ಕುಮಾರಸ್ವಾಮಿ ಸರ್ಕಾರವನ್ನ ಸ್ಕೆಚ್‌ ಹಾಕಿ ಬೀಳಿಸಿದ್ದು ನಾನೇ: ಯೋಗೇಶ್ವರ್

ಬಿಜೆಪಿ ಮುಖಂಡ ಸಿಪಿ ಯೋಗೇಶ್ವರ್‌ ಅವರು ಎಂಎಲ್‌ಸಿ ಆಗಿ ಆಯ್ಕೆ ಆದ ನಂತರ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಮತ್ತು ಯೋಗೇಶ್ವರ್‌ ನಡುವಿನ ವಾಕ್ಸಮರ ತಾರಕ್ಕೇರಿದೆ. ಕೆಲವು ದಿನಗಳ ಹಿಂದೆ ಯಾರೇ ಮಂತ್ರಿ ಆದ್ರು ಚನ್ನಪಟ್ಟಣಕ್ಕೆ ನಾನೇ ಸರ್ಕಾರ ಎಂದು ಹೆಚ್‌ಡಿಕೆ ಹೇಳಿದ್ದರು. ಇದೀಗ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರವನ್ನು ಸ್ಕೆಚ್‌ ಹಾಕಿ ಉರುಳಿಸಿದ್ದು ನಾನೇ ಎಂದು ಯೋಗೇಶ್ವರ್‌ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಹೇಳಿದ್ದಾರೆ.

ಗ್ರಾಮ ಪಂಚಾಯತಿ ಚುನಾವಣೆಯ ಹಿನ್ನೆಲೆಯಲ್ಲಿ ಚನ್ನಪಟ್ಟಣ ಬಿಜೆಪಿ ಕಾರ್ಯಕರ್ತರ ಜೊತೆ ಸಭೆ ನಡೆಸಿರುವ ಯೋಗೇಶ್ವರ್, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಹೆಚ್‌ಡಿಕೆ ವಿರುದ್ದ ಏಕವಚನದಲ್ಲಿ ವಾಗ್ದಾಳಿ ನಡೆಸಿರುವ ಆಡಿಯೋ ದೊರೆತಿರುವುದಾಗಿ ನ್ಯೂಸ್‌ 18 ಕನ್ನಡ ವರದಿ ಮಾಡಿದೆ.

ಡಿಕೆಶಿ ಮತ್ತು ಹೆಚ್‌ಡಿಕೆ ಇಬ್ಬರೂ ಸೇರಿ ನನ್ನನ್ನು ಸೋಲಿಸಿದರು. ಮೈತ್ರಿ ಸರ್ಕಾರದಲ್ಲಿ ಜೋಡೆತ್ತುಗಳು ನಾವು ಎಂದು ಹೇಳಿಕೊಂಡಿದ್ದ ಅವರು ಸರ್ಕಾರ ಉರುಳಿದ ಮೇಲೆ ಕಿತ್ತಾಡುತ್ತಿದ್ದಾರೆ. ಸರ್ಕಾರ ಉರುಳುತ್ತಿದ್ದಂತೆ ಡಿಕೆಶಿ ತಿಹಾರ್ ಜೈಲಿಗೆ ಹೋದರು. ಕರ್ನಾಟಕದಿಂದ ಆ ಜೈಲಿಗೆ ಹೋದವರು ಡಿಕೆಶಿ ಒಬ್ಬರೇ ಎಂದು ಹೇಳಿದ್ದಾರೆ.

ನನ್ನ ನೀರಾವರಿ ಯೋಜನೆಯನ್ನು ಹೆಚ್‌ಡಿಕೆ ತಮ್ಮದು ಎಂದು ಹೇಳುತ್ತಿದ್ದಾರೆ. ಅವರು ಪೇಪರ್ ನೋಡದೇ ಚನ್ನಪಟ್ಟಣದ 10 ಊರುಗಳು ಹೆಸರುಗಳನ್ನು ಹೇಳಲಿ. ನಾವು ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಸವಾಲು ಹಾಕಿದ್ದಾರೆ.

ದೇವೇಗೌಡರ ಕುಟುಂಬವನ್ನ ರಾಜ್ಯದ ಜನರು ತಿರಸ್ಕರಿಸುತ್ತಿದ್ದಾರೆ. ಹಾಗಾಗಿಯೇ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರು ಮತ್ತು ನಿಖಿಲ್‌ ಕುಮಾರಸ್ವಾಮಿಯನ್ನು ಜನರು ಸೋಲಿಸಿದ್ದಾರೆ. ಡಿಕೆ ಸೋದರರನ್ನು ಹಳೇ ಮೈಸೂರು ಭಾಗದ ಜನರು ಕೈಬಿಟ್ಟಿದ್ದಾರೆ. ಉಪಚುನಾವಣೆಯಲ್ಲಿ ಅವರಿಗೆ ಸರಿಯಾದ ಪಾಠ ಕಲಿಸಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.


ಇದನ್ನೂ ಓದಿ: ಕುಮಾರಸ್ವಾಮಿ ಬೇನಾಮಿ ಆಸ್ತಿ ಹೊಂದಿದ್ದಾರೆ; ಅದರ ರಕ್ಷಣೆಗಾಗಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ: ಸಿದ್ದರಾಮಯ್ಯ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights