ಮಹಾರಾಷ್ಟ್ರ: ಬಿಜೆಪಿ ತೊರೆದು ಎನ್‌ಸಿಪಿ ಕಡೆ ಮುಖ ಮಾಡಿದ ಏಕನಾಥ್‌ ಖಡಸೆ

ಮಹಾರಾಷ್ಟ್ರದ ಬಿಜೆಪಿ ನಾಯಕರೊಂದಿಗೆ ಅಸಮಾಧಾನ ಹೊಂದಿರುವ ಬಿಜೆಪಿ ಮುಖಂಡ ಏಕನಾಥ್ ಖಡಸೆ ಅವರು ಎನ್‌ಸಿಪಿ (ನ್ಯಾಷನಲಿಕ್ಟ್‌ ಕಾಂಗ್ರೆಸ್‌) ಪಕ್ಷವನ್ನು ಸೇರುವುದಾಗಿ ಘೋಷಿಸಿದ್ದಾರೆ.

“ನನ್ನನ್ನು ಬಿಜೆಪಿಯಿಂದ ಹೊರ ದೂರಡಲಾಗಿದೆ. ಬಿಜೆಪಿಯಲ್ಲಿ ದೇವೇಂದ್ರ ಫಡ್ನವಿಸ್ ಬಿಟ್ಟು ಬೇರೆ ಯಾರೊಂದಿಗೂ ನನಗೆ ಅಸಮಾಧಾನ ಇಲ್ಲ. ನನಗೆ ಎನ್​ಸಿಪಿಯಲ್ಲಿ ಯಾವ ಭರವಸೆಯನ್ನೂ ನೀಡಿಲ್ಲ. ನಾನು ಯಾವುದೇ ಬಿಜೆಪಿ ಶಾಸಕ, ಸಂಸದರನ್ನೂ ನನ್ನ ಜೊತೆ ಕರೆದುಕೊಂಡು ಹೋಗುತ್ತಿಲ್ಲ. ನಾನೊಬ್ಬನೇ ಎನ್‌ಸಿಪಿ ಪಕ್ಷವನ್ನು ಸೇರುತ್ತಿದ್ದೇನೆ” ಎಂದು ಹೇಳಿದ್ದಾರೆ.

ಏಕನಾಥ್ ಖಡಸೆ ಅವರು ಅ. 23ರ ಶುಕ್ರವಾರ ಮಧ್ಯಾಹ್ನ 2ಗಂಟೆಗೆ ಎನ್​ಸಿಪಿ ಸೇರುತ್ತಿದ್ದಾರೆ. ಅವರ ಆಗಮನದಿಂದ ನಮ್ಮ ಪಕ್ಷದ ಬಲ ಇನ್ನಷ್ಟು ಹೆಚ್ಚಾಗಲಿದೆ ಎಂದು ಎನ್​ಸಿಪಿ ಮಹಾರಾಷ್ಟ್ರ ಘಟಕದ ಮುಖ್ಯಸ್ಥ ಜಯಂತ್ ಪಾಟೀಲ್ ಖಚಿತಪಡಿಸಿದ್ದಾರೆ.

ಇದನ್ನೂ ಓದಿ: Fact Check: ಮಹಾರಾಷ್ಟ್ರದ ಐಡಿಬಿಐ ಬ್ಯಾಂಕ್ ಮ್ಯಾನೇಜರ್ ಮೇಲೆ ಹಲ್ಲೆ ನಡೆಸಿದವರು ಶಿವಸೇನೆಯ ಕಾರ್ಯಕರ್ತರೇ?

ದೇವೇಂದ್ರ ಫಡ್ನವಿಸ್ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಆಗಿದ್ದಾಗ ಏಕನಾಥ್ ಖಡಸೆ ಸಚಿವರಾಗಿದ್ದರು. 2016ರಲ್ಲಿ ಭ್ರಷ್ಟಾಚಾರ ಆರೋಪ ಕೇಳಿ ಬಂದ ನಂತರ ಖಡಸೆ ಅವರನ್ನ ಸಚಿವ ಸ್ಥಾನದಿಂದ ಇಳಿಸಲಾಯಿತು. ಆಗಿನಿಂದಲೇ ಖಡಸೆ ಅಸಮಾಧಾನಗೊಂಡಿದ್ದರು. 2019ರ ವಿಧಾನಸಭಾ ಚುನಾವಣೆಯಲ್ಲಿ ಭ್ರಷ್ಟಾಚಾರ ಕಳಂಕದ ಕಾರಣವೊಡ್ಡಿ ಖಡಸೆಗೆ ಟಿಕೆಟ್ ನೀಡುವುದನ್ನು ತಪ್ಪಿಸಲಾಯಿತು.   ಅವರ ಮಗಳು ರೋಹಿಣಿ ಖಡಸೆಗೆ ಟಿಕೆಟ್ ನೀಡಲಾಗಿತ್ತು. ಆದರೆ, ಅವರು ಹೀನಾಯವಾಗಿ ಸೋತರು. ತಮ್ಮ ಮಗಳ ಸೋಲಿಗೆ ಫಡ್ನವಿಸ್ ಸಂಚು ರೂಪಿಸಿದ್ದರು ಎಂದು ಖಡಸೆ ಆರೋಪಸಿದ್ದು, ಅಸಮಾಧಾನಗೊಂಡಿದ್ದರು.

ಬಿಜೆಪಿಯ ರಾಜ್ಯಾಧ್ಯಕ್ಷರೂ ಆಗಿರುವ ದೇವೇಂದ್ರ ಫಡ್ನವಿಸ್, ಪಕ್ಷವನ್ನು ನಿರ್ವಹಿಸುತ್ತಿರುವ ರೀತಿ ಬಗ್ಗೆ ಕೆಲವರಲ್ಲಿ ಅಸಮಾಧಾನ ಇದೆ. ನಾಯಕತ್ವಕ್ಕೆ ಪೈಪೋಟಿ ನೀಡಬಲ್ಲ ನಾಯಕರನ್ನ ಅವರು ಮೂಲೆಗುಂಪು ಮಾಡುತ್ತಾರೆ ಎಂದು ಆರೋಪಿಸಿದ್ದಾರೆ. ವಿಧಾನಸಭಾ ಚುನಾವಣೆಯ ಬಳಿಕ ಬಿಜೆಪಿಯೊಳಗೆ ಬಿರುಕು ದೊಡ್ಡದಾಗಿದ್ದು,  ಏಕನಾಥ ಖಡಸೆ, ಪಂಕಜಾ ಮುಂಡೆ, ಪ್ರಕಾಶ್ ಮೆಹ್ತಾ ಮೊದಲಾದ ನಾಯಕರು ಪಕ್ಷದೊಳಗೆ ಆಂತರಿಕ ಭಿನ್ನಮತ ಹುಟ್ಟುಹಾಕುವ ಸಾಧ್ಯತೆ ಎದುರಾಗಿತ್ತು. ಪಕ್ಷದೊಳಗಿನ ಬಂಡಾಯವನ್ನು ಶಮನ ಮಾಡುವ ಯತ್ನವನ್ನು ಬಿಜೆಪಿ ನಾಯಕತ್ವ ಮಾಡಿದ್ದರೂ, ಅದು ಸಂಪೂರ್ಣವಾಗಿ ಸಫಲವಾಗಿಲ್ಲ ಎಂದು ಹೇಳಲಾಗಿದೆ.

ಪಂಕಜಾ ಮುಂಡೆ ಹಾಗೂ ತಮ್ಮ ಮಗಳ ಸೋಲಿಗೆ ಬಿಜೆಪಿಯ ರಾಜ್ಯ ಘಟಕದ ಕೆಲ ನಾಯಕರೇ ಕಾರಣ. ನನ್ನ ರಾಜಕೀಯ ವೃತ್ತಿಜೀವನ ಅಂತ್ಯ ಹಾಡಲು ಅವರು ಸಂಚು ರೂಪಿಸಿದ್ದಾರೆ ಎಂದು ದೂರಿದ್ದ ಖಡಸೆ ಅವರು ಬಿಜೆಪಿ ತೊರೆದಿದ್ದಾರೆ.


ಇದನ್ನೂ ಓದಿ: ಕೇಂದ್ರದ ಹೊಸ ಕೃಷಿ ನೀತಿಯನ್ನು ಮಹಾರಾಷ್ಟ್ರದಲ್ಲಿ ಜಾರಿ ಮಾಡುವುದಿಲ್ಲ: ಮೈತ್ರಿ ಸರ್ಕಾರ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights