜಿ ತಿರಸ್ಕರಿಸಿತ್ತು. ಹೀಗಾಗಿ ಶುಕ್ರವಾರ ನಟಿ ಸಂಜನಾ ಪರ ವಕೀಲ ಹೈಕೋರ್ಟ್ ಗೆ ಜಾಮೀನು ಅರ್ಜಿ ಹಾಕಿದ್ದಾರೆ. ಆದರೆ ನ್ಯಾಯಾಲಯ ಯಾವಾಗ ಅರ್ಜಿ ವಿಚಾರಣೆ ನಡೆಸಲಿದೆ ಅನ್ನೋದು ಇನ್ನೂ ತಿಳಿದು ಬಂದಿಲ್ಲ.
ಡ್ರಗ್ಸ್ ಜಾಲ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿರುವ ನಟಿ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಸಂಕಷ್ಟ ಇಮ್ಮಡಿಯಾಗುವ ಸಾಧ್ಯತೆ ದಟ್ಟವಾಗಿದೆ. ಅಂತಾರಾಷ್ಟ್ರೀಯ ಡ್ರಗ್ ಡೀಲರ್ ಭಟ್ಕಳ ಮೂಲದ ಮೆಸ್ಸಿ ಜತೆ ನಟಿಮಣಿಯರ ನಂಟಿದೆ ಎನ್ನಲಾಗುತ್ತಿದೆ. ಹೈಫೈ ಪಾರ್ಟಿಗಳಿಗೆ ಪೆಡ್ಲರ್ ಗಳ ಮೂಲಕ ಸಿಂಥೆಟಿಕ್ ಡ್ರಗ್ ಮಾರಾಟ ಮಾಡುತ್ತಿದ್ದ ಈತ, ಕೊಲಂಬಿಯಾ, ಹಾಲೆಂಡ್, ಬೆಲ್ಜಿಯಂ ಮೊದಲಾದ ದೇಶಗಳಿಂದ ಡ್ರಗ್ಸ್ ತರಿಸುತ್ತಿದ್ದ ಎನ್ನಲಾಗಿದೆ.
ಡೀಲರ್ ಮತ್ತು ಪೆಡ್ಲರ್ ಗಳ ಜತೆ ಕೋಡ್ ವರ್ಡ್ ಮೂಲಕ ವ್ಯವಹರಿಸುತ್ತಿದ್ದ ಸಂಜನಾ ಹಾಗೂ ರಾಗಿಣಿ ಲಾಕ್ ಡೌನ್ ಸಂದರ್ಭದಲ್ಲಿಯೂ ಮಾತ್ರೆಗಾಗಿ ಮೊರೆ ಇಟ್ಟಿದ್ದರು ಎಂಬುದಕ್ಕೆ ಸಾಕ್ಷಿಯಾಗಿ ಪೆಡ್ಲರ್ ಗಳಾದ ಉಡೇನ್, ಓಸ್ಸಿ ಫಿಲಿಪ್, ಲೂಮ್ ಪೆಪ್ಪರ್ ಗೆ 250ಕ್ಕೂ ಹೆಚ್ಚು ಬಾರಿ ಕರೆ ಮಾಡಿರುವ ಕಾಲ್ ಲಿಸ್ಟ್ ಅನ್ನು ಪೊಲೀಸರು ಸಂಗ್ರಹಿಸಿದ್ದಾರೆ.
ಡ್ರಗ್ಸ್ ಜಾಲಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎನ್ನುತ್ತಲೇ ವಿಚಾರಣೆಗೆ ಹಾಜರಾಗಿ, ಬಳಿಕ ನ್ಯಾಯಾಂಗ ಬಂಧನಕ್ಕೂ ಒಳಗಾಗಿರುವ ನಟಿಯರು ಸದ್ಯ ಹೊರಬರಲು ಸಾಕಷ್ಟು ಕಸರತ್ತು ಮಾಡುತ್ತಿದ್ದಾರೆ.
ಸದ್ಯ ಪರಪ್ಪನ ಅಗ್ರಹಾರದಲ್ಲಿರುವ ಬಹುಭಾಷಾ ನಟಿ ಸಂಜನಾ ಜಾಮೀನಿಗಾಗಿ ರಾಜ್ಯ ಹೈಕೋರ್ಟ್ ಮೆಟ್ಟಿಲೇರಿದ್ದು ಜಾಮೀನು ಭಾಗ್ಯ ಸಿಗುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.

