ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಖಂಡಿಸಿ ಕರ್ನಾಟಕ ಬಂದ್ : ಕಾವೇರಿದ ಪ್ರತಿಭಟನೆ…!
ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಖಂಡಿಸಿ ಇಂದು ಕರ್ನಾಟಕ ಬಂದ್ ಮಾಡಲಾಗಿದೆ. ಕನ್ನಡ ಪರ ಹೋರಾಟಗಾರರು ರಸ್ತೆಗಿಳಿದು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ. ಕರ್ನಾಟಕದಲ್ಲಿ ಕನ್ನಡಿಗರ ಅಭಿವೃದ್ಧಿ ಬಗ್ಗೆ ಚಿಂತಿಸುವ ಬದಲಿಗೆ ಮರಾಠ ಅಭಿವೃದ್ಧಿ ಬಗ್ಗೆ ಸರ್ಕಾರ ಯೋಚಿಸುತ್ತಿದೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಅನೇಕ ಕನ್ನಡ ಪರ ಸಂಘ-ಸಂಘಟನೆಗಳು ತಕ್ಷಣ ಈ ವಿಚಾರ ಕೈಬಿಡಬೇಕೆಂದು ಆಗ್ರಹಿಸಿತ್ತಿದ್ದಾರೆ.
ಕರ್ನಾಟದ ಗಡಿ ಭಾಗದಲ್ಲಿ ಎಂಇಎಶ್ ಪುಂಡರು ಕನ್ನಡಿಗರನ್ನು ಪದೇ ಪದೇ ಕೆಣಕುತ್ತಿರುವ ಬೆನ್ನಿನಲ್ಲೇ ಸರ್ಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿರುವುದು ಕನ್ನಡಪರ ಸಂಘಟನೆಗಳ ಸಿಟ್ಟು ನೆತ್ತಿಗೇರುವಂತೆ ಮಾಡಿದೆ. ಹಲವೆಡೆ ಬಿಎಂಟಿಸಿ ಬಸ್’ಗಳ ಮೇಲೆ ಕಲ್ಲು ತೂರಾಟ ನಡೆದಿರುವುದು ವರದಿಯಾಗಿದೆ.
ಆದರೆ ಸರ್ಕಾರ ಬಂದ್ಗೆ ಯಾವುದೇ ಅವಕಾಶ ನೀಡುವುದಿಲ್ಲ. ಆದೇಶ ಮೀರಿ ಪ್ರತಿಭಟಿಸಿದರೆ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ಕೊಟ್ಟಿದೆ. ಆದರೆ ಸರ್ಕಾರದ ಎಚ್ಚರಿಕೆಗೂ ಮಣಿಯದ ಕನ್ನಡಪರ ಹೋರಾಟಗಾರರು ಇಂದು ಬಂದ್ ಮಾಡಿಯೇ ತೀರುತ್ತೇವೆ ಎಂದು ಪಣ ತೊಟ್ಟಿದ್ದಾರೆ. ಸರ್ಕಾರ ತನ್ನ ನಿರ್ಧಾರದಿಂದ ಹಿಂದಕ್ಕೆ ಸರಿಯಲೇಬೇಕು, ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಯನ್ನು ಕೈಬಿಡಬೇಕೆಂದು ಆಗ್ರಹಿಸಿ ಅನೇಕ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್’ಗೆ ಕರೆ ನೀಡಿವೆ. ಅಲ್ಲದೆ, ವಿವಿಧೆಡೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿವೆ.
ಬೆಂಗಳೂರಿನ ಟೌನ್’ಹಾಲ್ ಮುಂದೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಇದಲ್ಲದೆ ಹೊಸೂರು ರಸ್ತೆಯ ಹಳೇ ಚಂದಾಪುರ ಬಳಿ ಬಿಎಂಟಿಸಿ ಬಸ್ ಮೇಲೂ ಕಲ್ಲೂ ತೂರಾಟ ನಡೆದಿರುವುದಾಗಿ ವರದಿಗಳು ತಿಳಿಸಿವೆ. ಇನ್ನು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕರ್ನಾಟಕ ಬಂದ್’ಗೆ ನೀರಸ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಮಂಗಳೂರಿನಲ್ಲಿ ಬಂದ್’ಗೆ ಯಾವುದೇ ರೀತಿಯ ಬಿಸಿ ತಟ್ಟಿಲ್ಲ. ತಮಿಳುನಾಡು ಗಡಿ ಆನೇಕಲ್ ನಲ್ಲಿ ಕರ್ನಾಟಕ ಬಂದ್’ಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು, ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ಪ್ರಾರಂಭಿಸಿವೆ.