ಕೃಷಿ ಕಾಯ್ದೆಗಳಿಗೆ ವಿರೋಧ: BJPಗೆ ಪ್ರವೇಶ ನಿಷೇಧಿಸಿದ ಹರಿಯಾಣದ 60 ಹಳ್ಳಿಗಳು!

ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ದ ಸಿಡಿದೆದ್ದಿರುವ ರೈತರ ಹೋರಾಟ ಎರಡು ತಿಂಗಳುಗಳನ್ನು ಸಮೀಪಿಸುತ್ತಿದೆ. ಆದರೂ, ಕೇಂದ್ರ ಸರ್ಕಾರ ರೈತರ ಪ್ರತಿಭಟನೆಗೆ ಬಗ್ಗುತ್ತಿಲ್ಲ.  ಈ ಹಿನ್ನೆಲೆಯಲ್ಲಿ ಹರಿಯಾಣದ 60 ಗ್ರಾಮಗಳು ರೈತ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಿದ್ದು, ಈ 60 ಗ್ರಾಮಗಳಿಗೆ ರಾಜ್ಯದ ಆಡಳಿತ ಪಕ್ಷವಾದ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರಿಗೆ ಪ್ರವೇಶವನ್ನು ನಿಷೇಧಿಸಿವೆ.

ರೈತ ವಿರೋಧಿ ಕಾನೂನನ್ನು ವಿರೋಧಿಸಿ ರಾಷ್ಟ್ರದಾದ್ಯಂತದ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿರುವುದರಿಂದ ರಾಜ್ಯದ ಅನೇಕ ಗ್ರಾಮಗಳ ನಿವಾಸಿಗಳು ಬಿಜೆಪಿ-ಜೆಜೆಪಿಯ ಸಚಿವರು ಮತ್ತು ಶಾಸಕರನ್ನು ಬಹಿಷ್ಕರಿಸಿ ನಿರ್ಣಯಗಳನ್ನು ಅಂಗೀಕರಿಸಿದ್ದಾರೆ.

ಈ ಬಗ್ಗೆ ರೈತರು ಗ್ರಾಮದ ವಿವಿಧ ಪ್ರವೇಶ ಕೇಂದ್ರಗಳಲ್ಲಿ ಹೋರ್ಡಿಂಗ್‌ಗಳನ್ನು ಹಾಕಿದ್ದು, ಬಿಜೆಪಿ ಮತ್ತು ಜೆಜೆಪಿ ನಾಯಕರು ಹಾಗೂ ಕಾರ್ಯಕರ್ತರು ಗ್ರಾಮಕ್ಕೆ ಪ್ರವೇಶಿಸಿದರೆ ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ.

ರಾಜ್ಯದ ಫತೇಹಾಬಾದ್‌ನ ಅಹೆರ್ವಾನ್, ಭಾನಿ ಖೇರಾ, ತಲ್ವಾರಾ, ಬಾರಾ, ಸಿಧಾನಿ, ಧನಿ ಬಾಬನ್ಪುರ್, ಕಾಮನಾ ಮತ್ತು ಲಂಬಾ ಗ್ರಾಮಗಳು ಈ ಪಟ್ಟಿಯಲ್ಲಿ ಸೇರಿದೆ. ಈ ಗ್ರಾಮಗಳಲ್ಲಿ ನಿವಾಸಿಗಳು ಆಡಳಿತ ಪಕ್ಷದ ಮುಖಂಡರ ವಿರುದ್ಧ ಬ್ಯಾನರ್‌ಗಳನ್ನು ಅಳವಡಿಸಿದ್ದಾರೆ.

ಇದನ್ನೂ ಓದಿ: ರೈತ ಹೋರಾಟವನ್ನು ಖಾಲಿಸ್ತಾನಿ ತಂತ್ರವೆಂದ ಝೀ ನ್ಯೂಸ್‌: ಮಾಧ್ಯಮಕ್ಕೆ ತಿರುಗೇಟು ಕೊಟ್ಟ ರೈತರು

ಹಿಸಾರ್‌‌ನ, ಕನಿಷ್ಠ 17 ಹಳ್ಳಿಗಳ ನಿವಾಸಿಗಳು ವಿಧಾನಸಭೆಯ ಉಪಸಭಾಪತಿ ರಣಬೀರ್ ಗಂಗ್ವಾ ಸೇರಿದಂತೆ ಎಲ್ಲಾ ರಾಜಕಾರಣಿಗಳಿಗೆ ಸಾಮಾಜಿಕ ಬಹಿಷ್ಕಾರವನ್ನು ಹಾಕಿ ಹಳ್ಳಿಗಳ ಪ್ರವೇಶವನ್ನು ನಿಷೇಧಿಸಿದ್ದಾರೆ.

ಬಿಜೆಪಿ ಸರ್ಕಾರವನ್ನು ಬೆಂಬಲಿಸಿದ್ದಕ್ಕಾಗಿ ಉಪಮುಖ್ಯಮಂತ್ರಿ, ಜೆಜೆಪಿ ಮುಖಂಡ ದುಶ್ಯಂತ್ ಚೌತಾಲಾ ಮತ್ತು ಹಿಸಾರ್ ಸಂಸದ ಬ್ರಿಜೇಂದ್ರ ಸಿಂಗ್ ಅವರನ್ನು ಸಾಮಾಜಿಕವಾಗಿ ಬಹಿಷ್ಕರಿಸಲಾಗುವುದು ಎಂದು ಜಿಂದ್ ಸರ್ವ್ ಖಾಪ್ (14 ಖಾಪ್ ಸಮುದಾಯಗಳ ಒಕ್ಕೂಟ) ಈಗಾಗಲೇ ಘೋಷಿಸಿದೆ. ಭಿವಾನಿ ಜಿಲ್ಲೆಯ ಲೊಹರು ಗ್ರಾಮದ ನಿವಾಸಿಗಳು ಕೃಷಿ ಸಚಿವ ಜೆ.ಪಿ. ದಲಾಲ್ ಅವನ್ನು ಗ್ರಾಮಕ್ಕೆ ಪ್ರವೇಶಿಸುವುದನ್ನು ಈ ಹಿಂದೆ ತಡೆದಿದ್ದರು.

ಈಗಾಗಲೇ ಹಲವಾರು ಬಿಜೆಪಿ ಮತ್ತು ಜೆಜೆಪಿಯ ನಾಯಕರ ನಿವಾಸಗಳ ಹೊರಗಡೆ ರೈತರು ಪ್ರತಿಭಟನೆಗಳನ್ನು ನಡೆಸಿದ್ದಾರೆ. ಅಷ್ಟೇ ಅಲ್ಲದೆ ಕೇಂದ್ರದ ಹೊಸ ಕೃಷಿ ಕಾನೂನುಗಳ ವಿರುದ್ದ ರೈತರ ಪರವಾಗಿ ನಾವಿದ್ದೇವೆ ಎಂದು ಐದು ಜೆಜೆಪಿ ಶಾಸಕರು ಈಗಾಗಲೇ ಹೇಳಿದ್ದಾರೆ.

ಇದನ್ನೂ ಓದಿ: ರೈತ ಹೋರಾಟಕ್ಕೆ ಬೆಂಬಲ: ಕೇರಳದಿಂದ ಕಾಶ್ಮೀರಕ್ಕೆ ಸೈಕಲ್‌ ಜಾಥಾ ಹೊರಟ ವಿದ್ಯಾರ್ಥಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.