ವಿಶ್ವ ಆಹಾರ ದಿನ: ಕವಿತೆ – ಹಸಿವು ಮತ್ತು ಬಂದೂಕು
ಇಂದು(ಅಕ್ಟೋಬರ್ 16) ವಿಶ್ವ ಆಹಾರ ದಿನವನ್ನು ಆಚರಿಸಲಾಗುತ್ತಿದೆ. ಹಲವಾರು ಸರ್ಕಾರಗಳು ತಮ್ಮದು ಹಸಿವು ಮುಕ್ತ ರಾಜ್ಯವೆಂದು, ದೇಶವೆಂದು ಹೇಳಿಕೊಂಡು ಬೀಗುತ್ತಿವೆ. ಆದರೆ, ವಾಸ್ತವಾಂಶ ಬೇರೆಯೇ ಇದೆ. 2019ರ ಜಾಗತಿಕ ಹಸಿವು ಸೂಚ್ಯಂಕದ ವಿಶ್ಲೇಷಣೆಗೆ ಒಳಒಪಟ್ಟಿದ್ದ 117 ರಾಷ್ಟ್ರಗಳಲ್ಲಿ ಭಾರತ 102ನೇ ಸ್ಥಾನದಲ್ಲಿದೆ..
ದೇಶದಲ್ಲಿನ ಶೇ.30.6ರಷ್ಟು ಜನರು ಹಸಿವಿನಿಂದ ಬಳಲುತ್ತಿದ್ದಾರೆ. 50 ಪ್ರತಿಶತ ಮಹಿಳೆಯರಲ್ಲಿ ರಕ್ತ ಹೀನತೆಗೆ ಒಳಗಾಗಿದ್ದಾರೆ. ಶೇ.37.9 ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಹಸಿವು, ಅಪೌಷ್ಠಿಕತೆಯ ಪ್ರಮಾಣ ಮತ್ತಷ್ಟು ಹೆಚ್ಚಾಗಿದೆ. ಸಾವಿರಾರು ವಲಸೆ ಕಾರ್ಮಿಕರು ಹಸಿವು ಬಳಲಿಕೆಯಿಂದ ರಸ್ತೆ ಮಧ್ಯದಲ್ಲೇ ಜೀವ-ಜೀವನ ಕಳೆದುಕೊಂಡಿದ್ದಾರೆ. ಆದರೂ ಪ್ರಭುತ್ವವು ತಿನ್ನುವ ಅನ್ನ ಕಿತ್ತುಕೊಳ್ಳುವುದರ ಜೊತೆಗೆ ಅನ್ನ ಬೆಳೆಯುವ ಕೈಗಳನ್ನೂ ಕತ್ತರಿಸಲು ಮುಂದಾಗಿದೆ.
ಕೃಷಿ ನೀತಿಗಳು, ಎಪಿಎಂಪಿ ತಿದ್ದುಪಡಿ ಮಸೂದೆ, ಕಾರ್ಮಿಕ ಕಾನೂನು ತಿದ್ದುಪಡಿ ಮಸೂದೆಗಳ ವಿರುದ್ಧ ದೇಶಾದ್ಯಂತ ಭುಗಿಲೆದ್ದಿರುವ ರೈತರ ಪ್ರತಿಭಟನೆ, ರೈತರ ಆಕ್ರೋಶದ ನಡುವೆಯೂ ಮಸೂದೆಗಳನ್ನು ಅಂಗೀಕರಿಸುವ ಮತ್ತು ಸುಗ್ರೀವಾಜ್ಞೆಯ ಮೂಲಕ ಜಾರಿಗೆ ತರಲು ಸರ್ಕಾರಗಳು ಮುಂದಾಗಿರುವ ಈ ಸಂದರ್ಭದಲ್ಲಿ ಗ್ವಾಟೆಮಾಲದ ಕಮ್ಯುನಿಸ್ಟ್ ಕವಿ ಒಟ್ಟೆ ರಿನೊ ಕ್ಯಾಸ್ಟಿಲ್ಲೋ ಕವಿತೆಯನ್ನು ಶಿವಸುಂದರ್ ಅನುವಾದಿಸಿದ್ದಾರೆ….
ಕವಿತೆ: ಹಸಿವು ಮತ್ತು ಬಂದೂಕು
ನಿನ್ನ ಕೈಯಲ್ಲಿ ಬಂದೂಕು
ನನ್ನ ಹೊಟ್ಟೆಯಲ್ಲಿ ಹಸಿವು
ನನಗೆ ಹಸಿವಾಗುತ್ತಿದೆಯೆಂದೇ
ನಿನ್ನ ಕೈಯಲ್ಲಿ ಬಂದೂಕು
ನಿನ್ನ ಕೈಯಲ್ಲಿ ಬಂದೂಕಿರುವುದರಿಂದಲೇ
ನನ್ನ ಹೊಟ್ಟೆಯಲ್ಲಿ ಹಸಿವು
ನಿನ್ನ ಕೈಯಲ್ಲಿ ಬಂದೂಕಿರಬಹುದು..
ಅದರೊಳಗೆ
ಸಾವಿರಾರು ಗುಂಡುಗಳೂ ಇರಬಹುದು…
ಅವೆಲ್ಲವನ್ನೂ ನೀನು
ಈ ಬಡಕಲು ದೇಹದೊಳಗೆ ತೂರಿಬಿಡಲೂಬಹುದು..
ನನ್ನನ್ನು
ಒಂದಲ್ಲ,
ಹತ್ತಲ್ಲ,
ಸಾವಿರ ಸಾರಿ
ಕೊಂದುಹಾಕಲೂ ಬಹುದು
ಆದರೆ
ನಿನಗಿಂತ ನಾನೇ ಬಲಶಾಲಿ, ಪ್ರಬಲ ಶಸ್ತ್ರಧಾರಿ..
ಏಕೆಂದರೆ…
ನಿನ್ನ ಬಳಿ ಬಂದೂಕಿದೆ…
ನನ್ನ ಬಳಿ ಹಸಿವಿದೆ…
ಕೇವಲ ಹಸಿವಿದೆ.
ಮೂಲ: ಒಟ್ಟೆ ರಿನೊ ಕ್ಯಾಸ್ಟಿಲ್ಲೋ.
(ಗ್ವಾಟೆಮಾಲದ ಕಮ್ಯುನಿಸ್ಟ್ ಕವಿ)
ಅನುವಾದ: ಶಿವಸುಂದರ್
ಇದನ್ನೂ ಓದಿ: ಮೋದಿ ಸರ್ಕಾರದ ಕೃಷಿ ಮಸೂದೆ ಕೃಷಿ ಕಂಪನಿಗಳನ್ನು ಸಬಲೀಕರಿಸಿ ರೈತರನ್ನು ನೇಣಿಗೇರಿಸುವುದು ಹೀಗೆ . .

