ರೈತ-ಸರ್ಕಾರದ 5ನೇ ಮಾತುಕತೆಯೂ ವಿಫಲ! ಕೃಷಿ ನೀತಿ ರದ್ದಾಗುವವರೆಗೂ ಹೋರಾಟ ನಿಲ್ಲಲ್ಲ!

ಕೇಂದ್ರ ಸರ್ಕಾರ ಹೊಸ ಕೃಷಿ ನೀತಿಗಳ ವಿರುದ್ಧ ಸಿಡಿದೆದ್ದಿರುವ ರೈತರ ಆಕ್ರೋಶ ಮತ್ತಷ್ಟು ಹೆಚ್ಚಾಗಿದೆ. ನಿನ್ನೆ (ಶನಿವಾರ) ನಡೆದ 5ನೇ ಸುತ್ತಿನ ಮಾತುಕತೆಯೂ ಮುರಿದು ಬಿದ್ದಿದ್ದು, ಹೊಸ ಕೃಷಿ ಕಾನೂನುಗಳು ರದ್ದಾಗುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ರೈತರು ದೆಹಲಿ ಗಡಿಯಲ್ಲಿ ಪಟ್ಟು ಹಿಡಿದು ಕುಳಿತಿದ್ದಾರೆ.

ಪ್ರತಿಭಟನಾ ನಿರತ ರೈತರ ಬೇಡಿಕೆಗಳಿಗೆ ಮಣಿದು ಸರ್ಕಾರ ಸಂಧಾನಕ್ಕೆ ಮುಂದಾಗಬಹುದು ಎಂದು ತಿಳಿದುಬಂದಿದೆ.  ಈ ಹಿನ್ನೆಲೆಯಲ್ಲಿ ರೈತರ ಹಕ್ಕೊತ್ತಾಯಗಳ ಬಗ್ಗೆ ಸರ್ಕಾರ ಆಂತರಿಕ ಚರ್ಚೆ ನಡೆಸುವುದಾಗಿ ಹೇಳಿದ್ದು, ಮುಂದಿನ ಸಭೆಯನ್ನು  ಡಿಸೆಂಬರ್ 9ರಂದು ಬೆಳಗ್ಗೆ 11 ಗಂಟೆಗೆ ನಡೆಸಲು ರೈತರು ಮತ್ತು ಸರ್ಕಾರ ನಿರ್ಧರಿಸಿರುವುದಾಗಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಸರ್ಕಾರದ ನಿಯೋಗದಲ್ಲಿ ಕೃಷಿ ಸಚಿವ ನರೇಂದ್ರ ಸಿಂಗ್ ತೊಮರ್, ರೈಲ್ವೆ ಸಚಿವ ಪಿಯೂಷ್ ಗೋಯಲ್, ಕೈಗಾರಿಕಾ ಸಚಿವ ಸೊಮ್ ಪ್ರಕಾಶ್ ನಿನ್ನೆಯ ಸಭೆಯಲ್ಲಿ ಭಾಗವಹಿಸಿ ಸರ್ಕಾರದ ಅಭಿಪ್ರಾಯ, ಯೋಜನೆಗಳನ್ನು ಮಂಡಿಸಿದರು. ರೈತರ ಬೇಡಿಕೆಗಳಿಗನುಗುಣವಾಗಿ ಕೃಷಿ ಮಸೂದೆಯಲ್ಲಿ ಕೆಲವು ಬದಲಾವಣೆ ತರುವ ಬಗ್ಗೆ ಭರವಸೆ ನೀಡಿರುವುದಾಗಿ ತಿಳಿದುಬಂದಿದೆ.

ಆದರೆ ಸರ್ಕಾರದ ತಿದ್ದುಪಡಿಯನ್ನು ತಿರಸ್ಕರಿಸಿದ ರೈತರು ಎಲ್ಲಾ ಮೂರು ಕಾಯ್ದೆಗಳನ್ನು ಹಿಂತಿರುಗಿಸುವಂತೆ ಒತ್ತಾಯಿಸಿದ್ದಾರೆ. ನಿನ್ನೆಯ ಸಭೆಯ ಅಂತ್ಯಕ್ಕೆ ರೈತರು ಮೌನ ಪ್ರತಿಭಟನೆ ನಡೆಸಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಎರಡು ದಿನಗಳ ಸಮಯಾವಕಾಶ ನೀಡಿ ಎಂದು ಡಿಸೆಂಬರ್ 6 ಅಥವಾ 7ಕ್ಕೆ ಸಮಯ ಕೇಳಿದರು. ಡಿಸೆಂಬರ್ 8ರಂದು ಭಾರತ ಬಂದ್ ಇದ್ದು 9ರಂದು ಸಭೆ ಸೇರೋಣ ಎಂದು ಭಾರತೀಯ ಕಿಸಾನ್ ಸಂಘದ ನಾಯಕ ಬೂಟಾ ಸಿಂಗ್ ಹೇಳಿದರು.

ತಿದ್ದುಪಡಿ ಮಾಡಿದರೆ ಕಾಯ್ದೆಯಲ್ಲಿ ಏನೂ ಇರುವುದಿಲ್ಲ ಎಂದು ಸರ್ಕಾರ ಹೇಳಿದೆ, ಆದರೆ ನಾವು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಬೇಕೆಂದು ಹೇಳುತ್ತಿದ್ದೇವೆ ಎಂದು ಭಾರತೀಯ ಕಿಸಾನ್ ಯೂನಿಯನ್ ನ ಪಂಜಾಬ್ ಘಟಕದ ಪ್ರಧಾನ ಕಾರ್ಯದರ್ಶಿ ಹರ್ ವಿಂದರ್ ಸಿಂಗ್ ಲಖೊವಾಲ್ ತಿಳಿಸಿದ್ದಾರೆ.


ಇದನ್ನೂ ಓದಿ: ರೈತ ಮುಖಂಡರ ಸಭೆಯಲ್ಲಿ ಅದಾನಿ-ಅಂಬಾನಿ ಬಗ್ಗೆ ಪ್ರಸ್ತಾಪಿಸಿದ್ರಾ ತೋಮರ್! ವಿವಾದ ಸೃಷ್ಟಿಯಾಗಿದ್ದು ಯಾಕೆ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights