ರೈತರು ಟ್ರ್ಯಾಕ್ಟರ್ ರ್‍ಯಾಲಿ ನಡೆಸಬೇಕೆ-ಬೇಡವೇ ಎಂದು ಪೊಲೀಸರು ನಿರ್ಧರಿಸಲಿ: ಸುಪ್ರೀಂ ಕೋರ್ಟ್
ಜನವರಿ 26ರಂದು ಗಣರಾಜ್ಯೋತ್ಸವ ದಿನ ಪ್ರತಿಭಟನಾ ನಿರತ ರೈತರ ಟ್ರಾಕ್ಟರ್ ಮೆರವಣಿಗೆ ನಡೆಸಲು ನಿರ್ಧರಿಸಿದ್ದಾರೆ. ರೈತರ ಮೆರವಣಿಗೆಯನ್ನು ತಡೆಯುವಂತೆ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿದ್ದು, ರೈತರ ಟ್ರ್ಯಾಕ್ಟರ್ ಮೆರಣವಣಿಗೆಯ ಬಗ್ಗೆ ದೆಹಲಿ ಪೊಲೀಸರು ನಿರ್ಧರಿಸಲಿ ಎಂದು ಹೇಳಿದ್ದು, ಮುಂದಿನ ವಿಚಾರಣೆಯನ್ನು ಜ.20ಕ್ಕೆ ಮುಂದೂಡಿದೆ.
ರೈತರು ಟ್ರ್ಯಾಕ್ಟರ್ ಮೆರವಣಿಗೆ ನಡೆಸುವುದು, ಆ ಮೂಲಕ ದೆಹಲಿಗೆ ಪ್ರವೇಶಿಸುವುದು ಕಾನೂನು, ಸುವ್ಯವಸ್ಥೆಗೆ ಸಂಬಂಧಿಸಿದ ವಿಚಾರವಾಗಿದ್ದು, ಆ ಬಗ್ಗೆ ಪೊಲೀಸರು ನಿರ್ಧರಿಸಲಿ ಎಂದು ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ನೇತೃತ್ವದ ನ್ಯಾಯಪೀಠ ಹೇಳಿದೆ.
ನೀವು ಏನು ಮಾಡಬೇಕೆಂದು ನಾವು ಹೇಳುವುದಿಲ್ಲ. ದೆಹಲಿಯೊಳಗೆ ಯಾರನ್ನು ಬರಲು ಬಿಡಬೇಕು, ಬಿಡಬಾರದು ಎಂದು ತೀರ್ಮಾನಿಸುವ ಅಧಿಕಾರ ಪೊಲೀಸರಿಗೆ ಇರುವುದು ಎಂದು ಸುಪ್ರೀಂ ಹೇಳಿದೆ.
ಇದನ್ನೂ ಓದಿ: ರೈತ ಹೋರಾಟಕ್ಕೆ ಬೆಂಬಲ: ಕೇರಳದಿಂದ ಕಾಶ್ಮೀರಕ್ಕೆ ಸೈಕಲ್ ಜಾಥಾ ಹೊರಟ ವಿದ್ಯಾರ್ಥಿ!
ರೈತರು ನಡೆಸಲು ಉದ್ದೇಶಿಸಿರುವ ಟ್ರಾಕ್ಟರ್ ರ್ಯಾಲಿ ಅಕ್ರಮವಾಗಿದ್ದು, ದೆಹಲಿಯೊಳಗೆ ಸುಮಾರು 5 ಸಾವಿರ ಮಂದಿ ಪ್ರವೇಶಿಸಬಹುದು. ಇದರಿಂದ ತೀವ್ರ ಸಂಚಾರ ದಟ್ಟಣೆಯುಂಟಾಗಿ ಸಾಮಾನ್ಯ ಜನರಿಗೆ ತೊಂದರೆಯಾಗಬಹುದು, ಕಾನೂನು-ಸುವ್ಯವಸ್ಥೆಗೆ ಧಕ್ಕೆಯುಂಟಾಗಬಹುದು ಎಂದು ಕೇಂದ್ರ ಸರ್ಕಾರದ ಪರವಾಗಿ ಅಟೊರ್ನಿ ಜನರಲ್ ಕೆ ಕೆ ವೇಣುಗೋಪಾಲ್ ವಾದಿಸಿದ್ದಾರೆ.
ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ಟ್ರ್ಯಾಕ್ಟರ್ ಜಾಥಾ ನಡೆಸುವುದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ‘ದೆಹಲಿಯ ಹೊರಭಾಗದಲ್ಲಿರುವ ರಿಂಗ್ ರೋಡ್‌ನಲ್ಲಿ ರ್ಯಾಲಿ ನಡೆಯಲಿದೆ ಎಂದು ರೈತ ಸಂಘಟನೆಗಳು ಹೇಳಿವೆ.
ಟ್ರ್ಯಾಕ್ಟರ್ ರ್ಯಾಲಿ ಶಾಂತಿಯುತವಾಗಿ ನಡೆಯಲಿದೆ. ಗಣರಾಜ್ಯೋತ್ಸವ ಪಥಸಂಚಲನಕ್ಕೆ ಯಾವುದೇ ಅಡ್ಡಿ ಮಾಡುವುದಿಲ್ಲ. ರೈತರು ತಮ್ಮ ಟ್ರ್ಯಾಕ್ಟರ್‌ಗಳಲ್ಲಿ ತ್ರಿವರ್ಣ ಧ್ವಜ ಹಾಕಿಕೊಳ್ಳಲಿದ್ದಾರೆ. ದಹಲಿ ಗಡಿಯಲ್ಲಿ ರೈತರ ಪಥ ಸಂಚಲನ ನಡೆಯಲಿದೆ ಎಂದು ರೈತ ಮುಖಂಡರು ಹೇಳಿದ್ದಾರೆ.
ಇದನ್ನೂ ಓದಿ: ಮಣಿಯದ ಕೇಂದ್ರ – ಜಗ್ಗದ ರೈತ: 2024ರ ವರೆಗೂ ದೆಹಲಿ ಗಡಿಯಲ್ಲಿ ಮುಂದುವರೆಯುತ್ತೆ ಹೋರಾಟ!