ಮುಂಬೈ ಸಕಿನಾಕಾದಲ್ಲಿ ನಡೆದ ಅತ್ಯಾಚಾರ ಪ್ರಕರಣ : ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಸಾವು!

ಮುಂಬೈ ಸಕಿನಾಕಾದಲ್ಲಿ ನಡೆದ ಅತ್ಯಾಚಾರ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಸಾವನ್ನಪ್ಪಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ.

ಮುಂಬೈನ ಉಪನಗರ ಸಕಿನಾಕಾದಲ್ಲಿ ನಿಂತ ಟೆಂಪೋದಲ್ಲಿ 34 ವರ್ಷದ ಮಹಿಳೆ ಮೇಲೆ ಅತ್ಯಾಚಾರವೆಸಗಿ ಕ್ರೂರವಾಗಿ ಹಲ್ಲೆ ಮಾಡುವುದು ಮಾತ್ರವಲ್ಲದೇ ಆಕೆಯ ಖಾಸಗೀ ಭಾಗಗಳಿಗೆ ಕಬ್ಬಿಣದ ರಾಡ್ ನ್ನು ಸೇರಿಸಲಾಗಿತ್ತು. ಘಟನೆ ಬಳಿಕ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದ ಮಹಿಳೆಯನ್ನು ಪೊಲೀಸರು ನಾಗರಿಕರ ರಾಜವಾಡಿ ಆಸ್ಪತ್ರೆಗೆ ದಾಖಲಿಸಿದ್ದರು.

ಶುಕ್ರವಾರ ಮುಂಜಾನೆ ಖೈರಾನಿ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಮಹಿಳೆಯನ್ನು ಥಳಿಸುತ್ತಿದ್ದಾನೆ ಎಂದು ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಬಂದಿತ್ತು. ಕರೆಯನ್ನು ಆಧರಿಸಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿರುವ ಮಹಿಳೆಯ ಕಂಡು ಗಾಬರಿಯಾದ ಪೊಲೀಸರು ತಕ್ಷಣ ಆಕೆಯನ್ನು ನಾಗರಿಕರ ರಾಜವಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ತೀವ್ರ ಗಾಯಗಳಿಂದ ರಕ್ತಸ್ರಾವವಾಗಿ ಚಿಕಿತ್ಸೆ ಫಲಕಾರಿಯಾಗದೇ ಇಂದು ಮಹಿಳೆ ಮೃತಪಟ್ಟಿದ್ದಾಳೆ.

ಮೋಹನ್ ಚೌಹಾಣ್ (45) ಎಂಬ ಆರೋಪಿಯನ್ನು ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಬಂಧಿಸಲಾಗಿದೆ. ಇದರಲ್ಲಿ ಇನ್ನೂ ಕೆಲ ಜನ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.

ಬಂಧಿತ ಆರೋಪಿ ಚೌಹಾಣ್ ವಿರುದ್ಧ ಐಪಿಸಿ ಸೆಕ್ಷನ್ 307 (ಕೊಲೆ ಯತ್ನ) ಮತ್ತು 376 (ಅತ್ಯಾಚಾರ) ಅಡಿಯಲ್ಲಿ ಕೇಸ್ ದಾಖಲಿಸಲಾಗಿದ್ದು ಹೆಚ್ಚಿನ ತನಿಖೆ ನಡೆಯುತ್ತಿದೆ.

Spread the love

Leave a Reply

Your email address will not be published. Required fields are marked *