ಟಿಆರ್‌ಪಿ ಹಗರಣ: ಸಿಬಿಐ ತನಿಖೆ ನಿರ್ಬಂಧಿಸಿದ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ…!
ಇಡೀ ದೇಶವೇ ಹಿಂತಿರುಗಿ ನೋಡುವಂತೆ ಮಾಡಿದ್ದ ರಿಪಬ್ಲಿಕ್ ಟಿವಿಯ ಟೆಲಿವಿಷನ್ ರೇಟಿಂಗ್ ಪಾಯಿಂಟ್ಸ್ ಪ್ರಕರಣದ ಬಗ್ಗೆ ಸಿಬಿಐ ತನಿಖೆಗೆ ಕೇಂದ್ರ ಸರ್ಕಾರ ಆದೇಶಿದೆ. ಆದರೆ ಸಿಬಿಐ ತನಿಖೆ ನಡೆಸುತ್ತಿರುವಾಗ ಮಹಾರಾಷ್ಟ್ರ ಸರ್ಕಾರ ಮಹತ್ವದ ಆದೇಶವನ್ನು ಹೊರಡಿಸಿದೆ.
ರಾಜ್ಯದಲ್ಲಿ ಪ್ರಕರಣಗಳ ತನಿಖೆಗಾಗಿ ಮಹಾರಾಷ್ಟ್ರ ಕೇಂದ್ರ ತನಿಖಾ ದಳಕ್ಕೆ ನೀಡಿದ ಸಾಮಾನ್ಯ ಒಪ್ಪಿಗೆಯನ್ನು ಉದ್ಧವ್ ಠಾಕ್ರೆ ಸರ್ಕಾರ ಬುಧವಾರ ಹಿಂತೆಗೆದುಕೊಂಡಿದೆ. ಯಾವುದೇ ತನಿಖೆಯನ್ನು ನಡೆಸಲು ಸಿಬಿಐಗೆ ತನ್ನ ಅಧಿಕಾರ ವ್ಯಾಪ್ತಿಯನ್ನು ಪ್ರವೇಶಿಸಲು ರಾಜ್ಯದ ಅನುಮತಿ ಬೇಕಾಗುತ್ತದೆ ಎಂದು ನಿರ್ಧಾರ ಸೂಚಿಸಲಾಗಿದೆ.
ರೇಟಿಂಗ್ ಏಜೆನ್ಸಿ ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (ಬಾರ್ಕ್) ಕೆಲವು ಚಾನೆಲ್‌ಗಳು ಜಾಹೀರಾತುದಾರರನ್ನು ಆಮಿಷವೊಡ್ಡಲು ಟಿಆರ್‌ಪಿ ಸಂಖ್ಯೆಯನ್ನು ರಿಗ್ಗಿಂಗ್ ಮಾಡುತ್ತಿದೆ ಎಂದು ದೂರಿದಾಗ ಈ ಹಗರಣ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಕೆಲವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಇದರ ಬಿಸಿ ಸದ್ಯ ರಿಪಬ್ಲಿಕ್ ಟಿವಿಯ ಅರ್ನಾಬ್ ಗೋಸ್ವಾಮಿಗೂ ತಟ್ಟಿದೆ.
ಟಿಆರ್‌ಪಿ ಹಗರಣ ಮಹಾರಾಷ್ಟ್ರದಲ್ಲಿ ಸದ್ದು ಮಾಡಿದ್ದರ ಪರಿಣಾಮ ಅಲ್ಲಿನ ಅಪರಾಧ ವಿಭಾಗದ ಪೊಲೀಸರು ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದರು. ಹೀಗಾಗಿ ಮಹಾರಾಷ್ಟ್ರ ಸರ್ಕಾರ ಸಿಬಿಐ ಸಹಾಯವನ್ನು ಕೇಳಿರಲಿಲ್ಲ. ಆದರೆ, ಇದೇ ಪ್ರಕರಣವನ್ನು ಲಖನೌದ ಹಜರತ್ಗಂಜ್ ಪೊಲೀಸ್ ಠಾಣೆಯಲ್ಲೂ ದಾಖಲಿಸಲಾಗಿತ್ತು. ಹೀಗಾಗಿ ಉತ್ತರಪ್ರದೇಶ ಸರ್ಕಾರ ಈ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸುವಂತೆ ಕೇಂದ್ರ ಸರ್ಕಾರವನ್ನು ಕೇಳಿಕೊಂಡ ನಂತರ ಕೇಂದ್ರ ಸರ್ಕಾರ ಟಿಆರ್‌ಪಿ ಹಗರಣದ ತನಿಖೆ ಜವಾಬ್ದಾರಿಯನ್ನು ಸಿಬಿಐಗೆ ನೀಡಲು ಮುಂದಾಗಿತ್ತು.
ಉತ್ತರಪ್ರದೇಶ ಸರ್ಕಾರಕ್ಕೆ ಇದರಲ್ಲಿ ಒಮ್ಮತ ಇಲ್ಲ. ಈ ಕುರಿತು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಗುರುವಾರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳು ಸಹ ಟಿಆರ್‌ಪಿ ಹಗರಣ ತನಿಖೆಯನ್ನು ಸಿಬಿಐಗೆ ನೀಡಿದ್ದ ಒಪ್ಪಿಗೆಯನ್ನು ಹಿಂದಕ್ಕೆ ಪಡೆದಿವೆ ಎಂದು ವರದಿಯಾಗಿದೆ.
ಸದ್ಯ ಉದ್ಧವ್ ಠಾಕ್ರೆ ಸಿಬಿಐ ತನಿಖೆ ನಿರ್ಬಂಧಿಸಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.