ಸಚಿವ ಸಂಪುಟ ವಿಸ್ತರಣೆ ಬಗ್ಗೆ ಬಿಎಸ್ವೈ ಸುಳಿವು : ಸದ್ದಿಲ್ಲದೇ ದಿಲ್ಲಿ ಯಾತ್ರೆ ಕೈಗೊಂಡ ಸಚಿವಾಕಾಂಕ್ಷಿಗಳು!

ಉಪಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಅದರ ಬೆನ್ನಲ್ಲಿಯೇ ದಿಲ್ಲಿಯಲ್ಲಿ ಲಾಬಿ ರಾಜಕಾರಣವೂ ಜೋರು ಪಡೆದಿದೆ. ಉಪಚುನಾವಣೆಯ ಫಲಿತಾಂಶದ ನಂತರ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸಿಎಂ ಯಡಿಯೂರಪ್ಪ ಸುಳಿವು ನೀಡಿದ ಹಿನ್ನೆಲೆಯಲ್ಲಿ ಸಚಿವಾಕಾಂಕ್ಷಿಗಳು ಸದ್ದಿಲ್ಲದೇ ದಿಲ್ಲಿ ಯಾತ್ರೆ ಕೈಗೊಂಡಿದ್ದಾರೆ.

ಪಕ್ಷಾಂತರ ಮಾಡಿ ಯಡಿಯೂರಪ್ಪ ಅವರ ಸರಕಾರ ಸ್ಥಾಪನೆಗೆ ಕಾರಣಕರ್ತರಾಗಿ ಈಗ ಪ್ರತಿಫಲವಾಗಿ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಶಾಸಕರು ಒಬ್ಬೊಬ್ಬರೇ ದಿಲ್ಲಿ ಯಾತ್ರೆಗೆ ಮುಂದಾಗಿದ್ದಾರೆ.

ದಿಲ್ಲೀಲಿ ತಮ್ಮ ಪ್ರಭಾವ ಬೆಳೆಸಿ ಹೈಕಮಾಂಡ್ ಒಲವು ಗಿಟ್ಟಿಸಿಕೊಳ್ಳುವುದು ಇವರ ಹುನ್ನಾರವಾಗಿದೆ. ಮಾಜಿ ಸಸಿವ ಶಂಕರ್‍ ಈ ಪ್ರಯತ್ನದ ಮುಂಚೂಣಿಯಲ್ಲಿದ್ದಾರೆ. ಇನ್ನು ನಾಗರಾಜ್ ಸಹ ಶೀಘ್ರವೇ ದಿಲ್ಲಿ ಯಾತ್ರೆ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ತಾವು ಅಧಿಕಾರ ಪಡೆಯುವುದು ನಿಶ್ಚಿತ ಎಂದು ನಾಗರಾಜ್ ಹೋದಬಂದಲ್ಲಿ ಹೇಳುತ್ತಿದ್ದಾರೆ. ಶತಾಯಗತಾಯ ಸಚಿವರಾಗಲೇಬೇಕು ಎಂಬ ಹಠಕ್ಕೆ ಬಿದ್ದಿರುವ ಅಡಗುರು ವಿಶ್ವನಾಥ್ ಸಹ ರಾಷ್ಟ್ರ ರಾಜಧಾನೀಲಿ ತಮ್ಮ ಲಾಬಿ ಶುರುವಿಟ್ಟುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈಗ ದಿಲ್ಲಿಯಲ್ಲಿ ಲಾಬಿ ಮಾಡಲು ರಾಜ್ಯದ ಮತ್ತೊಬ್ಬ ನಾಯಕರು ಲಭ್ಯರಿರುವುದು ಹಲವರಿಗೆ ಉಪಕಾರಿ ಆಗಿದೆ.ರಾಜ್ಯದಲ್ಲಿ ಸಚಿವರಾಗಿದ್ದ ಸಿಟಿ ರವಿ ಪ್ರಧಾನ ಕಾರ್‍ಯದರ್ಶಿಯಾಗಿ ದಿಲ್ಲೀಲಿ ಹೆಚ್ಚಿನ ಸಮಯ ಕಳೆಯಲಿರುವುದೇ ಇದಕ್ಕೆ ಕಾರಣ.

ಈ ಮಧ್ಯೆ ಸಚಿವ ಸಂಪುಟ ವಿಸ್ತರಣೆ ಸಂಬಂಧ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಜೊತೆ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿರುವುದಾಗಿ ಸಿಎಂ ಹೇಳಿರುವುದು ಆಕಾಂಕ್ಷಿಗಳ ತವಕ ಹೆಚ್ಚಿಸಿದೆ. ಒಟ್ಟಿನಲ್ಲಿ ಫಲಿತಾಂಶ ಬಂದ ಬಳಿಕ ಸಚಿವ ಸಂಪುಟ ವಿಸ್ತರಣೆಗೆ ಸಿಎಂ ಯಡಿಯೂರಪ್ಪ ಹಾಗೂ ಹೈಕಮಾಂಡ್ ಮೇಲೆ ಒತ್ತಡ ತೀವ್ರಗೊಳ್ಳುವುದಂತೂ ಖಚಿತ ಎನ್ನುತ್ತಿವೆ ಬಲ್ಲ ಮೂಲಗಳು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights