BJP ತೊರೆದಿದ್ದ ಸಂಸದ ಪಕ್ಷಕ್ಕೆ ವಾಪಸ್‌: ಚಿಕಿತ್ಸೆಗಾಗಿ ಸಂಸದನಾಗಿ ಮುಂದುವರೆಯುವೆ ಎಂದ ಮನ್ಸುಖ್ ವಾಸವ್

ಮಂಗಳವಾರ ಬಿಜೆಪಿಗೆ ರಾಜೀನಾಮೆ ನೀಡಿ, ಪಕ್ಷ ತೊರೆಯುವುದಾಗಿ ಹೇಳಿದ್ದ ಗುಜರಾತ್‌ನ ಭರೂಚ್ ಕ್ಷೇತ್ರದ ಬಿಜೆಪಿ ಸಂಸದ ಮನ್ಸುಖ್ ವಾಸವ್ ಅವರು ತಮ್ಮ ರಾಜೀನಾಮೆಯನ್ನು ಹಿಂಪಡೆದಿದ್ದಾರೆ. ಅಲ್ಲದೆ, ಪಕ್ಷದಲ್ಲೇ ಉಳಿಯುವುದಾಗಿಯೂ, ಸಂಸದರಾಗಿ ಮುಂದುವರೆಯುವುದಾಗಿಯೂ ಹೇಳಿದ್ದಾರೆ.

ನರ್ಮದಾ ಜಿಲ್ಲೆಯ 121 ಗ್ರಾಮಗಳನ್ನು “ಪರಿಸರ ಸೂಕ್ಷ್ಮ ವಲಯ” ಎಂದು ಘೋಷಿಸಿ ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಇತ್ತೀಚೆಗೆ ಹೊರಡಿಸಿದ್ದ ಅಧಿಸೂಚನೆಯನ್ನು ವಿರೋಧಿಸಿ ವಾಸವ್‌ ಬಿಜೆಪಿಗೆ ರಾಜೀನಾಮೆ ನೀಡಿದ್ದರು.

ಗುಜರಾತ್‌ ಮುಖ್ಯಮಂತ್ರಿ ವಿಜಯ್‌ ರೂಪಾನಿ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಮಾತನಾಡಿದ ವಸಾವ್‌, “ನಾನು ಸಂಸದನಾಗಿ ಮುಂದುವರಿದರೆ ಮಾತ್ರ ನನ್ನ ಬೆನ್ನು ನೋವು ಮತ್ತು ಕುತ್ತಿಗೆ ನೋವಿಗೆ ಉಚಿತ ಚಿಕಿತ್ಸೆ ಪಡೆಯಲು ಸಾಧ್ಯ. ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಆ ಸೌಲಭ್ಯ ನನಗೆ ಸಿಗುವುದಿಲ್ಲ. ಪಕ್ಷದ ಮುಖಂಡರು ನನ್ನನ್ನು ವಿಶ್ರಾಂತಿ ಪಡೆಯಲು ಕೇಳಿಕೊಂಡಿದ್ದು, ಪಕ್ಷದ ಸ್ಥಳೀಯ ಕಾರ್ಯಕರ್ತರು ನನ್ನ ಪರವಾಗಿ ಕೆಲಸ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ಭರವಸೆ ನೀಡಿದ್ದಾರೆ” ಎಂದು ಅವರು ತಿಳಿಸಿದ್ದಾರೆ.

“ಮುಖ್ಯಮಂತ್ರಿ ಜೊತೆ ಈ ಬಗ್ಗೆ ಚರ್ಚೆ ನಡೆಸಿದ್ದೇನೆ. ಬಿಜೆಪಿಯ ಹಿರಿಯ ನಾಯಕರು ಸಮಾಧಾನಪಡಿಸಿದರು. ಹಾಗಾಗಿ ರಾಜೀನಾಮೆ ಹಿಂಪಡೆದು, ಪಕ್ಷದಲ್ಲಿ ಮುಂದುವರಿಯಲಿದ್ದೇನೆ. ಅಲ್ಲದೆ ಸಂಸದನಾಗಿ ಸೇವೆ ಸಲ್ಲಿಸಲು ನಿರ್ಧರಿಸಿದ್ದೇನೆ” ಎಂದು ತಿಳಿಸಿದ್ದಾರೆ. ಮಂಗಳವಾರವಷ್ಟೇ ಗುಜರಾತ್‌ ಬಿಜೆಪಿ ಅಧ್ಯಕ್ಷ ಸಿ.ಆರ್‌. ಪಾಟೀಲ್ ಅವರಿಗೆ ರಾಜಿನಾಮೆ ಪತ್ರ ಕಳುಹಿಸಿದ್ದ ವಾಸವ್, ಮುಂಬರುವ ಬಜೆಟ್ ಅಧಿವೇಶನದ ವೇಳೆ ತಮ್ಮ ಸಂಸದ ಸ್ಥಾನಕ್ಕೆ ಕೂಡಾ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದರು.

ಸರ್ದಾರ್ ಪಟೇಲ್‌ರ ಏಕತಾ ಪ್ರತಿಮೆಯ ಸುತ್ತಲಿನ 121 ಗ್ರಾಮಗಳ ರೈತರು ಹಾಗೂ ಸ್ಥಳೀಯರ ಹಿತಾಸಕ್ತಿಯನ್ನು ಗಮನದಲ್ಲಿರಿಸಿ ಪರಿಸರ ಸೂಕ್ಷ್ಮ ವಲಯದ ಅಧಿಸೂಚನೆಯನ್ನು ವಾಪಸ್ ಪಡೆಯಬೇಕೆಂದು ಆದಿವಾಸಿ ನಾಯಕರೂ ಆಗಿರುವ ಮನ್ಸುಖ್ ಪ್ರಧಾನಿಗೆ ಪತ್ರ ಬರೆದಿದ್ದರು. ಈಗಾಗಲೇ ಶೂಲ್ಪನೇಶ್ವರ್ ವನ್ಯಜೀವಿ ಧಾಮದ ಸುತ್ತಲಿನ ಪ್ರದೇಶವನ್ನು “ಪರಿಸರ ಸೂಕ್ಷ್ಮ ವಲಯ” ಎಂದು ಘೋಷಿಸುವ ಅಂತಿಮ ಅಧಿಸೂಚನೆಯ ಕುರಿತಂತೆ ನರ್ಮದಾ ಜಿಲ್ಲೆಯ ಆದಿವಾಸಿಗಳಲ್ಲಿ ಆಕ್ರೋಶ ಭುಗಿಲೆದ್ದಿದೆ. ಅಧಿಸೂಚನೆಯ ನೆಪದಲ್ಲಿ ಅಧಿಕಾರಿಗಳು ಆದಿವಾಸಿಗಳ ಖಾಸಗಿ ಜಮೀನುಗಳಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದಾರೆ ಎಂದು ಆರೋಪಗಳು ಕೇಳಿಬರುತ್ತಿದೆ.


ಇದನ್ನೂ ಓದಿ: ಮೋದಿ ಸರ್ಕಾರಕ್ಕೆ ಮುಖಭಂಗ: BJPಗೆ ರಾಜೀನಾಮೆ ನೀಡಿದ ಮಾಜಿ ಕೇಂದ್ರ ಸಚಿವ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights