ಕೃಷಿ ನೀತಿಗಳು: ಮೋದಿ ಸರ್ಕಾರ ತಪ್ಪುಗಳು ಮತ್ತು ರೈತರ ಆಕ್ರೋಶಕ್ಕೆ ಕಾರಣಗಳು!
ಕೊರೊನಾ ಸಂಕಷ್ಟದ ಸಂದರ್ಭದ ನಡುವೆಯೂ ನಡೆದ ಮಾನ್ಸೂನ್ ಅಧಿವೇಶನದಲ್ಲಿ ಮೋದಿ ಸರ್ಕಾರ ತರಾತುರಿಯಿಂದ ಜಾರಿಗೆ ತಂದ ಕೃಷಿ ಮಸೂದೆಗಳ ವಿರುದ್ಧ ಸೆಪ್ಟೆಂಬರ್ ತಿಂಗಳಿನಿಂದಲೂ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಜೊತೆಗೆ ಸರ್ಕಾರ ಸಭೆ ನಡೆಸಿದ್ದು, ಸಭೆ ವಿಫಲವಾಗಿದೆ. ಎನ್ಡಿಎ ಭಾಗವಾಗಿದ್ದ ಅಕಾಲಿ ದಳದ ಹರ್ಸಿಮ್ರತ್ ಬಾದಲ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಕ್ಯಾಬಿನೆಟ್ನಿಂದ ಹೊರಬಂದಿದ್ದಾರೆ. ಉತ್ತರ ಪ್ರದೇಶ, ಪಂಜಾಬ್, ಹರಿಯಾಣ, ಉತ್ತರಾಖಂಡ, ರಾಜಸ್ಥಾನ ಮತ್ತು ಕೇರಳ ರಾಜ್ಯಗಳ ರೈತರು ನವೆಂಬರ್ 26ರಿಂದ ದೆಹಲಿ ಚಲೋ ನಡೆಸುತ್ತಿದ್ದಾರೆ. ಇಂದು ರೈತರ ಪ್ರತಿಭಟನಾ ಜಾಥಾ ದೆಹಲಿ ಗಡಿಯಲ್ಲಿದೆ.
ಆಹಾರ ಧಾನ್ಯಗಳ ದೀರ್ಘಕಾಲದ ಕೊರತೆ ಮತ್ತು ಅವುಗಳ ಬೆಲೆಗಳಲ್ಲಿನ ಏರಿಳಿತವನ್ನು ಪರಿಹರಿಸಲು ಕೃಷಿ ಬೆಲೆ ಆಯೋಗವನ್ನು (ಎಪಿಸಿ) 1965 ರಲ್ಲಿ ಸ್ಥಾಪಿಸಲಾಯಿತು. ನಂತರ ಜಾರಿಗೆ ಬಂದ ಹಸಿರು ಕ್ರಾಂತಿಯು ಯಾಂತ್ರೀಕರಣ ಮತ್ತು ರಸಗೊಬ್ಬರ/ಕೀಟನಾಶಕಗಳ ಬಳಕೆಯೊಂದಿಗೆ ಹೆಚ್ಚಿನ ಇಳುವರಿ ಪಡೆಯಬಹುದು ಎಂಬ ಆಮಿಷವೊಡ್ಡಿ ಗೋಧಿ ಮತ್ತು ಭತ್ತವನ್ನು ಬೆಳೆಯಲು ರೈತರನ್ನು ಪ್ರೇರೇಪಿಸಿತ್ತು. ಇದಕ್ಕಾಗಿ, ರೈತರ ಉತ್ಪಾದನೆಗೆ ಬೆಲೆ ಬೆಂಬಲವನ್ನು ಖಾತ್ರಿಪಡಿಸುವುದಕ್ಕಾಗಿ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ವ್ಯವಸ್ಥೆಯನ್ನು ರೂಪಿಸಲಾಯಿತು. ಮಾನ್ಸೂನ್ ವಿಫಲವಾದ ನಂತರ ಕ್ಷಾಮಗಳಿಂದ ದೇಶದಲ್ಲಿ ಉಂಟಾದ ಕೊರತೆಯನ್ನು ನೀಗಿಸಿ, ಆಹಾರ ಸ್ವಾವಲಂಬನೆಯನ್ನು ಸಾಧಿಸಲು ಇದು ನೆರವಾಯಿತು.
ಇದನ್ನೂ ಓದಿ: ಮೋದಿ ಸರ್ಕಾರದ Contract Farming ಮಸೂದೆ ಕೃಷಿ ಕಂಪನಿಗಳನ್ನು ಸಬಲೀಕರಿಸಿ ರೈತರನ್ನು ನೇಣಿಗೇರಿಸುವುದು ಹೀಗೆ . . .
ಆದರೆ ಇತ್ತೀಚಿನ ದಶಕಗಳಲ್ಲಿ, ಎಂಎಸ್ಪಿ ಯೋಜನೆಯು ಪಂಜಾಬ್ ಮತ್ತು ಹರಿಯಾಣದಂತಹ ರಾಜ್ಯಗಳಲ್ಲಿ ಗೋಧಿ-ಭತ್ತದ ಬೆಳೆ ಚಕ್ರವನ್ನು ಸೃಷ್ಟಿಸಿದೆ. ಅಲ್ಲಿ ಸಾಂಪ್ರದಾಯಿಕವಾಗಿ ಬೆಳೆಯುತ್ತಿದ್ದ ಭತ್ತವನ್ನು ಹೆಚ್ಚಿನ ನೀರಿನ ಕೊರತೆಯಿಂದಾಗಿ ಬೆಳೆಯಲಾಗಲಿಲ್ಲ. ಯಾವುದೇ ಸರ್ಕಾರವು ಈ ಬೆಳೆ ಚಕ್ರವನ್ನು ಮುರಿಯುವುದು, ರೈತರು ತಮ್ಮ ಬೆಳೆಗಳನ್ನು ವೈವಿಧ್ಯಗೊಳಿಸುವುದು, ಆರ್ಥಿಕವಾಗಿ ಮತ್ತು ಪರಿಸರೀಯವಾಗಿ ಹೆಚ್ಚು ಸಮರ್ಥನೀಯವಾದ ಹೊಸ ಮಾದರಿಯನ್ನು ಅಳವಡಿಸಿಕೊಳ್ಳುವುದನ್ನು ಉತ್ತೇಜಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ. ಉದಾಹರಣೆಗೆ, ಪಂಜಾಬ್ನಲ್ಲಿನ ನೀರಿನ ಟೇಬಲ್ ಅಪಾಯಕಾರಿ ವೇಗದಲ್ಲಿ ಇಳಿಯುತ್ತಿದೆ. ಅಲ್ಲದೆ, ಬೆಳೆಯು ಸಂಪೂರ್ಣ ರಾಸಾಯನಿಕಗಳನ್ನು ಅವಲಂಭಿಸಿದೆ. ರೈತರು ಅತಿ ಹೆಚ್ಚು ಭತ್ತದ ಬೆಳೆ ಇಳುವರಿ ಪಡೆಯಲು ಹೆಣಗಾಡುತ್ತಿದ್ದಾರೆ. ಬೆಳೆಗೆ ಅಗತ್ಯ ನೀರಿಗಾಗಿ ಪಂಜಾಬ್ ಮತ್ತು ಹರಿಯಾಣದ ನಡುವೆ ನದಿ ನೀರಿನ ಹಂಚಿಕೆ ವಿವಾದವೂ ಸೃಷ್ಟಿಯಾಗಿದೆ.

ಜಿಎಸ್ಟಿ, ನೋಟ್ಬ್ಯಾನ್ ನಂತಹ ರಾಕ್ಷಸೀಯ ಯೋಜನೆಗಳನ್ನು ದೇಶದ ಮೇಲೆ ಹೇರಿದ್ದ ಕೇಂದ್ರ ಸರ್ಕಾರ, ಕೊರೊನಾ ಸಾಂಕ್ರಮಿಕದ ಸಂದರ್ಭವನ್ನು ಬಳಸಿಕೊಂಡು ಕೃಷಿ ನೀತಿಗಳಿಗೆ ತಿದ್ದುಪಡಿ ತರಲು ಮುಂದಾಗಿತ್ತು. ವ್ಯಾಪಕವಾಗಿ ಆಕ್ರಮಿಸುತ್ತಿದ್ದ ಕೊರೊನಾದಿಂದಾಗಿ ರೈತರು ಒಟ್ಟುಗೂಡುವುದಿಲ್ಲ. ಪ್ರತಿಭಟನೆಗೆ ಇಳಿಯುವುದಿಲ್ಲ. ಹೋರಾಟ-ಆಂದೋಲನಗಳನ್ನು ಕೊರೊನಾ ತಡೆಯುತ್ತದೆ ಎಂದು ಕೇಂದ್ರ ಭಾವಿಸಿತ್ತು. ಆದರೆ, ನಿಸ್ಸಂಶಯವಾಗಿ, ಸರ್ಕಾರ ಗ್ರಾಮೀಣ ಜನರ ಕೋಪ ಮತ್ತು ಹತಾಶಯ ಬಗೆಗೆ ತಪ್ಪಾಗಿ ಲೆಕ್ಕಹಾಕಿತ್ತು. ಅದಕ್ಕಾಗಿಯೇ ಸಂಸತ್ತಿನಲ್ಲಿಯೂ ಗಂಭೀರ ಚರ್ಚೆ ನಡೆಸದೆ ಜಾರಿಗೊಳಿಸಿತು. ಮಸೂದೆಯ ಸಾಧಕ-ಬಾಧಕಗಳನ್ನು ಮತ್ತು ರೈತರ ಆಕ್ರೋಶವನ್ನು ಅರಿಯುವಲ್ಲಿ ಸಂಸದೀಯ ಸಮಿತಿ ವಿಫಲವಾಗಿದೆ. ಇದೆಲ್ಲವೂ ರೈತರ ಆಕ್ರೋಶವನ್ನು ಹಿಮ್ಮಡಿಗೊಳಿಸಿದೆ. ಅದು ಈಗ ದೆಹಲಿಯ ಗಡಿ ಭಾಗದಲ್ಲಿ ಕಾಣಿಸುತ್ತಿದೆ.
2014 ರ ಎನ್ಎಸ್ಎಸ್ಒ ಸಮೀಕ್ಷೆಯ ಪ್ರಕಾರ, ಹಿಡುವಳಿಗಳ ವಿಭಜನೆ ಮತ್ತು ಒಂದು ಹೆಕ್ಟೇರ್ಗಿಂತ ಕಡಿಮೆ ಭೂಮಿಯನ್ನು ಹೊಂದಿರುವ ಅಲ್ಪ ಮತ್ತು ಸಣ್ಣ ರೈತರ (ಒಟ್ಟು 86.8%) ಸಂಖ್ಯೆ ಹೆಚ್ಚಾಗಿದೆ. ಆದಾಗ್ಯೂ, ಅಸ್ತಿತ್ವದಲ್ಲಿರುವ ಮಾರುಕಟ್ಟೆ ಮತ್ತು ಮಂಡಿ ವ್ಯವಸ್ಥೆಯನ್ನು ಸರಳವಾಗಿ ಪುನರ್ನಿರ್ಮಾಣ ಮಾಡುವ ಮೂಲಕ ಯಾವುದೇ ಬದಲಾವಣೆಯನ್ನು ಅಸ್ತಿತ್ವಕ್ಕೆ ತರಲು ಸಾಧ್ಯವಿಲ್ಲ. ಉದಾಹರಣೆಗೆ, ಪಂಜಾಬ್ನಲ್ಲಿ 22,000 ನೋಂದಾಯಿತ ದಳ್ಳಾಳಿ ಏಜೆಂಟರು 5.5 ಲಕ್ಷ ರೈತರಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಹಣ ನೀಡುವವರು ಅಥವಾ ಬೆಳೆ ಖರೀದಿಸುವವರಿಗಿಂತ ಹೆಚ್ಚು. ಅವು ಪಂಜಾಬ್ನ ಗ್ರಾಮೀಣ ಆರ್ಥಿಕತೆಯ ಸಾಮಾಜಿಕ-ಆರ್ಥಿಕ ವ್ಯವಸ್ಥೆಯ ಒಂದು ಭಾಗವಾಗಿದ್ದು, ರೈತರಿಗೆ ಸಹಾಯ ಮತ್ತು ಸಲಹೆಯನ್ನು ನೀಡುತ್ತವೆ. ಒಂದು ಕಡೆ, ಕೇಂದ್ರ ಸರ್ಕಾರವು ಈ ಗ್ರಾಮೀಣ ಕಾಂಪ್ಯಾಕ್ಟ್ ಅನ್ನು ಹೊಸ ಆದೇಶಕ್ಕೆ ಹೇಗೆ ಪರಿವರ್ತಿಸಬೇಕು ಮತ್ತು ರೈತರು ಯಾವ ಸುರಕ್ಷತಾ ನಿಬಂಧನೆಗಳನ್ನು ನಂಬಬಹುದು ಎಂಬುದನ್ನು ವಿವರಿಸದೆ ಈ ವ್ಯವಸ್ಥೆಯನ್ನು ನಾಶಪಡಿಸಿದೆ.
ಇದನ್ನೂ ಓದಿ: ಕೇಂದ್ರದ ಕೃಷಿ ಮಸೂದೆಗೆ ವಿರೋಧ: 3 ಪರ್ಯಾಯ ಮಸೂದೆಗಳನ್ನು ಮಂಡಿಸಿದ ಪಂಜಾಬ್ ಸಿಎಂ!
ಹೆಚ್ಚಿನ ವಿವರಕ್ಕಾಗಿ, ಪಂಜಾಬ್ ಅನ್ನು ಉದಾಹರಣೆಯನ್ನು ತೆಗೆದುಕೊಂಡರೆ, ಕಳೆದ ವರ್ಷ 3,642 ಕೋಟಿ ರೂಗಳನ್ನು ಧಾನ್ಯ ಖರೀದಿದಾರರಿಂದ ಶುಲ್ಕವಾಗಿ ಪಂಜಾಬ್ ಸರ್ಕಾರ ಗಳಿಸಿತು. ಈ ಮೊತ್ತವು ರಸ್ತೆಗಳು, ಸೇತುವೆಗಳು ಮುಂತಾದ ಗ್ರಾಮೀಣ ಮೂಲಸೌಕರ್ಯಗಳ ನಿರ್ಮಾಣಕ್ಕಾಗಿ ಗ್ರಾಮೀಣಾಭಿವೃದ್ಧಿ ನಿಧಿಗೆ (ಆರ್ಡಿಎಫ್) ಹೋಯಿತು. ಹೀಗಾಗಿ, ಕೇಂದ್ರ ಸರ್ಕಾರವು ಕೃಷಿಯಂತಹ ವಿಷಯವನ್ನು ಸಂವಿಧಾನದಡಿಯಲ್ಲಿ ರಾಜ್ಯಗಳಿಗೆ ಹಂಚಿಕೆ ಮಾಡಲಾಗಿದೆ. ಆದರೆ, ಇದೀಗ ಕೇಂದ್ರವು ಕೃಷಿ ಕ್ಷೇತ್ರದಲ್ಲಿ ತರಲು ಹೊರಟಿರುವ ತಿದ್ದುಪಡಿಗಳು ಕೃಷಿಯ ಮೇಲೆ ರಾಜ್ಯಗಳ ಸ್ವಾಯತ್ತತೆಯನ್ನು ಕಸಿದುಕೊಳ್ಳಲಿದೆ. ಇದು ಭಾರತದ ಫೆಡರಲ್ ವ್ಯವಸ್ಥೆಯ ಮೇಲಿನ ಆಕ್ರಮಣವಾಗಿದೆ, ಏಕೆಂದರೆ ಇದರಿಂದಾಗಿ ಪೀಡಿತ ರಾಜ್ಯಗಳಿಗೆ ಯಾವುದೇ ಪರಿಹಾರವನ್ನು ಊಹಿಸಲಾಗುವುದಿಲ್ಲ.
ಇದು ರೈತರನ್ನು ಭಯಭೀತಿಗೊಳಿಸಿದೆ. ಅವರ ಭಯವನ್ನು ನಿವಾರಿಸುವ ಯಾವ ಭರವಸೆಗಳು ಕೇಂದ್ರ ಸರ್ಕಾರದಲ್ಲಿಲ್ಲ. ಒಂದು, ಎಂಎಸ್ಪಿ (ಕನಿಷ್ಟ ಬೆಂಬಲ ಬೆಲೆ) ಪಾವತಿಸುವುದನ್ನು ಮುಂದುವರಿಸಲಾಗುವುದು ಎಂದು ಮೌಖಿಕ ಆಶ್ವಾಸನೆ ನೀಡುವುದನ್ನು ಬಿಟ್ಟು, ಸರ್ಕಾರ ಉಂದೆ ಹೋಗಬೇಕು. ಅಂದರೆ, ಅದನ್ನು ಲಿಖಿತವಾಗಿ ಖಾತ್ರಿಗೊಳಿಸಬೇಕು. ರೈತರು ಬೆಳೆಗಳನ್ನು ಮಾರಾಟ ಮಾಡಲು ಮಾರುಕಟ್ಟೆ, ಆಹಾರ ಚಿಲ್ಲರೆ ವ್ಯಾಪಾರಗಳ ವೈವಿಧ್ಯಮಯವನ್ನು ಕಳಚಿ ಬೆರಳೆಣಿಯಷ್ಟು ಕೋಟ್ಯಾಧಿಪತಿಗಳ ಕಾಲಿನ ಕೆಲಕ್ಕೆ ತಮ್ಮ ದೂಡುತ್ತಿದ್ದಾರೆ ಎಂದು ರೈತರು ತಿಳಿಸಿದ್ದಾರೆ. ಕೇಂದ್ರವು ಸುಧಾರಣೆಯ ಹೆಸರಿನಲ್ಲಿ 19ನೇ ಶತಮಾನದ ಯುರೋಪಿಯನ್ ಲೈಸೆಜ್ ಫೇರ್ ಅನ್ನು ಭಾರತದಲ್ಲಿ ಜಾರಿಗೆ ತರುತ್ತಿದೆ ಎಂಬುದನ್ನು ರೈತರು ಅರಿತಿದ್ದಾರೆ.

ಎರಡು, ಭಾರತೀಯ ಕೃಷಿಯನ್ನು ಏಕ ಕೃಷಿಯಿಂದ ಮಾರ್ಗದರ್ಶನ ಮಾಡಲು ಸರ್ಕಾರವು ಯಾವುದೇ ದೂರದೃಷ್ಟಿ-ಮಾರ್ಗಸೂಚಿಗಳನ್ನು ಬಹಿರಂಗಪಡಿಸಿದಲ್ಲ (ಹೊಂದಿಲ್ಲ). ಹಣ್ಣುಗಳು, ತರಕಾರಿಗಳು, ಜಲಚರಗಳು ಅಥವಾ ಸಾವಯವ ಕೃಷಿಯೊಂದಿಗೆ ಪರಿಸರ ವೈವಿಧ್ಯತೆಗೆ ಹೆಚ್ಚಿನ ಅಗತ್ಯ ಯೋಜನೆಯನ್ನು ಕೇಂದ್ರ ಹೊಂದಿಲ್ಲ. ಇದು ಕೃಷಿ ಕ್ಷೇತ್ರದಲ್ಲಿ ಮೂಲಸೌಕರ್ಯ ಮತ್ತು ಪೂರೈಕೆ ಸರಪಳಿಗಳನ್ನು ಯಾರು ರಚಿಸುತ್ತಾರೆ ಎಂಬ ಬಗ್ಗೆ ಯಾವುದೇ ಯೋಜನೆಯನ್ನು ಮಂಡಿಸಲಾಗಿಲ್ಲ. ಇದೆಲ್ಲವೂ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುತ್ತದೆ ಎಂಬುದು ಖಚಿತ.
ರೈತರ ಪ್ರತಿಭಟನೆ ಅಥವಾ ಕೃಷಿ ಸಬ್ಸಿಡಿಗಳು ಕೇವಲ ಅಭಿವೃದ್ಧಿ ಹೊಂದುತ್ತಿರುವ ಜಗತ್ತಿನ ಅಸ್ವಸ್ಥತೆಯಲ್ಲ. 2019 ರಲ್ಲಿ, ಫ್ರೆಂಚ್ ರೈತರು ತಮ್ಮ ಜೀವನೋಪಾಯಕ್ಕೆ ಅಪಾಯವಿದೆ ಎಂದು ಭಾವಿಸಿದ್ದರಿಂದ ಪ್ಯಾರಿಸ್ ಮತ್ತು ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಿದ್ದರು. 2017 ರಲ್ಲಿ, ಒಇಸಿಡಿ ರಾಷ್ಟ್ರಗಳಲ್ಲಿ ಕೃಷಿಗೆ ಒಟ್ಟು ಬೆಂಬಲ 315.5 ಬಿಲಿಯನ್ ಡಾಲರ್ಗಳನ್ನು ನೀಡಲಾಗಿದೆ. ಎಂಎಸ್ಪಿಯು ಮಾರುಕಟ್ಟೆಗಳಲ್ಲಿನ ಮಾರಾಟ ಬೆಲೆಯು ಅಂದಾಜು ನ್ಯಾಯಯುತ ಬೆಲೆಗಿಂತ ಕಡಿಮೆಯಾದರೆ ರೈತರಿಗೆ ಪರಿಹಾರ ನೀಡುತ್ತದೆ. ಆದರೆ, ಕೇಂದ್ರವು ಅದನ್ನೂ ಮೊಟಕುಗೊಳಿಸಲು ಮುಂದಾಗಿದೆ. ಹೊಸ ಕೃಷಿ ನೀತಿಗಳಲ್ಲಿ ಎಂಎಸ್ಪಿಯ ಅಸ್ಪಷ್ಟ ಮೌಖಿಕ ಭರವಸೆಗಳನ್ನು ಹೊಂದಿದೆ. ಅಲ್ಲದೆ, ರಾಜ್ಯಗಳ ಬೊಕ್ಕಸಗಳು ಖಾಲಿಯಾಗಿದ್ದು ಕೇಂದ್ರ ಸರ್ಕಾರ ರೈತರನ್ನು ಬೀದಿಗೆ ಬಿಟ್ಟಿದೆ. ದೀರ್ಘಕಾಲದ ಆಹಾರ ಕೊರತೆಯಿಂದ ಭಾರತವನ್ನು ರಕ್ಷಿಸಿದವರಿಗೆ ಇಂದು ಅಪಾಯ ಎದುರಾಗಿದೆ. ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ “ಜೈ ಜವಾನ್, ಜೈ ಕಿಸಾನ್” ಎಂಬ ಘೋಷದಲ್ಲಿ ಕಿಸಾನ್ ಕಾಣೆಯಾಗುವಂತೆ ಇಂದಿನ ಕೇಂದ್ರ ಸರ್ಕಾರ ಮಾಡುತ್ತಿದೆ.
ಕೃಪೆ: ಎನ್ಡಿ ಟಿವಿ
ಕನ್ನಡಕ್ಕೆ: ಸೋಮಶೇಖರ್ ಚಲ್ಯ
ಇದನ್ನೂ ಓದಿ: ಹಸಿವನ್ನು ಹೆಚ್ಚಿಸುತ್ತಿವೆ ಮೋದಿಯ ಹೊಸ ಕೃಷಿ ಕಾಯಿದೆಗಳು

