FACT CHECK | ಬುಲ್ಡೋಜರ್ ಮೇಲೆ ನಿಂತು ಯೋಗಿ ಆದಿತ್ಯನಾಥ್ ಚುನಾವಣಾ ಪ್ರಚಾರ ಮಾಡಿದ್ರಾ?

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಪ್ರಚಾರ ಮುಗಿಲು ಮುಟ್ಟಿದೆ. ಮತದಾನಕ್ಕೆ ಇನ್ನು ಎರಡು ವಾರ ಮಾತ್ರ ಬಾಕಿ ಇದೆ. ಹಾಗಾಗಿ ಮಹಾಯುತಿ, ಮಹಾವಿಕಾಸ್ ಅಘಾಡಿ, ಎಂಎನ್ ಎಸ್ , ವಾಂಚಿತ್ ಸೇರಿದಂತೆ ಎಲ್ಲ ಪಕ್ಷಗಳು ಬಿರುಸಿನ ಪ್ರಚಾರ ನಡೆಸುತ್ತಿವೆ. ಅಭ್ಯರ್ಥಿಗಳು ಮನೆ-ಮನೆ ಪ್ರಚಾರ ಸಭೆಗಳ ಮೂಲಕ ಜನರಿಗೆ ಮತ ನೀಡುವಂತೆ ಕರೆ ನೀಡುತ್ತಿದ್ದಾರೆ. ಈ ನಡುವೆ ಅಭ್ಯರ್ಥಿಗಳ ಪ್ರಚಾರದ ಕುರಿತು ಹಲವು ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಚುನಾವಣಾ ಪ್ರಚಾರದ ವೇಳೆ ಇಬ್ಬರು ವ್ಯಕ್ತಿಗಳು ಜೆಸಿಬಿ ಮೇಲೆ ನಿಂತು ಪ್ರಚಾರ ಮಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದು, ಇದರಲ್ಲಿ ನಿಂತು ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿರುವುದು ಬುಲ್ಡೋಜರ್ ಬಾಬಾ ಎಂದೇ ಖ್ಯಾತರಾಗಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಹಾರಾಷ್ಟ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಬುಲ್ಡೋಜರ್ ಮೆಲೆ ನಿಂತು ಪ್ರಚಾರ ಮಾಡುತ್ತಿದ್ದಾರೆ ಎಂದು ಹಲವರು ಹೇಳಿಕೊಂಡಿದ್ದಾರೆ. ಆದರೆ, ಯೋಗಿ ಆದಿತ್ಯನಾಥ್ ಅವರು ಮಹಾರಾಷ್ಟ್ರದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ನಿಜವಾಗಿಯೂ ಬುಲ್ಡೋಜರ್ ಮೇಲೆ ನಿಂತು ಪ್ರಚಾರ ಮಾಡಿದ್ದಾರೆಯೇ ಎಮದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರವ ವಿಡಿಯೋದ ಕೀಫ್ರೇಮ್‌ಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಮರಾಠಿ ಸುದ್ದಿ ವಾಹಿನಿ ಎಬಿಪಿ ಮಜಾದ ಯೂಟ್ಯೂಬ್ ಚಾನೆಲ್‌ನಲ್ಲಿ ವಿಡಿಯೋ ವರದಿಯೊಂದು ಲಭ್ಯವಾಗಿದೆ.

ಬಿಜೆಪಿ ಶಾಸಕರೊಬ್ಬರು ಯೋಗಿ ಆದಿತ್ಯನಾಥ್ ಅವರಂತೆಯೇ ಕಾಣುವ ನಕಲಿ ವ್ಯಕ್ತಿಯನ್ನು ಪ್ರಚಾರಕ್ಕೆ ಕರೆತಂದಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಅಲ್ಲದೆ, ವರದಿಗಳ ಪ್ರಕಾರ, ಈ ವೀಡಿಯೊ ಮಹಾರಾಷ್ಟ್ರದ ಅಕೋಲಾದಿಂದ ಬಂದಿದೆ. ನಂತರ ನಾವು ಅಕೋಲಾ ಮೂಲದ ಪತ್ರಕರ್ತ ಕರುಣ್ ಭಂಡಾರ್ಕರ್ ಅವರನ್ನು ಸಂಪರ್ಕಿಸಿದ್ದೇವೆ. ಈ ವೇಳೆ ವಿಡಿಯೋದಲ್ಲಿರುವ ಬಿಜೆಪಿ ಶಾಸಕ ಮೂರ್ತಿಜಾಪುರದ ಹರೀಶ್ ಪಿಂಪಲ್ ಎಂದು ತಿಳಿಸಿದ್ದಾರೆ.

ಮತ್ತಷ್ಟು ಕೀವರ್ಡ್ ಬಳಸಿ ಗೂಗಲ್ ಸರ್ಚ್ ಮಾಡಿದಾಗ, ಸ್ಥಳೀಯ ನ್ಯೂಸ್ ಪೋರ್ಟಲ್‌ನಲ್ಲಿ BJP ಪಕ್ಷದ ಜೆಸಿಬಿ ಸಾಹಸದ ವರದಿಯೊಂದು ಲಭ್ಯಾವಾಗಿದೆ. ವರದಿಯ ಪ್ರಕಾರ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಲ್ಲ, ಆ ವ್ಯಕ್ತಿ ಕೇವಲ ಯೋಗಿ ಆದಿತ್ಯನಾಥ್ ತರಹದ ಡ್ರೆಸ್ ಹಾಕಿಕೊಂಡಿದ್ದಾರೆ ಎಂದು ಸ್ಪಷ್ಟವಾಗಿ ಸುದ್ದಿಯಲ್ಲಿ ಉಲ್ಲಖಿಸಲಾಗಿದೆ.

ನಂತರ ನಾವು ಹರೀಶ್ ಪಿಂಪಲ್ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿದ್ದೇವೆ, ಈ ವೇಳೆ ಮತ್ತೊಬ್ಬ ಬಿಜೆಪಿ ಕಾರ್ಯಕರ್ತ ಜೋಗ್ದಂಡ್ ಗುರೂಜಿ ನಮ್ಮೊಂದಿಗೆ ಮಾತನಾಡಿದರು. ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮೂರ್ತಿಜಾಪುರದಲ್ಲಿ ಸಾರ್ವಜನಿಕ ಭಾಷಣ ಮಾಡಿದ ನಂತರ ಜೆಸಿಬಿ ಸಾಹಸ ರ್ಯಾಲಿಯನ್ನು ಆಯೋಜಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಯೋಗಿ ಆದಿತ್ಯನಾಥ್ ವೇಷದಲ್ಲಿ ಕಾಣಿಸಿಕೊಂಡ ವ್ಯಕ್ತಿ ಬಿಜೆಪಿ ಕಾರ್ಯಕರ್ತ ಎಂದು ಜೋಗ್ದಂಡ್ ಗುರೂಜಿ ಮಾಹಿತಿ ನೀಡಿದ್ದಾರೆ. ಸ್ಥಳದಲ್ಲಿ ನೆರೆದಿದ್ದ ಕಾರ್ಯಕರ್ತರ ಉತ್ಸಾಹದಿಂದ ಇದು ಸಂಭವಿಸಿತು.

ಯೋಗಿ ಆದಿತ್ಯನಾಥ್ ಅವರಂತೆ ವೇಷಧರಿಸಿದವರ ಹೆಸರು ಸಂತೋಷ್ ಧುಲೆ ಮತ್ತು ಅವರು ಮೂರ್ತಿಜಾಪುರದ ಬಿಜೆಪಿ ಕಾರ್ಯಕರ್ತ ಎಂದು ಅಕೋಲಾದ ಲೋಕಸತ್ತಾ ಪ್ರತಿನಿಧಿ ಪ್ರಬೋಧ್ ದೇಶಪಾಂಡೆ ತಿಳಿಸಿದ್ದಾರೆ. ಹರೀಶ್ ಪಿಂಪಲ್ ಅವರು ಬಿಜೆಪಿಯಿಂದ ಅಕೋಲಾದ ಮೂರ್ತಿಜಾಪುರ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದಾರೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಹಾರಾಷ್ಟ್ರದಲ್ಲಿ ಬುಲ್ಡೋಜರ್‌ ಮೇಲೆ ನಿಂತು ಅಭ್ಯರ್ಥಿ ಪರ ಚುನಾವಣಾ ಪ್ರಚಾರ ಮಾಡಿದ್ದಾರೆ ಎಂಬುದು ಸುಳ್ಳು. ಅಲ್ಲದೆ, ಜೆಸಿಬಿಯಲ್ಲಿದ್ದ ಇಬ್ಬರಲ್ಲಿ ಒಬ್ಬರು ಬಿಜೆಪಿ ಶಾಸಕ, ಮೂರ್ತಿಜಾಪುರದ ಅಭ್ಯರ್ಥಿ ಹರೀಶ್ ಪಿಂಪಲ್ ಮತ್ತು ಅವರೊಂದಿಗೆ ಇರುವ ಇನ್ನೊಬ್ಬ ವ್ಯಕ್ತಿ ಯೋಗಿ ಆದಿತ್ಯನಾಥ್ ಅಲ್ಲ, ಆದರೆ ಅವರನ್ನು ಹೋಲುಂತೆ ಮಾಡಿದ್ದ  ಬಿಜೆಪಿ ಕಾರ್ಯಕರ್ತ ಸಂತೋಷ್ ಧುಲೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಚುನಾವಣೆಯಲ್ಲಿ ಗೆದ್ದ ನಂತರ ಟ್ರಂಪ್ ನಾನು ಹಿಂದೂಗಳ ದೊಡ್ಡ ಅಭಿಮಾನಿ ಎಂದು ಹೇಳಿದ್ರಾ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights