ಯೋಗಿ ಅದಿತ್ಯಾನಾಥ್ಗೆ ಬೆದರಿಕೆ ಆರೋಪ: 15 ವರ್ಷದ ಬಾಲಕನ ಬಂಧನ
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ‘ಸ್ಫೋಟಿಸುವುದಾಗಿ’ ಬೆದರಿಕೆಯ ಸಂದೇಶ ಕಳಿಸಿದ್ದನ ಆರೋಪದ ಮೇಲೆ 15 ವರ್ಷದ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಬಾಲಕ ವಾಟ್ಸ್ಯಾಪ್ ಮೂಲಕ ರಾಜ್ಯದ 112 ಸಹಾಯವಾಣಿ ಸಂಖ್ಯೆಗೆ ಬೆದರಿಕೆಯ ಸಂದೇಶವನ್ನು ಕಳುಹಿಸಿದ್ದಾನೆ. ಸಹಾಯವಾಣಿಯಲ್ಲಿ ಕರ್ತವ್ಯನಿರತರಾಗಿದ್ದ ಪೊಲೀಸ್ ಸಿಬ್ಬಂದಿ ಲಕ್ನೋದ ಸುಶಾಂತ್ ಗೋಲ್ಫ್ ಸಿಟಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಕ್ರಿಮಿನಲ್ ಬೆದರಿಕೆಯೊಡ್ಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಉತ್ತರ ಪ್ರದೇಶ ಪೊಲೀಸರ ಸೈಬರ್ ಘಟಕ ಬೆದರಿಕೆಯೊಡ್ಡಿದ್ದ ಮೊಬೈಲ್ ಸಂಖ್ಯೆಯನ್ನು ಗುರುತಿಸಿದ್ದು, ಸಂದೇಶ ಕಳಿಸಿದವನು ಆಗ್ರಾದ 15 ವರ್ಷದ ಬಾಲಕ ಎಂದು ತಿಳಿದು ಬಂದಿದೆ. ಆತನನ್ನು ವಶಕ್ಕೆ ಪಡೆದ ಪೊಲೀಸರು ಲಕ್ನೋದಲ್ಲಿನ ಬಾಲನ್ಯಾಯ ಮಂಡಳಿಯೆದುರು ಹಾಜರು ಪಡಿಸಿದ್ದಾರೆ. ಆತನನ್ನು ಈಗ ಲಕ್ನೋದ ಬಾಲಾಪರಾಧಿಗಳ ಕೇಂದ್ರದಲ್ಲಿ ಇರಿಸಲಾಗಿದೆ.
“ಪೊಲೀಸರು ನಮ್ಮ ಮನೆಗೆ ಬರುವವರೆಗೂ ಈ ವಿಚಾರವೇ ನಮಗೆ ತಿಳಿದಿರಲಿಲ್ಲ. ಹತ್ತನೇ ತರಗತಿಯಲ್ಲಿರುವ ಬಾಲಕ ಏಕೆ ಈ ಸಂದೇಶವನ್ನು ಕಳುಹಿಸಿದ್ದನೆಂದು ತಿಳಿದಿಲ್ಲ, ಆತ ಸಿಟ್ಟಿನಿಂದ ಅಥವಾ ತಮಾಷೆಗಾಗಿ ಹಾಗೆ ಮಾಡಿರಬಹುದು, ಆದರೆ ಆತ ದೊಡ್ಡ ಅಪರಾಧಿಯಂತೆ ಆತನನ್ನು ಕರೆದುಕೊಂಡು ಹೋಗಲಾಗಿದೆ” ಎಂದು ಆತನ ಅಜ್ಜಿ ಹೇಳಿದ್ದಾರೆ.
‘ಸಂದೇಶದಲ್ಲಿ ಸಿಎಂ ಹೆಸರನ್ನು ಉಲ್ಲೇಖಿಸಲಾಗಿದ್ದರಿಂದ ಎಫ್ಐಆರ್ ದಾಖಲಾಗಿತ್ತು, ಬಾಲಕ ಯಾವುದೇ ರೀತಿಯಲ್ಲಿ ಬೆದರಿಕೆಯನ್ನು ಕಾರ್ಯಗತಗೊಳಿಸುವ ಉದ್ದೇಶ ಹೊಂದಿಲ್ಲ ಎಂದು ಹೊರನೋಟಕ್ಕೆ ತೋರುತ್ತಿದೆ. ವಿಚಾರಣೆ ಬಾಕಿಯಿದೆ” ಎಂದು ಸುಶಾಂತ್ ಗೋಲ್ಫ್ ಸಿಟಿಯ ಠಾಣಾಧಿಕಾರಿ ಸಚಿನ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಇದನ್ನೂ ಓದಿ: ರೈತರ ಪ್ರತಿಭಟನೆ: ನೀರಿನ ಫಿರಂಗಿಯಿಂದ ರೈತರನ್ನು ಕಾಪಾಡಿದ ಯುವಕನ ವಿರುದ್ಧ ಕೊಲೆ ಯತ್ನದ ಆರೋಪ!

