ರೈತ ಹೋರಾಟ: ಪೊಲೀಸರ ಬ್ಯಾರಿಕೇಡ್‌ ಮುರಿದು ಮುನ್ನುಗ್ಗಿದ ರೈತರು!

ಕೇಂದ್ರ ಸರ್ಕಾರದ ಕೃಷಿ ನೀತಿಗಳ ವಿರುದ್ದ ರೈತರ ಹೋರಾಟ 36ನೇ ದಿನಕ್ಕೆ ಕಾಲಿಟ್ಟಿದೆ. ದಿನ ಕಳೆದಂತೆ, ರೈತರ ಆಕ್ರೋಶ ತೀವ್ರಗೊಳ್ಳುತ್ತಿದೆ. ರಾಜಸ್ಥಾನ-ಹರಿಯಾಣ ಗಡಿಯಲ್ಲಿ ಪೊಲೀಸರು ರಸ್ತೆಗೆ ಅಡ್ಡವಾಗಿ ಇರಿಸಿದ್ದ ಬ್ಯಾರಿಕೇಡ್‌ಗಳನ್ನು ರೈತರು ಮುರಿದು ದೆಹಲಿಯತ್ತ ಹೊರಟಿದ್ದಾರೆ.

ಪೊಲೀಸರು ಜಲಫಿರಂಗಿ ಮತ್ತು ಅಶ್ರುವಾಯು ಪ್ರಯೋಗಿಸಿ ರೈತರನ್ನು ತಡೆಯಲು ಯತ್ನಿಸಿದರು. ಆದರೂ 20-25 ಟ್ರ್ಯಾಕ್ಟರ್‌ಗಳಿಂದ ಬ್ಯಾರಿಕೇಡ್‌ಗಳನ್ನು ಮುರಿಯಲಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

“ನಾವು ಲಾಠೀ ಚಾರ್ಜ್ ಮಾಡಿಲ್ಲ. ಆದರೆ ಅವರನ್ನು ತಡೆಯಲು ಅಶ್ರುವಾಯು ಮತ್ತು ಜಲಫಿರಂಗಿಗಳನ್ನು ಸಿಡಿಸಬೇಕಾಯಿತು. ಆದರೂ ಅವರನ್ನೂ ತಡೆಯಲಾಗಲಿಲ್ಲ” ಎಂದು ಬವಾಲ್ ಡಿಎಸ್‌ಪಿ ರಾಜೇಶ್‌ ಕುಮಾರ್ ಹೇಳಿದರು.

ಇದನ್ನೂ ಓದಿ: ಹೋರಾಟದಲ್ಲೂ ಕೃಷಿ ಬಿಡದ ರೈತರು; ಪ್ರತಿಭಟನೆಯಲ್ಲೇ ಈರುಳ್ಳಿ ಬೆಳೆ!

ಕಳೆದ ಒಂದು ತಿಂಗಳಿನಿಂದ ಲಕ್ಷಾಂತರ ರೈತರು ದೆಹಲಿಯ ಗಡಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದು, ಕೇಂದ್ರ ಸರ್ಕಾರದ ರೈತ ವಿರೋಧಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಜೊತೆ ಆರು ಸುತ್ತಿನ ಮಾತುಕತೆಗಳು ನಡೆದಿದ್ದು, ಅವುಗಳೆಲ್ಲವೂ ವಿಫಲವಾಗಿವೆ. ಈಗ ಜನವರಿ 4 ರಂದು ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಈ ನಡುವೆಯೇ ರೈತರ ಪ್ರತಿಭಟನೆಯನ್ನು ದಿಕ್ಕುತಪ್ಪಿಸಲು ಕೇಂದ್ರದ ಬಿಜೆಪಿ ಸರ್ಕಾರ ಮತ್ತು ಬಲಪಂಥೀಯ ಮಾಧ್ಯಮಗಳು ಹಾಗೂ ಬಿಜೆಪಿ ಐಟಿ ಸೆಲ್‌ಗಳು ಪ್ರಯತ್ನಿಸುತ್ತಿವೆ. ಇದರ ಭಾಗವಾಗಿ ರೈತರನ್ನು ನಕ್ಸಲರು, ಖಲೀಸ್ತಾನಿಗಳು, ಭಯೋತ್ಪಾದಕರು, ನಕಲಿ ರೈತರು ಎಂದು ಮುಂತಾದ ಅಸಾಂವಿಧಾನಿಕ ಪದಗಳನ್ನು ಪ್ರಯೋಗಿಸಿ ಜನರಲ್ಲಿ ನಕಾರಾತ್ಮಕ ಭಾವನೆಯನ್ನು ಹರಡುತ್ತಿದೆ. ಆದರೆ ಇದಾವುದಕ್ಕೂ ಅಂಜದ ರೈತರು ತಮ್ಮ ದಿಟ್ಟ ಹೋರಾಟವನ್ನು ಮುಂದುವರೆಸಿದ್ದಾರೆ.


ಇದನ್ನೂ ಓದಿ: ಅಂಬಾನಿ ಪರನಿಂತ ಪ್ರಧಾನಿ ಮೋದಿ? ರೈತರ ಬಾಯ್ಕಾಟ್‌ ಜಿಯೋಗೆ ಪರೋಕ್ಷವಾಗಿ ವಿರೋಧ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

One thought on “ರೈತ ಹೋರಾಟ: ಪೊಲೀಸರ ಬ್ಯಾರಿಕೇಡ್‌ ಮುರಿದು ಮುನ್ನುಗ್ಗಿದ ರೈತರು!”

  • January 1, 2021 at 10:06 pm
    Permalink

    EESuddiಗೆ ರೈತರ ಬೇಡಿಕೆಯನ್ನು ಮೋದಿ ಸರ್ಕಾರ ಬಗೆಹರಿಸಬಾರದೆಂದು ಸುಳ್ಳು ಸುದ್ದಿಯನ್ನು ಪ್ರಚಾರ ಮಾಡಿದರೂ ಮೋದಿನೇ ಬಗೆಹರಿಸುವರು.ಆಮೇಲೆ ನಿನ್ನ ನೃತ್ಯಗಾರಿಣಿಯ ಪಕ್ಷ ಮಣ್ಣುಮುಕ್ಕುವುದು

    Reply

Leave a Reply

Your email address will not be published.

Verified by MonsterInsights