ಟರ್ಕಿಯಲ್ಲಿ 6.6 ತೀವ್ರತೆಯ ಭೂಕಂಪ : 22 ಮಂದಿ ಸಾವು – 438ಕ್ಕೂ ಹೆಚ್ಚು ಮಂದಿಗೆ ಗಾಯ!

ಟರ್ಕಿಯ ಇಜ್ಮಿರ್ ನಗರದಲ್ಲಿ ಶುಕ್ರವಾರ ಭಾರಿ ಭೂಕಂಪನ ಸಂಭವಿಸಿ ಕನಿಷ್ಠ 22 ಜನರು ಸಾವನ್ನಪ್ಪಿದ್ದು 438ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಟರ್ಕಿಯ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೊಗನ್ ಇಸ್ತಾಂಬುಲ್‌ನ ಟಿವಿಯಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ. ಭೂಕಂಪದಿಂದ ಹಾನಿಗೊಳಗಾದ 17 ಕಟ್ಟಡಗಳ ಭಗ್ನಾವಶೇಷದಿಂದ ಜನರನ್ನು ರಕ್ಷಿಸಲು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ತಿಳಿಸಿದ್ದಾರೆ.

ಟರ್ಕಿಯ ಪಶ್ಚಿಮ ಪ್ರದೇಶದ ಇಜ್ಮಿರ್ ನಗರದಲ್ಲಿ, ತೀವ್ರವಾದ ಭೂಕಂಪನ ನಡುಕ ಹುಟ್ಟಿಸಿದೆ. ಅನೇಕ ಕಟ್ಟಡಗಳು ನೆಲಕ್ಕಚ್ಚಿವೆ.  ಟರ್ಕಿಯ ತುರ್ತು ಸಂಸ್ಥೆ ಇಜ್ಮಿರ್ ನಗರದಲ್ಲಿ ಭೂಕಂಪನ ಸಂಭವಿಸಿದ್ದು ಅದರ ಪ್ರಮಾಣ ರಿಕ್ಟರ್ ಪ್ರಮಾಣದಲ್ಲಿ 6.6 ಎಂದು ದಾಖಲಾಗಿದೆ ಎಂದು ಹೇಳಿದೆ. ಯುಎಸ್ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್ಜಿಎಸ್) ಪ್ರಕಾರ, ಭೂಕಂಪ ರಿಕ್ಟರ್ ಪ್ರಮಾಣದಲ್ಲಿ 7.0 ತೀವ್ರತೆಯನ್ನು ದಾಖಲಿಸಿದೆ.

ಭೂಕಂಪದ ಕೇಂದ್ರ ಬಿಂದು ಈಜಿಯರ್ ಸಮುದ್ರದಲ್ಲಿದೆ ಎಂದು ಹೇಳಲಾಗುತ್ತದೆ. ಭೂಕಂಪದಿಂದಾಗಿ ಸುನಾಮಿಯ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಟರ್ಕಿಯ ಅಧ್ಯಕ್ಷೀಯ ಕಚೇರಿಯ ಪ್ರಕಾರ, ಎರ್ಡೊಗನ್ ಭೂಕಂಪದ ಬಗ್ಗೆ ಗ್ರೀಕ್ ಪ್ರಧಾನಿ ಕಿರಿಯಾಕೋಸ್ ಮಿಟ್ಸೋಟಾಕಿಸ್ ಅವರೊಂದಿಗೆ ದೂರವಾಣಿ ಮೂಲಕ ಚರ್ಚಿಸಿದ್ದಾರೆ. ಗಾಯಗೊಂಡವರು ಶೀಘ್ರದಲ್ಲೇ ಚೇತರಿಸಿಕೊಳ್ಳಬೇಕೆಂದು ಉಭಯ ನಾಯಕರು ಹಾರೈಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights