ಕೊರೊನಾ ಎರಡನೇ ಅಲೆ? ಹೊಸ ವರ್ಷಾಚರಣೆ ಬಂದ್‌: ಆರ್‌ ಅಶೋಕ್‌

2021ರ ಜನವರಿ-ಫೆಬ್ರವರಿ ವೇಳೆಗೆ ಕೊರೊನಾ ಎರಡನೇ ಅಲೆ ಸೃಷ್ಟಿಯಾಗುವ ಸಾಧ್ಯತೆ ಇದ್ದು, ಸರ್ಕಾರ ಮತ್ತಷ್ಟು ಎಚ್ಚರಿಕೆ ವಹಿಸಬೇಕು ಎಂದು ಆರೋಗ್ಯ ಸಲಹಾ ಸಮಿತಿ ತಿಳಿಸಿದ್ದು, ಈ ಹಿನ್ನೆಲೆಯಲ್ಲಿ ಡಿಸೆಂಬರ್ 31-ಜನವರಿ 01 ರಂದು ಹೊಸ ವರ್ಷದ ಸಾರ್ವಜನಿಕ ಆಚರಣೆ ಸರ್ಕಾರ ಬ್ರೇಕ್‌ ಹಾಕಲು ಮುಂದಾಗಿದೆ.

ಕ್ರಿಸ್‌ಮಸ್‌, ಹೊಸ ವರ್ಷ ಮತ್ತು ಹಲವಾರು ಹಬ್ಬ ಜಾತ್ರೆಗಳು ಜನವರಿ-ಫೆಬ್ರವರಿಯಲ್ಲಿ ಜರುಗಲಿದ್ದು, ಡಿಸೆಂಬರ್ 26ರಿಂದ ಜನವರಿ ಮೊದಲ ವಾರದ ವರೆಗೆ ಬೆಂಗಳೂರು ಸೇರಿದಂತೆ ಕೊರೊನಾ ಸೋಂಕು ಹೆಚ್ಚಿರುವ ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ ವಿಧಿಸುವಂತೆ ತಜ್ಞರ ಸಲಹಾ ಸಮಿತಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು.

ಸಮಿತಿಯ ಶಿಫಾರಸ್ಸಿನ ಆಧಾರದ ಮೇಲೆ ಬೆಂಗಳೂರಿನ ಬೆಂಗಳೂರಿನ ಬ್ರಿಗೇಡ್ ರಸ್ತೆ, ಎಂ.ಜಿ.ರಸ್ತೆಯಲ್ಲಿ ಕೂಡ ಈ ಬಾರಿ ಹೊಸ ವರ್ಷಾಚರಣೆ ಕಾರ್ಯಕ್ರಮವಿಲ್ಲ. ಈ ಸಂಬಂಧ ತಾವು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಜೊತೆ ಸಭೆ ನಡೆಸಿದ್ದು ಮುಖ್ಯಮಂತ್ರಿಗಳ ಜೊತೆ ಕೂಡ ಚರ್ಚಿಸಿದ್ದೇನೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರು, ಮಹಾನಗರ ಪಾಲಿಕೆ ಆಯುಕ್ತರು ಮತ್ತು ರಾಜ್ಯ ವಿಪತ್ತು ನಿರ್ವಹಣೆ ಘಟಕದ ಕಾರ್ಯದರ್ಶಿಗಳು ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ವಿಪತ್ತು ನಿರ್ವಹಣ ಘಟಕದ ಉಪಾಧ್ಯಕ್ಷನಾಗಿ ಈ ಬಾರಿ ಸಾರ್ವಜನಿಕವಾಗಿ ಹೊಸ ವರ್ಷ ಆಚರಿಸದಂತೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಒಪ್ಪಿಗೆ ನೀಡಿದ್ದು ಸದ್ಯದಲ್ಲಿಯೇ ಆದೇಶ ಹೊರಡಿಸಲಾಗುವುದು ಎಂದು ಕಂದಾಯ ಸಚಿವ ಆರ್ ಅಶೋಕ್‌ ತಿಳಿಸಿದ್ದಾರೆ.

ಸಾಮಾನ್ಯವಾಗಿ ಹೊಸ ವರ್ಷ ಮುನ್ನಾದಿನ ಬೆಂಗಳೂರಿನ ಎಂಜಿ ರಸ್ತೆ, ಬ್ರಿಗೇಡ್ ರಸ್ತೆಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ಕೋವಿಡ್-19 ನಿಯಮಗಳನ್ನು ಈ ಸಂದರ್ಭದಲ್ಲಿ ಪಾಲಿಸುವುದು ಕಷ್ಟವಾಗುತ್ತದೆ. ನಿಯಮ ಪಾಲಿಸದಿದ್ದರೆ ಕೊರೋನಾ ಸೋಂಕಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿರುವುದರಿಂದ ಡಿಸೆಂಬರ್ 31ರಂದು ಸಾರ್ವಜನಿಕ ಆಚರಣೆಯನ್ನು ನಿಷೇಧಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಹೊಸ ವರ್ಷ ಹಿಂದಿನ ದಿನ ಯಾವುದೇ ಕರ್ಫ್ಯೂ ಇರುವುದಿಲ್ಲ, ಈ ಬಗ್ಗೆ ಇದುವರೆಗೆ ಚರ್ಚೆ ನಡೆದಿಲ್ಲ ಎಂದು ಸಹ ಸಚಿವ ಆರ್ ಅಶೋಕ್ ತಿಳಿಸಿದರು.

ಹೊಟೇಲ್, ರೆಸಾರ್ಟ್ ಗಳಲ್ಲಿ ವರ್ಷಾಚರಣೆಯ ಸಂಭ್ರಮ ಆಚರಿಸಬಹುದು. ಅಲ್ಲಿಯೂ ಕೂಡ ಕೋವಿಡ್-19 ಶಿಷ್ಠಾಚಾರಗಳನ್ನು ಪಾಲಿಸಬೇಕು, ಕೇವಲ ಶೇಕಡಾ 50ರಷ್ಟು ಸಾಮರ್ಥ್ಯದಷ್ಟು ಮಾತ್ರ ಜನರು ಇರಬೇಕು, ಪಾರ್ಟಿಗಳನ್ನು ಒಳಾಂಗಣಗಳಲ್ಲಿ ಮಾತ್ರ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.


ಇದನ್ನೂ ಓದಿ: ಅಹಂಕಾರ ಮೆರೆಯುತ್ತಿರುವ ಟೊಯೋಟಾ; ಮತ್ತೆ 20 ಕಾರ್ಮಿಕರ ಅಮಾನತು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights