ಉಪಚುನಾವಣೆ ಗೆದ್ದರೂ ಮುಗಿಯದ ಸಿಎಂ ಗೋಳು: ಬಿಎಸ್‌ವೈ ಮುಂದೆ ಸಂಪುಟದ ಕಗ್ಗಂಟು!

ಉಪಚಚುನಾವಣೆ ಮುಗಿದು, ಚುನಾವಣೆಯಲ್ಲಿ ಬಿಜೆಪಿಯೇ ಗೆಲವು ಸಾಧಿಸಿದರೂ ಸಿಎಂ ಯಡಿಯೂರಪ್ಪನವರಿಗೆ ತಲೆ ನೋವು ಮಾತ್ರ ಇನ್ನೂ ಕಡಿಮೆಯಾಗಿಲ್ಲ. ರಾಜ್ಯ ಸಂಪುಟ ವಿಸ್ತರಣೆ ಮಾಡುವುದೇ ದೊಡ್ಡದೊಂದು ಸವಾಲಾಗಿದೆ.

ಈಗಾಗಲೇ ಬಿಜೆಪಿಗೆ ವಲಸೆ ಬಂದಿರುವ ಶಾಸಕರಿಗೆ ಸಚಿವ ಖಾತೆ ನೀಡುವುದು, ಮೂಲ ಬಿಜೆಪಿಗರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಯಡಿಯೂರಪ್ಪರಿಗೆ ಸಂಕಷ್ಟ ತಂದೊಡ್ಡಿದೆ.

ಬಿಜೆಪಿ ಅಧಿಕಾರದ ಗದ್ದುಗೆ ಏರಲು ಕಾರಣವಾದ 14 ಬಂಡಾಯ ಶಾಸಕರಿಗೂ ಸಚಿವ ಸ್ಥಾನ ನೀಡುವ ಭರವಸೆ ನೀಡಿರುವ ಸಿಎಂ ಯಡಿಯೂರಪ್ಪ, ಅಷ್ಟೂ ಜನರನ್ನು ಸಚಿವರನ್ನಾಗಿ ಮಾಡಲೇಬೇಕಿದೆ. ಅಲ್ಲದೆ, ಮೂಲ ಬಿಜೆಪಿಗರಾದ ಹಿರಿಯ ನಾಯಕರು ಹಾಗೂ ಅತೃಪ್ತರನ್ನೂ ಸಮಾಧಾನ ಮಾಡುವ ಸವಾಲು ಸಿಎಂ ಎದುರಿದೆ.

ಅದಕ್ಕಾಗಿ ಕೆಲವು ಶಾಸಕರಿಗೆ ನಿಗಮ-ಮಂಡಳಿಗಳಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು. ಆದರೆ, ಹಲವು ಶಾಸಕರು ನಿಗಮ-ಮಂಡಳಿಗಳನ್ನು ಅಧಿಕಾರ ಬೇಡವೆಂದು ನಯವಾಗಿಯೇ ತಿರಸ್ಕರಿಸಿದ್ದಾರೆ.

ಸದ್ಯಕ್ಕೆ ರಾಜ್ಯದಲ್ಲಿರುವ 34 ಸಚಿವ ಸ್ಥಾನಗಳಲ್ಲಿ  7 ಸ್ಥಾನಗಳು ಖಾಲಿಯಿವೆ. ಭರ್ತಿಯಾಗಿರುವ 27 ಸಚಿವರಲ್ಲಿ 11 ಮಂದಿ ವಲಸೆ ಬಂದವರಾಗಿದ್ದಾರೆ. ಅಲ್ಲದೆ, ಇನ್ನೂ ಎಂಟಿಬಿ ನಾಗರಾಜ್, ಮುನಿರತ್ನ, ಆರ್ ಶಂಕರ್, ಮತ್ತು ಎಚ್. ವಿಶ್ವನಾಥ್‌ಗೆ ಮಂತ್ರಿಗಿರಿ ಕೊಡಬೆಕಾಗಿದೆ.

ಇವರನ್ನು ಹೊರತು ಪಡಿಸಿ, ಸಿಪಿ ಯೋಗೇಶ್ವರ್, ಸುನಿಲ್ ಕುಮಾರ್, ಎಸ್ ಎ ರಾಮದಾಸ್, ಅಪ್ಪಚ್ಚು ರಂಜನ್ ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ಅರವಿಂದ ಲಿಂಬಾವಳಿ, ಎಸ್. ಅಂಗಾರ ಸೇರಿದಂತೆ ಹಲವು ಶಾಸಕರು ಮಂತ್ರಿ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದಾರೆ. ಎಲ್ಲರನ್ನು ಸಮಾಧಾನ ಪಡಿಸಿ, ಸಮತೋಲಿತ ಸಂಪುಟ ರಚಿಸುವುದು ಸಿಎಂ ಮುಂದಿರುವ ದೊಡ್ಡಸವಾಲಾಗಿದೆ.

ಸಚಿವರಾಗಲು ನಾನು ಈಗಾಗಲೇ ನನ್ನ ಅರ್ಜಿಯನ್ನು ಸಲ್ಲಿಸಿದ್ದೇನೆ, ಆದರೆ ಈಗ ಅದನ್ನು ನಿರ್ಧರಿಸಲು ಸಿಎಂಗೆ ಬಿಡಲಾಗಿದೆ. ಕೆಲವು ಮಂತ್ರಿಗಳನ್ನು ಕೈಬಿಡಲಾಗುವುದು ಮತ್ತು ಹೊಸ ಮುಖಗಳಿಗೆ ಅವಕಾಶ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಸುರಪುರ ಶಾಸಕ ರಾಜು ಗೌಡ ನಾಯಕ್ ಹೇಳಿದ್ದಾರೆ.

ರೇಣುಕಾಚಾರ್ಯ, ಮುರುಗೇಶ್ ನಿರಾಣಿ, ಶಿವರಾಜ್ ಪಾಟೀಲ್ ಮತ್ತು ಬೆಳ್ಳಿ ಪ್ರಕಾಶ್ ಅವರೊಂದಿಗೆ ಸಿಎಂ ನಿವಾಸದಿಂದ ನೇರವಾಗಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ನಿವಾಸಕ್ಕೆ ತೆರಳಿದರು. ಮೂರುದಿನಗಳ ದೆಹಲಿ ಪ್ರವಾಸದಿಂದ ವಾಪಾಸಾಗಿರುವ ಜಾರಕಿಹೊಳಿ ಶಾಸಕರಿಗೆ ಔತಣ ಕೂಟ ಏರ್ಪಡಿಸಿದ್ದರು.

ಸಿಎಂ ಯಡಿಯೂರಪ್ಪ ಸಂಪುಟ ಪುನಾರಚನೆ ಬಯಸಿದ್ದು, ಹೈಕಮಾಂಡ್ ಮುಂದೆ ಪ್ರಸ್ತಾಪಿಸಿದ್ದಾರೆ, ಆದರೆ ಕೇವಲ ಸಂಪುಟ ವಿಸ್ತರಣೆ ಮಾಡುವಂತೆ ಹೈಕಮಾಂಡ್ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.

ಆದರೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಸಲಹೆ ಮೇರೆಗೆ ಯಡಿಯೂರಪ್ಪ ಅವರು ಮಂಡಳಿಗಳು, ಅಧಿಕಾರಿಗಳು ಮತ್ತು ನಿಗಮಗಳಿಗೆ ಕಾರ್ಯಕರ್ತರನ್ನು ನೇಮಿಸುವ ಸಾಧ್ಯತೆಯಿದೆ. ಹೊಸ ಮುಖಗಳನ್ನು ಸೇರಿಸಿದ ನಂತರವೂ, ಮಸ್ಕಿ ಮತ್ತು ಬಸವಕಲ್ಯಾಣ ಕ್ಷೇತ್ರಗಳನ್ನು ಗಮನದಲ್ಲಿಟ್ಟುಕೊಂಡು ಕನಿಷ್ಠ ಒಂದು ಸಚಿವ ಸ್ಥಾನ ಖಾಲಿ ಇರಿಸಲು ಸಿಎಂ ನಿರ್ಧರಿಸಿದ್ದಾರೆ.


ಇದನ್ನೂ ಓದಿ: ಕನ್ನಡೇತರ ಬ್ಯಾಂಕ್‌ ನೌಕರರಿಗೆ ಕನ್ನಡ ಕಲಿಸಿ; ಇಲ್ಲವೇ ಹೊರಗೆ ಕಳಿಸಿ: ಟಿ.ಎಸ್‌.ನಾಗಾಭರಣ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights