ಪೆಟ್ರೋಲ್ ಬೆಲೆ ಏರಿಕೆಗೆ ವಿರೋಧ: ಡಿ.07 ರಂದು ದೇಶಾದ್ಯಂತ ಸಾರಿಗೆ ಉದ್ಯಮ ಬಂದ್‌!

ಇಂಧನ ಬೆಲೆ ಏರಿಕೆಯ ವಿರುದ್ಧ ಪ್ರತಿಭಟನಾ ದಿನವನ್ನು ಆಚರಿಸಲು ಮತ್ತು ಹೊಸ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ಹೋರಾಟವನ್ನು ಬೆಂಬಲಿಸಿ ಸಾರಿಗೆ ಕಾರ್ಮಿಕರು ಡಿಸೆಂಬರ್ 7 ರಂದು ದೇಶಾದ್ಯಂತ ತಮ್ಮ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ. ಪ್ರತಿಭಟನೆಯಲ್ಲಿ ಟ್ರಕ್ಕರ್‌ಗಳು, ಸಾರಿಗೆದಾರರು, ಟ್ಯಾಕ್ಸಿ ಮತ್ತು ಆಟೋ ಚಾಲಕರು ಭಾಗಿಯಾಗಬೇಕು ಎಂದು  ರಸ್ತೆ ಸಾರಿಗೆ ಕಾರ್ಮಿಕರ ಸಂಘಟನೆಗಳ ಅಖಿಲ ಭಾರತ ಸಮನ್ವಯ ಸಮಿತಿಯು (AICCORTWO) ಕರೆಕೊಟ್ಟಿದೆ.

ಇಂಧನ ಬೆಲೆಗಳ ಏರಿಕೆಯನ್ನು ಹಿಂತೆಗೆದುಕೊಳ್ಳಬೇಕು ಮತ್ತು ಮಾರ್ಚ್ 1, 2020 ರಲ್ಲಿದ್ದ ಬೆಲೆಗಳನ್ನು ನಿಗಧಿಪಡಿಸಬೇಕು ಎಂದು ಕಾರ್ಮಿಕರ ಸಂಘಗಳು ಸರ್ಕಾರವನ್ನು ಒತ್ತಾಯಿಸಿವೆ.

ಸಂಘಟನೆಗಳ ಒತ್ತಾಯದ ನಡುವೆಯೂ ಇಂದು (ಶನಿವಾರ) ತೈಲ ಉತ್ಪಾದನಾ ಕಂಪನಿಗಳು ಈ ತಿಂಗಳಲ್ಲಿ ಸತತ ನಾಲ್ಕನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸಿವೆ.

ಇಂಧನ ದರ

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕುಸಿತ ಕಂಡಿದ್ದರೂ, ಕೇಂದ್ರ ಸರ್ಕಾರ ಕಳೆದ ಆರು ತಿಂಗಳಲ್ಲಿ ಇಂಧನ ಬೆಲೆಗಳನ್ನು 30 ಕ್ಕೂ ಹೆಚ್ಚು ಬಾರಿ ಹೆಚ್ಚಿಸಿದೆ.

ವರದಿಯ ಪ್ರಕಾರ, ಇಂಟರ್‌ಕಾಂಟಿನೆಂಟಲ್ ಎಕ್ಸ್‌ಚೇಂಜ್ (ಐಸಿಇ) ನಲ್ಲಿ ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ 47 ಡಾಲರ್ ಆಗಿದೆ. ಇದು ನವೆಂಬರ್‌ನಲ್ಲಿ ಸರಾಸರಿ 44 ಡಾಲರ್‌ ಇತ್ತು.

fuel rate

ಮೇ 2014 ರಲ್ಲಿ ಕೇಂದ್ರದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಅಧಿಕಾರಕ್ಕೆ ಬಂದಾಗ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 47.12 ಮತ್ತು ಡೀಸೆಲ್ ಬೆಲೆ 44.98 ರೂ. ಇತ್ತು. ಈ ಸಂದರ್ಭದಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರಲ್‌ಗೆ ಸರಾಸರಿ 106.85 ಡಾಲರ್‌ನಷ್ಟಿತ್ತು.

ಕೊರೊನಾ ಸೋಂಕು ಕಾಣಿಸಿಕೊಳ್ಳುವುದಕ್ಕೂ ಮೊದಲೆ ಸಾರಿಗೆ ಉದ್ಯಮ ಬಿಕ್ಕಟ್ಟಿನಲ್ಲಿತ್ತು. ಲಾಕ್‌ಡೌನ್‌ನಂತರ ಬಿಕ್ಕಟ್ಟು ಮತ್ತಷ್ಟು ಹೆಚ್ಚಾಗಿದೆ. ಸಾರಿಗೆ ಉದ್ಯಮದಲ್ಲಿರುವ ಎಲ್ಲಾ ವಿವಿಧ ಮಾಲೀಕರು ಮತ್ತು ಚಾಲಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಇಂಧನ ಬೆಲೆ ಏರಿಕೆ ಮತ್ತಷ್ಟು ಹೊಡೆತ ಕೊಟ್ಟಿದೆ. ಖಾಸಗಿ ಹಣಕಾಸು ಕಂಪನಿಗಳು ವಾಹನ ಸಾಲದ ಕಂತುಗಳನ್ನು ಪಾವತಿಸುವಂತೆ ಚಾಲಕರಿಗೆ ಒತ್ತಡ ಹಾಕುತ್ತಿವೆ. ಲಾಕ್‌ಡೌನ್‌ ಅವಧಿಯಲ್ಲಿ ಟೋಲ್‌ ಶುಲ್ಕವನ್ನು ಹೆಚ್ಚಿಸಲಾಗಿದೆ. ಈ ಎಲ್ಲಾ ಕಾರಣಗಳಿಂದ ಸಾರಿಗೆ ಉದ್ಯಮ ಬಿಕ್ಕಟ್ಟಿನಲ್ಲಿದೆ ಎಂದು ಸಂಘಟನೆ ಆರೋಪಿಸಿವೆ.

ಈ ಹಿನ್ನೆಲೆಯಲ್ಲಿ ಇಂಧನದ ಮೇಲಿನ ಬೆಲೆ ಏರಿಕೆ ಖಂಡಿಸಿ ಮತ್ತು ರೈತ ಪ್ರತಿಭಟನೆಯನ್ನು ಬೆಂಬಲಿಸಿ ಡಿಸೆಂಬರ್ 07 ರಂದು ವಾಹನ ಸಂಚಾರ ಮತ್ತು ಕಾರ್ಯಾಚರಣೆಯನ್ನು ಬಂದ್‌ ಮಾಡಲಿವೆ.


ಇದನ್ನೂ ಓದಿ: ಭಾರತದ ರೈತರ ಹೋರಾಟಕ್ಕೆ ಇಂಗ್ಲೆಂಡ್‌ನ 36 ಸಂಸದರ ಬೆಂಬಲ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights