ಬುರೇವಿ ಚಂಡಮಾರುತ: 07 ಜನರ ಸಾವು, ತಮಿಳುನಾಡು-ಕೇರಳದಲ್ಲಿ ಹೈ ಅಲರ್ಟ್‌!

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಉಂಟಾಗಿರುವ ಬುರೇವಿ ಚಂಡಮಾರುತ ಶ್ರೀಲಂಕಾ, ತಮಿಳುನಾಡು, ಕೇರಳಕ್ಕೆ ಬಾರೀ ಪರಿಣಾಮ ಬೀರಿದೆ. ಚಂಡಮಾರುತದಿಂದಾಗಿ ತಮಿಳುನಾಡಿನ ಕಡ್ಡಲೂರ್ ಜಿಲ್ಲೆಯಲ್ಲಿ 300ಕ್ಕೂ ಹೆಚ್ಚು ಗ್ರಾಮಗಳು ನೀರಿನಿಂದ ಮುಳುಗಡೆಯಾಗಿದ್ದು, 7 ಜನರು ಸಾವನ್ನಪ್ಪಿದ್ದಾರೆ.

ಮಳೆಯಿಂದ ಮೃತಪಟ್ಟವರ ಕುಟುಂಬಕ್ಕೆ ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ 10 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಮನೆ ಹಾಗೂ ಜಾನುವಾರುಗಳನ್ನು ಕಳೆದುಕೊಂಡವರಿಗೆ ಕೂಡ ಪರಿಹಾರ ಘೋಷಿಸಲಾಗಿದೆ. ಹಸುವನ್ನು ಕಳೆದುಕೊಂಡವರಿಗೆ 30 ಸಾವಿರ ರೂ., ಕರುವಿಗೆ 16 ಸಾವಿರ ಹಾಗೂ ಮೇಕೆಯನ್ನು ಕಳೆದುಕೊಂಡವರಿಗೆ 3,000 ಪರಿಹಾರ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.

ಬುರೇವಿ ಚಂಡಮಾರುತದ ಹಾವಳಿಯಿಂದ ತಮಿಳುನಾಡಿನ ಕರಾವಳಿಯಲ್ಲಿ ಭಾರೀ ಮಳೆ ಸುರಿಯುತ್ತಿದೆ. ಕಡ್ಡಲೂರ್ ಜಿಲ್ಲೆಯಲ್ಲಿ 66,000ಕ್ಕೂ ಅಧಿಕ ಜನರನ್ನು ಈಗಾಗಲೇ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. 5,000 ಜನರನ್ನು ರಾಮನಾಥಪುರಕ್ಕೆ ಸ್ಥಳಾಂತರಿಸಲಾಗಿದೆ. ತಮಿಳುನಾಡಿನಲ್ಲಿ ಅನೇಕ ಹಸುಗಳು, ಸಾಕುಪ್ರಾಣಿಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ.

ತಮಿಳುನಾಡಿನ ಕನ್ಯಾಕುಮಾರಿ, ತಿರುನೆಲ್ವೇಲಿ, ತೂತುಕುಡಿ, ರಾಮನಾಥಪುರಂ, ಸಿವಗಂಗೈ ಮತ್ತು ಕೇರಳದ ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟ ಭಾಗದಲ್ಲಿ ನಿನ್ನೆಯವರೆಗೆ ಭಾರೀ ಮಳೆಯಾಗಿತ್ತು. ಇದರಿಂದ ಕೇರಳದಲ್ಲೂ ಅನೇಕ ಕಡೆ ಮನೆಗಳು ಮುಳುಗಡೆಯಾಗಿವೆ. ಹೀಗಾಗಿ, ಇಂದು ಕೇರಳದ 4 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್​ ಘೋಷಿಸಲಾಗಿದೆ. ಕೇರಳದ ಪಥನಾಂತಿಟ್ಟ, ಎರ್ನಾಕುಲಂ, ಇಡುಕ್ಕಿ, ಮಲಪ್ಪುರಂ ಜಿಲ್ಲೆಗಳಲ್ಲಿ ಇಂದು ಆರೆಂಜ್ ಅಲರ್ಟ್​ ಘೋಷಿಸಲಾಗಿದೆ.


ಇದನ್ನೂ ಓದಿ: ಪೆಟ್ರೋಲ್ ಬೆಲೆ ಏರಿಕೆಗೆ ವಿರೋಧ: ಡಿ.07 ರಂದು ದೇಶಾದ್ಯಂತ ಸಾರಿಗೆ ಉದ್ಯಮ ಬಂದ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights