ಗ್ರಾಮ ಪಂಚಾಯತಿ ಚುನಾವಣಗೆ ಬಿಜೆಪಿ ತಂತ್ರ: ಸಫಲವಾಗುತ್ತಾ 6:6 ಸ್ಟ್ಯಾಟಜಿ

ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಸಂಪುಟ ವಿಸ್ತರಣೆಯ ಸರ್ಕಸ್ಸು ಇನ್ನು ನಡೆದೇ ಇದೆ. ಸಿಎಂ ಬಿಎಸ್‌ವೈ ಸಂಪುಟ ಸರ್ಕಸ್‌ನಲ್ಲಿ ಬಿಸಿಯಾಗಿರುವ ನಡುವೆಯೂ, ಬಿಜೆಪಿ ಗ್ರಾಮ ಪಂಚಾಯತಿ ಚುನಾವಣೆಗೆ ಸದ್ದಿದ್ದಲ್ಲೆ ಕಸರತ್ತು ಆರಂಭಿಸಿದೆ. ಇದಕ್ಕಾಗಿ ಕರ್ನಾಟಕವನ್ನು ಆರು ವಲಯಗಳನ್ನಾಗಿ ಮಾಡಿಕೊಂಡು ಆರು ಬಿಜೆಪಿ ನಾಯಕರಿಗೆ ಉಸ್ತುವಾರಿ ನೀಡಿದೆ.

ಚುನಾವಣಾ ಆಯೋಗ ಇನ್ನೂ ಗ್ರಾಮ ಪಂಚಾಯತಿಗೆ ಚುನಾವಣಾ ದಿನಾಂಕವನ್ನು ಘೋಷಿಸಿಲ್ಲ. ಹೈಕೋರ್ಟ್‌ ಕೂಡ ದಿನಾಂಕವನ್ನು ನಿಗದಿ ಪಡಿಸುವಂತೆ ಆಯೋಗಕ್ಕೆ ಸೂಚಿಸಿದೆ. ಡಿಸೆಂಬರ್‌ನಲ್ಲಿ ಚುನಾವಣಾ ದಿನಾಂಕ ಪ್ರಕಟವಾಗುವ ಸಾಧ್ಯತೆ ಇದ್ದು, ಇನ್ನೆರಡು ತಿಂಗಳೊಳಗೆ ಚುನಾವಣೆ ನಡೆಯಲಿದೆ.

ಚುನಾವಣಾ ದಿನಾಂಕ ಪ್ರಕಟವಾಗುವುದಕ್ಕೂ ಮುನ್ನವೇ ಅಖಾಡಕ್ಕೆ ಇಳಿದಿರುವ ಬಿಜೆಪಿ, ಗ್ರಾಮ ಪಂಚಾಯತಿಗಳಲ್ಲಿ ತನ್ನ ಪ್ರಾಬಲ್ಯ ಹೆಚ್ಚಿಕೊಳ್ಳಲು ಮುಂದಾಗಿದೆ. ಇದಕ್ಕಾಗಿ ರಾಜ್ಯದ್ಯಂತ ಸಮಾವೇಶಗಳನ್ನು ಮಾಡಲು ಯೋಜಿಸಿದೆ. ಹೊಸ ಹೊಸ ಕಾರ್ಯತಂತ್ರದ ಜೊತೆಗೆ ಮೊದಲ ಹಂತದ ಸಮಾವೇಶಗಳನ್ನು ನಡೆಸಿ, ಜನರನ್ನು ಸೆಳೆಯಲು ಮುಂದಾಗಿದೆ. ಇದಕ್ಕಾಗಿ ವಿಶೇಷ ತಂಡಗಳನ್ನು ರಚಿಸಿದೆ.

ರಾಜ್ಯವನ್ನು ಆರು ವಲಯಗಳಾಗಿ ವಿಂಗಡಿಸಿಕೊಂಡಿದ್ದು, ಒಂದೊಂದು ವಲಯಕ್ಕೂ ಒಬ್ಬೊಬ್ಬರು ಉಸ್ತುವಾರಿಗಳನ್ನು ನೇಮಿಸಿದೆ. ಉಸ್ತುವಾರಿಯನ್ನು ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಠೀಲ್‌ ಮತ್ತು ರಾಜ್ಯ ಸಚಿವ ಸಂಪುಟದಲ್ಲಿರುವ ಐವರು ಸಚಿವರಾದ ಕೆಎಸ್‌ ಈಶ್ವರಪ್ಪ, ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಜಗದೀಶ್ ಶೆಟ್ಟರ್ ಮತ್ತು ಆರ್‌ ಅಶೋಕ್‌ ನಿರ್ವಹಿಸಲದ್ದಾರೆ.

ಗ್ರಾಮ ಸ್ವರಾಜ್‌ ಸಮಾವೇಶಗಳನ್ನು ನಡೆಸಲು ಮುಂದಾಗಿರುವ ಬಿಜೆಪಿ, ಪ್ರತಿ ಜಿಲ್ಲೆಯಲ್ಲಿ ಎರಡು ಸಮಾವೇಶಗಳನ್ನು ನಡೆದಲು ಮುಂದಾಗಿದೆ.ಈಗಾಗಲೇ ಉಡುಪಿ, ದಕ್ಷಿಣ ಕನ್ನಡ, ಚಿಕ್ಕಬಳ್ಳಾಪುರದಲ್ಲಿ ದಲ್ಲಿ ಗ್ರಾಮ ಸ್ವರಾಜ್ ಸಮಾವೇಶ ನಡೆಸಲಾಗಿದೆ. ಇಂದು ಕೋಲಾರ, ನಾಳೆ ರಾಮನಗರ, ಡಿ. 2 ರಂದು ಬೆಂಗಳೂರು ಗ್ರಾಮಾಂತರ ಹಾಗೂ 7 ರಂದು ಬೆಂಗಳೂರು ನಗರ ಜಿಲ್ಲೆಯಲ್ಲಿ ಸಮಾವೇಶ ನಡೆಯಲಿವೆ.

ಅಲ್ಲದೆ, ಸ್ಥಳೀಯ ಮಟ್ಟದ ಉಸ್ತುವಾರಿಗಾಗಿ ಪೇಜ್‌ ಪ್ರಮುಖ್‌ರನ್ನು ನೇಮಿಸಿದ್ದು, ಅವರ ಜೊತೆಗೆ ಪಂಚರತ್ನ ಸಮಿತಿ ಮತ್ತು ಪಂಚಸೂತ್ರ ಯೋಜನೆಗಳನ್ನೂ ಜಾರಿಗೆ ತರಲು ಮುಂದಾಗಿದೆ. ಪಂಚರತ್ನ ಸಮಿತಿಗಳು ವಾರ್‌ ರೂಂಗಳಂತೆ ಕಾರ್ಯನಿರ್ವಹಿಸಲಿದ್ದು, ಪ್ರತಿ ಕುಟುಂಬವನ್ನು ಭೇಟಿ ಮಾಡಲಿವೆ.

ಈ ಬಾರಿಯ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಶೇ. 80 ರಷ್ಟು ಬಿಜೆಪಿ ಬೆಂಬಲಿತರನ್ನು ಅಧಿಕಾರಕ್ಕೆ ತರಬೇಕು ಎಂದು ತಂತ್ರ ರೂಪಿಸಿರುವ ಬಿಜೆಪಿ, ಚುನಾವಣೆಯನ್ನು  ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ಬಿಜೆಪಿಯ ಈ ತಂತ್ರ ಎಷ್ಟರ ಮಟ್ಟಿಗೆ ಸಫಲವಾಗಲಿದೆ ಎನ್ನುವುದು ಚುನಾವಣೆಯ ನಂತರ ತಿಳಿಯಲಿದೆ.


ಇದನ್ನೂ ಓದಿ: ದೆಹಲಿ ಬಂದ್‌ಗೆ ರೈತರ ನಿರ್ಧಾರ; ರಾತ್ರೋರಾತ್ರಿ ಬಿಜೆಪಿ ಸಭೆ ನಡೆಸಿದ ಅಮಿತ್‌ ಶಾ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights