ಹಳ್ಳಿ ಮಾತು-2: ಕೃಷಿ ಬಿಕ್ಕಟ್ಟು ಮತ್ತು ಯುವ ಕೃಷಿಕರ ವಧು ಅನ್ವೇಷಣೆ; ಗ್ರಾಮೀಣ ಭಾರತದ ಆರ್ತನಾದ!

ಮದುವೆಗಳು ಸ್ವರ್ಗದಲ್ಲಿ ನಿಶ್ಚಯಿಸಲ್ಪಡುತ್ತವೆ ಎಂಬುದು ಒಂದು ಪೌರಾಣಿಕ ನಂಬಿಕೆ. ಆದರೆ ಕೃಷಿಕ ಯುವಕರ ವಿಷಯದಲ್ಲಿ ಇದೊಂದು ಅಪವಾದವಾಗಿದೆ. ಯಾವುದೇ ಹಳ್ಳಿಗೆ ಹೋದರೂ, ‘ವಿವಾಹಕ್ಕೆ ವಧು ಬೇಕಾಗಿದೆ’ ಎಂಬುದು ಒಂದು ಸಾಮಾನ್ಯ ಕೂಗು. ಏಕೆ, ಹೆಣ್ಣು ಸಿಗುತ್ತಿಲ್ಲವೇ ಎಂಬುದು ಬಹಳಷ್ಟು ಜನರಿಂದ ದುತ್ತನೇ ಎದುರಾಗುವ ಪ್ರಶ್ನೆ. ಹೆಣ್ಣುಗಳು ಇವೆ; ಸಾಕಷ್ಟು ಇವೆ; ಕೃಷಿ ಕಾಯಕದ ಯುವಕರಿಗೆ ಮಾತ್ರ ನೀಡುತ್ತಿಲ್ಲ.

ಕೃಷಿಕರು ಗಂಡಸರಲ್ಲವೆ, ಅವರಿಗೆ ಯಾಕೆ ಹೆಣ್ಣು ಕೊಡುತ್ತಿಲ್ಲ ಎಂಬುದು ಗ್ರಾಮೀಣ ಭಾರತದ ಹಲವು ರೋಧನಗಳಂತೆ ಯಾವಾಗಲೂ  ಮಾರ್ಧನಿಸುತ್ತಿರುವ ಮತ್ತೊಂದು ಆರ್ತನಾದವಾಗಿದೆ. “ಮದುವೆ ಆಗುವ ತನಕ ಬೇರೆ ಏನಾದರೂ ವ್ಯವಹಾರ ಇಟ್ಟಿಕೋ;  ವ್ಯವಸಾಯ ಎಂದರೆ ಎಲ್ಲರೂ ಮೂಗು ಮುರಿಯುತ್ತಾರೆ ಎಂದು ಮದುವೆ ದಲ್ಲಾಳಿಗಳು ನೀಡುವ ಒಂದು ಸಾಮಾನ್ಯವಾದ ಸಲಹೆ. ಈ ಸಲಹೆಯನ್ನು ಹಲವು ಯುವಕರು ಪಾಲಿಸುವಾಗ ಸಿಕ್ಕಿಬಿದ್ದು ನಗೆಪಾಟಲಿಗೀಡಾಗುತ್ತಿದ್ದಾರೆ” ಎನ್ನುತ್ತಾರೆ ತಿಪ್ಪೂರು ಕೃಷ್ಣಪ್ಪ. “ಈಗಂತೂ ಎಲ್ಲರೂ ರಿಯಲ್ ಎಸ್ಟೇಟ್, ಫೈನಾನ್ಸ್ ಎಂದು ಹೇಳುತ್ತಾರೆ; ಇವೆರಡೂ ಅತಿ ಸಾಮಾನ್ಯ ವೃತ್ತಿಯಾಗಿಬಿಟ್ಟಿವೆ” ಎನ್ನುತ್ತಾರೆ ಕ್ಯಾತಘಟ್ಟ ಗ್ರಾಮದ ರವಿಕುಮಾರ್.  “ಹೆಣ್ಣು ನೋಡಲು ಹೋದವರು, ಕೃಷಿ ಜೊತೆ ಮತ್ಯಾವುದಾದರೂ ಒಂದು ಖಾತರಿ ಆದಾಯದ ವೃತ್ತಿ ಹೇಳಲೇಬೇಕು; ಇಲ್ಲ ಅಂದರೆ ಮದುವೆಯಾಗುವುದಿರಲಿ, ಹೆಣ್ಣು ನೋಡುವುದಕ್ಕೂ ಆಗುವುದಿಲ್ಲ” ಎಂದು ನಗರಕೆರೆ ಗ್ರಾಮದ ಜಗದೀಶ್ ಇವತ್ತಿನ ಪರಿಸ್ಥಿತಿ ಬಿಚ್ಚಿಟ್ಟರು.

ಕೃಷಿ ಕಾಯಕವೆಂದರೆ ಯಾರ ಹಂಗಿಗೂ ಒಳಗಾಗದೇ ಸ್ವಾವಲಂಬನೆಯಿಂದ, ಸ್ವಾಭಿಮಾನದಿಂದ ಎದೆಯುಬ್ಬಿಸಿ ನಡೆಯುತ್ತಿದ್ದ ಕಾಲವೂ ಇತ್ತು. ತಾನೂ ಬೆಳೆದು, ಬಂಧು-ಬಳಗ ನೆಂಟರಿಷ್ಟರ ನಡುವೆ ಬೆಳೆ ಹಂಚಿಕೊಳ್ಳುವ ಒಡನಾಟವೂ ಸಮೃದ್ಧವಾಗಿತ್ತು. ಗ್ರಾಮ ಸಮುದಾಯದ ಕೇಂದ್ರ ಬಿಂದುವಾಗಿ ಕೃಷಿಕ ಕಂಗೊಳಿಸುತ್ತಿದ್ದ. ಮನೆ ಬಾಗಿಲಿಗೆ ಬಂದ ಸರ್ಕಾರಿ ಕೆಲಸದ ನೇಮಕಾತಿ ಪತ್ರವನ್ನು ಕಸದ ಬುಟ್ಟಿಗೆ ಎಸೆದ ನೂರೆಂಟು ಉದಾಹರಣೆಗಳು ಪ್ರತಿ ಗ್ರಾಮದಲ್ಲೂ ಇವೆ.  “ಮೂವತ್ತು ವರ್ಷದ ಹಿಂದೆ ಹೀಗಿರಲಿಲ್ಲ. ಮೆದೆಯ ಉದ್ದ, ತಿಪ್ಪೆಯ ಎತ್ತರವನ್ನು ಲೆಕ್ಕ ಹಾಕಿ ಕೃಷಿ ಕುಟುಂಬದ ಸಮೃದ್ಧತೆಯನ್ನು ಅಳೆಯಲಾಗುತ್ತಿತ್ತು” ಎನ್ನುತ್ತಾರೆ ಚನ್ನಸಂದ್ರ ಗ್ರಾಮದ ಈರೇಗೌಡ.

ನಿರಂತರವಾಗಿ ಗ್ರಾಮಗಳನ್ನು ಕಡೆಗಣಿಸಿ ನಗರ ಕೇಂದ್ರಿತವಾಗಿ ರೂಪಿಸಿದ ಧೋರಣೆಗಳು ಇಡೀ ಗ್ರಾಮ ನಕಾಶೆಯನ್ನೇ ಬದಲಿಸಿವೆ. ಹೆಣ್ಣು ಕೊಡಲು ಬಳಸುತ್ತಿದ್ದ ಈರೇಗೌಡರು ಹೇಳಿದ ಈ ಆಳತೆಗೋಲು, ಕೃಷಿ ಕುಟುಂಬವೊಂದು ಸಿಲುಕಿರಬಹುದಾದ ಸಾಲದ ಸುಳಿಯ ಆಳವನ್ನು ತೋರಿಸುತ್ತಿದೆ.  ಒಂದು ಕಡೆ ಸತತವಾಗಿ ಏರುತ್ತಿರುವ ಕೃಷಿ ಲಾಗುವಾಡು ಹಾಗೂ ಬಂಡವಾಳದ ವೆಚ್ಚ ,ಇನ್ನೊಂದು ಕಡೆ ಅಸ್ಥಿರ ಮಾರುಕಟ್ಟೆ, ಖಾತರಿ ಇಲ್ಲದ ಬೆಲೆ, ಅತಿವೃಷ್ಟಿ – ಅನಾವೃಷ್ಟಿಯ ಅಘಾತಗಳಿಂದ ತತ್ತರಿಸಿ ನರಳುತ್ತಿರುವ ಕೃಷಿ ಉತ್ಪನ್ನಗಳ ಆದಾಯ; ಇಡೀ ಕೃಷಿಕ ಸಮುದಾಯವನ್ನೇ ಹೈರಾಣುಗೊಳಿಸಿದೆ. ಇವೆಲ್ಲದರ ಒಟ್ಟು ಪರಿಣಾಮ ಕಿಸಾ ಗೋತಮಿ ಕಂಡುಕೊಂಡ ಸಾವಿಲ್ಲದ ಮನೆ ಹೇಗೆ ಇಲ್ಲವೋ ಹಾಗೆ ಸಾಲವಿಲ್ಲದ ಕೃಷಿಕ ಕುಟುಂಬವೂ ಇಲ್ಲ. ಎಂದೂ ಮುಗಿಯದ ಯುದ್ಧದಂತೆ ಈ ಸಾಲದ ವಿರುದ್ಧದ ಹೋರಾಟ. ಗಾಳಿ-ನೀರು ಹೆಚ್ಚು ಒತ್ತಡ ಪ್ರದೇಶದಿಂದ ಕಡಿಮೆ ಒತ್ತಡ ಪ್ರದೇಶಕ್ಕೆ ಹರಿದು ಹೋಗುವಂತೆ ಸಾಲ-ಸಂಕಟದ ಕುಟುಂಬದಿಂದ ನಿಶ್ಚಿತ ಆದಾಯ ಖಾತರಿ ಜೀವನದ ಕಡೆ ಮದುವೆ ಸಂಬಂದದ ಮೂಲಕ ಹೆಣ್ಣು ಮಕ್ಕಳು ಚಲಿಸುತ್ತಿದ್ದಾರೆ. ಪುರುಷ ಪ್ರಧಾನ ಕೌಟುಂಬಿಕ ಸಾಮಾಜಿಕ ಚೌಕಟ್ಟು ಕೂಡ ಗ್ರಾಮೀಣ ಭಾರತದ ಈ ಅರ್ತನಾದವನ್ನು ಪ್ರೋತ್ಸಾಹಿಸುತ್ತಿದೆ. ಹೆಣ್ಣು ಭ್ರೂಣ ಹತ್ಯೆ ಸುಲಭವಾಗುವಂತೆ ಬೆಳೆದಿರುವ ತಂತ್ರಜ್ಞಾನ, ಗ್ರಾಮೀಣ ಭೂಮಿ ಮತ್ತಿತರೆ ಆಸ್ತಿ ಸಂಬಂಧಗಳು ಈ  ಸಾಮಾಜಿಕ ಆರ್ಥಿಕ ಸಮಸ್ಯೆ ಬಿಕ್ಕಟ್ಟಿನ ರೂಪ ಪಡೆಯಲು ತನ್ನದೇ ಆದ ಕೊಡುಗೆಗಳನ್ನು ನೀಡಿದೆ.

ವೈರುಧ್ಯ ನೋಡಿ; ಈ ಚಲನೆಯನ್ನು ಪ್ರಾಯೋಜಿಸುತ್ತಿರುವುದು ಕೂಡ ಜಾಗತೀಕರಣ ವಿದ್ಯಮಾನಗಳೇ; ಕೃಷಿ ಭೂಮಿ ಬೆಲೆಯಲ್ಲಾದ ಚಮತ್ಕಾರಿ ಹೆಚ್ಚಳ ಬಡ ಕುಟುಂಬವನ್ನೂ ಸಹ ಪಟ್ಟಣಗಳ ಕಲ್ಯಾಣ ಮಂಟಪಗಳಲ್ಲಿ ಮದುವೆ ಮಾಡುವಂತೆ ಸಜ್ಜುಗೊಳಿಸಿದೆ. 1995-96 ರಲ್ಲಿ ಒಂದು ಎಕರೆ ಭೂಮಿಗೆ ಇದ್ದ ಮಾರುಕಟ್ಟೆ ಮೌಲ್ಯ ದ ರೇಂಜ್ ಒಂದು ಲಕ್ಷ ರೂ ನಿಂದ ಐದು ಲಕ್ಷ ರೂ. ಅದೇ ಈಗ ಅಂದರೆ 2019-2020 ರಲ್ಲಿ 12 ಲಕ್ಷ ದಿಂದ – 80 ಲಕ್ಷ ರೂಪಾಯಿ. ವ್ಯತ್ಯಾಸ ಇಷ್ಟೇ ಮೊದಲು ಬೆಳೆ ಮಾರಿದರೆ ಮದುವೆ ಖರ್ಚಿಗೆ ಸಾಕಾಗುತ್ತಿತ್ತು. ಈಗ ಭೂಮಿ ಮಾರಿದರೂ ಕೊರತೆ ಅನುಭವಿಸಬೇಕಾಗಿದೆ.

“ಕೆಲಸದವರಿಗೆ ಹೆಣ್ಣು ಕೊಡುತ್ತೇವೆ ಎಂಬುದು ಸಮೂಹಸನ್ನಿ ರೂಪ ಪಡೆದಿದೆ. ಆಸ್ತಿ ಮಾರಿದರೂ ಸರಿಯೇ, ಉತ್ತಮ ವರೋಪಚಾರ, ಅದ್ದೂರಿ ಮದುವೆಗೆ ರೆಡಿ ಇದ್ದಾರೆ” ಎನ್ನುತ್ತಾರೆ ಕೊಪ್ಪ ಗ್ರಾಮದ ವಕೀಲ ದೇವರಾಜು. ಬೆಳೆ ನೈಜ ಆದಾಯದಲ್ಲಿ ಏನೂ ಗಿಟ್ಟದಿದ್ದರೂ ಭೂಮಿ ಬೆಲೆ ಮಾತ್ರ ನಾಗಲೋಟದ ಏರುಗತಿಯಲ್ಲಿದೆ. ಹಾಗಾಗಿ ಬೇಸಾಯ ಬೇಡ, ಭೂಮಿ ಬೇಕು ಎಂಬಂತಿರುವ ಸಂದಿಗ್ದ ಪರಿಸ್ಥಿತಿಯನ್ನು ಸರ್ಕಾರಗಳು ಪರಿಹರಿಸಿವೆ! ಭೂ ಸುಧಾರಣಾ ಕಾನೂನುಗಳಿಗೆ ತಿದ್ದುಪಡಿ ತಂದು ರೈತರಲ್ಲದವರು ಭೂಮಿ ಖರೀದಿಸಲು ಅನುವು ಮಾಡಿಕೊಟ್ಟಿವೆ. ಕೃಷಿ ಭೂಮಿ ಖರೀದಿಗೆ ಇದ್ದ ಕೃಷಿಯೇತರ ಆದಾಯದ ಮಿತಿಯನ್ನು 2 ಲಕ್ಷ ರೂ ಯಿಂದ 25 ಲಕ್ಷ ಕ್ಕೆ ಏರಿಸಿವೆ. ಕೃಷಿ ಆಧಾರಿತ ಕಾರ್ಖಾನೆಗಳನ್ನು ಸಹ ರೈತ ವ್ಯಾಖ್ಯಾನದ ವ್ಯಾಪ್ತಿಗೆ ಒಳಪಡಿಸಿವೆ.  “ಬೆಂಗಳೂರಿನವರು ಬಂದು ಖರೀದಿಸದೇ ಇದ್ದರೆ ಎಷ್ಟೋ ಹೆಣ್ಣು ಮಕ್ಕಳು ಜೀವನ ಪೂರ್ತಿ ಅವಿವಾಹಿತರಾಗಿಯೇ ಇರಬೇಕಿತ್ತು. ರೈತರು ನಾಲ್ಕು ಕಾಸು ನೋಡುತ್ತಿರುವುದೇ ಜಮೀನು ಮಾರಾಟದಿಂದ ” ಎನ್ನುತ್ತಾರೆ ಹೂತಗೆರೆ ಗ್ರಾಮದ ದಿಲೀಪ್ ಕುಮಾರ್.

ಇದ್ದವರು,ಇಲ್ಲದಿದ್ದವರು ಎಲ್ಲರೂ ಈಗ ದುಬಾರಿ ವೆಚ್ಚದ ಮದುವೆಗೆ ಹಾತೊರೆಯುತ್ತಿದ್ದಾರೆ. ಕಲ್ಯಾಣ ಮಂಟಪದಲ್ಲಿ ಮದುವೆ ಮಾಡುವುದು ಈಗ ಸಾಮಾಜಿಕ ಮನ್ನಣೆಯ ವಿಷಯವಾಗಿ ಬದಲಾಗಿದೆ. 15 ವರ್ಷದ ಹಿಂದೆ ಮದುವೆಯಾಗಿರುವ ನಗರಕೆರೆ ಗ್ರಾಮದ ಕೃಷಿಕ ಜಗದೀಶ್ “ಎರಡು ವರ್ಷ ನೋಡಿದರೂ ಹೆಣ್ಣು ಸೆಟ್ಟಾಗಿರಲಿಲ್ಲ; ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಸಿಕ್ಕಿದ ಮೂರೇ ದಿನಕ್ಕೆ ಹೆಣ್ಣು ನಿಗದಿಯಾಯಿತು” ಎಂದು ತನ್ನದೇ ಅನುಭವ ಹೇಳುವ ಇವರು ಮುಂದುವರೆದು “ಆಗಲೇ ಹೆಣ್ಣು ನೀಡಲು ಹಿಂದೇಟು ಹಾಕುವುದು ಡಾಳಾಗಿ ಕಾಣುತ್ತಿತ್ತು. ಈಗ ಅದು ಸರ್ವೆ ಸಾಮಾನ್ಯ ಸಂಗತಿ ಮಾತ್ರವೇ ಅಲ್ಲ ಪ್ರತಿಷ್ಠೆ ವಿಷಯ ಕೂಡ” ಎನ್ನುತ್ತಾರೆ.

27 ವರ್ಷ ವಯಸ್ಸಿನ ಶಂಕರಪುರ ಗ್ರಾಮದ ಯುವ ರೈತ, ವಾಣಿಜ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವಿನಾಶ್ ” ನನ್ನಂತೆ ನನ್ನ ತಂದೆ ಯುವಕರಾಗಿದ್ದಾಗಲೂ ಎರಡು ಎಕರೆಯಲ್ಲಿ ಕೃಷಿ ಮಾಡುತ್ತಿದ್ದರು. ಅದೇ ಎರಡು ಎಕರೆಯಲ್ಲಿ ನಾನೂ ಕೃಷಿ ಮಾಡುತ್ತಿದ್ದೇನೆ. ಎಷ್ಟೇ ಯೋಜಿಸಿದರೂ ಒಂದಲ್ಲಾ ಒಂದು ಅಂಶಗಳಿಂದ ಬೆಳೆ ಆದಾಯ ಕೈಗೆ ಸಿಗುವುದಿಲ್ಲ. ಸ್ಥಿರ ಆದಾಯ, ಜೀವನ ಭದ್ರತೆ ಎರಡೂ ಇಲ್ಲದ್ದರಿಂದಲೇ ಕೃಷಿಕರನ್ನು ಮದುವೆಯಾಗಲು ಹಿಂಜರಿಯುತ್ತಿದ್ದಾರೆ” ಎನ್ನುತ್ತಾರೆ. ಅವಿನಾಶ್ ರವರಂತೆ ಇನ್ನೂ ಮದುವೆ ಬಗ್ಗೆ ಚಿಂತಿಸದೇ 12 ಎಕರೆ ಭೂಮಿಯಲ್ಲಿ ಬೇಸಾಯ ಮಾಡುತ್ತಿರುವ ಅಜ್ಜಹಳ್ಳಿ ಗ್ರಾಮದ 31 ವರ್ಷ ವಯಸ್ಸಿನ ಸಿದ್ದರಾಜು “ಆರು ವಿಫಲ ಬೋರ್ ವೆಲ್ ಸೇರಿದಂತೆ ಒಟ್ಟು 12 ಬೋರ್ ವೆಲ್ ಕೊರೆಸಿದ ಕಾರಣದಿಂದಾಗಿ ಸುಮಾರು 12 ಲಕ್ಷ ರೂಪಾಯಿ ಸಾಲ ಆಗಿತ್ತು. ಈಗ ಇದನ್ನು ತೀರಿಸುತ್ತಾ ಕೇವಲ ಮೂರು ಲಕ್ಷ ರೂ ಉಳಿದಿದೆ. ಇನ್ನೆರಡು ವರ್ಷದಲ್ಲಿ ಸಾಲ ತೀರಿಸಿ ಹೆಣ್ಣು ನೋಡಲು ಆರಂಭಿಸುತ್ತೇನೆ ” ಎನ್ನುತ್ತಾರೆ.

ಅಜ್ಜಹಳ್ಳಿ ಗ್ರಾಮದ ಸಿದ್ಧರಾಜು ರೀತಿಯಲ್ಲೇ ಪ್ರತಿಯೊಬ್ಬ ಕೃಷಿಕರು ಬೇಸಾಯ ಮತ್ತು ಮನೆಯ ವಿವಿಧ ಅಗತ್ಯಗಳಿಗಾಗಿ ಸಾಲದ ನೊಗ ಹೊತ್ತವರೇ; ನೀರಿಗಾಗಿ, ಗೇಣಿ ಪಾವತಿಗಾಗಿ, ದುತ್ತನೇ ಎರಗಿ ಬಂದ ಆನಾರೋಗ್ಯದ ವೆಚ್ಚಕ್ಕಾಗಿ, ಒಡಹುಟ್ಟಿದ ಸಹೋದರಿಯರ ಮದುವೆ ಖರ್ಚಿಗಾಗಿ, ಬೇಸಾಯದ ಲಾಗುವಾಡು ಹಾಗೂ ಬಂಡವಾಳದ ಅಗತ್ಯಕ್ಕಾಗಿ ಹೀಗೆ ಸಾಲ ಮಾಡಿದ ಐಟಂಗಳ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತಾ ಹೋಗುತ್ತದೆ.

ಚಿನ್ನದ ಬೆಲೆ ಹೆಚ್ಚಳವಾದಂತೆ ಮದುವೆ ಆಗುವ ವಯಸ್ಸು ಕೂಡ ಹಿಗ್ಗುತ್ತಿದೆ. ಚಿನ್ನದ ಒಡವೆಗಳು ಮದುವೆಯ ಸಾಂಪ್ರದಾಯಿಕ ಧಿರಿಸುಗಳಾಗಿ ಮಾತ್ರವೇ ಉಳಿದಿಲ್ಲ. ಚಿನ್ನಕ್ಕೂ ಕೃಷಿಕನ ಮದುವೆ ವಯಸ್ಸಿಗೂ ವಿಲೋಮ ಸಂಬಂಧವಿದೆ. ವರ್ಷದಿಂದ ವರ್ಷಕ್ಕೆ ಏರಿಕೆ ಕಾಣುತ್ತಿರುವ ಚಿನ್ನದ ಬೆಲೆಗಳು ಮದುವೆ ಏರ್ಪಾಡುಗಳನ್ನು ಮುಂದೆ ತಳ್ಳುತ್ತಿವೆ.

“ಒಂದು ಸಾವಿರ ಜನಸಂಖ್ಯೆಗೆ ಕನಿಷ್ಠ 30 ಯುವಕರು 35 ವರ್ಷ ದಾಟಿಯೂ ಅವಿವಾಹಿತರಾಗಿಯೇ ಉಳಿದಿದ್ದಾರೆ” ಎನ್ನುತ್ತಾರೆ ಸೊಳ್ಳೇಪುರ ಗ್ರಾಮದ ಪ್ರಕಾಶ್. ಕಳೆದ ಐದು ವರ್ಷಗಳಿಂದಲೂ ಹೆಣ್ಣು ಹುಡುಕುತ್ತಿದ್ದರೂ ವಿವಾಹ ಬಂಧಕ್ಕೆ ಒಳಪಡಲು ಹೆಣಗುತ್ತಿರುವ ಚನ್ನಸಂದ್ರ ಗ್ರಾಮದ ಐದು ಎಕರೆ ಬೇಸಾಯದ ಕೃಷಿಕ ವಿವೇಕ್ “ರೈತ ಸಂಘದಿಂದ ಯುವ ರೈತರಿಗೆ ಮದುವೆ ಮಾಡಿಸಿ; ಆಗ ಯುವಕರು ರೈತ ಸಂಘಕ್ಕೆ ಬರುತ್ತಾರೆ” ಎಂದು ಹುಸಿ ಮುನಿಸಿನಿಂದ ಒತ್ತಾಯಿಸಿದ.

ಕರೋನಾ ಸಾಂಕ್ರಾಮಿಕದಿಂದಾಗಿ ಗ್ರಾಮ ಜೀವನಕ್ಕೆ ಮಹತ್ವ ಬಂದಿದ್ದರೂ, ನಿಶ್ಚಿತ ಆದಾಯ, ಸುಭದ್ರವಾದ ಜೀವನಕ್ಕೆ ಸಂಬಂಧಿಸಿದ ಪ್ರಶ್ನೆಗಳು ಹಾಗೇಯೇ ಉಳಿದಿವೆ.         ‌‌‌‌

  • ಟಿ ಯಶವಂತ, ಮದ್ದೂರು ತಾಲೂಕಿನ ತೊರೆಶೆಟ್ಟಿಹಳ್ಳಿಯಲ್ಲಿ ವಾಸವಾಗಿರುವ ಯಶವಂತ್‌, ಹೊಸ ತಲೆಮಾರಿನ ಸಾಮಾಜಿಕ ಕಾರ್ಯಕರ್ತರ ಪೈಕಿ ಮುಂಚೂಣಿಯಲ್ಲಿರುವ ಗುಂಪಿನಲ್ಲಿ ಅಷ್ಟು ಸದ್ದು ಮಾಡದೇ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ. ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಸಕ್ರಿಯವಾಗಿರುವ ಅವರು ಈ ಸದ್ಯ ಪ್ರಾಂತ ರೈತ ಸಂಘದ ಸಂಘಟಕರು. ಬೇರು ಮಟ್ಟದ ಬೆಳವಣಿಗೆಗಳನ್ನು ಜಾಗತಿಕ ರಾಜಕೀಯಾರ್ಥಿಕತೆಯ ಹಿನ್ನೆಲೆಯಲ್ಲಿ ವಿಶ್ಲೇಷಿಸುವ ಯಶವಂತ್‌ ತುಂಬಾ ಗಂಭೀರವಾಗಿ ಬರೆದುಬಿಡುತ್ತಾರೆ ಎಂಬ ಆತಂಕವನ್ನು ಹೋಗಲಾಡಿಸುವಂತೆ ಮೊದಲ ಕಂತು ಬರೆದಿದ್ದಾರೆ. ಮಂಡ್ಯದ ಸೊಗಡಿನ ಕನ್ನಡ ಮಾತನಾಡುವ ಅವರು ಅದೇ ಯಾಸೆಯಲ್ಲಿ ಹಳ್ಳಿ ಕಥೆಗಳನ್ನು ಬರೆಯಲಿ ಎಂಬುದು ನಮ್ಮಾಸೆ.
  • ನಿಮ್ಮ ಪ್ರತಿಕ್ರಿಯೆಗಳನ್ನು ಈ ಈಮೇಲ್ ಐಡಿಗಳಿಗೆ [email protected],  [email protected] ಕಳುಹಿಸಿ ಅಥವಾ 9448572764 ವಾಟ್ಸ್ ಆಪ್ ನಂಬರ್ ಗೆ ಕಳುಹಿಸಿ.
ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights