ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಗಸ್ತು ವಾಹನ : ಇಬ್ಬರು ಪೊಲೀಸರ ದುರ್ಮರಣ!
ರಾತ್ರಿ ವೇಳೆ ಕರ್ತವ್ಯದಲ್ಲಿದ್ದ ಪೊಲೀಸ್ ವಾಹನ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಪೊಲೀಸರು ಸಾವನ್ನಪ್ಪಿದ ಘಟನೆ ಮೈಸೂರು ಜಿಲ್ಲೆ ಕೆ.ಆರ್. ನಗರ ತಾಲ್ಲೂಕಿನ ಸಿದ್ದನ ಕೊಪ್ಪಲು ಗೇಟ್ ಬಳಿ ನಡೆದಿದೆ.
ರಾತ್ರಿ ಹೊತ್ತು ಗಸ್ತಿನಲ್ಲಿದ್ದ ಪೊಲೀಸ್ ಜೀಪ್ ಏಕಾಏಕಿ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಎಎಸ್ ಐ ಹಾಗೂ ಹೆಡ್ ಕಾನ್ ಸ್ಟೇಬಲ್ ಸಾವಿಗೀಡಾದ ಘಟನೆ ಮೈಸೂರು ಜಿಲ್ಲೆ ಕೆ.ಆರ್. ನಗರ ತಾಲ್ಲೂಕಿನ ಸಿದ್ದನ ಕೊಪ್ಪಲು ಗೇಟ್ ಬಳಿ ನಡೆದಿದೆ.
ಘಟನೆಯಲ್ಲಿ ಕೆ.ಆರ್. ನಗರ ಪೊಲೀಸ್ ಠಾಣೆಯ ಎಎಸ್ಐ ಮೂರ್ತಿ ಹಾಗೂ ಹೆಡ್ಕಾನ್ಸ್ಟೇಬಲ್ ಶಾಂತಕುಮಾರ್ ಸಾವಿಗೀಡಾಗಿದ್ದಾರೆ. ತಮ್ಮ ಇಲಾಖೆಯ ಜೀಪಿನಲ್ಲಿ ಬುಧವಾರ (ನ11) ರಾತ್ರಿ ಇಬ್ಬರೂ ಪೊಲೀಸ್ ಸಿಬ್ಬಂದಿ ಗಸ್ತು ಹೊರಟಿದ್ದರು. ನೈಟ್ ರೌಂಡ್ ಕರ್ತವ್ಯ ನಿರ್ವಹಿಸಿಕೊಂಡು ಗುರುವಾರ ಬೆಳಗಿನ ಜಾವ ಹಿಂದಿರುಗುವ ವೇಳೆ ಈ ದುರ್ಘಟನೆ ನಡೆದಿದೆ.
ಇಬ್ಬರೂ ಪೊಲೀಸರು ಸಾಲಿಗ್ರಾಮ ಪೊಲೀಸ್ ಠಾಣೆಯ ಕಡೆಯಿಂದ ಕೆ.ಆರ್. ನಗರದ ಕಡೆಗೆ ಬರುತ್ತಿರುವಾಗ ಗುರುವಾರ ಬೆಳಗಿನ ಜಾವ 3 ಗಂಟೆ ಸಮಯದಲ್ಲಿ ಸಿದ್ದನಕೊಪ್ಪಲು ಗೇಟ್ ಸಮೀಪ ಜೀಪ್ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಈ ವೆಳೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರೂ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಸದ್ಯ ಇಬ್ಬರ ಪಾರ್ಥಿವ ಶರೀರವನ್ನು ಕೆ.ಆರ್. ನಗರ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಗಿದೆ. ಶವಗಾರ ಮತ್ತು ಘಟನಾ ಸ್ಥಳಕ್ಕೆ ಮೈಸೂರು ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ದಕ್ಷಿಣ ಡಿವೈಎಸ್ಪಿ ಸುಮಿತ್ ಅವರು ಭೇಟಿ ನೀಡಿದರು. ಬಳಿಕ ಮೃತರ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.

