ಆರ್.ಆರ್.ನಗರ, ಶಿರಾ ಕ್ಷೇತ್ರದಲ್ಲಿ ಗೆಲುವಿನ ಬಾವುಟ ಹಾರಿಸುವುದು ಖಚಿತ : ಬಿಎಸ್ವೈ
ಆರ್.ಆರ್.ನಗರ, ಶಿರಾ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಭಾರೀ ಕುತೂಹಲ ಮೂಡಿಸಿದ್ದು ಫಿಲಿತಾಂಶ ಪ್ರಕಟಣೆಗೆ ಇನ್ನೂ ಎರಡೇ ದಿನ ಬಾಕಿ ಇವೆ. ಇದಕ್ಕೂ ಮುನ್ನ ಸಿಎಂ ಯಡಿಯೂರಪ್ಪ ಗೆಲುವಿನ ಬಾವುಟ ಹಾರಿಸುವುದು ಖಚಿತ ಎಂದಿದ್ದಾರೆ. ಆರ್ ಆರ್ ನಗರ ಹಾಗೂ ಶಿರಾ ಕ್ಷೇತ್ರಗಳಲ್ಲಿ ಗೆಲುವು ನಮ್ಮದೇ ಎಂದು ಸಿಎಂ ಬಿಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕೊರೊನಾ ಮಧ್ಯೆ ರಾಜ್ಯದಲ್ಲಿ ನಡೆಯುತ್ತಿರುವ ಮೊದಲ ವಿಧಾನಸಭಾ ಉಪ ಚುನಾವಣೆ ಇದಾಗಿದೆ. ಕೊರೊನಾ ಆತಂಕದಲ್ಲಿ ಜನ ಮತಕಟ್ಟೆಗಳಿಗೆ ಬಂದು ತಮ್ಮ ಮತ ಚಲಾಯಿಸಿದ್ದಾರೆ.
ಶಿವಮೊಗ್ಗದ ಹೆಲಿಪ್ಯಾಡ್ ನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಬಿಎಸ್ವೈ, ಶಿರಾದಲ್ಲಿ ಈ ಹಿಂದೆಯೇ ಚುನಾವಣೆಯಲ್ಲಿ ಠೇವಣಿಯೇ ಬಾರದ ಸ್ಥಿತಿ ಭಾರತೀಯ ಜನತಾ ಪಕ್ಷಕ್ಕೆ ನಿರ್ಮಾಣವಾಗಿತ್ತು. ಆದರೆ ಈ ಬಾರಿ 25 ಸಾವಿರಕ್ಕೂ ಹೆಚ್ಚು ಅಂತರದಿಂದ ಗೆಲ್ಲಲಿದ್ದೇವೆ.ಮಾತ್ರವಲ್ಲ ಆರ್ ಆರ್ ನಗರದಲ್ಲೂ 40 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಲಿದ್ದಾರೆ ಎಂದಿದ್ದಾರೆ.ಜೊತೆಗೆ ಬಿಹಾರ ಚುನಾವಣೆಯಲ್ಲಿಯೂ ನೂರಕ್ಕೆ ನೂರರಷ್ಟು ಎನ್ ಡಿಎ ಸರ್ಕಾರವೇ ಮತ್ತೆ ಅಧಿಕಾರಕ್ಕೆ ಬರುವ ನಿರೀಕ್ಷೆ ಇದೆ ಎಂದು ಬಿಎಸ್ ವೈ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆದರೆ ಮಾಜಿ ಸಿಎಂ ಕುಮಾರಸ್ವಾಮಿ ಮಾತ್ರ ಫಲಿತಾಂಶಕ್ಕೂ ಮುನ್ನ ಸೋಲನ್ನೊಪ್ಪುಕೊಂಡಿದ್ದು, ಆರ್ ಆರ್ ನಗರ ಮತ್ತು ಶಿರಾದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಯಾವ ಪಕ್ಷ ಗೆಲುವಿನ ಬಾವುಟ ಹಾರಿಸಲಿದೆ ಎನ್ನುವುದು ಇನ್ನೆರೆಡು ದಿನದಲ್ಲಿ ಬಹಿರಂಗಗೊಳ್ಳಲಿದೆ.
ಆರ್.ಆರ್.ನಗರದಲ್ಲಿ ಬಿಜೆಪಿಯಿಂದ ಮುನಿರತ್ನ, ಕಾಂಗ್ರೆಸ್ ನಿಂದ ದಿವಂಗತ ಐಎಎಸ್ ಅಧಿಕಾರಿ ಡಿಕೆ ರವಿ ಅವರ ಪತ್ನಿ ಕುಸುಮಾ ಹನುಮಂತರಾಯಪ್ಪ, ಇನ್ನೂ ಜೆಡಿಎಸ್ ನಿಂದ ಕೃಷ್ಣಮೂರ್ತಿ ನಡುವೆ ನಡೆಯುತ್ತಿರುವ ಸ್ಪರ್ಧೆ ಇನ್ನೇನು ನಿರ್ಣಾಯಕ ಹಂತವನ್ನು ತಲುಪಿದೆ. ಇನ್ನೂ ತುಮಕೂರು ಜಿಲ್ಲಾ ಶಿರಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಅಭ್ಯರ್ಥಿ ರಾಜೇಶ್ ಗೌಡ, ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ಟಿ.ಬಿ.ಜಯಚಂದ್ರ, ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ನಡುವೆ ಯಾರಿಗೆ ಜಯ ಸಿಗಲಿದೆ ಎನ್ನುವ ಕುತೂಹಲ ಮೂಡಿದೆ.

