2020ಕ್ಕಿಂತಲೂ 2021ರ ವರ್ಷ ಭೀಕರವಾಗಿರಲಿದೆ: WFP ಮುಖ್ಯಸ್ಥ ಡೇವಿಡ್‌ ಬೀಸ್ಲೆ

2021ರಲ್ಲಿ ಬಡ ಮತ್ತು ಅಭಿವೃದ್ಧಿ ಶೀಲ ರಾಷ್ಟ್ರಗಳ ಆರ್ಥಿಕತೆ ಮತ್ತಷ್ಟು ಬಿಗಡಾಯಿಸಲಿದೆ. ಹಾಗಾಗಿ, 2020 ಕ್ಕಿಂತಲೂ 2021 ಅತ್ಯಂತ ಕೆಟ್ಟ ವರ್ಷವಾಗಿರಲಿದೆ ಎಂದು ವಿಶ್ವ ಆಹಾರ ಯೋಜನೆ ( WFP)ಯ ಮುಖ್ಯಸ್ಥ ಡೇವಿಡ್‌ ಬೀಸ್ಲೆ ಎಚ್ಚರಿಸಿದ್ದಾರೆ.

ವಿಶ್ವಸಂಸ್ಥೆಯ ಅಂಗ ಸಂಸ್ಥೆಯಾಗಿರುವ ವಿಶ್ವ ಆಹಾರ ಯೋಜನೆಯನ್ನು (ಡಬ್ಲ್ಯುಎಫ್‌ಪಿ) 2020ನೇ ಸಾಲಿನ ನೊಬೆಲ್‌ ಶಾಂತಿ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಮಾತನಾಡಿರುವ ಡೇವಿಸ್‌ ಬೀಸ್ಲೆ, ‘ಹಸಿವು ನೀಗಿಸುವ ನಿಟ್ಟಿನಲ್ಲಿ ನಾವು ಅವಿರತವಾಗಿ ಶ್ರಮಿಸುತ್ತಿದ್ದೇವೆ. ನಮ್ಮ ಕಾರ್ಯವನ್ನು ಗುರುತಿಸಿ ನೊಬೆಲ್‌ ಪ್ರಶಸ್ತಿ ನೀಡಿರುವುದು ಖುಷಿಯ ವಿಚಾರ ಎಂದು ಹೇಳಿದ್ದಾರೆ.

ಇದೇ ವೇಳೆ ಮಾತನಾಡಿದ ಅವರು, ಈ ವರ್ಷಕ್ಕಿಂತಲೂ ಮುಂದಿನ ವರ್ಷ ಪರಿಸ್ಥಿತಿ ತುಂಬಾ ಬಿಗಡಾಯಿಸಲಿದೆ. 2021ರಲ್ಲಿ ಕೊರೊನಾ ಸೋಂಕಿನ ಹರಡುವಿಕೆ ಮತ್ತಷ್ಟು ಹೆಚ್ಚಲಿದೆ. ಇದರಿಂದಾಗಿ ಬಡ ಮತ್ತು ಅಭಿವೃದ್ಧಿ ಶೀಲ ರಾಷ್ಟ್ರಗಳ ಆರ್ಥಿಕತೆ ಮತ್ತಷ್ಟು ಬಿಗಡಾಯಿಸಲಿದೆ. ಇದನ್ನು ಎದುರಿಸಲು ನಾವು ಈಗಿನಿಂದಲೇ ಸಜ್ಜಾಗಬೇಕಿದೆ ಎಂದಿದ್ದಾರೆ.

‘ಈ ವರ್ಷ ಎಲ್ಲಾ ರಾಷ್ಟ್ರಗಳ ಖಜಾನೆ ತುಂಬಿತ್ತು. ಮುಂದಿನ ವರ್ಷದ ವೇಳೆಗೆ ಅದು ಬರಿದಾಗುವ ಅಪಾಯವಿದೆ. ಈ ವರ್ಷ ಸಿಕ್ಕಷ್ಟು ಹಣ 2021ಕ್ಕೆ ಸಿಗುವುದು ಅನುಮಾನ. ಹೀಗಾಗಿ ಎಲ್ಲಾ ರಾಷ್ಟ್ರಗಳ ನಾಯಕರ ಜೊತೆ ಖುದ್ದಾಗಿ ಮತ್ತು ಆನ್‌ಲೈನ್‌ ಮೂಲಕ ಮಾತನಾಡಿ ಮುಂದೆ ಉದ್ಭವಿಸಬಹುದಾದ ಅಪಾಯದ ಬಗ್ಗೆ ಅರಿವು ಮೂಡಿಸಲು ಮುಂದಾಗಿದ್ದೇವೆ’ ಎಂದು ಅವರು ಹೇಳಿದ್ದಾರೆ.

ಹಸಿವು ನೀಗಿಸುವ ನಿಟ್ಟಿನಲ್ಲಿ ಡಬ್ಲ್ಯುಎಫ್‌ಪಿ ನಡೆಸಿರುವ ಕಾರ್ಯಕ್ರಮಗಳು, ಪ್ರಯತ್ನಗಳನ್ನು ಪರಿಗಣಿಸಿ 2020ನೇ ಸಾಲಿನ ನೊಬೆಲ್‌ ಸಮಿತಿಯು ವಿಶ್ವ ಆಹಾರ ಯೋಜನೆಗೆ ನೊಬೆಲ್‌ ಶಾಂತಿ  ಪ್ರಶಸ್ತಿ ನೀಡಿತ್ತು.

ಘರ್ಷಣೆ ಪೀಡಿತ ಪ್ರದೇಶಗಳಲ್ಲಿ ಶಾಂತಿ ಸ್ಥಾಪನೆಗೆ ಡಬ್ಲ್ಯುಎಫ್‌ಪಿ ಶ್ರಮಿಸಿದೆ. ಜೊತೆಗೆ ಹಸಿವನ್ನು ಯುದ್ಧಕ್ಕೆ ಅಸ್ತ್ರವಾಗಿ ಬಳಸುವುದನ್ನು ತಪ್ಪಿಸುವ ಪ್ರಯತ್ನಗಳನ್ನು ಮಾಡಿದೆ ಎಂದೂ ನೊಬೆಲ್‌ ಸಮಿತಿ ಹೇಳಿತ್ತು.


ಇದನ್ನೂ ಓದಿ: ಬಿಹಾರ: ಕೇವಲ 43 ಸ್ಥಾನಗಳನ್ನು ಗೆದ್ದಿರುವವರು ಹೇಗೆ ಮುಖ್ಯಮಂತ್ರಿ ಆಗುತ್ತಾರೆ? ಆರ್‌ಜೆಡಿ ಪ್ರಶ್ನೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights