ಪ್ರಾದೇಶಿಕ ಪಕ್ಷಗಳನ್ನು ಬೆಳಸಿದಷ್ಟೂ ಕಾಂಗ್ರೆಸ್‌ ಭವಿಷ್ಯ ಮಂಕಾಗುತ್ತದೆ: ಆತಂಕದಲ್ಲಿ ಮಹಾರಾಷ್ಟ್ರ ಕಾಂಗ್ರೆಸ್‌

ಬಿಹಾರ ವಿಧಾನಸಭಾ ಚುನಾವಣೆ ಮತ್ತು ಉಪಚುನಾವಣೆಗಳಲ್ಲಿ ಕಾಂಗ್ರೆಸ್‌ ಕಳಪೆ ಪ್ರದರ್ಶನ ತೋರಿದೆ. ಇದರಿಂದಾಗಿ ಮಹಾರಾಷ್ಟ್ರ ಕಾಂಗ್ರೆಸ್ ಆತಂಕಕ್ಕೊಳಗಾಗಿದೆ. ಕಾಂಗ್ರೆಸ್‌ ಸೋಲಿಗೆ ಕಾಂಗ್ರೆಸ್‌ನ ನಾಯಕತ್ವ ಮತ್ತು ಪಕ್ಷದ ಕಳಪೆ ಪ್ರದರ್ಶನವೇ ಕಾರಣ. ಕಾಂಗ್ರೆಸ್‌ ಆತ್ಮವಿಮರ್ಶೆ ಮಾಡಿಕೊಳ್ಳಲೇಬೇಕು. ಇಲ್ಲವಾದರೆ ಕಾಂಗ್ರೆಸ್‌ಗೆ ಭವಿಷ್ಯವಿಲ್ಲ ಎಂದು ಹಿರಿಯ ನಾಯಕರು ಹೇಳುತ್ತಲೇ ಇದ್ದಾರೆ.

ರಾಷ್ಟ್ರದಲ್ಲಿ ಕಾಂಗ್ರೆಸ್‌ನ ರಾಜಕೀಯ ಪ್ರದರ್ಶನ ಹೀಗೆ ಮುಂದುವರೆದರೆ ಪಕ್ಷದ ಭವಿಷ್ಯ ಮಂಕಾಗಲಿದೆ. ಪಕ್ಷವನ್ನು ದುರ್ಬಲಗೊಳಿಸುವುದರಿಂದ ಪ್ರಾದೇಶಿಕ ಪಕ್ಷಗಳಿಗೆ ಹೆಚ್ಚಿನ ರಾಜಕೀಯ ಅವಕಾಶವಾಗಲಿದೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಪಕ್ಷದ ಮಾಜಿ ಮುಖ್ಯಮಂತ್ರಿಯೊಬ್ಬರು ಹೇಳಿಕೊಂಡಿದ್ದಾರೆ.

ಕಳೆದ ವರ್ಷ ನಡೆದ ಮಹಾರಾಷ್ಟ್ರ ಚುನಾವಣೆಯಲ್ಲಿ ಯಾವುದೇ ಕೇಂದ್ರದ ಮುಖಂಡರ ಬೆಂಬಲವಿಲ್ಲದಿದ್ದರೂ  ಸ್ಪರ್ಧಿಸಿದ್ದ 120 ಸ್ಥಾನಗಳ ಪೈಕಿ 44 ಸ್ಥಾನಗಳಲ್ಲಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ, ಬಿಹಾರದಲ್ಲಿ ಆಡಳಿತ ವಿರೋಧಿ ಹಾಗೂ ತೇಜಸ್ವಿ ಯಾದವ್ ಪರ ಅಲೆಯಿದ್ದರೂ ಕಾಂಗ್ರೆಸ್ ಸ್ಪರ್ಧಿಸಿದ್ದ 70 ಕ್ಷೇತ್ರಗಳ ಪೈಕಿಯಲ್ಲಿ ಕೇವಲ 19 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಇದು ಕಾಂಗ್ರೆಸ್‌ ಭವಿಷ್ಯದ ಬಗೆಗೆ ಚಿಂತನೆ ನಡೆಸಲೇಬೇಕಾದ ಅಗತ್ಯವನ್ನು ಮುಂದಿಟ್ಟಿದೆ ಎಂದು ಅವರು ಹೇಳಿದ್ದಾರೆ.

ಪ್ರಾದೇಶಿಕ ಪಕ್ಷಗಳು ಸಾಂಪ್ರಾದಾಯಿಕವಾಗಿ ಕಾಂಗ್ರೆಸ್ ಜೊತೆಗೆ ಮೈತ್ರಿ ಪಕ್ಷಗಳಾಗಿವೆ. ಆದರೆ, ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ ಸೋಲಿನ ಭೀತಿಯಿಂದಾಗಿ ಹೆಚ್ಚಿನ ಸ್ಥಾನಗಳಲ್ಲಿ ನಾವು ಸ್ಪರ್ಧಿಸಲು ಅವರು ಅವಕಾಶ ನೀಡಲ್ಲ, ಯಾವುದೇ ಚುನಾವಣೆಯಲ್ಲಿ ಅಧಿಕಾರ ಚೌಕಾಸಿ ಮೂಲಕ ನಮ್ಮ ಕ್ಷೇತ್ರಗಳಲ್ಲಿ ಹಾನಿಯುಂಟು ಮಾಡುತ್ತಾರೆ. ಅವರು ಮತ್ತಷ್ಟು ಸದೃಢರಾಗುತ್ತಾರೆ. ಮತ್ತೊಂದಡೆ ಬಿಜೆಪಿ ಬೆಳೆಯುತ್ತಿದೆ. ಈ ಪರಿಸ್ಥಿತಿ ಸರಿಯಾಗಿಲ್ಲ ಎಂದು ಮತ್ತೋರ್ವ ಪಕ್ಷದ ಮುಖಂಡರು ತಿಳಿಸಿದ್ದಾರೆ.

ದೇಶದಲ್ಲಿ ಕಾಂಗ್ರೆಸ್ ದೊಡ್ಡ ರಾಜಕೀಯ ಪಕ್ಷ ಅಲ್ಲ ಎಂಬುದನ್ನು ಒಪ್ಪಿಕೊಳ್ಳಬೇಕು. ಒಮ್ಮೆ ಪ್ರಾದೇಶಿಕ ಪಕ್ಷಗಳಿಗೆ ಜಾಗ ಮಾಡಿಕೊಟ್ಟು ಮತ್ತೆ ಪಕ್ಷ ಪುಟಿದೇಳಲು ಬಹಳ ಕಷ್ಟಪಡಬೇಕಾಗುತ್ತದೆ. ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮತ್ತು ಇದೀಗ ಬಿಹಾರದಲ್ಲಿ ಇದನ್ನು ನೋಡಿದ್ದೇವೆ. ಪಕ್ಷದ ವರಿಷ್ಠರು ಪಕ್ಷದ ರಚನೆಯನ್ನು ಬದಲಾಯಿಸಿ ಸ್ಥಳೀಯ ನಾಯಕರಿಗೆ ಅಧಿಕಾರ ನೀಡಬೇಕು. ಮುಂದೆ ಇರುವುದೇ ಇದೊಂದೆ ದಾರಿ. ಸಕ್ರಿಯ ರಾಜಕಾರಣದಲ್ಲಿರುವ ಖಾಯಂ ಅಧ್ಯಕ್ಷರು ಬೇಕೆಂದು ಪಕ್ಷದ ಮತ್ತೊಬ್ಬ ಮುಖಂಡರು ಸಲಹೆ ನೀಡಿದ್ದಾರೆ.


ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಉಪಚುನಾವಣೆ: ಅಭ್ಯರ್ಥಿ ಆಯ್ಕೆಗೆ ಕಾಂಗ್ರೆಸ್‌ನಿಂದ ಸಮಿತಿ ರಚನೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights