ಹಸಿವನ್ನು ಹೆಚ್ಚಿಸುತ್ತಿವೆ ಮೋದಿಯ ಹೊಸ ಕೃಷಿ ಕಾಯಿದೆಗಳು
ಈ ಬಾರಿ ಜಾಗತಿಕ ಹಸಿವಿನ ಸೂಚ್ಯಂಕದ ಅಧ್ಯಯನಕ್ಕಾಗಿ ಪರಿಶೀಲಿಸಲಾದ 107 ದೇಶಗಳಲ್ಲಿ ಭಾರತವು 94ನೇ ಸ್ಥಾನವನ್ನು ಪಡೆದಿದೆ. ಅಂದರೆ ಕೆಳಗಿನಿಂದ 13 ನೇ ಸ್ಥಾನ! ಇಂತಹ ಸಂದರ್ಭದಲ್ಲಿ ಪ್ರಧಾನಿ ಮೋದಿಯ ಕೃಷಿ ಕಾಯಿದೆಗಳು ದೇಶದ ಹಸಿವಿನ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಲಿವೆ.
ಒಂದು ದೇಶದ ಹಸಿವಿನ ಸೂಚ್ಯಂಕವನ್ನು ನಿಗದಿ ಮಾಡಲು ಈ ಅಧ್ಯಯನವು ನಾಲ್ಕು ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತದೆ:
1. ಒಟ್ಟಾರೆ ಅಪೌಷ್ಟಿಕತೆ: ದೇಶದ ಜನಸಂಖ್ಯೆಯಲ್ಲಿ ಸೂಕ್ತವಾದ ಪೌಷ್ಟಿಕ ಆಹಾರ ದೊರೆಯುತ್ತಿಲ್ಲದವರ ಪ್ರಮಾಣ.
2. ಮಕ್ಕಳಲ್ಲಿ ಎತ್ತರಕ್ಕೆ ತಕ್ಕನಾದ ತೂಕವಿಲ್ಲದಿರುವಿಕೆ(ಚೈಲ್ದ್ ವೇಸ್ಟಿಂಗ್)- ದೇಶದೊಳಗಿನ ಐದು ವರ್ಷದ ಮಕ್ಕಳಲ್ಲಿ ಎತ್ತರಕ್ಕೆ ತಕ್ಕನಾದ ತೂಕವಿಲ್ಲದಿರುವವರ ಪ್ರಮಾಣ. ಏಕೆಂದರೆ ಇದು ತೀವ್ರವಾದ ಅಪೌಷ್ಟಿಕತೆಯಿಂದ ಸಂಭವಿಸುತ್ತದೆ.
3. ಮಕ್ಕಳಲ್ಲಿ ವಯಸ್ಸಿಗೆ ತಕ್ಕ ಎತ್ತರವಿಲ್ಲದಿರುವಿಕೆ(ಚೈಲ್ಡ್ ಸ್ಟಂಟಿಂಗ್)- ದೇಶದೊಳಗಿನ ಐದು ವರ್ಷದೊಳಗಿನ ಮಕ್ಕಳಲ್ಲಿ ವಯಸ್ಸಿಗೆ ತಕ್ಕನಾದ ಎತ್ತರಕ್ಕೆ ಬೆಳೆದಿಲ್ಲದಿರುವವರ ಪ್ರಮಾಣ. ಏಕೆಂದರೆ ಇದು ದೀರ್ಘಕಾಲದ ಅಪೌಷ್ಟಿಕತೆಯ ಪರಿಣಾಮವಾಗಿದೆ.
4. ಶಿಶು ಮರಣದ ಪ್ರಮಾಣ: ಒಂದು ದೇಶದೊಳಗೆ ಐದು ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣ. ಏಕೆಂದರೆ ಇದು ಅಪೌಷ್ಟಿಕತೆ ಹಾಗೂ ಅಸಮರ್ಪಕ ಪರಿಸರ ಎರಡರಿಂದಲೂ ಸಂಭವಿಸುತ್ತದೆ.
ಈ ಅಧ್ಯಯನವು ಈ ನಾಲ್ಕೂ ಅಂಶಗಳಿಗೆ ಬೇಕಾದ ಅಂಕಿಅಂಶಗಳನ್ನು ವಿಶ್ವಸಂಸ್ಥೆಯ ವಿವಿಧ ಅಂಗಸಂಸ್ಥೆಗಳಿಂದಲೇ ಪಡೆದುಕೊಳ್ಳುತ್ತದೆ. ಹಾಗೂ ವಿಶ್ವಸಂಸ್ಥೆಯು ತನ್ನದೇ ಅಂಗಸಂಸ್ಥೆಗಳ ಅಧ್ಯಯನಗಳಿಂದಲೂ ಹಾಗೂ ತನ್ನ ಸದಸ್ಯ ರಾಷ್ಟ್ರಗಳ ಸರ್ಕಾರಗಳು ಕೊಡುವ ಅಂಕಿಅಂಶಗಳಿಂದಲೂ ಈ ಮಾಹಿತಿಗಳನ್ನು ಸಂಗ್ರಹಿಸುತ್ತದೆ.
ಇದನ್ನೂ ಓದಿ: ವಿಶ್ವ ಆಹಾರ ದಿನ: ಕವಿತೆ – ಹಸಿವು ಮತ್ತು ಬಂದೂಕು
ಹೀಗೆ ಸಂಗ್ರಹಿಸಲ್ಪಟ್ಟ ನಾಲ್ಕೂ ವರ್ಗಗಳ ದತ್ತಾಂಶಗಳನ್ನು ಆಧರಿಸಿ ಪ್ರತಿ ದೇಶದ ಪರಿಸ್ಥಿತಿಯನ್ನು ವರ್ಗೀಕರಿಸಲಾಗುತ್ತದೆ. ಯಾವುದೇ ದೇಶವು ಈ ವರ್ಗೀಕರಣದಲ್ಲಿ ಪಡೆದುಕೊಳ್ಳುವ ಅಂಕಗಳು 50 ಕ್ಕಿಂತ ಹೆಚಾಗಿದ್ದರೆ ಅಂಥಾ ದೇಶಗಳ ಪರಿಸ್ಥಿತಿ ಅತ್ಯಂತ ಕಳವಳಕಾರಿಯೆಂದು ಪರಿಗಣಿಸಲಾಗುತದೆ. 35-50ರ ನಡುವಿನ ಅಂಕಗಳನ್ನು ಪಡೆದುಕೊಳ್ಳುವ ದೇಶಗಳು ಕಳವಳಕಾರಿ ಯೆಂದು ವರ್ಗೀಕರಣಗೊಂಡರೆ 20-35ಅಂಕಗಳನ್ನು ಪಡೆಯುವ ದೇಶಗಳ ಪರಿಸ್ಥಿತಿ ಗಂಭೀರ ವೆಂದು ವರ್ಗೀಕರಣವಾಗುತ್ತದೆ. 10-20ರ ನಡುವಿನ ಅಂಕಗಳನ್ನು ಪಡೆಯುವ ದೇಶಗಳ ಪರಿಸ್ಥಿತಿ ಸಾಧಾರಣ ಎಂದು ಪರಿಗಣಿಸಲ್ಪಡುತ್ತವೆ.
ಸಾರಾಂಶದಲ್ಲಿ ಈ ಅಂಕಿಅಂಶಗಳು ಒಂದು ದೇಶದ ಭವಿಷ್ಯ ಯಾವ ದಿಕ್ಕಿನೆಡೆ ಸಾಗುತ್ತಿದೆ ಎಂಬುದನ್ನು ಸ್ಪಷ್ಟವಾಗಿ ಸಾರುತ್ತದೆ.

2020ರ ಸಾಲಿನ ಜಾಗತಿಕ ಹಸಿವಿನ ಸೂಚ್ಯಂಕದ ಲೆಕ್ಕಾಚಾರಗಳಲ್ಲಿ ಒಟ್ಟಾರೆ ಅಪೌಷ್ಟಿಕತೆ ಹಾಗೂ ಶಿಶುಮರಣದ ಲೆಕ್ಕಾಚಾರಕ್ಕೆ2019ರ ಅಂಕಿಅಂಶಗಳನ್ನೂ, ಚೈಲ್ಡ್ ವೇಸ್ಟಿಂಗ್ ಲೆಕ್ಕಾಚಾರಕ್ಕೆ 2015-17ರ ಅಂಕಿಅಂಶಗಳನ್ನೂ ಹಾಗೂ ಚೈಲ್ಡ್ ಸ್ಟಂಟಿಂಗ್ ಲೆಕ್ಕಾಚಾರಕ್ಕೆ 2015-19ರ ಅವಧಿಯ ಅಂಕಿಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ.
ಈ ರೀತಿ 107 ದೇಶಗಳಲ್ಲಿ ನಡೆಸಲಾದ ಜಾಗತಿಕ ಹಸಿವಿನ ಸೂಚ್ಯಂಕ (Global Hunger Index)- 2020 ರ ಅಧ್ಯಯನದ ಪ್ರಕಾರ ಭಾರತ 94ನೇ ಸ್ಥಾನದಲ್ಲಿದೆ. ಒಟ್ಟಾರೆಯಾಗಿ 27.2ಅಂಕಗಳನ್ನು ಪಡೆದುಕೊಂಡಿರುವ ಭಾರತದ ಪರಿಸ್ಥಿತಿಯನ್ನು ಗಂಭೀರ ಎಂದು ವರದಿಯು ಘೋಷಿಸಿದೆ. ಆವರದಿಯು ಸೂಚಿಸುವಂತೆ ಕಳೆದ ಕೆಲವು ವರ್ಷಗಳಲ್ಲಿ ಒಟ್ಟಾರೆ ಅಪೌಷ್ಟಿಕತೆಯ ಪ್ರಮಾಣ ಇಳಿಯುತ್ತಾ ಬಂದಿದೆ. ಅಪೌಷ್ಟಿಕತೆಯ ಪ್ರಮಾಣ ಸ್ವಲ್ಪವಾದರೂ ಇಳಿದಿರುವುದಕ್ಕೆ ದೇಶದ ಆಹಾರ ಭದ್ರತೆಯ ಕಾಯಿದೆಯ ಮೂಲಕ 2013ರ ನಂತರ ದೇಶದ ಶೇ.67ರಷ್ಟು ಬಡಜನರಿಗೆ ರಿಯಾಯತಿ ದರದಲ್ಲಿ ಆಹಾರ ಧಾನ್ಯಗಳನ್ನು ಒದಗಿಸುತ್ತಿರುವುದು ಒಂದು ಪ್ರಮುಖ ಕಾರಣ ಎಂಬುದನ್ನು ಇಲ್ಲಿ ನೆನೆಪಿಸಿಕೊಳ್ಳಬೇಕು. ಇದೂ ಇಲ್ಲದಿದ್ದರೆ ಭಾರತದ ಪರಿಸ್ಥಿತಿ ಗಂಭೀರದಿಂದ ಕಳವಳಕಾರಿಯಾಗಿರುತ್ತಿತ್ತು.
ಇದನ್ನೂ ಓದಿ: ಮೋದಿ ಸರ್ಕಾರದ Contract Farming ಮಸೂದೆ ಕೃಷಿ ಕಂಪನಿಗಳನ್ನು ಸಬಲೀಕರಿಸಿ ರೈತರನ್ನು ನೇಣಿಗೇರಿಸುವುದು ಹೀಗೆ . .
ಆದರೆ ಇದೇ ಅವಧಿಯಲ್ಲಿ ಸಾರ್ವಜನಿಕ ಆರೋಗ್ಯ, ICDS ಇತ್ಯಾದಿ ಯೋಜನೆಗಳಿಗೆ ಸರ್ಕಾರದ ಅನುದಾನ ತೀವ್ರವಾಗಿ ಕಡಿತವಾಗಿರುವುದು ಮಾತ್ರವಲ್ಲದೆ, ಗ್ರಾಮೀಣ ಪ್ರದೇಶದ ಕೃಷಿ ಬಿಕ್ಕಟ್ಟು ಹೆಚ್ಚಾಗಿರುವುದರಿಂದಲೂ ಭಾರತದ ಬಹುಪಾಲು ಮಕ್ಕಳಲ್ಲಿ ಅಪೌಷ್ಟಿಕತೆಯ ಪ್ರಮಾಣ ಹಚ್ಚುತ್ತಿರುವುದನ್ನು ಈ ವರದಿಯು ಸೂಚಿಸುತ್ತದೆ. ಅದರ ಪರಿಣಾಮವಾಗಿಯೇ ಭಾರತದ ಮಕ್ಕಳ ಬೆಳವಣಿಗೆಯು ಕಳೆದ ಐದು ವರ್ಷಗಳಲ್ಲಿ ಹೆಚ್ಚೆಚ್ಚು ಕುಂಠಿತವಾಗುತ್ತಿರುವುದನ್ನು ಈ ವರದಿ ಸ್ಪಷ್ಟವಾಗಿ ಸೂಚಿಸುತ್ತದೆ.
ಆದ್ದರಿಂದಲೇ ಈ ವರ್ಷ ಭಾರತ ತನ್ನ ಸ್ಥಾನವನ್ನು ಆಫ್ರಿಕಾದ ಅತಿ ಕಡುಬಡರಾಷ್ಟ್ರ್ರವಾದ ಸೂಡಾನ್ ನೊಂದಿಗೆ ಹಂಚಿಕೊಂಡಿದೆ. ಅಷ್ಟು ಮಾತ್ರವಲ್ಲ ಭಾರತದ ನೆರೆಹೊರೆ ದೇಶಗಳಾದ ಪಾಕಿಸ್ತಾನ, ಶ್ರೀಲಂಕಾ, ನೇಪಾಳ ಹಾಗು ಬಾಂಗ್ಲಾದೇಶಗಳ ಹಸಿವಿನ ಸೂಚ್ಯಂಕಗಳು ಭಾರತಕ್ಕಿಂತ ಉತ್ತಮವಾಗಿದೆ.
ಭಾರತದ ಪರಿಸ್ಥಿತಿ ಈ ರೀತಿ ಹದಗೆಡುತ್ತಿರುವುದಕ್ಕೆ ಕಾರಣಗಳೇನು?
ಅದನ್ನು ಆರ್ಥಮಾಡಿಕೊಳ್ಳಲು ಅಂಥಾ ದೊಡ್ಡ ವಿಜ್ನಾನವೇನೂ ಅಗತ್ಯವಿಲ್ಲ. ಅಂಗೈ ಹುಣ್ಣು ನೋಡಿಕೊಂಡರೆ ಕಾಣುತ್ತದೆ.
International Food Policy Research Institute (IFPRI) ಎಂಬ ಅಂತರರಾಷ್ಟ್ರೀಯ ಆಹಾರ ನೀತಿಗಳ ಪರಿಣಿತರ ಸಂಸ್ಥೆಯು ಇತ್ತೀಚೆಗೆ ಭಾರತದ ಗ್ರಾಮೀಣ ಭಾಗಗಳಲ್ಲಿ ಪೌಷ್ಟಿಕ ಆಹಾರದ ಲಭ್ಯತೆ ಹಾಗೂ ಬಳಕೆಯ ಪ್ರಮಾಣದ ಬಗ್ಗೆ ಅಧ್ಯಯನ ಮಾಡಿ ತಮ್ಮ ವರದಿಯನ್ನು ಕೋವಿಡ್ ಗೆ ಸ್ವಲ್ಪಮುಂಚೆ 2020 ರ ಮಾರ್ಚ್ ನಲ್ಲಿ ಬಿಡುಗಡೆ ಮಾಡಿದೆ.
ಆ ವರದಿಯ ಪ್ರಕಾರ:
“ಗ್ರಾಮೀಣ ಭಾರತದಲ್ಲಿನ ಪ್ರತಿ ನಾಲ್ವರಲ್ಲಿ ಮೂವರಿಗೆ (ಶೇ. 65) ಆರೋಗ್ಯವಂತರಾಗಿ ಬಾಳಲು ಅತ್ಯಗತ್ಯವಾಗಿರುವಷ್ಟು ಕ್ಯಾಲೋರಿಗಳನ್ನು ನೀಡುವಷ್ಟು ಆಹಾರವನ್ನು ಮಾರುಕಟ್ಟೆಯಿಂದ ಕೊಳ್ಳುವ ಶಕ್ತಿಯಿಲ್ಲ. ಆದ್ದರಿಂದ ಅಪೌಷ್ಟಿಕತೆ ಹಾಗು ಆಹಾರ ಕೊರತೆಯಿಂದಾಗಿ ಭಾರತದ ಶೇ. 40 ರಷ್ಟು ಮಕ್ಕಳು ಕುಂಠಿತ ಬೆಳವಣಿಗೆ ಹಾಗು ಇತರ ತೀವ್ರತೆರನಾದ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ”
ಗ್ರಾಮೀಣ ಜನರಿಗೆ ಕೊಳ್ಳುವ ಶಕ್ತಿ ಏಕಿಲ್ಲ?
ಏಕೆಂದರೆ ಭಾರತದ ಗ್ರಾಮೀಣ ಪ್ರದೇಶದ ಶೇ.80ರಷ್ಟು ಜನ ಕೃಷಿಯನ್ನೇ ನೆಚ್ಚಿಕೊಂಡಿದ್ದಾರೆ. ಅವರ ಮಾಸಿಕ ಆದಾಯ ಇತ್ತೀಚಿನ ಸರ್ವೇ ಪ್ರಕಾರ6000-7000 ರೂ.ಮಾತ್ರ. ಗ್ರಾಮೀಣ ರೈತಾಪಿಯಲ್ಲಿ ಶೇ. 86ರಷ್ಟು ಸಣ್ಣ ಹಾಗೂ ಅತಿ ಸಣ್ಣ ರೈತರು. ಕೃಷಿ ಉತ್ಪಾದನೆಯೆ ವೆಚ್ಚ ಪ್ರತಿವರ್ಷವೂ ಹೆಚ್ಚಾಗುತ್ತಿದ್ದರೆ ಬೆಳೆದ ಬೆಳೆದೆ ಲಾಭದಾಯಕ ದರವು ಮಾತ್ರ ದಕ್ಕುವುದೇ ಇಲ್ಲ. ಮಾರುಕಟ್ಟೆಯಲ್ಲಿ ಸಿಕ್ಕಷ್ಟು ಬೆಲೆಗೆ ಮಾರುವ ರೈತ ಪ್ರತಿವರ್ಷವೂ ಮಾಡಿದ ಸಾಲವನ್ನು ತೀರಿಸುವುದಿರಲಿ ಇನ್ನೂ ಹೆಚ್ಚೆಚ್ಚು ಸಾಲದ ಶೂಲಕ್ಕೆ ಸಿಲುಕುತ್ತಿದ್ದಾನೆ.
ಇಂಥ ಸಂದರ್ಭದಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡಿ ಮಾರುಕಟ್ಟೆ ಶೋಷಣೆಯಿಂದ ರೈತಾಪಿಯನ್ನು ರಕ್ಷಿಸಬೇಕಿತು. ರೈತಾಪಿಯ ವೆಚ್ಚವನ್ನು ಕಡಿಮೆಮಾಡುವ ದಿಕ್ಕಿನಲ್ಲಿ ರಿಯಾಯತಿ ದರದಲ್ಲಿ ಗೊಬ್ಬರ,ಬೀಜಗಳನ್ನು ಪೂರೈಸಬೇಕಿತ್ತು. ರೈತ ಬೆಳೆದ ಬೆಲೆಗೆ ಸ್ವಾಮಿನಾಥನ್ ಅಯೋಗ ಸಲಹೆ ಮಾಡಿದ ದರದಲ್ಲಿ ಕನಿಷ್ಟ ಬೆಂಬಲ ಬೆಲೆಯನ್ನು (MSP) ಒದಗಿಸಬೇಕಿತ್ತು. ಸರ್ಕಾರವೇ ನಿಯಂತ್ರಿಸುವ ಕೃಷಿ ಮಾರುಕಟ್ಟೆಯಲ್ಲಿ (APMC) ರೈತರ ಮೇಲಾಗುತ್ತಿದ್ದ ಶೋಷಣೆಯನ್ನು ತಪ್ಪಿಸಲು ಅವುಗಳಲ್ಲಿ ರೈತ ಧ್ವನಿ ಹೆಚ್ಚಾಗುವಂತೆ ಮಾಡಬೇಕಿತ್ತು. ವಿದೇಶೀ ಹಾಗೂ ಅಗ್ಗದ ಸರಕುಗಳ ಹರಿವಿನಿಂದ ದೇಶೀಯ ರೈತರು ಬೆಯನ್ನು ಮತ್ತು ಬೆಲೆಯನ್ನು ರಕ್ಷಿಸಬೇಕಿತ್ತು. ಗ್ರಾಮೀಣ ಹಾಗೂ ನಗರದ ಬಡಜನರು ಆಹಾರದ ಕೊರತೆ ಹಾಗೂ ಅಪೌಷ್ಟಿಕತೆಗಳಿಗೆ ತುತ್ತಾಗದಂತೆ ಸರ್ಕಾರ ಆಹಾರ ಸರಬರಾಜು ವ್ಯವಸ್ಥೆಯನ್ನು ಖಾತರಿ ಮಾಡಬೇಕಿತ್ತು.
ಇದನ್ನೂ ಓದಿ: ನವ ಉದಾರವಾದಿ ಭಾರತದಲ್ಲಿ ದಲಿತರು- ಮೇಲ್ಚಲನೆಯೋ ಅಥವಾ ಮೂಲೆಗುಂಪೋ?
ಇದೇ ಉದ್ದೇಶಗಳಿಗಾಗಿ APMC, MSP ರೈತರ ಬೆಳೆಗಳನ್ನು ಸರ್ಕಾರವೇ ಖರೀದಿ ಮಾಡಿ ಬಡಜನರಿಗೆ ರಿಯಾಯತಿ ದರದಲ್ಲಿ ಆಹಾರ ಧಾನ್ಯಗಳನ್ನು ಹಂಚಲು ಅಹಾರ ನಿಗಮ (FCI) ಹಾಗೂ ಪಡಿತರ ವ್ಯವಸ್ಥೆಗಳಿದ್ದವು. ಆದರೆ ಕಾಲಾನುಕ್ರಮದಲ್ಲಿ ಈ ವ್ಯವಸ್ಥೆಯಲ್ಲಿ ಹಲವಾರು ಗಂಭೀರ ಲೋಪದೋಷಗಳು ಹಾಗೂ ಅಧಿಕಾರಿ-ವ್ಯಾಪಾರಿ ಅಪವಿತ್ರ ಸಂಬಂಧಗಳು ಬೆಳೆದು ರೈತರ ಶೋಷಣೆ ಮುಂದುವರೆದಿತ್ತು. ಹೀಗಾಗಿ ಇಂದು ಆ ಎಲ್ಲಾ ವ್ಯವಸ್ಥೆಗಳು ಇನ್ನಷ್ಟು ರೈತಪರವಾಗಿ ಹಾಗೂ ಬಡಜನರ ಪರವಾಗಿ ಸುಧಾರಣೆಯಾಗುವ ಅಗತ್ಯವಿತ್ತು.
ಆದರೆ ಮೋದಿ ಸರ್ಕಾರದ ತಂದಿರುವ ಹೊಸ ಕೃಷಿ ಕಾಯಿದೆಗಳು ಹಳೆಯ ವ್ಯವಸ್ಥೆಯಲ್ಲಿದ್ದ ಈ ಲೋಪದೋಷಗಳನ್ನು ಎತ್ತಿ ತೋರಿಸುತ್ತಾ ಅವುಗಳನ್ನು ಸಂಪೂರ್ಣವಾಗಿ ನಿರ್ನಾಮ ಮಾಡಿ ಕಾರ್ಪೊರೇಟ್ ದೈತ್ಯರ ಮರ್ಜಿಗೆ ರೈತರನ್ನು ತಳುವ ಹುನ್ನಾರ ನಡೆಸಿದೆ. ರೈತರಿಗೆ ಈವರೆಗೆ ದಕ್ಕುತ್ತಿದ್ದ ಅಲ್ಪಸ್ವಲ್ಪ ಪರಿಹಾರಗಳನ್ನು ಕಿತ್ತುಕೊಳ್ಳುತ್ತಿದೆ.
ಉದಾಹರಣೆಗೆ IFPRI ಪರಿಣಿತರ ವರದಿಯು ಗ್ರಾಮೀಣ ಭಾರತದ ಶೇ. 65 ರಷ್ಟು ಜನರಿಗೆ ಆಹಾರವನ್ನು ಪೌಷ್ಟಿಕ ಆಹಾರವನ್ನು ಕೊಳ್ಳುವ ಶಕ್ತಿಯಿಲ್ಲವೆಂದು ಹೇಳುತ್ತದೆಯಷ್ಟೇ.
ಆದರೆ ಅದರ ನಿವಾರಣೆಗೆ ಮೋದಿ ಸರ್ಕಾರ ಮಾಡಿದ್ದೇನು?
ಮೋದಿ ಸರ್ಕಾರವು 2015ರಲ್ಲಿ ಆಹಾರ ನಿಗಮದ ಪುನರ್ರಚನೆ ಹಾಗೂ, ಸಾರ್ವಜನಿಕ ಆಹಾರ ಖರೀದಿ ವ್ಯವಸ್ಥೆಯ ಸುಧಾರಣೆಯ ಕುರಿತು ಅರ್ಥಾತ ಸಾರ್ವಜನಿಕ ಪಡಿತರದ ಖಾಸಗೀಕರಣದ ಕುರಿತು ರಚಿಸಿದ್ದ ಶಾಂತಕುಮಾರ್ ಸಮಿತಿಯು ಹೀಗೆ ವರದಿ ಕೊಟ್ಟಿದೆ:
” ಆಹಾರ ಭದ್ರತಾ ಕಾಯಿದೆ-2013ರ ಮೂಲಕ ಭಾರತ ಸರ್ಕಾರವು ದೇಶದ ಶೇ. 67ರಷ್ಟು ಫಲಾನುಭವಿಗಳಿಗೆ ಕನಿಷ್ಠ ಆಹಾರವನ್ನು ಒದಗಿಸುತ್ತಿದೆ. ಆದರೆ ಇದರಿಂದ ಸರ್ಕಾರದ ಬೊಕ್ಕಸಕ್ಕೆ ಹೆಚ್ಚು ಹೊರೆ ಬೀಳುತ್ತಿದೆ. ಆದ್ದರಿಂದ ಇನ್ನುಮುಂದೆ ಆಹಾರ ಧಾನ್ಯಗಳನ್ನು ಪಡೆದುಕೊಳ್ಳುವವರ ಸಂಖ್ಯೆಯನ್ನು ಶೇ. 67ರಿಂದ ಶೇ. 40ಕ್ಕೆ ಇಳಿಸಬೇಕು” . ಹಾಗೂ ನಿಧಾನಕ್ಕೆ ಅದರ ಫಲಾನುಭವಿಗಳ ಸಂಖ್ಯೆಯನ್ನು 80 ಕೋಟಿಯಿಂದ 20 ಕೋಟಿಗೆ ಇಳಿಸಬೇಕು. ರೈತರಿಗೆ ಕೊಡುತ್ತಿರುವ MSP ವ್ಯವಸ್ಥೆಯನ್ನು ಬದಲಿಸಬೇಕು. ರೈತರಿಂದ ಆಹಾರ ಖರೀದಿಯನ್ನು ಸರ್ಕಾರ ಮಾಡಬಾರದು. ಅದನ್ನು ಖಾಸಗಿಯವರಿಗೆ ವಹಿಸಬೇಕು. ಗೊಬ್ಬರದ ಬೆಳೆಯನ್ನು ಸರ್ಕಾರ ನಿಯಂತ್ರಣದಿಂದ ಸಂಪೂರ್ಣವಾಗಿ ಹೊರಗಿಟ್ಟು ಖಾಸಗಿ ಕ್ಷೇತ್ರಕ್ಕೆ ವಹಿಸಬೇಕು. ಆಹಾರ ನಿಗಮದ ಗೋದಾಮುಗಳ ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸಬೇಕು. ಇವೆಲ್ಲದರಿಂದ ರೈತರ ಹಾಗು ಕೃಷಿ ಕ್ಷೇತ್ರದ ಸಂಪೂರ್ಣ ಬಲವರ್ಧನೆಯಾಗುತ್ತದೆ”.
ಹಾಗೆಯೇ ಮೋದಿ ಸರ್ಕಾರ ಇತ್ತೀಚಿಗೆ Farmers Produce Trade And Commerce (Facilitation and Promotion) Act ಅರ್ಥಾತ್ APMC By pass ಕಾಯಿದೆಯನ್ನು ಜಾರಿ ಮಾಡಿದೆ. ಈ ಕಾಯಿದೆಯ ಮೂಲಕ ಖಾಸಗಿ ಮಂಡಿಗಳಿಗೆ ಅವಕಾಶ ಮಾಡಿಕೊಟ್ಟು ರೈತರನ್ನು APMC ಯ ದಾಸ್ಯದಿಂದ ಮುಕ್ತಗೊಳಿಸಿದೆಯೆಂದೂ, ರೈತರು ಇನ್ನುಮುಂದೆ ಹೆಚ್ಚಿನ ದರವನ್ನು ಕೊಡಬಹುದಾದ ಯಾವುದೇ ಖಾಸಗಿ ಮಂಡಿಗಳಿಗೆ ತಮ್ಮ ಸರಕನ್ನು ಮಾರಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಆ ಮೂಲಕ ರೈತರ ಆದಾಯವೂ ದುಪ್ಪಟ್ಟಾಗಲಿದೆಯಂತೆ…!!
ಆದರೆ ವಾಸ್ತವವೇನು?
ಉದಾಹರಣೆಗೆ …2006ರಲ್ಲೇ ಬಿಹಾರದಲ್ಲಿ APMC ಕಾಯಿದೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಿ ಖಾಸಗಿ ಮಂಡಿಗಳಿಗೆ ಅವಕಾಶ ಮಾಡಿಕೊಡಲಾಯಿತು.
ಹಾಗಿದ್ದಲ್ಲಿ ಬಿಹಾರದ ರೈತರಿಗೆ ಕಳೆದ 14 ವರ್ಷಗಳಿಂದ APMC ಇರುವ ರಾಜ್ಯಗಳಿಗಿಂತ ಹೆಚ್ಚಿನ ದರಗಳು ದೊರೆಯುತ್ತಿದೆಯೇ?
ಖಂಡಿತಾ ಇಲ್ಲ ಎಂಬುದನ್ನು NCAER- National Council For Applied Economic Research ಎಂಬ ಸ್ವಾಯತ್ತ ಚಿಂತಕರ ಚಾವಡಿಯೂ ತನ್ನ 2019 ರ ವರದಿಯಲ್ಲಿ ಸ್ಪಷ್ಟವಾಗಿ ಹೇಳುತ್ತದೆ.
ಇದನ್ನೂ ಓದಿ: ಮೋದಿ ಘೋಷಿಸಿದ, ವಲಸೆ ಕಾರ್ಮಿಕರಿಗೆ ಕೊಟ್ಟ ಪ್ಯಾಕೇಜಿನಲ್ಲಿರುವ ಸೊನ್ನೆಗಳೆಷ್ಟು?
ಅದು 2019 ರಲ್ಲಿ ಬಿಡುಗಡೆ ಮಾಡಿರುವ Study on Agricultural Diagnostics for the State of Bihar in India ಎಂಬ ವರದಿಯಲ್ಲಿ APMC ರದ್ದು ಮಾಡಿದ್ದರಿಂದ ಬಿಹಾರದ ರೈತರು ಅನುಭವಿಸಬೇಕಾಗಿ ಬಂದಿರುವ ಭಾವನೆಗಳನ್ನು ಹೀಗೆ ವಿಶದೀಕರಿಸುತ್ತದೆ:
.”..ಬಿಹಾರದಲ್ಲಿ 2006 ರಲ್ಲೇ APMC ಕಾಯಿದೆಯನ್ನು ರದ್ದುಗೊಳಿಸಿದರೂ ಹೊಸ ಮಾರುಕಟ್ಟೆಗಳನ್ನು ಸೃಷ್ಟಿಸಲು ಅಥವಾ ಅಸ್ಥಿತ್ವದಲ್ಲಿರುವ ಸೌಲಭ್ಯಗಳನ್ನು ಸುಧಾರಿಸಲು ಹೊಸ ಖಾಸಗಿ ಬಂಡವಾಳವೇನು ಹರಿದು ಬರಲಿಲ್ಲ. ಇದರಿಂದಾಗಿ ಬಿಹಾರದಲ್ಲಿ ಕೃಷಿ ಮಾರುಕಟ್ಟೆಯ ಸಾಂದ್ರತೆ ಕ್ಷೀಣಿಸಿದೆ. ಮೇಲಾಗಿ, ರೈತ ಬೆಳೆದ ಧಾನ್ಯಗಳನ್ನು ಕೊಳ್ಳುವಲ್ಲಿ ಸರ್ಕಾರಿ ಏಜೆನ್ಸಿಗಳು ಭಾಗವಹಿಸುವಿಕೆ ಮತ್ತು ಕೊಳ್ಳುವ ಪ್ರಮಾಣ ಎರಡೂ ಕಡಿಮೆಯಾಗುತ್ತಲೇ ಸಾಗಿದೆ. ಹೀಗಾಗಿ ರೈತರನ್ನು ಅವರ ಸರಕುಗಳಿಗೆ ಅತ್ಯಂತ ಕಡಿಮೆ ದರವನ್ನು ನಿಗದಿ ಮಾಡುವ ವ್ಯಾಪಾರಿಗಳ ಮರ್ಜಿಗಳಿಗೆ ದೂಡಲಾಗಿದೆ. ಕೃಷಿ ಸರಕುಗಳ ಬೆಳೆಗಳಲ್ಲಿನ ಅಸ್ಥಿರತೆಗಳಿಗೆ ಹಾಗೂ ಅತ್ಯಂತ ಕಡಿಮೆ ದರಗಳಿಗೆ ಅಸಮರ್ಪಕ ಮಾರುಕಟ್ಟೆ ಸೌಲಭ್ಯಗಳು ಹಾಗೂ ಅಸಮರ್ಪಕ ಸಾಂಸ್ಥಿಕ ವ್ಯವಸ್ಥೆಗಳೇ ಕಾರಣವಾಗಿವೆ.

ಹೀಗೆ ಮೋದಿ ಸರ್ಕಾರವು ಜಾರಿ ಮಾಡಿರುವ ಈ ಮೂರೂ ಕೃಷಿ ಕಾಯಿದೆಗಳು ಹಾಗೂ ರೈತರ ಅಹಾರವನ್ನು ಕೊಳ್ಳುವ ಶಕ್ತಿಯನ್ನು ಇನ್ನಷ್ಟು ಕಡಿಮೆಗೊಳಿಸಲಿದೆ. ಪರಿಣಾಮವಾಗಿ ಭಾರತದ ಅಭಿವೃದ್ಧಿಯೂ ವೇಸ್ಟೆಡ್ ಹಾಗೂ ಸ್ತಂಟೆಡ್ ಆಗಲಿದೆ.
ಮೋದಿ ಸರ್ಕಾರ ಭಾರತದಲ್ಲಿ ಸಬ್ ಚಂಗಾಸಿ ಎಂದು ಜನರನ್ನು ನಂಬಿಸುತ್ತಿರುವಾಗಲೇ ಭಾರತದ ಪರಿಸ್ಥಿತಿ ಗಂಭೀರ ದಿಂದ ಕಳವಳಕಾರಿ ಯಾಗುವ ಕಡೆ ದಾಪುಗಾಲಿಡುತ್ತಿದೆ.
ಹೊಟ್ಟೆಯ ಸಂಕಟವನ್ನು ಮೆದುಳು ಅರಿಯುವಂತೆ ಮಾಡದೇ ಇದಕ್ಕೆ ಬೇರೆ ಮದ್ದಿಲ್ಲ.
– ಶಿವಸುಂದರ್
ಇದನ್ನೂ ಓದಿ: GST problem : PM ಮೋದಿ ಸರಕಾರದ ಜಿಎಸ್ಟಿ ಪರಿಹಾರ ಪಾವತಿಯಲ್ಲಿನ ಬಿಕ್ಕಟ್ಟು….

