ತಮಿಳುನಾಡಿನಲ್ಲಿ ನೀವರ್‌ ಚಂಡಮಾರುತದ ಆತಂಕ : ಕರಾವಳಿ ತೀರದಲ್ಲಿ ರೆಡ್‌ ಅಲರ್ಟ್!

ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ತಮಿಳುನಾಡು ಹಾಗೂ ಪುದುಚೇರಿಯಲ್ಲಿ ನೀವರ್‌ ಚಂಡಮಾರುತದ ಆತಂಕ ಮನೆ ಮಾಡಿದೆ. ಇದೀಗ ಚಂಡಮಾರುತ ಹಿನ್ನೆಲೆ ಕರಾವಳಿ ತೀರದಲ್ಲಿ ಹವಾಮಾನ ಇಲಾಖೆ ರೆಡ್‌ ಅಲರ್ಟ್‌ ಘೋಷಿಸಿದೆ. ಅಲ್ಲದೆ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಇಲಾಖೆ ಎಚ್ಚರಿಕೆ ನೀಡಿದೆ. ದಕ್ಷಿಣ ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಗಂಟೆಗೆ ನೂರು ವೇಗದಲ್ಲಿ ಬಿರುಗಾಳಿ ತಮಿಳುನಾಡು ಹಾಗೂ ಪುದಚೇರಿಯ ಕಡಲ ತೀರಕ್ಕೆ ಬಂದು ಅಪ್ಪಳಿಸಲಿದೆಯಂತೆ.

24 ಗಂಟೆಯೊಳಗೆ ಇದು ಚಂಡಮಾರುತವಾಗಿ ಬದಲಾಗಿ ಕಡಲತೀರದಲ್ಲಿ ಅಪ್ಪಳಿಸಿ ಭಾರೀ ಪರಿಣಾಮವನ್ನು ಉಂಟು ಮಾಡಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇನ್ನು ಚಂಡಮಾರುತದಿಂದಾಗಿ ಎರಡು ದಿನಗಳ ಕಾಲ ತಮಿಳುನಾಡು ಹಾಗೂ ಪುದುಚೇರಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈಗಾಗಲೇ ಭಾರೀ ಬಿರುಗಾಳಿ ತಮಿಳುನಾಡಿನ ಕರಾವಳಿ ಪ್ರದೇಶದಲ್ಲಿ ಬೀಸಲು ಆರಂಭಿಸಿದೆ. ಹವಾಮಾನ ತಜ್ಞರ ಪ್ರಕಾರ, ನಿವಾರ್ ಚಂಡಮಾರುತವು ಮುಂದಿನ 24 ಗಂಟೆಗಳ ಕಾಲ ಕಾರೈಕಲ್ ಮತ್ತು ಮಹಾಬಲಿಪುರಂ ನಡುವೆ ದಾಟಿ ಹೋಗುತ್ತದೆ. ನವೆಂಬರ್ 25ರ ಮಧ್ಯಾಹ್ನದವರೆಗೆ ಈ ಚಂಡಮಾರುತದ ಅಬ್ಬರ ಇರಲಿದೆ ಎಂದು ತಿಳಿಸಿದ್ದಾರೆ.

ಭಾರತೀಯ ಹವಾಮಾನ ಇಲಾಖೆ ಬಿಡುಗಡೆ ಮಾಡಿರುವ ಇತ್ತೀಚಿನ ಬುಲೆಟಿನ್ ಪ್ರಕಾರ, ತಮಿಳುನಾಡು ರಾಜ್ಯ ವಿಕೋಪ ನಿರ್ವಹಣೆ ಪ್ರಾಧಿಕಾರವು, ರಾಜ್ಯದಲ್ಲಿ ಅತೀ ಹೆಚ್ಚು ಮಳೆಯಾಗುವ ಬಗ್ಗೆ ಟ್ವೀಟ್ ಮಾಡಿದೆ. ನವೆಂಬರ್ 23ರಂದು ಅಂದರೆ ಇಂದಿನಿಂದ ತಾಂಜಾವೂರ್, ತಿರುವರೂರ್, ನಾಗಾಪಟ್ಟಣಂ ಮತ್ತು ಕಾರೈಕಲ್​ನಲ್ಲಿ ಅತೀ ಹೆಚ್ಚು ಮಳೆಯಾಗಲಿದೆ.ನವೆಂಬರ್ 24ರಂದು ಪುಡುಕೊಟ್ಟೈ, ತಾಂಜಾವೂರ್, ತಿರುವರೂರ್, ಕಾರೈಕಲ್​, ನಾಗಪಟ್ಟಣಂ, ಕಡುಲೊರೆ, ಅರಿಯೂರ್ ಮತ್ತು ಪೆರಂಬಲು ಜಿಲ್ಲೆಗಳಲ್ಲಿ ಅತೀ ಹೆಚ್ಚು ಮಳೆಯಾಗಲಿದೆ.

ರಾಮನಾಥಪುರಂ, ಶಿವಗಂಗೈ, ತಿರುಚಿನಾಪಳ್ಳಿ, ಕಲ್ಲಕುರಿಚಿ, ವಿಲ್ಲಾಪುರಂ, ಪಾಂಡಿಚೇರಿ, ಚೆನ್ನೈ, ಕಾಂಚೀಪುರಂ, ತಿರುವಲ್ಲೂರ್, ರಾಣಿಪೇಟ್, ತಿರುವನ್ನಮಲೈ, ತಿರುಪಟ್ಟೂರ್ ಮತ್ತು ವೆಲ್ಲೂರ್​​​ ಜಿಲ್ಲೆಗಳಲ್ಲಿ ಅಧಿಕ ಮಳೆಯಾಗಲಿದೆ. ಎನ್‌ಡಿಆರ್‌ಎಫ್‌ ತಂಡ ತಮಿಳುನಾಡಿನ ಕಾರವಾಳಿ ಪ್ರದೇಶಕ್ಕೆ ತೆರಳಿದ್ದು ಸಮುದ್ರ ತೀರದಲ್ಲಿ ವಾಸಿಸುವ ಜನರನ್ನು ಬೇರೆ ಕಡೆಗೆ ಸ್ಥಳಾಂತರಿಸಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights