ರೈತರ ಪ್ರತಿಭಟನೆ: ಅನ್ನದಾತರಿಗೆ ಆಹಾರ-ವಸತಿ ನೆರವು ಕೊಟ್ಟ ದೆಹಲಿಯ 25 ಮಸೀದಿಗಳು!
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕಾಯ್ದೆಗಳ ವಿರುದ್ಧ ರೈತರು ನವೆಂಬರ್ 26ರಿಂದ ದೆಹಲಿ ಚಲೋ ಪ್ರತಿಭಟನಾ ಜಾಥಾ ನಡೆಸುತ್ತಿದ್ದಾರೆ. ನಿನ್ನೆ ರಾಜಧಾನಿ ತಲುಪಿರುವ ಪ್ರತಿಭಟನಾ ನಿರತ ರೈತರಿಗೆ ದೆಹಲಿಯ 25 ಮಸೀದಿಗಳು ಆಹಾರ ಸೇರಿದಂತೆ ರಾತ್ರಿಯ ತಂಗುವಿಕೆಗೆ ಬೇಕಾದ ವ್ಯವಸ್ಥೆ ಮಾಡಿ ಅನ್ನದಾತರಿಗೆ ನೆರವು ನೀಡಿದ್ದಾರೆ.
ಯುನೈಟೆಡ್ ಎಗೇನ್ಸ್ಟ್ ಹೇಟ್ (UAH) ನ ನದೀಮ್ ಖಾನ್ ನೇತೃತ್ವದ ತಂಡ ಈ ವ್ಯವಸ್ಥೆಯನ್ನು ಮಾಡಿದ್ದು, ಹೌಜ್ ಖಾಸ್, ಓಖ್ಲಾ, ಓಲ್ಡ್ ರೋಹ್ಟಕ್ ರಸ್ತೆ ಮತ್ತು ಓಲ್ಡ್ ದೆಹಲಿ ಎಂಬ ನಾಲ್ಕು ಸ್ಥಳಗಳಲ್ಲಿ ಆಹಾರ ತಯಾರಿಸಲಾಗಿತ್ತು.
“ನಮಗೆ ಎಲ್ಲಿಂದ ವಿನಂತಿಗಳು ಬಂದರೂ ನಾವು ಆಹಾರ ಪ್ಯಾಕೆಟ್‌ಗಳನ್ನು ಸ್ಥಳಗಳಿಗೆ ತಲುಪಿಸುತ್ತಿದ್ದೇವೆ. ಇದಲ್ಲದೆ, ಆಹಾರ ಪ್ಯಾಕೆಟ್‌ಗಳನ್ನು ಹೊಂದಿರುವ ನಮ್ಮ ವ್ಯಾನ್‌ಗಳು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುವ ಸ್ಥಳಗಳಿಗೆ ಹೋಗುತ್ತಿವೆ” ಎಂದು ಅವರು ಹೇಳಿದ್ದಾರೆ.
“ನಾವು ಬೇರೆ ಬೇರೆ ಸ್ಥಳಗಳಿಂದ ಕರೆಗಳನ್ನು ಸ್ವೀಕರಿಸುತ್ತಿದ್ದೇವೆ. ಯಾರೂ ಹಸಿವಾಗದಂತೆ ನೋಡಿಕೊಳ್ಳುವುದು ನಮ್ಮ ಉದ್ದೇಶ, ರೈತರಿಗೆ ಕಂಬಳಿ ಮತ್ತು ರಾತ್ರಿ ತಂಗಲು ಸಹ ಅವಕಾಶ ಕಲ್ಪಿಸಿದೆ. ದೆಹಲಿಯಾದ್ಯಂತ 25 ಮಸೀದಿಗಳು ಇದಕ್ಕಾಗಿ ಸಜ್ಜಾಗಿದೆ, ಅಲ್ಲಿ ರೈತರು ರಾತ್ರಿ ಕಳೆಯಬಹುದು. ನಮ್ಮ ಸ್ವಯಂಸೇವಕರು ರೈತರು ಎಲ್ಲಿ ಸಿಲುಕಿಕೊಂಡಿದ್ದಾರೋ ಅಲ್ಲಿಂದ ಅವರನ್ನು ಕರೆದುಕೊಂಡು ಹೋಗಲು ಮತ್ತು ರಾತ್ರಿ ವಾಸ್ತವ್ಯಕ್ಕಾಗಿ ಹತ್ತಿರದ ಮಸೀದಿಗೆ ಕರೆದೊಯ್ಯಲು ವಾಹನಗಳೊಂದಿಗೆ ಸಿದ್ಧರಾಗಿದ್ದಾರೆ” ಎಂದು ಅವರು ಹೇಳಿದ್ದಾರೆ.
ಸುಮಾರು 500 ಕ್ಕೂ ಹೆಚ್ಚು ರೈತ ಸಂಘಟನೆಗಳ ಆಶ್ರಯದಲ್ಲಿ ರೈತ ವಿರೋಧಿ ಕಾನೂನನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ನವೆಂಬರ್ 26-27ರ ‘ದೆಹಲಿ ಚಲೋ’ ಮೆರವಣಿಗೆಯನ್ನು ಯೋಜಿಸಲಾಗಿತ್ತು. ದೆಹಲಿಗೆ ಪ್ರವೇಶಿಸುತ್ತಿದ್ದ ರೈತರ ಜಾಥವನ್ನು ಗಡಿಯಲ್ಲಿ ತಡೆಯಲಾಗಿತ್ತಾದರೂ, ಭಾರಿ ಪ್ರತಿಭಟನೆಗೆ ಮಣಿದ ಸರ್ಕಾರ ಅವರನ್ನು ರಾಜಧಾನಿ ಪ್ರವೇಶಿಸಲು ಅನುಮತಿ ನೀಡಿತು.
Read Also: ಕೃಷಿ ನೀತಿಗಳು: ಮೋದಿ ಸರ್ಕಾರ ತಪ್ಪುಗಳು ಮತ್ತು ರೈತರ ಆಕ್ರೋಶಕ್ಕೆ ಕಾರಣಗಳು!