ದ್ರಾವಿಡ ನಾಡಲ್ಲಿ ಬಿಜೆಪಿ ಆಟ: ಕೇಸರಿ ಪಡೆಗೆ ಮರುಳಾಗ್ತಾರಾ ತಮಿಳರು?

ಯಾವುದೇ ರಾಜ್ಯವಾಗಲಿ ಅದರಲ್ಲೂ ದಕ್ಷಿಣ ಭಾರತದಲ್ಲಿ ಮತ ಕ್ರೋಢೀಕರಣಕ್ಕೆ ಬಿಜೆಪಿ ಪಕ್ಷದ ಬತ್ತಳಿಕೆಯಲ್ಲಿರುವ ಏಕೈಕ ಅಸ್ತ್ರ ಹಿಂದುತ್ವ ಅಜೆಂಡಾ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಈ ಹಿಂದಿನ ಸೋಮನಾಥ ರಥಯಾತ್ರೆಯಿಂದ ಕರ್ನಾಟಕದ ದತ್ತಪೀಠದವರೆಗೆ ಇದಕ್ಕೆ ಅನೇಕ ಉದಾಹರಣೆಗಳಿವೆ. ಉತ್ತರ ಭಾರತದ ವಿವಿಧ ರಾಜ್ಯಗಳಲ್ಲೂ ಸಹ ಬಿಜೆಪಿ ಹಿಂದುತ್ವದ ನೆರಳಿನಲ್ಲೇ ಅಧಿಕಾರಕ್ಕೇರಿದೆ. ಆದರೆ ದಕ್ಷಿಣದಲ್ಲಿ ಕೇರಳ, ತಮಿಳುನಾಡು ಮತ್ತು ತೆಲಂಗಾಣ-ಆಂಧ್ರಪ್ರದೇಶ ಇಂದಿಗೂ ಸಹ ಬಿಜೆಪಿ ಪಾಲಿಗೆ ಕಬ್ಬಿಣದ ಕಡಲೆಯಾಗೇ ಉಳಿದಿದೆ ಎಂಬುದು ಅಂಗೈ ಹುಣ್ಣಿನಷ್ಟೇ ಸತ್ಯ. ಈ ಚಿತ್ರಣ ಬದಲಾಗುತ್ತಿರುವ ಆತಂಕಗಳೂ ಈಗ ಗೋಚರವಾಗುತ್ತಿವೆ.

ಹೀಗಾಗಿ, ಇವೆಲ್ಲ ಕಡೆಗಳಲ್ಲೂ ಹಿಂದುತ್ವದ ದಾಳವನ್ನೇ ಉರುಳಿಸಲು ಮುಂದಾಗಿರುವ ಬಿಜೆಪಿ ಈ ಹಿಂದೆ ಕೇರಳದಲ್ಲಿ ಅಯ್ಯಪ್ಪಸ್ವಾಮಿಯನ್ನು ಮುಂದಿಟ್ಟು ದೊಡ್ಡ ನಾಟಕವಾಡಿತ್ತು. ಇದೀಗ ಮುಂದಿನ ವರ್ಷ ಚುನಾವಣೆ ನಿರೀಕ್ಷೆಯಲ್ಲಿರುವ ಪಶ್ಚಿಮ ಬಂಗಾಳ ಮತ್ತು ತಮಿಳುನಾಡಲ್ಲೂ ಸಹ ಬಿಜೆಪಿ ತನ್ನ ನಾಟಕ ಕಂಪೆನಿಯನ್ನು ಈಗಾಗಲೇ ಆರಂಭಿಸಿದೆ. ಬಂಗಾಳದಲ್ಲಿ ದುರ್ಗಾದೇವಿ ಪೂಜೆ ಹಾಗೂ ತಮಿಳುನಾಡಿನಲ್ಲಿ ವೆಟ್ರಿವೇಲ್ ಯಾತ್ರೆ ಎಂಬ ಹೆಸರಿನಲ್ಲಿ ರಾಜಕಾರಣಕ್ಕೆ ಮುಂದಾಗಿದೆ.

ಈ ಎರಡೂ ಯಾತ್ರೆಗಳ ಮೂಲ ಉದ್ದೇಶ ಹಿಂದೂಗಳ ಮತ ದೃವೀಕರಣವೇ ಆಗಿದ್ದು, ಬಂಗಾಳದಲ್ಲಿ ಇದನ್ನು ಮುನ್ನಡೆಸಲು ಪಟ್ಟವನ್ನು ಕರ್ನಾಟಕದ ಸಂಸದ ತೇಜಸ್ವಿ ಸೂರ್ಯನಿಗೆ ನೀಡಲಾಗಿದ್ದರೆ, ತಮಿಳುನಾಡಿನ ಸೂತ್ರವನ್ನು ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಕೈಗಿಡಲಾಗಿದೆ. ಕಳೆದ 50 ವರ್ಷಗಳಿಂದ ದ್ರಾವಿಡ ಪಕ್ಷಗಳೇ ಮೇಲುಗೈ ಸಾಧಿಸಿರುವ ತಮಿಳುನಾಡಿನಲ್ಲಿ ಬಿಜೆಪಿ ಈವರೆಗೆ ಕನಿಷ್ಟ ಖಾತೆಯನ್ನೂ ತೆರೆದಿಲ್ಲ. ಆದರೆ, ಈ ಬಾರಿ ಕನಿಷ್ಟ 30 ಸ್ಥಾನಗಳನ್ನು ಗೆಲ್ಲುವುದರ ಮೇಲೆ ಕಣ್ಣಿಟ್ಟಿದೆ. ಹೀಗಾಗಿ ನಾನಾ ಕಸರತ್ತುಗಳಿಗೆ ಮುಂದಾಗಿದೆ. ಹಾಗಾದರೆ ಈ ಬಾರಿ ಯಾವ ತಮಿಳು ಮತದಾರ ಬಿಜೆಪಿಗೆ ಮತ ಚಲಾಯಿಸಬಲ್ಲನು? ದ್ರಾವಿಡ ನಾಡಿನಲ್ಲಿ ಕಮಲ ಅರಳುತ್ತಾ?

ಏನಿದು ವೆಟ್ರಿವೇಲ್ ಯಾತ್ರಾ ನಾಟಕ?

ಸುಬ್ರಮಣ್ಯ ತಮಿಳರ ಆರಾಧ್ಯ ದೈವ. ಪ್ರತಿ ವರ್ಷ ಆಗಸ್ಟ್ ತಿಂಗಳ ಆಡಿ ಕೀರ್ತಿಗೈ ಹಬ್ಬದಂದು ಸುಬ್ರಮಣ್ಯನ ಭಕ್ತರು ಕಾವಡಿಯನ್ನು ಎತ್ತಿಕೊಂಡು ದಿಂಡುಕ್ಕಲ್ ಜಿಲ್ಲೆಯಲ್ಲಿರುವ ಪಳನಿ ಬೆಟ್ಟಕ್ಕೆ ಮೆರವಣಿಗೆ ತೆರಳುವುದು ಸಂಪ್ರದಾಯ. ಆದರೆ, ಈ ವರ್ಷ ಕೊರೊನಾ ಕಾರಣಕ್ಕೆ ಈ ಮೆರವಣಿಗೆಗೆ ಬಿಜೆಪಿ ಮಿತ್ರ ಪಕ್ಷವೇ ಆದ, ಸಿಎಂ ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ(ಎಡಿಎಂಕೆ) ಸರ್ಕಾರ ಅವಕಾಶ ನೀಡಿರಲಿಲ್ಲ.

ಆದರೆ, ಯಾತ್ರೆ ಮಾಡಿಯೇ ಸಿದ್ಧ ಎಂದು ತೀರ್ಮಾನಿಸಿರುವ ತಮಿಳುನಾಡು ಬಿಜೆಪಿ ಅಲ್ಲಿನ ಹಿಂದೂಗಳನ್ನು ಒಟ್ಟುಗೂಡಿಸಿ ಆಗಸ್ಟ್ ತಿಂಗಳಿನಿಂದ ಯಾತ್ರೆಗೆ ಅವಕಾಶ ನೀಡುವಂತೆ ಬೀದಿಗಳಿದು ಪ್ರತಿಭಟಿಸುತ್ತಿವೆ. ವಿರೋಧ ಪಕ್ಷವಾದ ಡಿಎಂಕೆ ವಿರುದ್ಧ ಬಿಜೆಪಿ ಕಿಡಿಕಾರುತ್ತಿದೆ. ಅಸಲಿಗೆ ಯಾತ್ರೆಗೆ ಅವಕಾಶ ನೀಡಲು ನಿರಾಕರಿಸಿರುವುದು ಮಿತ್ರಪಕ್ಷ ಎಡಿಎಂಕೆ ಆದರೆ, ಇವರು ಡಿಎಂಕೆ ವಿರುದ್ಧ ಕಿಡಿಕಾರುತ್ತಿರುವುದೇಕೆ? ಎಂಬುದು ಈವರೆಗೆ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ಆದರೆ, ತಮಿಳುನಾಡಿನಲ್ಲಿ ಬಿಜೆಪಿಗೆ ಭವಿಷ್ಯದ ಎದುರಾಳಿ ಡಿಎಂಕೆ ಹೊರತು ಎಡಿಎಂಕೆ ಅಲ್ಲ ಎಂಬ ಸ್ಪಷ್ಟತೆ ಬಿಜೆಪಿಗೆ ಇದೆ. ಇದೇ ಕಾರಣಕ್ಕೆ ಮೈತ್ರಿ ಬಳಸಿಕೊಂಡು ಅತ್ತ ಕಡೆ ಎಡಿಎಂಕೆ ಸಾಂಪ್ರದಾಯಿಕ ಮತಗಳನ್ನು ಸೆಳೆದು ಇತ್ತಕಡೆ ಡಿಎಂಕೆ ಪಕ್ಷವನ್ನು ಹಿಂದೂ ವಿರೋಧಿ ಪಕ್ಷ ಎಂದು ಬಿಂಬಿಸಿ ಆ ಮೂಲಕ ಡಿಎಂಕೆ ಪರವಾಗಿರುವ ಹಿಂದೂಗಳ ಮತವನ್ನೂ ಸೆಳೆಯುವುದು ಬಿಜೆಪಿ ತಂತ್ರ. ಈ ತಂತ್ರ ಸಫಲವಾದರೆ, ಭವಿಷ್ಯದಲ್ಲಿ ಎಡಿಎಂಕೆ ತೆರೆಮರೆಗೆ ಸರಿಯುವುದರಲ್ಲಿ ಯಾವುದೇ ಸಂದೇಹವಿಲ್ಲ. ಸ್ವತಃ ಎಡಿಎಂಕೆ ಸಹ ಇದೀಗ ಬಿಜೆಪಿ ಬಿ ಟೀಮ್‌ನಂತೆ ವರ್ತಿಸುತ್ತಿರುವುದು ಇಂದು ಗುಟ್ಟಾಗೇನು ಉಳಿದಿಲ್ಲ.

ಇದನ್ನೂ ಓದಿ: ತಮಿಳುನಾಡು: 2021ರ ಚುನಾವಣೆಗೆ BJP ಮತ್ತು AIADMK ಮೈತ್ರಿಗೆ ಅಮಿತ್‌ ಶಾ ಒಪ್ಪಿಗೆ!

ಈ ನಡುವೆ ಹಲವರ ವಿರೋಧದ ನಡುವೆಯೂ ಬಿಜೆಪಿ ಆಂಧ್ರಪ್ರದೇಶದ ಗಡಿಯಲ್ಲಿರುವ ತಿರುತ್ತನಿ ಜಿಲ್ಲೆಯಿಂದ ಸೇಲಂ ಕೊಯಮತ್ತೂರು ಮಧುರೈ ಹಾದಿಯಾಗಿ ತಿರುಚ್ಚಂದೂರ್‌ಗೆ ತೆರಳುವ ವೆಟ್ರಿವೇಲ್ ಯಾತ್ರೆಯನ್ನು ಯೋಜಿಸಿದೆ. ಈ ಸಾವಿರ ಕಿಮೀ ಯಾತ್ರೆಯ ಉದ್ಘಾಟನೆಗೆ ಯೋಗಿ ಆದಿತ್ಯನಾಥ್, ಬಿಎಸ್ ಯಡಿಯೂರಪ್ಪ, ಶಿವರಾಜ್ ಸಿಂಗ್ ಚೌವ್ಹಾಣ್ ಸೇರಿದಂತೆ 6 ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಚಿವರಾದ ಅಮಿತ್ ಶಾ, ನಿರ್ಮಲಾ ಸೀತಾರಾಮನ್, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾನಂತಹ ನಾಯಕರು ಆಗಮಿಸಲಿದ್ದಾರೆ ಎಂದು ಪ್ರಚಾರ ನಡೆಸುತ್ತಿದೆ. ಈ ಯಾತ್ರೆಯ ಮೂಲಕ ಹಿಂದೂಗಳ ಮತಗಳನ್ನು ಸೆಳೆಯುವುದು ಬಿಜೆಪಿ ತಂತ್ರ. ಹೀಗಾಗಿ ಚುನಾವಣೆ ಆರಂಭವಾಗುವುದಕ್ಕೂ ಮುನ್ನ ಯಾವುದೇ ಸಂದರ್ಭದಲ್ಲಿ ತಮಿಳುನಾಡಿನಲ್ಲಿ ಎಡಿಎಂಕೆ ಸಹಭಾಗಿತ್ವದಲ್ಲೇ ಈ ಯಾತ್ರೆ ನಡೆದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.

ಪ್ರತಿ ಹಳ್ಳಿಗಳಲ್ಲೂ ತಲೆ ಎತ್ತುತ್ತಿದೆ ಬಿಜೆಪಿ ಜಾತಿಸಂಘ

ಪ್ರತಿ ಹಳ್ಳಿಗಳಲ್ಲೂ ಆರ್‌ಎಸ್‌ಎಸ್ ಘಟಕಗಳನ್ನು ಸ್ಥಾಪಿಸುವ ಮೂಲಕ ಅಲ್ಲಿನ ಜನರನ್ನು ಸಂಘಟಿಸಿ ಅವರ ತಲೆಗೆ ಧರ್ಮಾಂಧತೆಯನ್ನು ತುಂಬುವುದು ಜನಸಂಘದ ಹಳೆಯ ರಾಜಕೀಯ ಸೂತ್ರ. ಜನಸಂಘ ಬಿಜೆಪಿಯಾಗಿ ಬದಲಾದ ನಂತರವೂ ಇದೇ ಸೂತ್ರವನ್ನೇ ಬಳಸಲಾಗುತ್ತಿದೆ. ದೆಹಲಿಯಿಂದ ಕರ್ನಾಟಕದವರೆಗೆ ಅನೇಕ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಏರಲು ಈ ಸೂತ್ರ ಯಶಸ್ವಿಯಾಗಿ ಕಾರ್ಯನಿರ್ವಹಿಸಿದೆ. ಇದೀಗ ಇದೇ ಸೂತ್ರವನ್ನು ಕೆಲವು ಮಾರ್ಪಾಡುಗಳೊಂದಿಗೆ ತಮಿಳುನಾಡಿನಲ್ಲಿ ಜಾರಿಗೆ ತರಲು ಬಿಜೆಪಿ ಮುಂದಾಗಿದೆ. ಅದೇನು ಗೊತ್ತಾ?

ಇದನ್ನೂ ಓದಿ: ಒಂದೂ ಸ್ಥಾನ ಗೆಲ್ಲದ ತಮಿಳುನಾಡಿನಲ್ಲಿ ಖಾತೆ ತೆರೆಯಲು ಹಪಾಹಪಿಸುತ್ತಿದೆ ಬಿಜೆಪಿ !

ತಮಿಳುನಾಡು ದ್ರಾವಿಡ ಚಳವಳಿಗಳ ನಾಡಾದರೂ ಜಾತಿ ವಿಷಬೀಜ ಅಲ್ಲಿನ ಸಮೂಹದಲ್ಲಿ ಭಾರೀ ಆಳಕ್ಕೆ ಬೇರೂರಿದೆ ಎಂಬುದರಲ್ಲಿ ಎರಡು ಮಾತಿಲ್ಲ. ದಕ್ಷಿಣ ಭಾರತದಲ್ಲಿ ಬಹುತೇಕ ಜಾತಿಗೊಂದು ಪಕ್ಷ ಹಾಗೂ ಸಂಘಟನೆ ಇರುವುದು ತಮಿಳುನಾಡಿನಲ್ಲೇ. ಹೀಗಾಗಿ ಎಲ್ಲೆಡೆ ಧರ್ಮದ ಹೆಸರಿನಲ್ಲಿ ಮತಬೇಟೆಗೆ ಮುಂದಾಗುವ ಬಿಜೆಪಿ ತಮಿಳುನಾಡಿನಲ್ಲಿ ಮಾತ್ರ ಜಾತಿಗಳ ಮನವೊಲಿಕೆಗೆ ಮುಂದಾಗಿದೆ. ಹೀಗಾಗಿ ಪ್ರತಿ ಗ್ರಾಮಗಳಲ್ಲೂ ಆಯಾ ಜಾತಿಗಳ ಬಿಜೆಪಿ ಸಂಘವನ್ನು ಸೃಷ್ಟಿಸುವ ಮೂಲಕ ಬಹಳ ಅಪಾಯಕಾರಿ ರಾಜಕಾರಣಕ್ಕೆ ಮುಂದಾಗಿದೆ. ಆದರೆ, ಇದು ಎಷ್ಟರ ಮಟ್ಟಿಗೆ ಫಲ ನೀಡುತ್ತದೆ ಎಂಬುದನ್ನು ಕಾದುನೋಡಬೇಕಿದೆ.

ರಜಿನಿ ಬಿಜೆಪಿಗೆ ಬರಲಿಲ್ಲ ಏಕೆ?

ನಟ ರಜನಿಕಾಂತ್ ಮರಾಠ ಸಮುದಾಯಕ್ಕೆ ಸೇರಿದವರು. ಅವರ ಹೆಂಡತಿ ಲತಾ ಅವರು ಅಯ್ಯಂಗಾರಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು. ಅವರ ತಂದೆ ಕಡೆಗಿನ ಇಡೀ ಕುಟುಂಬ ಬಿಜೆಪಿ ಜೊತೆಗೆ ಗುರುತಿಸಿಕೊಂಡಿದ್ದು, ದಿನಕ್ಕೊಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಪ್ರತಿದಿನ ಸುದ್ದಿಯಲ್ಲಿರುವುದು ವಾಡಿಕೆ. ಇದೇ ಕಾರಣಕ್ಕೆ ರಜಿನಿ ಸಹ ಬಿಜೆಪಿ ಬರುತ್ತಾರೆ ಎಂಬ ಮಾತು ಸಾಕಷ್ಟು ಚಾಲ್ತಿಯಲ್ಲಿತ್ತು. ಬಿಜೆಪಿಯವರೂ ಸಹ ರಜಿನಿ ತಮ್ಮ ಪಕ್ಷಕ್ಕೆ ಬಂದರೆ ಅವರೇ ನಮ್ಮ ಸಿಎಂ ಅಭ್ಯರ್ಥಿ ಎಂದು ಘೋಷಿಸುವ ಮೂಲಕ ಸಂಚಲನ ಮೂಡಿಸಿದ್ದು ನಿಜ. ರಜನಿಗೂ ರಾಜಕೀಯ ಪ್ರವೇಶ ಮಾಡುವ ಉಮೇದು ಇತ್ತು. ಇದೇ ಕಾರಣಕ್ಕೆ ಪ್ರಧಾನಿ ಮೋದಿಯನ್ನೂ ಭೇಟಿ ಮಾಡಿ ಚರ್ಚೆ ನಡೆಸಿದ್ದು ದೊಡ್ಡ ಸುದ್ದಿಯಾಗಿತ್ತು. ಆದರೆ, 2019ರ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನ 39 ಕ್ಷೇತ್ರಗಳಲ್ಲೂ ಬಿಜೆಪಿ ನೋಟಾ ಮತಗಳ ಜೊತೆಗೆ ಪೈಪೋಟಿ ನೀಡಲಷ್ಟೇ ಶಕ್ತವಾಗಿತ್ತು. ಇನ್ನು ಮಿತ್ರಪಕ್ಷ ಆಡಳಿತರೂಢ ಎಡಿಎಂಕೆ ಗೆದ್ದದ್ದು ಒಂದು ಕ್ಷೇತ್ರದಲ್ಲಿ ಮಾತ್ರ.

Rajinikanth Denounces 'Leaked' Letter But Confirms Ill Health

ಈ ಫಲಿತಾಂಶ ರಜಿನಿಯನ್ನು ಅಕ್ಷರಶಃ ಕುಗ್ಗಿಸಿತ್ತು. ತಮಿಳುನಾಡಿನ ಜನ ಯಾವುದೇ ಕಾರಣಕ್ಕೂ ಬಿಜೆಪಿಯನ್ನು ಒಪ್ಪುವುದಿಲ್ಲ ಎಂಬುದು ಈ ಫಲಿತಾಂಶದ ಮೂಲಕ ರಜಿನಿಗೆ ಖಚಿತವಾಗಿತ್ತು. ಹೀಗಾಗಿಯೇ ಬಿಜೆಪಿ ಸೇರುವ ಯೋಚನೆಯನ್ನು ಪಕ್ಕಕ್ಕಿಟ್ಟ ರಜಿನಿ ದಿಢೀರ್ ಅಭಿಮಾನಿಗಳ ಸಭೆ ಕರೆದು ತಾನು ರಾಜಕೀಯಕ್ಕೆ ಬಂದರೆ ಸ್ವತಂತ್ರ ಪಕ್ಷ ಕಟ್ಟಿಯೇ ಬರುತ್ತೇನೆ ಎಂದು ಘೋಷಿಸಿಬಿಟ್ಟರು. ಅಲ್ಲಿಗೆ ಬಿಜೆಪಿ ಕನಸು ಒಡೆದಿತ್ತು. ಮತ್ತೊಂದೆಡೆ ಅಣ್ಣಾಮಲೈ ಎಂಬ ಹಳೆಯ ಸಂಘಪರಿವಾದ ಸದಸ್ಯ, ಐಪಿಎಸ್ ಅಧಿಕಾರಿ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಗೆ ಸಿದ್ದವಾಗಿದ್ದರು.

ಪಕ್ಷ ಕುಸಿದಿತ್ತು, ಅಣ್ಣಾಮಲೈ ಕಾದಿದ್ದರು

ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಕರ್ನಾಟಕದ ಸಿಂಗಂ ಎಂದೇ ಖ್ಯಾತಿಗಳಿಸಿದ್ದರು. ಅಸಲಿಗೆ ಅವರು ತಮ್ಮ ಚಿಕ್ಕಮಗಳೂರಿನ ಅಧಿಕಾರಾವಧಿಯಲ್ಲಿ ಕರ್ನಾಟಕದ ಸಚಿವ ಸಿಟಿ ರವಿ ಆಜ್ಞೆಯನ್ನು ಪಾಲಿಸುವವರಷ್ಟೇ. ಆದರೆ ತಮ್ಮ ಏರುಮಾತಿನ ಡೈಲಾಗ್‌ಗಳಿಂದ ಮೀಡಿಯಾ ಅವರಿಗೆ ಹೈಪ್ ನೀಡುತ್ತಿದೆ ಎಂದು ಹಲವರು ಆರೋಪಿಸಿದ್ದರು. ಈ ಎಲ್ಲಾ ಆರೋಪಗಳು ಅಣ್ಣಾಮಲೈ ಕೆಲಸಬಿಟ್ಟು ಬಿಜೆಪಿ ಸೇರುವುದರೊಂದಿಗೆ ದೃಢವಾಗಿದೆ.

Ex-IPS officer Annamalai who joined BJP booked by Coimbatore cops for  violating lockdown- The New Indian Express

ಅಣ್ಣಾಮಲೈ ತಮಿಳುನಾಡಿನ ಕರೂರು ಮತ್ತು ಕೊಯಮತ್ತೂರಿನಲ್ಲಿ ಶಿಕ್ಷಣ ಪಡೆದಿದ್ದರು. ತಾವು ವಿದ್ಯಾರ್ಥಿಯಾಗಿದ್ದಾಗಲೇ ಆರ್‌ಎಸ್‌ಎಸ್ ಜೊತೆಗೆ ಒಡನಾಟ ಹೊಂದಿದ್ದೆ ಎಂದು ಸ್ವತಃ ಅಣ್ಣಾಮಲೈ ಇತ್ತೀಚೆಗೆ ಅಲ್ಲಿನ ಮಾಧ್ಯಮಗಳ ಎದುರು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಈ ಹೇಳಿಕೆ ಹೊರ ಬೀಳುತ್ತಲೇ ’ಈತನೂ ಸಂಘಿ’ ಎಂದು ತಮಿಳುನಾಡಿನ ನೆಟಿಜನ್‌ಗಳು ವಾರಗಟ್ಟಲೇ ಟ್ರೋಲ್ ಮಾಡಿದ್ದರು.

ಆದರೆ, ತಮಿಳುನಾಡಿನಲ್ಲಿ ಖಾತೆ ತೆರೆಯಲು ಮತ್ತು ಯುವಕರನ್ನು ಸೆಳೆಯಲು ಹೊಸ ಮುಖದ ಹುಡುಕಾಟದಲ್ಲಿದ್ದ ಬಿಜೆಪಿಗೆ ರಜಿನಿ ಒಲ್ಲೆ ಎನ್ನುತ್ತಿದ್ದಂತೆ ಅವರ ಕಣ್ಣಿಗೆ ಕಂಡದ್ದು ಅಣ್ಣಾಮಲೈ. ಅಲ್ಲಿಗೆ ಅಣ್ಣಾಮಲೈ ನಾಗಪುರ ಆರ್‌ಎಸ್‌ಎಸ್ ಕೇಂದ್ರ ಕಚೇರಿಯ ಆಜ್ಞೆಯಂತೆ ಕರ್ನಾಟಕದಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿ ಇದೀಗ ತಮಿಳುನಾಡಿನ ರಾಜಕೀಯಕ್ಕೆ ಬಿಜೆಪಿ ಮೂಲಕ ಧುಮುಕಿದ್ದಾರೆ. ಆದರೆ, ಅಲ್ಲಿನ ಯುವ ಜನ ಅಣ್ಣಾಮಲೈ ಮಾತುಗಳಿಗೆ ಕಿವಿಗೊಟ್ಟಿದ್ದಕ್ಕಿಂತ ಅವರನ್ನು ಟ್ರೋಲ್ ಮಾಡಿದ್ದೆ ಅಧಿಕ ಎನ್ನಬಹುದು.

ಮೀಡಿಯಾ ಪ್ರೊಪಗಾಂಡ

ಕರ್ನಾಟಕದಂತೆ ತಮಿಳುನಾಡಿನಲ್ಲೂ ಸುದ್ದಿ ಮಾಧ್ಯಮಗಳಿಗೆ ಬರವಿಲ್ಲ. ಸುದ್ದಿ ಮಾಧ್ಯಮಗಳಲ್ಲಿ ಪೇಯ್ಡ್ ಸುದ್ದಿ ನೀಡುವ ಮೂಲಕ ಜನರ ಮನೆಗಳಿಗೆ ತಲುಪುವುದು ಬಿಜೆಪಿಗೆ ಹೊಸ ವಿಚಾರವೇನಲ್ಲ. ಅದೇ ತಮ್ಮ ಪ್ರೊಪಗಾಂಡವನ್ನು ಇದೀಗ ತಮಿಳುನಾಡಿನಲ್ಲೂ ಬಿಜೆಪಿ ಕಾರ್ಯರೂಪಕ್ಕೆ ತಂದಿದೆ.

ಇದನ್ನೂ ಓದಿ: ವೆಟ್ರಿ ವೆಲ್‌ ಯಾತ್ರೆ ನಡೆಸಲು ಮುಂದಾಗಿದ್ದ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಬಂಧನ!

ತಮಿಳುನಾಡಿನಲ್ಲಿ ಕೆಲ ಪಕ್ಷಗಳ ಮುಖವಾಣಿಗಳಾದ ಸನ್ ಟಿವಿ, ಕಲೈಜ್ಞರ್ ಟಿವಿ (ಡಿಎಂಕೆ) ಹಾಗೂ ಜಯ ಟಿವಿ (ಎಡಿಎಂಕೆ) ಹೊರತು ನ್ಯೂಸ್-18, ಪುದಿಯ ತಲೈಮುರೈ, ಪಾಲಿಮರ್, ತಂತಿ ಟಿವಿ, ಚಾಣಕ್ಯ ಟಿವಿ, ನ್ಯೂಸ್-7 ಹೀಗೆ ನಾನಾ ಸುದ್ದಿ ಮಾಧ್ಯಮಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಬಿಜೆಪಿ ಯಶಸ್ವಿಯಾಗಿದೆ.

ಈ ನಡುವೆ ಬಿಜೆಪಿ ಮತ್ತು ಹಿಂದಿ ವಿರೋಧಿ ಚಳವಳಿಗಳು ತಮಿಳುನಾಡಿನಲ್ಲಿ ಚಾಲ್ತಿಯಲ್ಲಿದ್ದರೂ ಅವು ಟಿವಿಗಳಲ್ಲಿ ಸುದ್ದಿಯಾದದ್ದು ಕಡಿಮೆಯೇ. ಒಟ್ಟಿನಲ್ಲಿ ದ್ರಾವಿಡ ಮಣ್ಣಿನಲ್ಲಿ ಕಮಲವನ್ನು ಅರಳಿಸಲು ಬಿಜೆಪಿ ನಾಯಕರು ಸಾಕಷ್ಟು ಕಸರತ್ತು ನಡೆಸುತ್ತಿದ್ದಾರೆ. ನಟ ನಟಿಯರನ್ನು ತಮ್ಮ ಪಕ್ಷಗಳಿಗೆ ಸೆಳೆಯಲು ಸಾಕಷ್ಟು ಶ್ರಮಿಸುತ್ತಿದ್ದಾರೆ. ಆದರೆ, ಈ ಎಲ್ಲಾ ನಾಟಕಗಳು ಫಲ ನೀಡುತ್ತಾ? ಅಣ್ಣಾಮಲೈ ಮುಖಕ್ಕೆ ದ್ರಾವಿಡ ಜನ ಮಣೆ ಹಾಕ್ತಾರಾ? ಎಂಬುದಕ್ಕೆ ಚುನಾವಣೆ ಫಲಿತಾಂಶ ಉತ್ತರ ನೀಡಲಿದೆ.

ತಮಿಳುನಾಡು ಮತ್ತು ಜಾತಿ ರಾಜಕಾರಣ

ಸಾಮಾನ್ಯವಾಗಿ ತಮಿಳುನಾಡಿನಲ್ಲಿ ಗೌಂಡರ್, ಮೊದಲಿಯರ್, ವಣ್ಣಿಯರ್, ತೇವರ್ ಸಾಮಾಜಿಕ ಮತ್ತು ಆರ್ಥಿಕವಾಗಿ ಪ್ರಬಲ ಜಾತಿಗಳಾಗಿವೆ. ಆದರೂ, ದಲಿತರ ಮತ್ತು ಅಲ್ಪ ಸಂಖ್ಯಾತರ ಸಂಖ್ಯೆಯೇ ಅಧಿಕ. ಈ ಎಲ್ಲಾ ಜಾತಿಗಳಿಗೂ ಒಂದು ಪಕ್ಷ ಇದೆ ಎಂಬುದೇ ಇದರಲ್ಲಿ ವಿಶೇಷ.

Ahead of Tamil Nadu Assembly poll, former IPS officer Annamalai Kuppuswamy  to join BJP on August 25 | India News | Zee News

ಕೊಂಗುನಾಡು ಮುನ್ನೇಟ್ರ ಕಳಗಂ (KMK) ಕೊಂಗು ಇಲೈಜ್ಞರ್ ಪೇರವೈ (KEP) ಮತ್ತು ಕೊಂಗುನಾಡು ದೇಸಿಯ ಕಚ್ಚಿ (KDK) ಪ್ರಬಲ ಗೌಂಡರ್ ಜಾತಿಯ ಒಲವಿರುವ ಪಕ್ಷವಾದರೆ, ಪಾಟ್ಟಾಳಿ ಮಕ್ಕಳ್ ಕಚ್ಚಿ (PMK) ವಣ್ಣಿಯರ್ ಮತ್ತು ದೇವರ್ ಸಮುದಾಯಗಳನ್ನು ಪ್ರತಿನಿಧಿಸುವ ಪಕ್ಷವಾಗಿ ಗುರುತಿಸಿಕೊಂಡಿದೆ. ಇತರೆ ಜಾತಿ ಪಕ್ಷಗಳಿಗೆ ಹೋಲಿಸಿದರೆ ಪಾಟ್ಟಾಳಿ ಮಕ್ಕಳ್ ಕಚ್ಚಿ ಎಂಬ ಪಕ್ಷ ಕಳೆದ ಲೋಕಸಭಾ ಚುನಾವಣೆಯಲ್ಲಿ ಒಂದು ಸ್ಥಾನದಲ್ಲಿ ಗೆಲುವು ಸಾಧಿಸುವ ಮೂಲಕ ಯಶಸ್ವಿ ಜಾತಿವಾದಿ ಪಕ್ಷ ಎಂದು ಗುರುತಿಸಿಕೊಂಡಿದೆ. ದಲಿತರ ಮೇಲೆ ದೌರ್ಜನ್ಯ ನಡೆಸಿದ ಕುಖ್ಯಾತಿಯೂ ಅದಕ್ಕಿದೆ.

ಇದಲ್ಲದೆ ದಲಿತ ಮತ್ತು ಅಲ್ಪಸಂಖ್ಯಾತ ಮತದಾರರನ್ನು ಪ್ರತಿನಿಧಿಸುವ ತೋಳ್ ತಿರುಮಾವಳವನ್ ನೇತೃತ್ವದ ವಿಡುದಲೈ ಚಿರುತೈಗಳ್ ಕಚ್ಚಿ (VCK) ಮತ್ತು ಡಾ. ಕೃಷ್ಣಸ್ವಾಮಿ ಅವರ ಪುದಿಯ ತಮಿಳಗಂ (PT) ಪಕ್ಷವೂ ಚಾಲ್ತಿಯಲ್ಲಿವೆ. ಈ ಎಲ್ಲಾ ಪಕ್ಷಗಳಿಗೂ ಕನಿಷ್ಟ ಶೇ.1 ರಿಂದ ಗರಿಷ್ಟ ಶೇ.6ರವರೆಗೆ ಮತಗಳನ್ನು ಸೆಳೆಯುವ ಸಾಮರ್ಥ್ಯವಿದೆ. ಹೀಗಾಗಿ ಡಿಎಂಕೆ ಮತ್ತು ಎಡಿಎಂಕೆ ಪಕ್ಷಗಳು ಎಲ್ಲಾ ಚುನಾವಣೆಗಳಲ್ಲೂ ಈ ಜಾತಿ ಪಕ್ಷಗಳ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ಮತಗಳ ಬೇಟೆಗೆ ಮುಂದಾಗುವುದು ತಮಿಳುನಾಡಿನ ಸಾಂಪ್ರದಾಯಿಕ ರಾಜಕಾರಣ ಎಂಬಂತೆ ಬದಲಾಗಿರುವುದು ನಿಜ.

– ತೇಜಸ್ವಿ ಬಿ.ಎ


ಇದನ್ನೂ ಓದಿ: 2021ರ ವಿಧಾನಸಭಾ ಚುನಾವಣಗೆ ಸ್ಪರ್ಧಿಸುವುದಿಲ್ಲ: ತಮಿಳು ಬಿಜೆಪಿ ಅಧ್ಯಕ್ಷ ಮುರುಗನ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights