ಫ್ಯಾಕ್ಟ್‌ಚೆಕ್: ಮಲ್ಲೇಶ್ವರಂನಲ್ಲಿ ವಿದ್ಯಾರ್ಥಿ ಭವನ! ವಾಸ್ತವವೇನು?

ಬೆಂಗಳೂರಿನ ಅತ್ಯಂತ ಹಳೆಯ & ರುಚಿಕರವಾದ ದೋಸೆಗಳಿಂದ ಪ್ರಸಿದ್ದವಾಗಿರೋ ಗಾಂಧಿಬಜಾರ್‌ನ ಜನಪ್ರಿಯ ಹೋಟೆಲ್ ವಿದ್ಯಾರ್ಥಿ ಭವನ ಹೋಟೆಲ್ ಈಗ ಮಲ್ಲೇಶ್ವರಂನಲ್ಲಿ ತನ್ನ ಶಾಖೆ ತೆರೆಯಲಿದೆ ಎಂದು ಹಲವಾರು ಮುಖ್ಯವಾಹಿನಿ  ವೆಬ್‌ಸೈಟ್‌ಗಳು ಸುದ್ದಿ ಮಾಡಿವೆ.  ವಿದ್ಯಾರ್ಥಿ ಭವನ ಎಂಬ ಟ್ವಿಟ್ಟರ್ ಹ್ಯಾಂಡಲ್ ಇತ್ತೀಚೆಗೆ ಒಂದು ಪೋಸ್ಟರ್ ಹಂಚಿಕೊಂಡಿದ್ದೆ ಅದಕ್ಕೆ ಆಧಾರ!. ಟ್ವಿಟರ್‌ ಪೋಸ್ಟ್‌ನಲ್ಲಿ ಹೆಚ್ಚೇನು ಹೇಳದೆ ವಿದ್ಯಾರ್ಥಿ ಭವನ ಮಲ್ಲೇಶ್ವರಂನಲ್ಲಿ ಎಂದಷ್ಟೆ ಹೇಳಿ ಪೋಸ್ಟ್‌ ಮಾಡಿತ್ತು. ಈ ಪೋಸ್ಟ್‌ರ್ ಕಾರಣಕ್ಕೆ ವಿದ್ಯಾರ್ಥಿ ಭವನ ಶಾಖೆ ಮಲ್ಲೇಶ್ವರಂನಲ್ಲಿ ಪ್ರಾರಂಭವಾಗಲಿದೆ ಎಂದು ಎಲ್ಲರೂ ನಂಬಿದ್ದರು. ಆದರೆ…..

https://twitter.com/VidyarthiBhavan/status/1514974165228744706

ನ್ಯೂಸ್‌18 ಇತ್ಯಾದಿ ಡಿಜಿಟಲ್ ಸುದ್ದಿ ಮಾಧ್ಯಮಗಳು ಆ ಪೋಸ್ಟರ್ ಅನ್ನೇ ನಂಬಿ ವಿದ್ಯಾರ್ಥಿ ಭವನ ಮಲ್ಲೇಶ್ವರಂನಲ್ಲಿ ಹೊಸ ಘಟಕವನ್ನು ತೆರೆದೇಬಿಡುತ್ತದೆ ಎಂದು ಬರೆದುಬಿಟ್ಟರು. ಗಾಂಧಿ ಬಜಾರ್‌ನಲ್ಲಿರುವ ವಿದ್ಯಾರ್ಥಿ ಭವನ ಹೋಟೆಲ್‌ನ ಮಾಲೀಕರಾದ ಅರುಣ್ ಅಡಿಗ ಅವರನ್ನಾದರೂ ಸಂಪರ್ಕಿಸಿ ಮಾಹಿತಿ ಪಡೆಯಬಹುದಿತ್ತು ಹಾಗೆ ಮಾಡದೆ, ಸುದ್ದಿ ಪೋರ್ಟಲ್‌ಗಳು  ಒಂದು ಹೆಜ್ಜೆ ಮುಂದೆ ಹೋಗಿ “ಬೆಂಗಳೂರಲ್ಲಿ ಬೆಸ್ಟ್ ಮಸಾಲೆ ದೋಸೆ ಸಿಗೋದು ವಿದ್ಯಾರ್ಥಿ ಭವನದಲ್ಲಿ ಅಂತಾನೆ ಹೇಳ್ಬೋದು. ಯಾಕಂದ್ರೆ ಅಷ್ಟು ಫೇಮಸ್ ಆಗಿದೆ ಇಲ್ಲಿ ಸಿಗೋ ದೋಸೆ. ರುಚಿಯಾದ ಮಸಾಲೆ ದೋಸೆ ತಿನ್ನೋಕೆ ಒಮ್ಮೆ ಇಲ್ಲಿಗೆ ಭೇಟಿ ಕೊಡಲೇಬೇಕು. ಬಸವನಗುಡಿಯ ಡಿವಿಜಿ ರಸ್ತೆಯಲ್ಲಿರೋ ವಿದ್ಯಾರ್ಥಿ ಭವನ ಎಲ್ಲರಿಗೂ ಗೊತ್ತೇ ಇದೆ. ಇದೀಗ ಮಲ್ಲೇಶ್ವರಂನಲ್ಲೂ ಮತ್ತೊಂದು ಶಾಖೆ ತೆರೆಯಲಾಗಿದೆ“. ಎಂದು ಸುದ್ದಿ ಪ್ರಕಟಿಸಿವೆ.

ಏನಿದು ಮಲ್ಲೇಶ್ವರಂ ನಲ್ಲಿ “ವಿದ್ಯಾರ್ಥಿ ಭವನ” ?

ವಿದ್ಯಾರ್ಥಿ ಭವನ ಮಲ್ಲೇಶ್ವರಂನಲ್ಲಿ ಅತೀ ಶೀಘ್ರದಲ್ಲಿ ಎನ್ನುವ ಶೀರ್ಷಿಕೆ ಹೋಟೆಲಿನ ಹೆಸರಲ್ಲ, ಬದಲಿಗೆ ಅದೊಂದು ನಾಟಕದ ಹೆಸರು!. ಹೌದು ವಿದ್ಯಾರ್ಥಿ ಭವನ ಎಂಬ ನಾಟಕದ ಪ್ರದರ್ಶನವನ್ನು ಮೇ  6,7 ಮತ್ತು 8 ರಂದು ಮಲ್ಲೇಶ್ವರಂನ ಚೌಡಯ್ಯ ಸ್ಮಾರಕ ಭವನದಲ್ಲಿ  ಏರ್ಪಡಿಸಲಾಗಿದೆ. ಖ್ಯಾತ ನಾಟಕ ರಚನೆಕಾರರಾದ ರಾಜೇಂದ್ರ ಕಾರಂತ್ ಈ ನಾಟಕ ರಚನೆ ಮಾಡಿದ್ದು, ಬೆಂಗಳೂರು ಥಿಯೇಟರ್  ಫೌಂಡೇಶನ್ ತಂಡದ ಕಲಾವಿದರು ನಾಟಕದಲ್ಲಿ ಅಭಿನಯಿಸಲಿದ್ದಾರೆ.

ಇನ್ನು ಈ ಬಗ್ಗೆ ಮಾತನಾಡಿರುವ ಅರುಣ್ ಅಡಿಗ, ಜನರನ್ನು ಮಿಸ್ ಲೀಡ್ ಮಾಡುವ ಉದ್ದೇಶ ನಮ್ಮದಾಗಿರಲಿಲ್ಲ, ನಾವು ಮಲ್ಲೇಶ್ವರಕ್ಕೆ ಬರಲಿದ್ದೇವೆ ವಿದ್ಯಾರ್ಥಿ ಭವನ ಅಂತ ಹೇಳಿದ್ದೆವು, ಅದರಂತೆ ಮೇ 6ಕ್ಕೆ ನಾವು ಬರ್ತಿದ್ದೇವೆ. ವಿದ್ಯಾರ್ಥಿ ಭವನ ಎಂಬ ಹೋಟೆಲ್ ಬದಲಾಗಿ ನಾಟಕದ ಮೂಲಕ ಜನರ ಮನ ಸೇರ್ತೀದ್ದೇವೆ ಎಂದು ತಿಳಿಸಿದ್ದಾರೆ.

ಅನುಭವಗಳಿಗೆ ಸಾಕ್ಷಿಯಾಗಿ ಜನಪ್ರೀತಿಗಳಿಸಿರುವ ‘ವಿದ್ಯಾರ್ಥಿಭವನ’ದ ರುಚಿಕರ ದೋಸೆ ಜೀವತಳೆದ ಕಥೆಯೊಂದು ನಾಟಕವಾಗಿ ಜನರ ಮುಂದೆ ಬರಲಿದೆ. ಖ್ಯಾತ ನಾಟಕ ರಚನೆಕಾರ ರಾಜೇಂದ್ರ ಕಾರಂತರು ರಚಿಸಿರುವ ‘ವಿದ್ಯಾರ್ಥಿ ಭವನ’ ನಾಟಕವನ್ನು ಅರ್ಜುನ ಕಬ್ಬಿಣ ಅವರ ನಿರ್ದೇಶನದಲ್ಲಿ ಮೂಡಿಬರಲಿದೆ. ಎಂದು ಮತ್ತೊಂದು ಪೋಸ್ಟ್‌ರ್ ಅನ್ನು ವಿದ್ಯಾರ್ಥಿ ಭವನ ಟ್ವೀಟ್ ಮಾಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ ‘ವಿದ್ಯಾರ್ಥಿ ಭವನ’ ಮಲ್ಲೇಶ್ವರಂನಲ್ಲಿ ಅತೀ ಶೀಘ್ರದಲ್ಲಿ ಎಂದು ಪೋಸ್ಟ್‌ರ್‌ನಲ್ಲಿ ಹೇಳಿರುವುದು, ಹೋಟೆಲಿನ ಮತ್ತೊಂದು ಘಟಕದ ಬಗ್ಗೆ ಅಲ್ಲ. ಅದು ವಿದ್ಯಾರ್ಥಿ ಭವನ ಎನ್ನು ನಾಟಕವನ್ನು ಪ್ರದರ್ಶನ ಮಾಡುವ ಕುರಿತಾದ ಪೋಸ್ಟರ್ ಆಗಿದೆ. ಹಾಗಾಗಿ ಇದು ಹೋಟೆಲ್‌ನ ಹೆಸರಿನಲ್ಲಿರುವ ನಾಟಕ ಅಷ್ಟೇ. ಆದರೆ ಪೋಸ್ಟರ್ ನೋಡಿಯೇ ಮುಖ್ಯವಾಹಿನಿ ಮಾಧ್ಯಮಗಳು ತಾವು ದಿಕ್ಕು ತಪ್ಪಿ, ಜನರನ್ನು ದಿಕ್ಕು ತಪ್ಪಿಸಿವೆ.


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಪುನೀತ್ ಕೆರೆಹಳ್ಳಿ ವೇಶ್ಯಾವಾಟಿಕೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದು ನಿಜವೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights