ಮೋದಿ ಸರ್ಕಾರಕ್ಕೆ ಮುಖಭಂಗ: BJPಗೆ ರಾಜೀನಾಮೆ ನೀಡಿದ ಮಾಜಿ ಕೇಂದ್ರ ಸಚಿವ!

ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದಲ್ಲಿ ಸಚಿವರಾಗಿದ್ದು, ಸಚಿವ ಸ್ಥಾನ ತೊರೆದಿದ್ದ ಗುಜರಾತ್‌ನ ಸಂಸದ ಮನ್ಸುಖ್ ಭಾಯ್ ಅವರು ಬಿಜೆಪಿಗೆ ರಾಜೀನಾಮೆ ನೀಡಿದ್ದು, ಪಕ್ಷ ತೊರೆದಿದ್ದಾರೆ.

ಅಲ್ಲದೆ, ಸಂಸತ್‌ನಲ್ಲಿ ನಡೆಯುವ ಮುಂದಿನ ಬಜೆಟ್‌ ಅಧಿವೇಶನದಲ್ಲಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಅವರು ತಿಳಿಸಿದ್ದಾರೆ.

ಗುಜರಾತ್‌ ಬಿಜೆಪಿ ಅಧ್ಯಕ್ಷ ಸಿ.ಆರ್.ಪಾಟೀಲ್ ಅವರಿಗೆ ಈ ಬಗ್ಗೆ ಪತ್ರ ಬರೆದಿದ್ದು,  “ನಾನು ಪಕ್ಷಕ್ಕೆ ನಿಷ್ಠನಾಗಿದ್ದೆ, ಪಕ್ಷದ ಮೌಲ್ಯಗಳನ್ನು ನಾನು ಅನುಸರಿಸಿದ್ದೇನೆ. ಅದೆಲ್ಲದರ ಆಚೆಗೂ, ನಾನು ಮನುಷ್ಯನಾಗಿದ್ದೇನೆ. ಒಬ್ಬ ಮನುಷ್ಯನು ಗೊತ್ತಿಲ್ಲದೆ ಅಥವಾ ತಿಳಿಯದೆ ತಪ್ಪುಗಳನ್ನು ಮಾಡುತ್ತಾನೆ. ನನ್ನ ತಪ್ಪುಗಳಿಂದ ಪಕ್ಷಕ್ಕೆ ಹಾನಿಯಾಗಬಾರದು ಎಂದು ನಾನು ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇನೆ” ಎಂದು ಅವರು ಹೇಳಿದ್ದಾರೆ.

“ಬಜೆಟ್ ಅಧಿವೇಶನದಲ್ಲಿ ಸಭಾಪತಿಗಳನ್ನು ನಾನು ಖುದ್ದಾಗಿ ಭೇಟಿ ಮಾಡುತ್ತೇನೆ. ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ಪತ್ರವನ್ನು ಅವರಿಗೆ ಸಲ್ಲಿಸುತ್ತೇನೆ. ನನ್ನ ಈ ನಿರ್ಧಾರವನ್ನು ದಯವಿಟ್ಟು ದೆಹಲಿ ನಾಯಕತ್ವಕ್ಕೆ ತಿಳಿಸಿ” ಎಂದು ಅವರು ಬರೆದಿದ್ದಾರೆ.

ಶ್ರೀ ವಾಸವ ಅವರು ತಮ್ಮ ಮೇಲಿನ ಒತ್ತಡ ತಂತ್ರಗಳಿಗೆ ಮಣಿದು ಈ ನಿರ್ಧಾರ ಮಾಡಿರಬಹುದು ಎಂಬ ಊಹಾಪೋಹಗಳಿವೆ.

ಗುಜರಾತ್‌ನಲ್ಲಿ ರಾಜ್ಯ ಬಿಜೆಪಿಯ ಕಾರ್ಯವೈಕರಿ ಮತ್ತು ನಡೆಸಿಕೊಳ್ಳುವ ರೀತಿಗಳು ಅವರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ.

ಕಳೆದ ವಾರ, ವಾಸವ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದರು. ನರ್ಮದಾ ಜಿಲ್ಲೆಯ 121 ಗ್ರಾಮಗಳನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸಿದ್ದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಅಧಿಸೂಚನೆಯನ್ನು ಹಿಂತೆಗೆದುಕೊಳ್ಳುವಂತೆ ಕೋರಿದ್ದರು.


ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ BJPಗೇ ಆಪರೇಷನ್‌; ಎನ್‌ಸಿಪಿ ಸೇರಲಿದೆ ಬಿಜೆಪಿಗರ ದಂಡು: ಅಜಿತ್ ಪವಾರ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights