ದೇಶಕ್ಕೆ ಪ್ರಥಮ ಸ್ಥಾನ ಪಡೆದ ಗ್ರಾಮ ನಮ್ಮದೇ… ಈ ಗ್ರಾಮ ಹೇಗಿದೆ ನೋಡಿ….

ಬಹುತೇಕ ಹಳ್ಳಿಗಳು ಹಲವು ಮೂಲಭೂತ ಸಮಸ್ಯೆಗಳಿಂದ ನರಳುತ್ತಿವೆ. ಕುಡಿಯೋಕೆ ನೀರಿಲ್ಲಾ, ಸರಿಯಾದ ರಸ್ತೆ ಇಲ್ಲ, ದಿಢೀರ್‌ ಆರೋಗ್ಯ ಸಮಸ್ಯೆಯಾದರೆ ಒಂದು ಆಸ್ಪತ್ರೆನೂ ಇರಲ್ಲಾ. ಆದರೆ ಈ ಗ್ರಾಮ ಯಾವ ಹೈಟೆಕ್ ಸಿಟಿಗೂ ಕಡಿಮೆ ಇಲ್ಲಾ, ಇಲ್ಲಿ ಯಾವುದೇ ಸಮಸ್ಯೆಗೆ ಆಸ್ಪದ ಇಲ್ಲಾ,ಇಷ್ಟಕ್ಕೆಲ್ಲ ಕಾರಣ ಇಲ್ಲಿನ ಜನಪ್ರತಿನಿಧಿಗಳ ಒಗ್ಗಟ್ಟಿನ ಮಂತ್ರ. ಜನಸಾಮಾನ್ಯ ರಿಗೆ ಮಿಡಿಯುವ ಹೃದಯವಂತಿಕೆ. ಹಾಗಾಗಿ ಈ ಹಳ್ಳಿ ಈಗ ದಿಲ್ಲಿಯಂತೆ ಕಂಗೊಳಿಸುತ್ತಿದೆ.

ಸುರ್ಜಿತ ಬೀದಿ ರಸ್ತೆಗಳು… ಎಲ್ಲೆಂದರಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು… ಸುತ್ತಲೂ ಕಂಗೊಳಿಸುವ ಹಸಿರು ನರ್ತನ… ಖಾಸಗಿ ಶಾಲೆಗಳನ್ನೂ ಮೀರಿಸುವ ಸರ್ಕಾರಿ ಶಾಲೆಗಳು. ಹೌದು ಇದು ಗದಗ ತಾಲೂಕಿನ ಹುಲಕೋಟಿ ಗ್ರಾಮದಲ್ಲಿ ಕಂಡು ಬಂದ‌ ದೃಶ್ಯಗಳು. ಹುಲಕೋಟಿ ಗ್ರಾಮ ಈಗ ಇಡೀ ದೇಶದಲ್ಲಿ ನಂಬರ್ ಒನ್ ಸ್ಥಾನ ಪಡೆದ ಅಭಿವೃದ್ಧಿ ಹೊಂದಿದ ಹಳ್ಳಿಯಾಗಿ ಪರಿಣಮಿಸಿದೆ. ಕೇಂದ್ರ ಸರಕಾರದ ಗ್ರಾಮೀಣ ಅಭಿವೃದ್ಧಿ ಸಚಿವಾಲಯ ದಿಂದ ಕೈಗೊಂಡ ಮಿಷನ್ ಅಂತ್ಯೋದಯ 2020ರ ಸಮೀಕ್ಷೆಯಲ್ಲಿ ಹುಲಕೋಟಿ ಗ್ರಾಮಕ್ಕೆ ಪ್ರಥಮ ಸ್ಥಾನ ಪಡೆದಿದೆ. ಬಡತನ ನಿರ್ಮೂಲನೆ ಯಲ್ಲಿ ಗ್ರಾಮ ಪಂಚಾಯತಿಗಳು ಕೈಗೊಂಡ ಉಪಕ್ರಮಗಳು ಕುರಿತು ‌ನಡೆಸಿದ ಈ ಸಮೀಕ್ಷೆ ಯಲ್ಲಿ ಕರ್ನಾಟಕದಿಂದ ಹುಲಕೋಟಿ ಗ್ರಾಮ ಪ್ರಥಮ ಸ್ಥಾನ ಪಡೆದರೆ ಟಾಪ್ 10 ಸ್ಥಾನದಲ್ಲಿ ಬೆಳಗಾವಿಯ ಎರಡು ಹಳ್ಳಿಗಳಿಗೆ 2 ನೇ ಸ್ಥಾನ ಲಭಿಸಿದೆ. ಮುಖ್ಯವಾಗಿ ಈ ಗ್ರಾಮದಲ್ಲಿ ಪಂಚಾಯತಿ ಸಿಬ್ಬಂದಿ ಮತ್ತು ಸದಸ್ಯರ ಒಗ್ಗೂಡಿ ಕೈಗೊಂಡ ಅಭಿವೃದ್ಧಿ ಕೆಲಸಗಳೇ ಕಾರಣ. ಗ್ರಾಮೀಣ ಜನರ ಆದಾಯ, ಜೀವನ ಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳನ್ನು ಆಧರಿಸಿ ರ‌್ಯಾಂಕ್ ನೀಡಲಾಗಿದೆ. ಅಕ್ಟೋಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಒಟ್ಟು 141 ಪ್ರಶ್ನಾವಳಿ ಗಳಲ್ಲಿ ಒಟ್ಟು 100 ಅಂಕಗಳ ಪೈಕಿ 90 ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಅಲಂಕರಿಸಿದೆ.

ಗ್ರಾಮದಲ್ಲಿ ಒಟ್ಟು 2 ಸಾವಿರಗಿಂತ ಹೆಚ್ಚು ಜನಸಂಖ್ಯೆ ಇದೆ. ಗ್ರಾಮದಲ್ಲಿ ಸುಮಾರು 6 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಜೊತೆಗೆ ಪ್ರಾಥಮಿಕ, ಪ್ರೌಢ, ಮತ್ತು ಪಿಯು ಮತ್ತು ಇಂಜಿನಿಯರಿಂಗ್ ಕಾಲೇಜ್ ಗಳಿಗೆ ಪ್ರತಿನಿತ್ಯ ಉಚಿತವಾಗಿ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತದೆ. ಸರಕಾರಿ ಆಸ್ಪತ್ರೆ, ಪ್ರತಿ ಬೀದಿಗಳಲ್ಲಿ ಸಿಸಿ ರಸ್ತೆ, ಡಾಂಬರೀಕರಣ ಮಾಡಿದ ರಸ್ತೆಗಳನ್ನು ನಿರ್ಮಿಸಲಾಗಿದೆ. ಜೊತೆಗೆ 42 ಕಿಮೀ ಉದ್ದದ ಒಳಚರಂಡಿ ವ್ಯವಸ್ಥೆ, 1500 ಮ್ಯಾನ್. ಹೋಲ್ ನಿರ್ಮಾಣ ಜೊತೆಗೆ ಒಳಚರಂಡಿ ಸಂಸ್ಕರಣ ಘಟಕಗಳನ್ನು ನಿರ್ಮಿಸಲಾಗಿದೆ. ಈ ಸಂಸ್ಕರಿಸಿದ ನೀರಿನಿಂದ ಸುಮಾರು 50 ಹೆಕ್ಟೇರ್ ತೋಟಗಾರಿಕೆ ಬೆಳೆಗಳಿಗೆ ನೀರಾವರಿ ಸೌಲಭ್ಯ ಒದಗಿಸಲಾಗುತ್ತಿದೆ. ಜೊತೆಗೆ ಇಲ್ಲಿನ ಮುಕ್ತಿವನ ಗ್ರಾಮದ ಸಂಸ್ಕೃತಿಯನ್ನು ಬಿಂಬಿಸುತ್ತಿದೆ. ಗ್ರಾಮದ ಇಕ್ಕೆಲುಗಳಲ್ಲಿ, ಬೀದಿಗಳಲ್ಲಿ ಗಿಡಗಳನ್ನು ನೆಡಲಾಗಿದೆ. ಹಲವು ಉದ್ಯಾನವನಗಳು ಗ್ರಾಮಕ್ಕೆ‌ ಮತ್ತಷ್ಟು ಸೌಂದರ್ಯವನ್ನು ಹೆಚ್ಚಿಸಿವೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights