ಹೆಚ್ ನಾಗೇಶ್ ರಾಜಿನಾಮೆ ನೀಡುವಂತೆ ಸಿಎಂ ಸೂಚನೆ : ಕಾರ್ಯಕರ್ತರಿಂದ ಆಕ್ರೋಶ..!
ಹೈಕಮಾಂಡನಿಂದ ನಾಗೇಶ್ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂಬ ಸೂಚನೆ ಬಂದ ಹಿನ್ನೆಲೆಯಲ್ಲಿ ಸಂಪುಟ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಹೆಚ್ ನಾಗೇಶ್ ಅವರಿಗೆ ಸಚಿವ ಸ್ಥಾನಕ್ಕೆ ರಾಜಿನಾಮೇ ನೀಡುವಂತೆ ಹೇಳಿದ್ದಾರೆ.
ಇಂದು 7 ಜನ ಶಾಸಕರು ಸಂಪುಟಕ್ಕೆ ನೂತನ ಸಚಿವರಾಗಿ ಸ್ಥಾನ ಪಡೆಯಲಿದ್ದು ಸಂಜೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದು ಬಿಜೆಪಿಯ ಇನ್ನುಳಿದ ಸಚಿವಾಕಾಂಕ್ಷಿಗಳಿಗೆ ಸ್ಥಾನ ಸಿಗದಿದ್ದಕ್ಕೆ ಅಸಮಧಾನ ತಂದಿದೆ. ಈ ಹಿಂದೆ ಮೈತ್ರಿ ಸರ್ಕಾರ ಬಿಟ್ಟು ಬಿಜೆಪಿ ಸೇರಿದ್ದ ಸಮಯದಲ್ಲಿ ಸರ್ಕಾರ ಎಲ್ಲಿವರೆಗೂ ಇರುತ್ತದೆ ಅಲ್ಲಿವರೆಗೆ ಯಡಿಯೂರಪ್ಪ ಸಿಎಂ ಆಗಿರುತ್ತಾರೆ ಎಂದು ನಾಗೇಶ್ ಅವರು ಹೇಳಿದ್ದರು. ಆದರೆ ವಿಚಿತ್ರವೆಂಬಂತೆ ಸಚಿವ ಹೆಚ್ ನಾಗೇಶ್ ಅವರಿಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸಿಎಂ ಸೂಚಿಸಿದ್ದಾರೆ. ಇದು ನಾಗೇಶ್ ಮಾತ್ರವಲ್ಲ ಕೋಲಾರದಲ್ಲಿ ನಾಗೇಶ್ ಕಾರ್ಯಕರ್ತರಲ್ಲಿ ಅಸಮಾಧಾನ ತಂದಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಹೆಚ್ ನಾಗೇಶ್, “ಮೈತ್ರಿ ಸರ್ಕಾರ ಬಿಟ್ಟು ಮೊದಲು ಹೊರಬಂದವನು ನಾನು. ನನಗೇ ಮೊದಲು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿಎಂ ಸೂಚಿಸುತ್ತಿದ್ದಾರೆ. ನೀವು ಕೊಟ್ಟ ಮಾತು ಏನಾಯ್ತು ಎಂದು ಹೆಚ್ ನಾಗೇಶ್ ಪ್ರಶ್ನೆ ಹಾಕಿದ್ದಾರೆ. ನಿಮ್ಮ ಪರವಾಗಿ ಸದಾ ಇದ್ದವನು ನಾನು. ಅಧಿಕಾರಕ್ಕೆ ಬರುವವರೆಗೂ ನಾವು ನಿಮ್ಮೊಂದಿಗೆ ನಿಂತಿದ್ದೇವೆ. ಆದರೆ ನನ್ನನ್ನೇ ಅಧಿಕಾರದಿಂದ ಕೈಬಿಡಲು ಹೇಳಿದ್ದೀರಿ. ನಾನೇನು ಅಂತ ತಪ್ಪು ಮಾಡಿದ್ದೇನೆ..? ಸಿಎಂ ಮಾಡುತ್ತಿರುವುದು ಸರಿಯಲ್ಲ” ಎಂದು ನಾಗೇಶ್ ಅಸಮಾಧಾನ ಹೊರಹಾಕಿದ್ದಾರೆ.
ಬಿಜೆಪಿಯಲ್ಲಿ ಅಸಮಾಧಾನದ ಹೊಗೆ ಆಡುತ್ತಿದ್ದಂತೆ ಇತ್ತ ಸಚಿವ ರಮೆಶ್ ಜಾರಕಿಹೊಳೆ ” ಮಾರ್ಚ್ ಏಪ್ರಿಲ್ ನಲ್ಲಿ ಸಂಪುಟ ಪುನರಚನೆ ಆಗುತ್ತದೆ. ಆಗ ಸಚಿವ ಸ್ಥಾನ ಕೈತಪ್ಪಿದವರಿಗೆ ಆಗ ಸಚಿವ ಸ್ಥಾನ ಸಿಗಲಿದೆ. ನಮ್ಮ ಟೀಮ್ ನಲ್ಲಿ ಇನ್ನೂ 5 ಜನರಿಗೆ ಸಚಿವ ಸ್ಥಾನ ಸಿಗಬೇಕು” ಎಂದಿದ್ದಾರೆ.
ಸದ್ಯ ರಾಜ್ಯ ರಾಜಕಾರಣದಲ್ಲಿ ಹೊಸದಾಗಿ 7 ಜನ ಶಾಸಕರಿಗೆ ಸಚಿವ ಸ್ಥಾನ ಸಿಕ್ಕಿದೆ. ಉಮೇಶ್ ಕತ್ತಿ. ಅರವಿಂದ ಲಿಂಬಾವಳಿ, ಮುರಗೇಶ್ ನಿರಾಣಿ, ಸಿಪಿ ಯೋಗೇಶ್ವರ್, ಎಸ್ ಅಂಗಾರ, ಎಂಟಿಬಿ ನಾಗರಾಜ್, ಆರ್ ಶಂಕರ್ ಅವರಿಗೆ ಸಂಕ್ರಾಂತಿಗೆ ಸಿಹಿ ಸುದ್ದಿ ಹೈಕಮಾಂಡ್ ಕೊಟ್ಟಿದೆ. ಇನ್ನೂ ಒಂದುವರೆ ತಿಂಗಳಲ್ಲಿ ಮುನಿರತ್ನ ಅವರಿಗೂ ಸಚಿವ ಸ್ಥಾನ ನೀಡಬಹುದು ಎಂದು ಹೈಕಮಾಂಡ ಸೂಚಿಸಿದೆ ಎಂದು ಹೇಳಲಾಗುತ್ತಿದೆ.