Fact Check: ರೈತರ ಪ್ರತಿಭಟನೆಯಲ್ಲಿ ನಿವೃತ್ತ ಸೇನಾ ಕ್ಯಾಪ್ಟನ್ ಗಾಯಗೊಂಡಿದ್ದು ಸತ್ಯವೇ?

ಮಿಲಿಟರಿ ಸಮವಸ್ತ್ರದಲ್ಲಿರುವ ಸಿಖ್ ವ್ಯಕ್ತಿಯ ಫೋಟೋ ಮತ್ತು ಕಣ್ಣಿಗೆ ಗಾಯವಾಗಿರುವ ವಯಸ್ಸಾದ ಸಿಖ್ ವ್ಯಕ್ತಿಯ ಫೋಟೊವನ್ನು ಕೊಲಾಜ್ ಮಾಡಲಾಗಿರುವ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಪೋಸ್ಟ್‌ನಲ್ಲಿ ಎರಡೂ ಚಿತ್ರಗಳು ಸೇನೆಯ ನಿವೃತ್ತ ಕ್ಯಾಪ್ಟನ್ ಪಿಪಿಎಸ್ ಧಿಲ್ಲಾನ್ ಅವರದ್ದಾಗಿದ್ದು, ಅವರು ದೆಹಲಿ ಗಡಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ ಅವರು ಕಣ್ಣಿಗೆ ಈ ಗಾಯವಾಗಿದೆ ಎಂದು ಆರೋಪಿಸಲಾಗಿದೆ. ಪೋಸ್ಟ್‌ನ ಸತ್ಯಾ-ಸತ್ಯತೆಯನ್ನು ಪರಿಶೀಲಿಸೋಣ.

ಈ ಪೋಸ್ಟ್‌ನ ಆರ್ಕೈವ್ ಮಾಡಲಾದ ಆವೃತ್ತಿಯನ್ನು ಇಲ್ಲಿ ಕಾಣಬಹುದು.

ಪ್ರತಿಪಾದನೆ: ಇತ್ತೀಚೆಗೆ ನಡೆದ ರೈತರ ಪ್ರತಿಭಟನೆಯಲ್ಲಿ ಮಿಲಿಟರಿ ನಿವೃತ್ತ ಮತ್ತು ಹಿರಿಯ ನಾಯಕ ಪಿಪಿಎಸ್ ಧಿಲ್ಲನ್ ಅವರ ಕಣ್ಣಿಗೆ ಗಾಯವಾಗಿದೆ.

ಸತ್ಯ: ಫೋಟೋ ಕೊಲಾಜ್‌ನಲ್ಲಿರುವ ಫೋಟೋಗಳು ವಾಸ್ತವವಾಗಿ ಒಂದೇ ವ್ಯಕ್ತಿಯದ್ದಲ್ಲ. ಸೇನೆಯ ಸಮವಸ್ತ್ರದಲ್ಲಿರುವ ಸಿಖ್ ವ್ಯಕ್ತಿ ವಾಸ್ತವವಾಗಿ ನಿವೃತ್ತ ಸೇನಾ ಕ್ಯಾಪ್ಟನ್, ಪಿಪಿಎಸ್ ಧಿಲ್ಲಾನ್. ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಮಗ ಈ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದರು. ಈ ಬಗ್ಗೆ ಅವರ ಮಗನನ್ನು ಕೇಳಿದಾಗ, ಕಣ್ಣಿಗೆ ಗಾಯವಾಗಿರುವ ಮನುಷ್ಯ ತನ್ನ ತಂದೆಯಲ್ಲ, ಮತ್ತು ನಡೆಯುತ್ತಿರುವ ರೈತರ ಪ್ರತಿಭಟನೆಯೊಂದಿಗೆ ಅವರ ತಂದೆಗೆ ಸಂಬಂಧವಿಲ್ಲ ಎಂದು ಹೇಳಿದ್ದು, ಈ ಬಗ್ಗೆ ಹರಿದಾಡುತ್ತಿರುವ ಗಾಳಿ ಸುದ್ದಿಗೆ ತೆರೆ ಎಳೆದಿದ್ದಾರೆ. ಆದ್ದರಿಂದ ಪೋಸ್ಟ್‌ನಲ್ಲಿ ಮಡಿದ ಪ್ರತಿಪಾದನೆ ತಪ್ಪಾಗಿದೆ.

ಪೋಸ್ಟ್‌ನಲ್ಲಿದ್ದ ಚಿತ್ರವನ್ನು ರಿವರ್ಸ್‌ ಇಮೇಜ್‌ ಮೂಲಕ ಹುಡುಕಿದಾಗ, ಫೇಸ್‌ಬುಕ್‌ ಬಳಕೆದಾರರ ಪೋಸ್ಟ್‌ ದೊರೆತಿದೆ. ಆ ಪೋಸ್ಟ್‌ನಲ್ಲಿ ಸೈನ್ಯದ ಸಮವಸ್ತ್ರದಲ್ಲಿರುವ ಸಿಖ್ ಮನುಷ್ಯನ ಚಿತ್ರವನ್ನು ಒಳಗೊಂಡಿದೆ. ಪೋಸ್ಟ್ ಪ್ರಕಾರ, ಈ ಚಿತ್ರವು ಪೋಸ್ಟ್‌ ಹಾಕಿದ್ದ ವ್ಯಕ್ತಿಯ ತಂದೆ, ನಿವೃತ್ತ ಸೇನಾ ಕ್ಯಾಪ್ಟರ್ ಪಿರ್ತಿಪಾಲ್ ಸಿಂಗ್ ಧಿಲ್ಲೋನ್ ಅವರದು. ಅದೇ ದಿನ ಸಿಖ್ ಮಿಲಿಟರಿ ಹಿಸ್ಟರಿ ಫೋರಮ್ ಎಂಬ ಫೇಸ್ಬುಕ್ ಗುಂಪಿನಲ್ಲಿಯೂ ಪೋಸ್ಟ್‌ನಲ್ಲಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಫೇಸ್‌ಬುಕ್ ಮೆಸೆಂಜರ್ ಮೂಲಕ ಅವರನ್ನು ಮಾತನಾಡಿಸಿದಾಗ, ಸೈನ್ಯದ ಸಮವಸ್ತ್ರದಲ್ಲಿರುವ ವ್ಯಕ್ತಿಯ ಚಿತ್ರವು ತನ್ನ ತಂದೆಯದ್ದಾಗಿದೆ ಮತ್ತು ಅವರ ತಂದೆ ಮನೆಯಲ್ಲಿದ್ದಾರೆ. ಅವರು ರೈತ ಪ್ರತಿಭಟನೆಯಲ್ಲಿ ಭಾಗಿಯಾಗಿಲ್ಲ. ಫೋಟೋ ಕೊಲಾಜ್‌ನಲ್ಲಿರುವ ಗಾಯಗೊಂಡ ವಯಸ್ಸಾದ ಸಿಖ್‌ ವ್ಯಕ್ತಿ ತಮ್ಮ ತಂದೆಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅವರು ತಮ್ಮ ತಂದೆಯ ಜನ್ಮದಿನದಂದು ಈ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾಗಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಹುಡುಕಿದಾಗ, ಕಣ್ಣಿಗೆ ಗಾಯಗೊಂಡಿರುವ ವ್ಯಕ್ತಿಯ ಚಿತ್ರವನ್ನು ರೈತ ಪ್ರತಿಭಟನೆಯ ಸಂದರ್ಭದ್ದು ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಈ ಚಿತ್ರವನ್ನು ಹಂಚಿಕೊಂಡಿರುವ ಕೆಲವು ಪೋಸ್ಟ್‌ಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಅದಾಗಿಯೂ, ಕಣ್ಣಿಗೆ ಗಾಯಗೊಂಡ ವ್ಯಕ್ತಿಯ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯಲಿಲ್ಲ.

ಹೊಸ ಕೃಷಿ ಕಾನೂನುಗಳನ್ನು ವಿರೋಧಿಸುವ ರೈತರ ಪ್ರತಿಭಟನೆ ನಡೆಸುತ್ತಿರುವ ಹೊತ್ತಿನಲ್ಲಿ, ಈ ರೀತಿಯ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿಗಳೊಂದಿಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಇತ್ತೀಚಿನ ರೈತರ ಪ್ರತಿಭಟನೆಯಲ್ಲಿ ಕಣ್ಣಿಗೆ ಗಾಯವಾದ ವ್ಯಕ್ತಿಯ ಫೋಟೋಗೂ, ನಿವೃತ್ತ ಸೇನಾ ನಾಯಕ ಪಿಪಿಎಸ್ ಧಿಲ್ಲನ್ ಅವರ ಚಿತ್ರಕ್ಕೂ ಸಂಬಂಧವಿಲ್ಲ. ಆದರೆ, ಎರಡೂ ಫೋಟೋಗಳನ್ನು ಜೊಡಿಸಿ ತಪ್ಪು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗಿದೆ.

– ಸೋಮಶೇಖರ್ ಚಲ್ಯ


ಇದನ್ನೂ ಓದಿ: ರಾಜಸ್ಥಾನ ಚುನಾವಣೆ: ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ; ಕಾಂಗ್ರೆಸ್‌ಗೆ ಮುಖಭಂಗ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights