ರೈತ ಹೋರಾಟಕ್ಕೆ ಮಾಜಿ IAS, IPS ಸೇರಿದಂತೆ 78 ನಿವೃತ್ತ ಅಧಿಕಾರಿಗಳ ಬೆಂಬಲ!

ದೇಶಾದ್ಯಂತ ರೈತರ ಆಕ್ರೋಶಕ್ಕೆ ಕಾರಣವಾಗಿರುವ ರೈತ ವಿರೋಧಿ ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆಗೆ ಮಾಜಿ IAS, IPS ಸೇರಿದಂತೆ 58 ನಿವೃತ್ತ ಅಧಿಕಾರಿಗಳು ಬೆಂಬಲ ಸೂಚಿಸಿದ್ದು, ಸಂಸತ್‌ನ ಎರಡೂ ಸದನಗಳಲ್ಲೂ ಯಾವುದೇ ಚರ್ಚೆಗೆ ಎಡೆಮಾಡಿಕೊಡದೆ ಅಂಗೀಕರಿಸಿರುವ ಈ ಕೃಷಿ ಕಾನೂನುಗಳನ್ನು ಜಾರಿಗೊಳಿಸುವುದು ಭಾರತ ಸರ್ಕಾರ ಸಂವಿಧಾನದ ಮೂಲ ನಿಯಮಗಳನ್ನು ಉಲ್ಲಂಘನೆಯಾಗಿದೆ ಎಂದು 78 ಮಂದಿ ನಿವೃತ್ತ ಅಧಿಕಾರಿಗಳು ಬಹಿರಂಗ ಪತ್ರ ಬರೆದು ಖಂಡಿಸಿದ್ದಾರೆ.

ಕೇಂದ್ರ ಸರ್ಕಾರದ ನಾಗರಿಕ ಸೇವೆಯಲ್ಲಿ ಹಲವು ವರ್ಷಗಳ ಕಾಲ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ಐಎಎಸ್, ಐಪಿಎಸ್, ಐಆರ್‌ಎಸ್, ಐಇಎಸ್, ಐಎಫ್‌ಎಸ್, ಐಎ ಅಂಡ್ ಐಎಸ್ ಅಧಿಕಾರಿಗಳು ಪತ್ರ ಬರೆದಿರುವುದನ್ನು ಉಲ್ಲೇಖಿಸಿ ದಿವೈರ್.ಇನ್ ವರದಿ ಮಾಡಿದೆ.

ರೈತರು ದೆಹಲಿಯ ಗಡಿಯಲ್ಲಿ ಕಳೆದ ಎರಡು ವಾರಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ಕಡುಚಳಿಯನ್ನು ಲೆಕ್ಕಿಸದೆ ಸರ್ಕಾರದ ನಡೆಯನ್ನು ಪ್ರಶ್ನಿಸುತ್ತಿದ್ದಾರೆ. ಮೂರು ಹೊಸ ಕೃಷಿ ಕಾಯ್ದೆಗಳನ್ನು ರದ್ದುಪಡಿಸಿದರೆ ಪ್ರತಿಭಟನೆಯನ್ನು ಹಿಂಪಡೆಯಲು ಒಪ್ಪಿಕೊಳ್ಳುತ್ತೇವೆ ಎಂದು ಹೇಳುತ್ತಿದ್ದಾರೆ. ಕೇಂದ್ರ ಸರ್ಕಾರ ಸಂಸತ್‌ನಲ್ಲಿ ಯಾವುದೇ ಪ್ರತಿಪಕ್ಷ ಕೃಷಿ ಕಾಯ್ದೆಗಳನ್ನು ಸಂಪೂರ್ಣ ಬದಲಾವಣೆ ಮಾಡಬೇಕೆಂದು ಆಗ್ರಹ ಮಾಡಲಿಲ್ಲ. ಆದರೂ ಕೃಷಿ ಕಾಯ್ದೆಗಳನ್ನು ಸಂಪೂರ್ಣ ಬದಲಾವಣೆ ಮಾಡಿದ್ದು ಏಕೆ? ಎಂದು ನಿವೃತ್ತ ಅಧಿಕಾರಿಗಳು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಭಾರತ್ ಬಂದ್: ರೈತರ ಪ್ರತಿಭಟನೆಗೆ ನಟ ಶಿವರಾಜ್ ಕುಮಾರ್ ಬೆಂಬಲ!

ನರೇಂದ್ರ ಮೋದಿ ಸರ್ಕಾರ ಸಂವಿಧಾನದ ಮೂಲ ತತ್ವಗಳನ್ನು ಉಲ್ಲಂಘಿಸಿ ಕೃಷಿ ಕಾಯ್ದೆಗಳನ್ನು ಜಾರಿಗೆ ತರುತ್ತಿದೆ. ಇದು ಒಕ್ಕೂಟ ವ್ಯವಸ್ಥೆಯ ತತ್ವಗಳ ಮೇಲಿನ ಹಲ್ಲೆಯಾಗಿದೆ. ಕೃಷಿ ರಾಜ್ಯಪಟ್ಟಿಯಲ್ಲಿದ್ದರೂ ಕೇಂದ್ರ ತಾನೇ ಕೃಷಿ ಕಾಯ್ದೆಗಳನ್ನು ಜಾರಿಗೆ ತರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೃಷಿ ಕಾಯ್ದೆಗಳಿಗೆ ತಿದ್ದುಪಡಿ ಮಾಡಬೇಕೆಂದು ಸಂಸತ್ತಿನಲ್ಲಿ ಯಾವುದೇ ಪಕ್ಷದ ಸದಸ್ಯರು ಒತ್ತಡ ಹೇರಲಿಲ್ಲ. ಸಂಸತ್ತಿನ ಉಭಯ ಸದನಗಳಲ್ಲಿ ಕೃಷಿ ಮಸೂದೆಗಳ ಕುರಿತು ಚರ್ಚೆ-ಸಂವಾದ ನಡೆಸಲಿಲ್ಲ. ರಾಜ್ಯಸಭೆಯಲ್ಲಿ ಒಪ್ಪಿಗೆಯನ್ನೂ ಪಡೆದುಕೊಳ್ಳಲಿಲ್ಲ. ಮಸೂದೆಯನ್ನು ಧ್ವನಿ ಮತದ ಮೂಲಕ ಅಂಗೀಕರಿಸಿ ಗೊಂದಲಕ್ಕೆ ಕಾರಣವಾಗಿದೆ ಎಂದು ನಿವೃತ್ತ ಅಧಿಕಾರಿಗಳು ಸರ್ಕಾರಕ್ಕೆ ಬಹಿರಂಗ ಪತ್ರದಲ್ಲಿ ಹೇಳಿದ್ದಾರೆ.

Farmers' protest: 78 retired civil servants slam Centre in open letter,  call new laws unconstitutional - indialegal.co

ಕೇಂದ್ರ ಸರ್ಕಾರ ಇಂತಹ ತೀರ್ಮಾನ ಕೈಗೊಳ್ಳದಿದ್ದರೆ ರೈತರು ಬೀದಿಗೆ ಬರುತ್ತಿರಲಿಲ್ಲ. ಪ್ರತಿಭಟನೆಗೆ ಇಳಿಯುತ್ತಿರಲಿಲ್ಲ. ಕೊರೊನಾ ಸನ್ನಿವೇಶವನ್ನು ದುರುಪಯೋಗ ಮಾಡಿಕೊಂಡು ರೈತರು ಪ್ರತಿಭಟನೆಗೆ ಹೋಗುವುದಿಲ್ಲ. ಹೆಚ್ಚು ಜನರು ಸೇರಲು ಅವಕಾಶ ಇರುವುದಿಲ್ಲ ಎಂಬುದನ್ನು ಖಚಿತ ಮಾಡಿಕೊಂಡ ಸರ್ಕಾರ ಇಂತಹ ಕಾಯ್ದೆಗಳನ್ನು ಜಾರಿಗೆ ತಂದಿದೆ. ನಾವು ಕಾಯ್ದೆಗಳ ಸರಿ-ತಪ್ಪುಗಳ ಕುರಿತು ಚರ್ಚೆ ಮಾಡಲು ಹೋಗುವುದಿಲ್ಲ. ಸಂವಿಧಾನದ ಆಶಯಗಳಂತೆ ನಡೆಯಬೇಕು ಎಂದು ಒತ್ತಾಯಿಸುತ್ತೇವೆ.

ಅಖಿಲ ಭಾರತ ಮತ್ತು ವಿವಿಧ ರಾಜ್ಯಗಳಲ್ಲಿ ಕೇಂದ್ರ ಸರ್ಕಾರಿ ಸೇವೆಯಲ್ಲಿದ್ದ 78 ಮಂದಿ ನಿವೃತ್ತ ಅಧಿಕಾರಿಗಳಾದ ನಾವು ಯಾವುದೇ ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಂಡಿಲ್ಲ. ನೋಂದಣಿ ಮಾಡಿಕೊಂಡಿಲ್ಲ. ತಟಸ್ಥರಾಗಿದ್ದೇವೆ. ಪಕ್ಷಪಾತಕ್ಕೆ ನಮ್ಮಲ್ಲಿ ಅವಕಾಶವಿಲ್ಲ. ಆದರೆ ನಾವು ಸಂವಿಧಾನಕ್ಕೆ ಬದ್ದರಾಗಿ ನಡೆದು ಕೊಳ್ಳುವವರಾಗಿದ್ದೇವೆ. ಹಾಗಾಗಿ ರೈತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸುತ್ತೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಭಾರತ್ ಬಂದ್: ರೈತರಿಗೆ ಅಣ್ಣಾ ಹಜಾರೆ ಬೆಂಬಲ; ಒಂದು ದಿನ ಉಪವಾಸ ಸತ್ಯಾಗ್ರಹ!

ದೆಹಲಿ ಸಮೀಪದ ಸಿಂಘು ಗಡಿಯಲ್ಲಿ ಬೃಹತ್ ಸಂಖ್ಯೆ ರೈತರು ಪ್ರತಿಭಟನೆಗೆ ಇಳಿದಿರುವುದು ದೇಶ-ವಿದೇಶದ ಗಮನ ಸೆಳೆದಿದೆ. ಈ ಪ್ರತಿಭಟನೆಯಲ್ಲಿ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಮತ್ತು ರಾಜಸ್ಥಾನ ರಾಜ್ಯದ ರೈತರು ಇದ್ದಾರೆ. ಕೃಷಿ ಕಾಯ್ದೆಗಳನ್ನು ರದ್ದುಪಡಿಸುವಂತೆ ಆಗ್ರಹಿಸುತ್ತಿದ್ದಾರೆ. ಹಲವು ತಿಂಗಗಳುಗಳಿಂದಲೂ ಸರ್ಕಾರದ ಗಮನ ಸೆಳೆಯುತ್ತಿದ್ದಾರೆ. ಹೀಗಾಗಿ ರೈತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ವಿದ್ಯಾರ್ಥಿ-ಯುವಜನ ಸಂಘಟನೆಗಳು, ವಿಶ್ವವಿದ್ಯಾಲಯದ ಅಧ್ಯಾಪಕರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.

ಡಿಸೆಂಬರ್ 8 ರಂದು ಭಾರತ್ ಬಂದ್ ನಡೆಸಿ ಸರ್ಕಾರದ ಮೇಲೆ ಒತ್ತಡ ತರಲಾಯಿತು. ಪ್ರತಿಭಟನಾನಿರತ ರೈತರೊಂದಿಗೆ ಸರ್ಕಾರ ನಡೆಸಿದ ಹಲವು ಸುತ್ತಿನ ಮಾತುಕತೆ ಫಲಪ್ರದವಾಗಿಲ್ಲ. ಇಂತಹ ಸಂದರ್ಭದಲ್ಲಿ ನಾವುಗಳು ಕಾಯ್ದೆಗಳ ಸರಿತಪ್ಪುಗಳ ಕುರಿತು ಚರ್ಚಿಸುವುದಿಲ್ಲ. ಆದರೆ ಸಂವಿಧಾನದ ಮೂಲ ಆಶಯಗಳು, ಪ್ರಜಾಪ್ರಭುತ್ವದ ಪ್ರಕ್ರಿಯೆಗಳ ಉಲ್ಲಂಘನೆಯಾಗುತ್ತಿದೆ ಎಂಬುದರ ಬಗ್ಗೆ ಗಮನ ಸೆಳೆಯುತ್ತಿದ್ದೇವೆ.

ಕೇಂದ್ರ ಸರ್ಕಾರ ಒಕ್ಕೂಟ ವ್ಯವಸ್ಥೆಯನ್ನು ಮತ್ತು ಬಹುತ್ವವನ್ನು ಎತ್ತಿಹಿಡಿಯುವ ಕೆಲಸ ಮಾಡಬೇಕು. ಕೃಷಿ ಸಂವಿಧಾನದ 7 ಷೆಡ್ಯೂಲ್ ನ ವಿಷಯ ಪಟ್ಟಿಯಲ್ಲಿ 14 ರಲ್ಲಿ ಬರುತ್ತದೆ. ಕೃಷಿ ರಾಜ್ಯಪಟ್ಟಿಯಲ್ಲಿ ಬರುತ್ತದೆ. ಸಂವಿಧಾನದ ನಿಯಮಗಳನ್ನು ಉಲ್ಲಂಘಿಸಿ ಕಾಯ್ದೆ ಜಾರಿಗೊಳಿಸಿರುವುದರ ವಿರುದ್ಧ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ ಎಂದು ನಿವೃತ್ತ ಅಧಿಕಾರಿಗಳು ಬರೆದಿರುವ ಪತ್ರವನ್ನು ಉಲ್ಲೇಖಿಸಿ ದಿವೈರ್.ಇನ್ ವರದಿ ಮಾಡಿದೆ.

ಇದನ್ನೂ ಓದಿ: ರೈತ ಹೋರಾಟಕ್ಕೆ ಬಾಲಿವುಡ್ ಗಾಯಕ ದಿಲ್ಜಿತ್ ದೋಸಂಜ್‌ ಬೆಂಬಲ; ಹೊದಿಕೆಗಾಗಿ 1 ಕೋಟಿ ರೂ ದೇಣಿಗೆ!

ಯಾವುದೇ ಮಸೂದೆ ಮಂಡನೆಯಾಗುವ ಮೊದಲು ಸಂಸತ್ತಿನ ಸಮಿತಿಗಳಿಗೆ ಕಳಿಸಬೇಕು. ಆದರೆ ಈ ಕಾಯ್ದೆಗಳ ಅಂಗೀಕಾರಕ್ಕೂ ಮೊದಲು ಸಮಿತಿಗಳಿಗೆ ಕಳಿಸುವುದನ್ನು ನಿರಾಕರಿಸಲಾಗಿದೆ. ಯುಪಿಎ-1 ಸರ್ಕಾರ ಇದ್ದಾಗ ಶೇ.60 ಮಸೂದೆಗಳನ್ನು ಸಂಸತ್ ಆಯ್ಕೆ ಸಮಿತಿಗೆ ಕಳಿಸಲಾಗಿತ್ತು. ಯುಪಿಎ-2 ಸರ್ಕಾರದ ಅವಧಿಯಲ್ಲಿ ಶೇ.71ರಷ್ಟು ಮಸೂದೆಗಳನ್ನು ಆಯ್ಕೆ ಸಮಿತಿಗಳ ಒಪ್ಪಿಗೆಗೆ ಕಳಿಸಲಾಗಿತ್ತು. ಎನ್.ಡಿ.ಎ-1 ಸರ್ಕಾರದ ಅವಧಿಯಲ್ಲಿ ಶೇ. 25ರಷ್ಟು ಮಸೂದೆಗಳು ಮಾತ್ರ ಸಂಸತ್ತಿನ ಸಮಿತಿಗಳ ಒಪ್ಪಿಗೆ ಕಳಿಸಲಾಗಿದೆ. ಈ ಸರ್ಕಾರದ ಅವಧಿಯಲ್ಲಿ ಚರ್ಚೆ ಮತ್ತು ಸಂವಾದ ನಡೆಸುವುದನ್ನು ನಿರಾಕರಿಸಿರುವುದು ಸ್ಪಷ್ಟವಾಗಿ ಕಾಣುತ್ತದೆ ಎಂದು ಪತ್ರದಲ್ಲಿ ಹೇಳಲಾಗಿದೆ.

ಪ್ರತಿಭಟನೆ ನಡೆಸುತ್ತಿರುವ ರೈತರ ಮೇಲೆ ಜಲಫಿರಂಗಿ, ಆಶ್ರುವಾಯು ಮತ್ತು ಲಾಟಿ ಪ್ರಹಾರ ನಡೆಸುವ ಮೂಲಕ ಹೋರಾಟವನ್ನು ಹತ್ತಿಕ್ಕಲು ಸರ್ಕಾರ ಪ್ರಯತ್ನಿಸಿತು. ಪ್ರತಿಭಟನಾನಿರತ ರೈತರನ್ನು ದೇಶದ್ರೋಹಿಗಳು, ಪಾಕಿಸ್ತಾನ ಪರವಾದಿಗಳು, ಪ್ರಶಸ್ತಿ ವಾಪಸ್ಸಿಗಳು, ನಗರ ನಕ್ಸಲರು, ಖಾಲಿಸ್ತಾನಿಗಳು ಎಂದು ಬಿಂಬಿಸುವ ಮೂಲಕ ಕೇಂದ್ರ ಸರ್ಕಾರ ರೈತರೊಂದಿಗೆ ಚರ್ಚೆ, ಸಂವಾದ, ಮಾತುಕತೆಯಿಂದ ದೂರ ಉಳಿಯಲು ಯತ್ನಿಸುತ್ತಿದೆ. ಇದು ಸರಿಯಾದ ನಡೆಯಲ್ಲ ಎಂದು ಪ್ರಶ್ನಿಸಿದ್ದಾರೆ.

ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಹಕ್ಕುಗಳಿಗಾಗಿ ಶಾಂತಿಯುತ ಪ್ರತಿಭಟನೆ ನಡೆಸುವ ರೈತರು ಸೇರಿ ಯಾರೇ ಆದರೂ ಅವರಿಗೆ ಬೆಂಬಲ ನೀಡುತ್ತೇವೆ. ಈಗಲಾದರೂ ಸರ್ಕಾರ ಶಾಂತಿಯುತ ಪ್ರತಿಭಟನೆ ನಡೆಸುತ್ತಿರುವ ರೈತರ ಬೇಡಿಕೆಗಳನ್ನು ಈಡೇರಿಸುವ ಕೆಲಸ ಮಾಡಬೇಕು. ಪ್ರಜಾಪ್ರಭುತ್ವದ ರೀತಿಯಲ್ಲಿ ನಡೆಸುತ್ತಿರುವ ಪ್ರತಿಭಟಿಸುವ ಹಕ್ಕುಗಳನ್ನು ಗೌರವಿಸಬೇಕು. ಮಾತುಕತೆಯ ಮೂಲಕ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಬೇಕು ಎಂದು ನಿವೃತ್ತ ಅಧಿಕಾರಿಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ.


ಇದನ್ನೂ ಓದಿ: ಭಾರತ್‌ ಬಂದ್‌ಗೆ ಸೈನಿಕ ಬೆಂಬಲ; ಹುಬ್ಬಳ್ಳಿಯಲ್ಲಿ ಸೈನಿಕನನ್ನು ಬಂಧಿಸಿದ ಪೊಲೀಸರು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights